ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಚರಂಡಿ ಅವ್ಯವಸ್ಥೆ: ಜಲಮೂಲ ಮಲಿನ

ಚಾಮರಾಜನಗರ, ಕೊಳ್ಳೇಗಾಲದಲ್ಲಿ ಕೊಳಚೆ ನೀರು ಸಂಸ್ಕರಣ ಘಟಕ ಕಾರ್ಯನಿರ್ವಹಣೆ; ಕೆರೆ, ಹಳ್ಳ ಕೊಳ್ಳಗಳಿಗೆ ಸೇರುವ ತ್ಯಾಜ್ಯ ನೀರು
Last Updated 1 ಮಾರ್ಚ್ 2021, 3:43 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ಇಲ್ಲದಿರುವುದರಿಂದ ಕೊಳಚೆ ನೀರು ಜಲಮೂಲಗಳನ್ನು ಸೇರಿ ನೀರನ್ನು‌ ಕಲುಷಿತಗೊಳಿಸುತ್ತಿದೆ.

ಎರಡು‌ ನಗರಸಭೆ (ಚಾಮರಾಜನಗರ, ಕೊಳ್ಳೇಗಾಲ), ಒಂದು ಪುರಸಭೆ (ಗುಂಡ್ಲುಪೇಟೆ) ಹಾಗೂ ಎರಡು ಪಟ್ಟಣ ಪಂಚಾಯಿತಿಗಳನ್ನು (ಹನೂರು ಮತ್ತು ಯಳಂದೂರು) ಹೊಂದಿರುವ ಜಿಲ್ಲೆಯಲ್ಲಿ ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಮಾತ್ರ ಒಳಚರ‌ಂಡಿ ವ್ಯವಸ್ಥೆ ಇದೆ. ಉಳಿದ ಕಡೆಗಳಲ್ಲಿ ಈಗಲೂ ತೆರೆದ ಚರಂಡಿ ವ್ಯವಸ್ಥೆ ಇವೆ.

ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಮಾತ್ರ ಕೊಳಚೆ ನೀರು ಸಂಸ್ಕರಣ ಘಟಕಗಳಿವೆ. ಕೊಳ್ಳೇಗಾಲದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿದಿಲ್ಲ. ಸಂಸ್ಕರಣೆ ಘಟಕಗಳಿದ್ದರೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಎರಡೂ ನಗರಗಳಲ್ಲಿ ಉತ್ಪಾದನೆಯಾಗುವ ಪೂರ್ಣ ಕೊಳಚೆ ನೀರನ್ನು ಶುದ್ಧೀಕರಿಸುವ ಉದ್ದೇಶ ಈಡೇರಿಲ್ಲ. ಈಗಲೂ ಕೊಳಚೆ ನೀರು ಚರಂಡಿಗಳ ಮೂಲಕ ಹರಿದು ಕರೆ, ಹಳ್ಳಗಳನ್ನು ಸೇರುತ್ತಿದೆ.

ಪೂರ್ಣಗೊಳ್ಳದ ಸಂಪರ್ಕ: ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಒಳಚರಂಡಿ ನಿರ್ಮಾಣ ಕಾರ್ಯ ಮುಕ್ತಾಯವಾಗಿ ಎರಡೂವರೆ ವರ್ಷ ಕಳೆಯಿತು. ನಗರಸಭೆಯ ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ 16 ಸಾವಿರ ಮನೆಗಳಿವೆ. ಒಳಚರಂಡಿ‌ ನಿರ್ಮಾಣದ ಸಂದರ್ಭದಲ್ಲಿ 7,000 ಮನೆಗಳ ಸಂಪರ್ಕವನ್ನು ಒಳಚರಂಡಿಗೆ ಕಲ್ಪಿಸಲಾಗಿತ್ತು. ಉಳಿದ ಮನೆಗಳ ಶೌಚಾಲಯ ಹಾಗೂ ಕೊಳಚೆ ನೀರನ್ನು ಒಳಚರಂಡಿಗೆ ಸಂಪರ್ಕ ಕಲ್ಪಿಸುವ ಕೆಲಸ ಪೂರ್ಣಗೊಂಡಿಲ್ಲ.

