ಮಂಗಳವಾರ, ಜೂನ್ 28, 2022
28 °C
ಕಂದಾಯ ಕಟ್ಟಲು ಸಿದ್ಧರಿದ್ದರೂ ಸಂಪರ್ಕ ಕಲ್ಪಿಸದ ಅಧಿಕಾರಿಗಳು–ಗ್ರಾಮಸ್ಥರ ಆರೋಪ

ಗುಳ್ಯದ ಬಯಲು: ಕುಡಿಯುವ ನೀರಿಗೆ ಹಾಹಾಕಾರ

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ನೀರುಗಂಟಿ ಹಾಗೂ ಬಡಾವಣೆಯ ನಿವಾಸಿಗಳ ನಡುವಿನ ಕಿತ್ತಾಟದಿಂದಾಗಿ ತಾಲ್ಲೂಕಿನ ಗುಳ್ಯದ ಬಯಲು ಗ್ರಾಮಸ್ಥರು ಮೂರು ದಿನಗಳಿಂದ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ.

ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯರಪಾಳ್ಯ ಬಳಿಯಿರುವ ಗುಳ್ಯದ ಬಯಲು ಗ್ರಾಮಕ್ಕೆ ಮೂರು ದಿನಗಳಿಂದ ನೀರು ಪೂರೈಕೆಯಾಗದಿರುವುದರಿಂದ ಜನರು ಕುಡಿಯುವ ನೀರಿಗಾಗಿ ಖಾಸಗಿ ಜಮೀನು ಮತ್ತು ಅಕ್ಕಪಕ್ಕದ ಗ್ರಾಮಗಳನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಗ್ರಾಮದಲ್ಲಿ ಸುಮಾರು 200 ಕುಟುಂಬಗಳಿದ್ದು 800ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. 100ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳೇ ಇವೆ. ಎಲ್ಲರೂ ನೀರಿಗಾಗಿ ಕಿ.ಮೀ ಗಟ್ಟಲೇ ದೂರವಿರುವ ಖಾಸಗಿ ಜಮೀನುಗಳಿಗೆ ತೆರಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ. ನಾವು ಯಾರಿಗೆ ಹೇಳುವುದು? ಏನು ಮಾಡುವುದು ಎನ್ನುವುದೇ ತೋಚುತ್ತಿಲ್ಲ’ ಎಂದು ಹೇಳುತ್ತಾರೆ ಗ್ರಾಮದ ಬುಡಕಟ್ಟು ಸಮುದಾಯದ ಜಡೆಯಪ್ಪ.

‘ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ನಾವು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಅಲ್ಲದೇ ಪಂಚಾಯಿತಿಗೂ ತೆರಳಿ ಗ್ರಾಮದ ವಾಸ್ತವ ಸ್ಥಿತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವರಿಕೆ ಮಾಡಿದ್ದೇವೆ. ಇಷ್ಟಾದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಪ್ರತಿ ವರ್ಷ ಬೇಸಿಗೆ ಆರಂಭವಾದರೆ ಗ್ರಾಮದ ಜನರದ್ದು ಇದೇ ಗೋಳು. ಖಾಸಗಿ ಜಮೀನಿನ ಮಾಲೀಕರು ಒಂದೆರಡು ದಿನ ನೀರು ಕೊಡುತ್ತಾರೆ. ಬಳಿಕ ಅವರು ಕೊಡುವುದಿಲ್ಲ. ಆಗ ಮಹಿಳೆಯರು ಮತ್ತು ಮಕ್ಕಳು ಪಕ್ಕದ ಊರಿಗೆ ಹೋಗಿ ನೀರು ತರಬೇಕು ಅಥವಾ ಐದು ದಿನಗಳಿಗೆ ಒಮ್ಮೆ ಬಿಡುವ ನೀರಿಗಾಗಿ ಕಾದು ಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆರೋಪಿಸುತ್ತಾರೆ ಗ್ರಾಮದ ಮಹಿಳೆಯರು.

‘ವೈಯಕ್ತಿಕ ಕಾರಣದಿಂದಾಗಿ ಇಲ್ಲಿನ ನೀರುಗಂಟಿ ಮೂರು ದಿನಗಳಿಂದ ಕುಡಿಯುವ ನೀರು ಬಿಟ್ಟಿಲ್ಲ. ಇದರಿಂದ ನಿವಾಸಿಗಳಿಗೆ  ಸಮಸ್ಯೆಯುಂಟಾಗಿದೆ. ಸಮಸ್ಯೆ ಇದೆ ಮೊದಲೇನಲ್ಲ. ಪ್ರತಿ ವರ್ಷವೂ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತಲೇ ಇದೆ. ಈ ಬಗ್ಗೆ ಪಂಚಾಯಿತಿಯಲ್ಲಿ ಕೇಳಿದರೆ ಯಾವುದೇ ಅನುದಾನವಿಲ್ಲ ಎಂದು ಹೇಳುತ್ತಾರೆ. ನಾನು ಗೆದ್ದು ಬಂದಿರುವ ವಾರ್ಡಿನಲ್ಲಿ ಜನರು ಕುಡಿಯುವ ನೀರು ಒದಗಿಸುವಂತೆ ಕೇಳುತ್ತಾರೆ. ಆದರೆ, ಅಧಿಕಾರಿಗಳು ಪಂಚಾಯಿತಿಯಲ್ಲಿ ಹಣವಿಲ್ಲ ಎಂದು ಹೇಳುತ್ತಾರೆ. ಹೀಗಾದರೆ ಜನರಿಗೆ ನಾನು ಹೇಗೆ ಉತ್ತರಿಸಲಿ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಮರಿ ಪ್ರಶ್ನಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ‘ನೀರುಗಂಟಿಯ ವೈಯಕ್ತಿಕ ವಿಷಯಕ್ಕೆ ಸಮಸ್ಯೆ ಉದ್ಭವಿಸಿದೆ. ಕೂಡಲೇ ಸರಿಪಡಿಸಲಾಗುವುದು’ ಎಂದು ಹೇಳಿದರು.

ಕಂದಾಯ ಕಟ್ಟುತ್ತೇವೆ ಎಂದರೂ ನೀರಿಲ್ಲ!

ಗ್ರಾಮದಲ್ಲಿ  ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿನಿತ್ಯ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪಡುವ ಪಾಡು ಹೇಳತೀರದು. ಇಲ್ಲಿನ ಗ್ರಾಮಸ್ಥರು ಕಂದಾಯ ಪಾವತಿಸಲು ಸಿದ್ಧರಿದ್ದರೂ ಗ್ರಾಮ ಪಂಚಾಯಿತಿಗೆ ಅಧಿಕಾರಿಗಳು ಮಾತ್ರ ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ನಿವಾಸಿಗಳ ದೂರು

‘ಗ್ರಾಮದಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಇದೇ ಮುಖ್ಯ ಕಾರಣ. ಪ್ರತಿ ಗ್ರಾಮಸಭೆಗಳಲ್ಲೂ ನಾವು ಕಂದಾಯ ಕಟ್ಟಲು ಸಿದ್ಧರಿದ್ದೇವೆ ಎಂದು ಮೌಖಿಕವಾಗಿ ಹೇಳುತ್ತಲೇ ಬಂದಿದ್ದೇವೆ. ಆದರೆ ಅಧಿಕಾರಿಗಳು ಮಾತ್ರ ಇದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದಾರೆ. ಈಗ ನೀರುಗಂಟಿಯ ವೈಯಕ್ತಿಕ ವಿಷಯಕ್ಕೆ ಇಡೀ ಬಡಾವಣೆಯ ನಿವಾಸಿಗಳೇ ಕುಡಿಯುವ ನೀರಿಲ್ಲದೇ ಹೆಣಗಾಡುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಗ್ರಾಮದ ಬಸವಣ್ಣ ಒತ್ತಾಯಿಸಿದರು.

----

ಕಂದಾಯ ಕಟ್ಟಲು ಸಿದ್ಧರಿದ್ದರೂ ನೀರಿನ ಸಂಪರ್ಕ ಕಲ್ಪಿಸದಿರುವ ಆರೋಪದ ವಿಚಾರವಾಗಿ ಪಿಡಿಒ ಅವರಿಂದ ಮಾಹಿತಿ ಪಡೆದು ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು
ಧರ್ಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು