ಶನಿವಾರ, ಅಕ್ಟೋಬರ್ 16, 2021
22 °C
ಹನೂರು: ಗ್ರಾಮದಲ್ಲಿ ಕಲುಷಿತ ವಾತಾವರಣ, ಅಭಿವೃದ್ಧಿ ಕುಂಠಿತ

ಹನೂರು: ಕಣ್ಣೂರಲ್ಲಿ ಸಾಂಕ್ರಾಮಿಕ ರೋಗದ ಭೀತಿ

ಬಿ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಅನೈರ್ಮಲ್ಯ ತಾಂಡವ ವಾಡುತ್ತಿದ್ದು, ಮಳೆ ಬಂದರೆ ಚರಂಡಿಯ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. 

ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ ಚರಂಡಿಗಳು ಕಿರಿದಾಗಿರುವುದರಿಂದ ಸ್ವಲ್ಪ ಮಳೆ ಯಾದರೂ ಚರಂಡಿಯೊಳಗಿರುವ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಹೊಸ ಬಡಾವಣೆಯಲ್ಲಿ ಮಾತ್ರವಲ್ಲ ಹಳೆಯ ಬಡಾವಣೆಯಲ್ಲೂ ಇದೇ ಸ್ಥಿತಿ ಇದೆ. ಮನೆಗಳು ರಸ್ತೆಯ ಮಟ್ಟಕ್ಕಿಂತ ಕೆಳಗೆ ಇರುವುದರಿಂದ ಜೋರಾಗಿ ಮಳೆ ಬಂದರೆ ಮಳೆ ನೀರಿನ ಜೊತೆಗೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತದೆ.

ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಶಿವಪುರ, ಜಿ.ಕೆ.ಹೊಸೂರು ಹಾಗೂ ಚೆನ್ನಾಲಿಂಗನಹಳ್ಳಿ ಗ್ರಾಮಗಳು ಸೇರುತ್ತವೆ. ಪಂಚಾಯಿತಿ ಕೇಂದ್ರ ಸ್ಥಾನದಲ್ಲೇ ಈ ಪರಿಸ್ಥಿತಿಯಾದರೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸ್ಥಿತಿ ಹೇಳತೀರದು.

‘ಆರು ತಿಂಗಳ ಅವಧಿಯಲ್ಲಿ ಎರಡು ಬಾರಿ ಚರಂಡಿಯಲ್ಲಿನ ಹೂಳು ತೆಗೆಸಲಾಗಿದೆ. ಇಷ್ಟಾದರೂ ಸಮಸ್ಯೆ ಬಗೆಹರಿದಿಲ್ಲ. ಕೆಲವು ಕಡೆ ಚರಂಡಿ ಕೆಳ ಮಟ್ಟದಲ್ಲಿರುವುದರಿಂದ ಈ ಸಮಸ್ಯೆಯುಂಟಾಗಿದೆ. ಚರಂಡಿಯನ್ನು ಎತ್ತರಕ್ಕೇರಿಸುವಂತೆ ಸಾಕಷ್ಟು ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ಮಾತ್ರ ನಮ್ಮ ಸಮಸ್ಯೆಗಳತ್ತ ತಿರುಗಿಯೂ ನೋಡುವುದಿಲ್ಲ. ಸಕಾಲಕ್ಕೆ ಸ್ಪಂದಿಸುವುದಿಲ್ಲ’ ಎಂದು ಆರೋಪಿಸುತ್ತಾರೆ ಗ್ರಾಮಸ್ಥರು.  

ಅಭಿವೃದ್ಧಿ ಕೆಲಸ ಕುಂಠಿತ: ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪ ರೇಟರ್ ಹಾಗೂ ಬಿಲ್ ಕಲೆಕ್ಟರ್ ಕರ್ತವ್ಯಲೋಪದ ಆರೋಪದಲ್ಲಿ ಕೆಲಸ ದಿಂದ ವಜಾಗೊಂಡಿದ್ದಾರೆ. ಹಾಗಾಗಿ ಎರಡು ಹುದ್ದೆಗಳು ಖಾಲಿ ಉಳಿದಿವೆ. ಕಂಪ್ಯೂಟರ್ ಆಪರೇಟರ್ ಇಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ನಿಂತು ಹೋಗಿದೆ.

‘ಕೆಲವರು ಬದು ನಿರ್ಮಾಣ, ಕೊಟ್ಟಿಗೆ ನಿರ್ಮಾಣಕ್ಕೆ ಹಣ ಬಿಡುಗಡೆ ಯಾಗದೆ ಒದ್ದಾಡುತ್ತಿದ್ದಾರೆ. ಬಿಲ್ ಕಲೆಕ್ಟರ್ ಇಲ್ಲದೇ ಪಂಚಾಯಿತಿಗೆ ಆದಾಯವೂ ಕುಂಠಿತಗೊಂಡಿದೆ. ಎರಡು ಹುದ್ದೆಗಳನ್ನು ನಿಯೋಜನೆ ಮಾಡಿ ಅಭಿವೃದ್ಧಿ ಕೆಲಸ ಕೈಗೊಳ್ಳುವಂತೆ ಪಿಡಿಒಗೆ ಮನವಿ ಮಾಡಿದರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾದರೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುವುದಾದರೂ ಹೇಗೆ’ ಎಂಬ ಪ್ರಶ್ನೆ ಗ್ರಾಮಸ್ಥರದ್ದು.

ಗ್ರಾ.ಪಂ.ನಲ್ಲಿ ಇ-ಸ್ವತ್ತು ಮಾಡಿಸಲು ₹ 3,000!
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಲಿ ನಿವೇಶನ ಹಾಗೂ ಹಾಲಿ ಮನೆಗಳಿಗೆ ಇ-ಸ್ವತ್ತು ಮಾಡಿಕೊಡಲು ಅಧಿಕಾರಿಗಳು ₹ 3 ಸಾವಿರ ಕೇಳುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. 

‘ಹಣ ಇರುವವರು ಅಷ್ಟು ದುಡ್ಡು ಕೊಟ್ಟು ಇ-ಸ್ವತ್ತು ಮಾಡಿಸಿಕೊಳ್ಳುತ್ತಾರೆ. ಆದರೆ ಕೂಲಿ ಕೆಲಸ ಮಾಡುವ ನಮ್ಮಂತಹವರು ₹ 3 ಸಾವಿರ ಕೊಡಲು ಹೇಗೆ ಸಾಧ್ಯ? ಕಡಿಮೆ ಕೊಡುತ್ತೇವೆ ಎಂದು ಕೇಳಿಕೊಂಡರೂ ಒಪ್ಪುವುದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಿಡಿಒ ಶಶಿಕಲಾ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ, ‘ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಮಾಡಿಕೊಡಲು ಹಣ ಕೇಳುತ್ತಿರುವ ಬಗ್ಗೆ ಗ್ರಾಮಸ್ಥರು ಕರೆ ಮಾಡಿ ತಿಳಿಸಿದ್ದಾರೆ. ಶೀಘ್ರದಲ್ಲೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.