ನಗರದ ಹೊರ ವಲಯದಲ್ಲಿರುವ ಬೂದಿತಿಟ್ಟುವಿನಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಇದೆ. ಒಳಚರಂಡಿಯ‌ ಮೂಲಕ ಇಲ್ಲಿಗೆ ಕೊಳಚೆ ನೀರು ಬರುತ್ತದೆ. ದಿನಕ್ಕೆ 10 ಗಂಟೆ ಇದು ಕಾರ್ಯನಿರ್ವಹಿಸುತ್ತಿದೆ. ಶುದ್ಧೀಕರಣಗೊಂಡ ನೀರನ್ನು ಸಮೀಪದಲ್ಲೇ ಇರುವ ನಾಲೆಗೆ ಬಿಡಲಾಗುತ್ತಿದೆ‌. ಇದೇ ನಾಲೆಗೆ, ತೆರೆದ ಚರಂಡಿಗಳ ನೀರು ಹರಿಯುತ್ತಿದೆ. ಹಾಗಾಗಿ, ಶುದ್ಧೀಕರಿಸಿದ ನೀರು ಕೂಡ ಮತ್ತೆ ಕಲುಷಿತಗೊಳ್ಳುತ್ತಿದೆ. ಹೀಗಾಗಿ, ಸಂಸ್ಕರಣ ಸ್ಥಾಪನೆಯ ಉದ್ದೇಶವೇ ವಿಫಲವಾಗಿದೆ.

ಸಂಸ್ಕರಿಸಿದ ನೀರನ್ನು‌ ಕೆಲವು ಸಮಯ ಆ ಭಾಗದ ರೈತರು ಕೃಷಿಗೆ ಬಳಸುತ್ತಿದ್ದರು. ಆದರೆ, ಈಗ ಕೊಳಚೆ ನೀರಿನೊಂದಿಗೆ ಬೆರೆಯುತ್ತಿರು ವುದರಿಂದ ರೈತರು ಬಳಸುತ್ತಿಲ್ಲ.

ಕೊಳ್ಳೇಗಾಲ– ರೋಗದ ಭೀತಿಯಲ್ಲಿ ಬದುಕು:ಕೊಳ್ಳೇಗಾಲ ನಗರದಲ್ಲಿ ಬಹುತೇಕ ಒಳಚರಂಡಿ ಕಾಮಗಾರಿ ಮುಕ್ತಾಯವಾಗಿದೆ. ಆದರೆ ಕೊಳಚೆ ನೀರು ಸರಿಯಾಗಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತಲುಪದೆ ಇರುವುದರಿಂದ ರೋಗಗಳ ಭೀತಿಯಲ್ಲಿ ಜನರು ಬದುಕುವಂತಾಗಿದೆ.

ನಗರದ 31 ವಾರ್ಡ್‍ಗಳಲ್ಲಿಯೂ ಸಹ ಒಳಚರಂಡಿ ಕಾಮಗಾರಿ ಮುಕ್ತಾಯವಾಗಿದೆ. ಆದರೆ, ವೆಟ್‍ವೆಲ್ (ಕೊಳಚೆ ನೀರು ಬಂದು ಒಂದೆಡೆ ಸಂಗ್ರಹವಾಗುವ ಬಾವಿ) ಕಾಮಗಾರಿ ಮುಕ್ತಾಯವಾಗದ ಕಾರಣ ಒಳಚರಂಡಿ ನೀರು ಸದ್ಯಕ್ಕೆ ಕೆರೆಗಳಿಗೆ, ಕಾವೇರಿ ನದಿಗೆ, ಜಮೀನುಗಳಿಗೆ, ಖಾಲಿ ನಿವೇಶನ ಹಾಗೂ ರಸ್ತೆಗಳಲ್ಲಿ ಹರಿಯುತ್ತಿವೆ.

ನಗರದ ಕೊಳಚೆ ನೀರು ಬಹುತೇಕ ಕಾವೇರಿ ನದಿ ಹಾಗೂ ನಗರದ ದೊಡ್ಡರಂಗನಾಥನ ಕೆರೆ, ಕೊಂಗಳ ಕೆರೆಗಳಿಗೆ ತಲುಪುತ್ತಿದೆ. ಮೂರು ದಶಕಗಳಿಂದಲೂ ಕೊಳಚೆ ನೀರು ಸೇರಿ ಕೆರೆಗಳು ಮಲಿನಗೊಂಡಿವೆ. ನಗರದ ವಿದ್ಯಾನಗರ, ಆದರ್ಶನಗರ, ದೇವಾಂಗ ಪೇಟೆ, ಬಸವೇಶ್ವರನಗರ, ಕುರುಬರ ಬೀದಿ, ನಾಕಯರಬೀದಿ, ಭೀಮನಗರ, ಮೋಳೆ ಸೇರಿದಂತೆ ಅನೇಕ ಬಡಾವಣೆಗಳ ನೀರು ಕೆರೆಗಳಿಗೆ ಹಾಗೂ ಕಾವೇರಿ ನದಿಗೆ ತಲುಪುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಕೊಳಚೆ ನೀರು ಎಲ್ಲಿಗೆ ಹೋಗಿ ಸೇರುತ್ತದೆ ಎಂಬುದು ನಗರಸಭೆಗೆ ತಿಳಿದಿಲ್ಲ ಎಂಬುದು ನಿವಾಸಿಗಳ ದೂರು.

ನಗರದಿಂದ ಎರಡು ಕಿ.ಮೀ ದೂರದಲ್ಲಿ ಕೊಳಚೆ ನೀರು ಸಂಸ್ಕರಣ ಘಟಕ ಇದೆ. 15 ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿದ್ದ ಈ ಘಟಕ, 2017ರಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡ ನಂತರ ವಿಸ್ತಾರವಾಯಿತು. ದಿನಕ್ಕೆ ಮೂರು ಲಕ್ಷದಿಂದ ನಾಲ್ಕು ಲಕ್ಷ ಲೀಟರ್‌ ಕೊಳಚೆ ನೀರು ಈ ಸಂಸ್ಕರಣಾ ಘಟಕಕ್ಕೆ ತಲುಪುತ್ತದೆ. ಒಳ ಚರಂಡಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ, ಹಳೆಯ ಚರಂಡಿ ನೀರು ನೇರವಾಗಿ ಈ ಘಟಕಕ್ಕೆ ಬಂದು ತಲುಪುತ್ತದೆ.

‘ಸಂಸ್ಕರಣ ಘಟಕವು ಐದು ಎಕರೆ ಜಾಗದಲ್ಲಿದ್ದು, 10 ಮೋಟಾರ್‌ಗಳು ನೀರನ್ನು ಶುಚಿಗೊಳಿಸುತ್ತವೆ. ಈ ನೀರನ್ನು ಅಕ್ಕ ಪಕ್ಕದ ಜಮೀನಿನವರು ಕೇಳುತ್ತಾರೆ. ನಾವು ನೀರನ್ನು ನಾಲೆಗೆ ಬಿಡುತ್ತೇವೆ’ ಎಂದು ತ್ಯಾಜ್ಯಾ ಸಂಸ್ಕರಣಾ ಘಟಕದ ಮೇಲ್ವಿಚಾರಕ ಮಹೇಶ್ ಹೇಳಿದರು.

ಯಳಂದೂರಿನಲ್ಲಿ ಬೇಕಿದೆ ಯೋಜನೆ: ಯಳಂದೂರುಪಟ್ಟಣದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಜನರಿದ್ದು, ದೈನಂದಿನ ನೀರಿನ ಬಳಕೆಪ್ರಮಾಣ ಪ್ರತಿದಿನ ಹೆಚ್ಚಾಗುತ್ತಿದೆ. ಆದರೆ, ಉಪಯೋಗಿಸಿದ ದ್ರವ ತ್ಯಾಜ್ಯವನ್ನುಚರಂಡಿಗೆ ಸೇರಿಸಲಾಗುತ್ತಿದೆ. ತ್ಯಾಜ್ಯದ ನೀರನ್ನು ಕೆಲ ಕೃಷಿಕರು ಗದ್ದೆಗಳಿಗೆಹರಿಸುತ್ತಾರೆ. ಇದನ್ನು ಸಂಸ್ಕರಿಸಿ ಮರು ಬಳಕೆಗೆ ಬಳಸುವ ಸಾಮಾಜಿಕ ಜವಬ್ದಾರಿಯಕೊರತೆಯೂ ಸಾರ್ವಜನಿಕರನ್ನು ಕಾಡುತ್ತಿದೆ.

ಒಳಚರಂಡಿ ಇಲ್ಲದಿರುವ ಕಾರಣಕ್ಕೆ ತೆರೆದ ಚಂಡಿಯ ಮೂಲಕವೇ ಕೊಳಚೆ ನೀರು ಹರಿಯುತ್ತಿದ್ದು, ಜಲ, ಭೂಮಿ ಮತ್ತು ವಾಯುಮಾಲಿನ್ಯಕ್ಕೂ ಕಾರಣವಾಗುತ್ತಿದೆ.

ತಟ್ಟೆ ಹಳ್ಳ ಈಗ ಕೊಳಚೆ ನೀರಿನ ಹಳ್ಳ: ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 14 ವಾರ್ಡ್‌ಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ತಟ್ಟೆಹಳ್ಳಕ್ಕೆ ಸೇರುತ್ತಿದೆ. ಒಳಚರಂಡಿ ವ್ಯವಸ್ಥೆಯಾಗಲಿ, ಕೊಳಚೆ ನೀರು ಸಂಸ್ಕರಣ ಘಟಕವಾಗಲಿ ಇಲ್ಲದಿರುವುದರಿಂದ ಕೊಳಚೆ ನೀರಿನ್ನು ಕನಿಷ್ಠ ಪ್ರಮಾಣದಲ್ಲಿ ಶುದ್ಧೀಕರಿಸುವ ಕೆಲಸ ನಡೆಯುತ್ತಿಲ್ಲ.

ತಟ್ಟೆಹಳ್ಳವು ಕೊಳಚೆ ನೀರಿನ ಸಂಗ್ರಹತಾಣವಾಗಿದ್ದು, ಅದರ ಪಕ್ಕದಲ್ಲೇ ವಾಸಿಸುತ್ತಿರುವ ನಿವಾಸಿಗಳು ಸದಾ ರೋಗ ಭಯದಲ್ಲೇ ವಾಸ ಮಾಡುವಂತಾಗಿದೆ.

ಎರಡು ಹಳ್ಳಗಳಲ್ಲಿ ಹರಿವ ತ್ಯಾಜ್ಯ ನೀರು: ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರು, ಕಾಗೆ ಹಳ್ಳ, ಹೊಂಗೆಹಳ್ಳಗಳ ಮೂಲಕ ಹರಿಯುತ್ತದೆ. ಈ ಹಳ್ಳಗಳು ಹೊಸೂರು ಮಾರ್ಗವಾಗಿ ನಲ್ಲೂರು ಅಂಬಾನಿ ಕೆರೆಗೆ ಸೇರುತ್ತವೆ. ಎರಡರಲ್ಲೂ ಭಾರಿ ಪ್ರಮಾಣದಲ್ಲಿ ಕಸ ಸಂಗ್ರಹವಾಗುವುದರಿಂದ ಯಾವಾಗಲೂ ಗಲೀಜು ನೀರು ಕೆರೆ ಸೇರುವುದಿಲ್ಲ. ಮಳೆ ಬಂದರೆ ಮಾತ್ರ ಅಲ್ಲಿವರೆಗೂ ತಲುಪುತ್ತದೆ. ಕೆಲವು ರೈತರು ಈ ನೀರನ್ನೂ ಜಮೀನಿಗೆ ಬರುವಂತೆ ಮಾಡಿಕೊಂಡಿದ್ದಾರೆ.

ಮಾಹಿತಿ: ಬಿ.ಬಸವರಾಜು, ಅವಿನ್‌ ಪ್ರಕಾಶ್, ಎಂ ಮಲ್ಲೇಶ್. ಎನ್‌.ಮಂಜುನಾಥ್ ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT