ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ವರದಕ್ಷಿಣೆ ಕಿರುಕುಳ, ಮಹಿಳೆ ಸಾವು

ಕಿರುಕುಳ ನೀಡಿ ಮಗಳ ಹತ್ಯೆ: ಪೊಲೀಸರಿಗೆ ತಂದೆಯ ದೂರು
Last Updated 14 ಡಿಸೆಂಬರ್ 2021, 4:57 IST
ಅಕ್ಷರ ಗಾತ್ರ

ಚಾಮರಾಜನಗರ: ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಉಡಿಗಾಲದಲ್ಲಿ ಸೋಮವಾರ ನಡೆದಿದೆ.

ಉಡಿಗಾಲದ ಜಯಶಂಕರ್‌ ಎಂಬುವವರ ಪತ್ನಿ 24 ವರ್ಷದ ದಿವ್ಯಾ ಅವರು ಮೃತಪಟ್ಟವರು. ಮಗಳನ್ನು ವರದಕ್ಷಿಣೆಗಾಗಿ ಹಿಂಸಿಸಿ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ದಿವ್ಯ ಅವರ ತಂದೆ ದೇವಪ್ಪ ಅವರು ಚಾಮರಾಜನಗರದ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ದಿವ್ಯ ಅವರ ಪತಿ ಜಯಶಂಕರ್‌, ಮಾವ ಸಿದ್ದಮಲ್ಲಪ್ಪ, ಅತ್ತೆ ಸುಂದ್ರಮ್ಮ, ಬಾವ ಚಂದ್ರಶೇಖರ್‌ ಹಾಗೂ ಅವರ ಪತ್ನಿ ರೇಖಾ ಅವರು ತಲೆಮರೆಸಿಕೊಂಡಿದ್ದಾರೆ.

ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

ಘಟನೆಯ ವಿವರ: ಕೊತ್ತಲವಾಡಿಯ ದೇವಪ್ಪ ಅವರ ಮಗಳು ದಿವ್ಯ ಅವರನ್ನು ಉಡಿಗಾಲದ ಜಯಶಂಕರ್‌ (30) ಅವರಿಗೆ ಈ ವರ್ಷದ ಮಾರ್ಚ್‌ 31ರಂದು ಮದುವೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ದಿವ್ಯಾಳ ಪೋಷಕರು ಚಿನ್ನಾಭರಣ, ವರದಕ್ಷಿಣೆಯಾಗಿ ಸ್ವಲ್ಪ ನಗದು ನೀಡಿದ್ದರು. ಇನ್ನೂ ₹2 ಲಕ್ಷ ಕೊಡುವುದು ಬಾಕಿ ಇತ್ತು. ಉಳಿದ ಹಣವನ್ನು ತಂದುಕೊಡುವಂತೆ ಜಯಶಂಕರ್‌ ಮನೆಯವರು ದಿವ್ಯಾಳನ್ನೂ ಪೀಡಿಸುತ್ತಿದ್ದರು ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಜಯಶಂಕರ್‌ ಅವರು ಸ್ವಂತ ಅಂಗಡಿ ತೆರೆಯಲು ಬಯಸಿದ್ದರು. ಇದಕ್ಕಾಗಿ ₹2 ಲಕ್ಷ ತೆಗೆದುಕೊಂಡು ಬರುವಂತೆ ಪದೇ ಪದೇ ಒತ್ತಡ ಹಾಕುತ್ತಿದ್ದರು. ಇದರಿಂದ ಬೇಸತ್ತಿದ್ದ ದಿವ್ಯಾ ಎರಡು ತಿಂಗಳುಗಳಿಂದ ತವರು ಮನೆಯಲ್ಲೇ ಇದ್ದರು. ಕೊತ್ತಲವಾಡಿಯಲ್ಲಿ ಭಾನುವಾರವಷ್ಟೇ ರಾಜಿ ಪಂಚಾಯಿತಿ ನಡೆದು ಗಂಡನ ಮನೆಗೆ ಹೋಗಿದ್ದರು. ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಜಯಶಂಕರ್‌ ಅವರು ಮಾವ ದೇವಪ್ಪ ಅವರಿಗೆ ಕರೆ ಮಾಡಿ, ‘ನಿಮ್ಮ ಮಗಳಿಗೆ ತೀವ್ರ ಅನಾರೋಗ್ಯವಾಗಿದೆ. ತಕ್ಷಣ ಬನ್ನಿ’ ಎಂದು ಕರೆ ಮಾಡಿದ್ದರು. ದೇವಪ್ಪ ಕುಟುಂಬದವರು ಉಡಿಗಾಲದ ಅಳಿಯನ ಮನೆಗೆ ತಲುಪುವ ವೇಳೆಗೆ ಜಯಶಂಕರ್‌ ಸೇರಿ ಎಲ್ಲ ಐದು ಮಂದಿ ಅಲ್ಲಿಂದ ತೆರಳಿದ್ದರು. ದಿವ್ಯಾ ಅವರ ಮೃತದೇಹ ಅಡುಗೆ ಕೋಣೆಯಲ್ಲಿ ಇತ್ತು. ನೇಣು ಬಿಗಿದ ಸ್ಥಿತಿಯಲ್ಲಿದ್ದ ದೇಹವನ್ನು ಕೆಳಗಿಳಿಸಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಗ್ರಾಮಾಂತರ ಸರ್ಕಲ್‌ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಅವರು ’ಪ್ರಜಾವಾಣಿ’ಗೆ ತಿಳಿಸಿದರು.

ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ, ಸಬ್‌ ಇನ್‌ಸ್ಪೆಕ್ಟರ್‌ ಹನುಮಂತ ಉ‍ಪ್ಪಾರ್‌ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾಯುವುದಾಗಿ ಗಂಡನ ಸ್ಟೇಟಸ್‌: ದಿವ್ಯಾಳ ಸಾವಿನ ನಂತರ ನಾಪತ್ತೆಯಾಗಿದ್ದ ಜಯಶಂಕರ್‌ ಅವರು ಸಂಜೆಯ ಹೊತ್ತಿಗೆ, ‘ನನ್ನ ಸಾವಿಗೆ ನಾನೇ ಕಾರಣ. ನನ್ನನ್ನು ಕ್ಷಮಿಸಿ’, ‘ದಿವ್ಯಾಳನ್ನು ಯಾರೂ ಸಾಯಿಸಿಲ್ಲ’ ಎಂದೆಲ್ಲ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿಕೊಂಡಿದ್ದರು. ರಾತ್ರಿ 9 ಗಂಟೆಯ ಸುಮಾರಿಗೆ ಗ್ರಾಮದ ಜಮೀನೊಂದರಲ್ಲಿ ಅವರು ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT