ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಲಾಕ್‌ಡೌನ್‌: ತಿಂಗಳಿನಿಂದ ಸಿಗುತ್ತಿಲ್ಲ ಮದಿರೆ, ಕುಟುಂಬಗಳಲ್ಲಿ ನಿಂತ ಜಗಳ, ಮಹಿಳೆಯರ ನಿಟ್ಟುಸಿರು

ಚಾಮರಾಜನಗರ | ನೆಮ್ಮದಿ ತಂದ ‘ಮದ್ಯ’ ರಹಿತ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ –19 ವಿರುದ್ಧದ ಸಮರದ ಭಾಗವಾಗಿ ಜಿಲ್ಲೆಯಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ ಬಹುತೇಕರ ಪಾಲಿಗೆ ನಷ್ಟವನ್ನೇ ಉಂಟು ಮಾಡಿದರೂ ಮದ್ಯವ್ಯಸನಿಗಳ ಕುಟುಂಬಗಳಿಗೆ ಲಾಭ ಉಂಟು ಮಾಡಿದೆ. 

ಕುಡಿತದ ಚಟ ಹೊಂದಿರುವವರಿಂದಾಗಿ ಪ್ರತಿ ದಿನ ಜಗಳ, ಕೂಗಾಟ ಕೇಳಿ ಬರುತ್ತಿದ್ದ ಮನೆಗಳಲ್ಲಿ ಸಂತೋಷದ ನಗು, ಪ್ರೀತಿ ಮಾತುಗಳ ಮೆಲುದನಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವಾಗಿದ್ದು ಲಾಕ್‌ಡೌನ್‌. ಅದರಿಂದಾಗಿ ಸೃಷ್ಟಿಯಾದ ಮದ್ಯ ರಹಿತ ವಾತಾವರಣ.

ಲಾಕ್‌ಡೌನ್‌ ಜಾರಿಯಾದಾಗಿನಿಂದ ಜಿಲ್ಲೆಯಾದ್ಯಂತ ಮದ್ಯದ ಅಂಗಡಿಗಳು ಮುಚ್ಚಿವೆ. ಮದ್ಯವ್ಯಸನಿಗಳಿಗೆ ‘ಗುಂಡು’ ಸಿಗುತ್ತಿಲ್ಲ. ಮೊದಲ ಎರಡು ವಾರ ಕೆಲವು ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಪ್ರಕರಣಗಳು ಬೆಳಕಿಗೆ ಬಂತಾದರೂ ಎಲ್ಲರಿಗೂ ಅದು ಸಿಕ್ಕಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ನೀರಾ ತೆಗೆಯಲು ಮಾತ್ರ ಅವಕಾಶ ಇದೆ. ಆದರೆ, ಅದರಲ್ಲಿ ಅಮಲು ಇಲ್ಲದಿರುವುದರಿಂದ ಅದರತ್ತ ಹೆಚ್ಚಿನ ಜನರು ಮುಖ ಮಾಡಿಲ್ಲ. 

ದಿನಂಪ್ರತಿ ಬೆಳಗ್ಗೆಯೇ ಮದ್ಯದಂಗಡಿಗಳ ಗಿರಾಕಿಗಳಾಗಿದ್ದವರು, ದುಡಿದ ಹಣವನ್ನೆಲ್ಲಾ ಮದ್ಯಕ್ಕೆ ಸುರಿಯುತ್ತಿದ್ದವರು ಈಗ ಮನೆಯಲ್ಲೇ ಇದ್ದಾರೆ. ಲಾಕ್‌ಡೌನ್‌ ಆದ ನಂತರ ಆರಂಭದ ದಿನಗಳಲ್ಲಿ ಮದ್ಯ ಸಿಗದೆ ಚಡಪಡಿಸಿದರೂ, ನಂತರ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ. ಅವರ ಬದುಕಿನಲ್ಲಿ ಒಂದು ಶಿಸ್ತು ಬಂದಿದೆ. ಮದ್ಯಕ್ಕೆ ದಾಸರಾಗಿ ಸರಿಯಾಗಿ ಊಟ ಮಾಡದೇ ಇದ್ದವರು ಈಗ ಮೂರು ಹೊತ್ತು ಆಹಾರ ಸೇವಿಸುತ್ತಿದ್ದಾರೆ. ಜೀವನದಲ್ಲಿ ಶಿಸ್ತು ಬಂದಿದೆ. ಹೆಂಡತಿ, ಮಕ್ಕಳು, ಅಣ್ಣ ತಮ್ಮಂದಿರುವ, ಅಪ್ಪ –ಅಮ್ಮ.. ಹೀಗೆ ಕುಟುಂಬದ ಸದಸ್ಯರೊಂದಿಗೆ ಸರಿಯಾಗಿ ಬೆರೆಯದೇ ಇದ್ದವರು, ಈಗ ಅವರೊಂದಿಗೆ ಒಟ್ಟಾಗಿ ಕಾಲ ಕಳೆಯುತ್ತಿದ್ದಾರೆ. 

ಕುಡಿತದ ಚಟ ಹೊಂದಿರುವ ಕೆಲವರು ಯಾವಾಗ ಮದ್ಯದ ಅಂಗಡಿ ತೆರೆಯುವುದನ್ನೇ ಕಾದುಕುಳಿತರೆ, ಇನ್ನೂ ಕೆಲವರು ಮದ್ಯವನ್ನು ಮರೆತು ಬಿಟ್ಟಿದ್ದಾರೆ. ಮುಂದೆಯೂ ಅದರಿಂದ ದೂರವಿರಲು ತೀರ್ಮಾನ ಕೈಗೊಂಡಿದ್ದಾರೆ. 

ಮದ್ಯದ ಅಂಗಡಿಗಳು ಬಂದ್‌ ಆಗಿರುವುದರಿಂದ ನಿಟ್ಟುಸಿರುವ ಬಿಟ್ಟವರು, ವ್ಯಸನಿಗಳ ಕುಟುಂಬದ ಮಹಿಳೆಯರು. ಪತಿ, ಅಣ್ಣ, ಅಪ್ಪ.. ಹೀಗೆ ಚಟ ಹತ್ತಿಸಿಕೊಂಡಿರುವರಿಂದಾಗಿ, ಪ್ರತಿನ ಬೈಗುಳ ಮತ್ತು ಹೊಡೆತ ತಿಂದು ಕಣ್ಣೀರು ಹಾಕುತ್ತಿದ್ದ ಜೀವಗಳಲ್ಲಿ ಈಗ ಸಂತಸ ನೆಲೆಸಿದೆ. ಲಾಕ್‌ಡೌನ್‌ ಇನ್ನೂ ಕೆಲವು ದಿನ ಮುಂದುವರಿದರೆ ಒಳ್ಳೆಯದು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸುತ್ತಾರೆ.

‘ಕೆಲವರು ಮದ್ಯವನ್ನು ಮರೆತು ಹೊಸ ಜೀವನ ನಡೆಸುತ್ತಿದ್ದಾರೆ. ಪ್ರತಿ ದಿನ ಗದ್ದೆ ಕೆಲಸ, ಮನೆ ಕೆಲಸ, ಮಕ್ಕಳ ಜೊತೆ ಆಟವಾಡಿಕೊಂಡಿರುತ್ತಾರೆ’ ಎಂದು ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯ ಪಾರ್ವತಿ ಅವರು ಹೇಳಿದರು.

‘ದಿನಾ ಕುಡಿಯುತ್ತಿದೆ. ಮನೆಗೆ ಬಂದು ಎಲ್ಲರೊಂದಿಗೆ ಜಗಳವಾಡುತ್ತಿದೆ. ಲಾಕ್‌ಡೌನ್‌ ನಂತರ ಮದ್ಯ ಸಿಕ್ಕಿಲ್ಲ. ಅದು ಈಗ ಮರೆತು ಹೋಗಿದೆ. ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇದ್ದಾರೆ. ಮುಂದೆ ಮದ್ಯದ ಅಂಗಡಿ ತೆರೆದರೂ ಕುಡಿಯುವುದಿಲ್ಲ’ ಎಂದು ವಾಗ್ದನ ನೀಡುತ್ತಾರೆ ಕೊಳ್ಳೇಗಾಲ ಭೀಮನಗರದ ವೆಂಕಟೇಶ್‌.

‘ಪ್ರತಿದಿನ ಬೆಳಿಗ್ಗೆಯೇ ಕುಡಿತ ಆರಂಭಿಸುತ್ತಿದ್ದೆ. ದಿನಕ್ಕೆ ಒಂದು ಹೊತ್ತು ಊಟ ಮಾಡುವುದು ಕಷ್ಟವಾಗಿತ್ತು. ರಾತ್ರಿ ವೇಳೆ ನಶೆ ಜಾಸ್ತಿಯಾದರೆ ಊಟವನ್ನೇ ಮಾಡುತ್ತಿರಲಿಲ್ಲ. 25 ದಿನಗಳಿಂದ ಎಲ್ಲಿಯೂ ಮದ್ಯ ಸಿಗುತ್ತಿಲ್ಲ. ಈಗ ಮೂರು ಹೊತ್ತು ಸರಿಯಾಗಿ ಊಟ ಮಾಡುತ್ತಿದ್ದೇನೆ. ಪ್ರತಿ ದಿನ ಕುಡಿಯಬೇಕು ಎಂದು ಈಗ ಅನಿಸುತ್ತಿಲ್ಲ’ ಎಂದು ಹೆಸರು ಹೇಳಲು ಬಯಸದ ಹನೂರಿನ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಕ್ಕಳಾದ ಮೇಲೆ ಕಾರಣಾಂತರಗಳಿಂದ ಮದ್ಯಸೇವನೆಯನ್ನು ರೂಢಿ ಮಾಡಿಕೊಂಡಿದ್ದೆವು. ದಿನಸಿ ಖರೀದಿಸಲು ಹಣವಿಲ್ಲದಿದ್ದರೂ, ಕುಡಿಯಲು ಹಣ ಹೊಂದಿಸಿಕೊಳ್ಳುತ್ತಿದ್ದೆವು. ಇದರಿಂದಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವೂ ಕಳೆದು ಹೋಗಿತ್ತು. ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹೀಗೆ ಎಲ್ಲರಿಂದಲೂ ಬೈಗುಳಗಳನ್ನು ಕೇಳುತ್ತಿದ್ದೆವು. ಈಗ ಎಲ್ಲವೂ ನಿಂತು ಹೋಗಿದೆ. ಮನೆಯಲ್ಲಿ ಗೌರವವೂ ಸಿಗುತ್ತಿದೆ. ಮದ್ಯ ಮಾರಾಟಕ್ಕೆ ಇದೇ ರೀತಿ ಕಡಿವಾಣ ಹಾಕಿದರೆ ನಮ್ಮಂತಹ ನೂರಾರು ಕುಟುಂಬಗಳಿಗೆ ಒಳ್ಳೆಯದಾಗುತ್ತದೆ’ ಎಂದು ಮಹದೇಶ್ವರ ಬೆಟ್ಟದ ಬಿ.ಮಹದೇವ ಹಾಗೂ ಟಿ.ಮಾದಪ್ಪ ಅವರು ಅಭಿಪ್ರಾಯ ಪಟ್ಟರು. 

ಮದ್ಯ ಸಿಗದೆ ಚಡಪಡಿಕೆ
ತಿಂಗಳಿಂದ ಮದ್ಯ ಸಿಗದಿರುವುದರಿಂದ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದಿರುವವರೂ ಇದ್ದಾರೆ. ಕುಟುಂಬದ ಸದಸ್ಯರಿಗೆ ಅವರ ಚಡಪಡಿಕೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ.  

‘ನಮ್ಮೂರಿನಲ್ಲಿ ಕೆಲವರು ಮದ್ಯ ಇಲ್ಲದೆ ಬದುಕು ಕಟ್ಟಿಕೊಳ್ಳುವುದೇ ಕಷ್ಟವಾಗಿದೆ. ಏಕಾಏಕಿ ಮದ್ಯ ಮಾರಾಟ ನಿಂತದ್ದರಿಂದ ಕೈ ಮತ್ತು ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಇವರಿಗೆ ಟೈಲರಿಂಗ್‌ ಕೆಲಸ ಮಾಡುವಾಗ ಕೈಗಳು ನಡುಗುತ್ತಿವೆ. ದೇಹ ಊದಿಕೊಂಡಿದೆ. ಮದ್ಯ ಸೇವನೆ ಇದ್ದಿದ್ದರೆ ಸ್ವಲ್ಪವಾದರೂ ಆರೋಗ್ಯ ಸುಧಾರಿಸುತ್ತಿತ್ತು. ಮದ್ಯವನ್ನೇ ಔಷಧ ಮಾಡಿಕೊಂಡವರೂ ಇದ್ದಾರೆ’ ಎಂದು ಹೇಳುತ್ತಾರೆ ಯಳಂದೂರಿನ ಅಯ್ಯಪ್ಪ.

‘ದೇಹದ ನೋವನ್ನು ಮರೆಯಲು ಇವರಿಗೆ ಮದ್ಯ ಬೇಕೆ ಬೇಕು. ಮದ್ಯ ಸಿಗದಿದ್ದರೆ ಬೇಗ ಸಾವಿಗೀಡಾಗುತ್ತಾರೆ ಎನ್ನುವ ಪತ್ನಿಯರ ಅಳಲನ್ನು ಮನಗಾಣಬೇಕು’ ಎನ್ನುತ್ತಾರೆ ಇವರು.

-----

ಹಣ, ಕುಟುಂಬದ ಗೌರವ ಉಳಿದಿದೆ 
ನಮ್ಮ ತಂದೆ ಪ್ರತಿ ದಿನ ಬಾರ್‌ ತೆರೆಯುವುದನ್ನೇ ಕಾಯುತ್ತಿದ್ದರು. ಮದ್ಯ ಸೇವಿಸಿ ಕೊಚ್ಚೆ, ಗಲ್ಲಿ ಎನ್ನದೆ ಬೀಳುತ್ತಿದ್ದರು. ಮದ್ಯ ಸಿಗದೆ ಇರುವುದರಿಂದ ಮನೆಯಲ್ಲಿ ಇದ್ದಾರೆ. ಹಣ ಮತ್ತು ಕುಟುಂಬದ ಗೌರವವು ಉಳಿದಿದೆ. ನೆರೆಹೊರೆಯವರನ್ನು ಗೌರವದಿಂದ
ಮಾತನಾಡಿಸುತ್ತಾರೆ
–ಮಂಜಣ್ಣ, ಯಳಂದೂರು  

**
ಕುಟುಂಬವನ್ನು ಕರೆಸುವ ಮನಸ್ಸಾಗಿದೆ
ದುಡಿದ ಹಣವನ್ನು ಕುಡಿತಕ್ಕಾಗಿ ಖರ್ಚು ಮಾಡುತ್ತಿದ್ದೆ. ಮನೆ ಮಂದಿಗೆ ಯಾವ ಸಹಾಯವನ್ನು ಮಾಡುತ್ತಿರಲಿಲ್ಲ. ಕುಡುಕ ಎಂಬ ಹಣೆ ಪಟ್ಟಿ ಮಾತ್ರ ಉಳಿದಿತ್ತು. ಇದರಿಂದ ಬೇಸತ್ತ ಹೆಂಡತಿ ಮತ್ತು ಮಕ್ಕಳು ನನ್ನನ್ನು ಮನೆ ಬಿಟ್ಟು ತವರು ಸೇರಿದ್ದಾರೆ. ಈಗ ಹಣ ಹೆಚ್ಚು ಗಳಿಸಲಾಗುತ್ತಿಲ್ಲ. ಕೂಲಿ ಕೆಲಸ ಮಾಡಲು ಮುಂದಾಗಿದ್ದೇನೆ. ಸದ್ಯ ಕುಟುಂಬದವರನ್ನು ಕರೆಸಿಕೊಳ್ಳಬೇಕು ಎಂದು ಆಸೆ ಆಗಿದೆ. ಆದರೆ, ಲಾಕ್‌ಡೌನ್ ಮುಗಿದ ನಂತರ ಏನಾಗುತ್ತದೆಯೋ ಗೊತ್ತಿಲ್ಲ. ಸದ್ಯ ಕುಡಿಯಬೇಕು ಎಂದೆನಿಸುತ್ತಿಲ್ಲ.
–ನಂಜುಂಡ, ಯಳಂದೂರು ತಾಲ್ಲೂಕು

**
ಕೈಕಾಲು ನಡುಗುತ್ತಿದೆ
ಪ್ರತಿದಿನ ಕುಡಿಯುವ ಅಭ್ಯಾಸವಿದ್ದುದ್ದರಿಂದ, ಕುಡಿಯಲಿಲ್ಲ ಎಂದರೆ ಕೈಕಾಲು ನಡುಗುವುದಕ್ಕೆ ಆರಂಭವಾಗುತ್ತದೆ. ಪ್ರತಿದಿನ ಸಂಜೆಯಾಗುತ್ತಿದ್ದಂತೆ ಮದ್ಯಕ್ಕಾಗಿ ಹಾತೊರೆಯುವಂತಾಗುತ್ತದೆ. ಆದರೆ ಮದ್ಯ ಸಿಗುತ್ತಿಲ್ಲ. ಹೀಗಾಗಿ, ಪ್ರತಿದಿನ ರಾತ್ರಿ ಸ್ಥಳೀಯವಾಗಿ ಸಿಗುವ ತಂಪು ಪಾನೀಯವನ್ನೇ ಕುಡಿಯುತ್ತಿದ್ದೇನೆ 
–ಹೆಸರು ಹೇಳಲು ಇಚ್ಛಿಸದ ವ್ಯಕ್ತಿ, ಹನೂರು

*
ಕುಟುಂಬದೊಂದಿಗೆ ಬೆರೆಯುತ್ತಾರೆ 
ಮನೆಯವರು ಐದು ವರ್ಷಗಳ ಹಿಂದೆ ಉತ್ತಮ ಸಂಪಾದನೆ ಮಾಡುತ್ತ ಗೌರವಯುತವಾಗಿ ಬದುಕುತ್ತಿದ್ದರು. ನಂತರದ ದಿನಗಳಲ್ಲಿ ಮದ್ಯಕ್ಕೆ ದಾಸರಾಗಿ ಅವಮಾನ ಪಡಬೇಕಾದ ಪರಿಸ್ಥಿತಿ ಬಂದಿತ್ತು. ಕೆಲಸಕ್ಕೆ ಹೋಗುತ್ತಿರಲಿಲ್ಲ. ಲಾಕ್ ಡೌನ್ ಆದಗಿನಿಂದ ಕುಡಿತ ಇಲ್ಲದೆ ಬೆಳಿಗ್ಗೆ ವಾಕಿಂಗ್ ಜಾಗಿಂಗ್ ಮಾಡುತ್ತ ಕೆಲಸದ ಬಗ್ಗೆ ಗಮನ ಕೊಡುತ್ತಿದ್ದಾರೆ.
–ರೇಣುಕಮ್ಮ, ಗುಂಡ್ಲುಪೇಟೆ 

-----------

ಪೂರಕ ಮಾಹಿತಿ: ಅವಿನ್‌ ಪ್ರಕಾಶ್‌, ನಾ.ಮಂಜುನಾಥಸ್ವಾಮಿ, ಬಿ.ಬಸವರಾಜು, ಮಲ್ಲೇಶ ಎಂ, ಪ್ರದೀಪ್‌ಕುಮಾರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು