ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಕುಡಿಯುವ ನೀರಿಗಾಗಿ ಜನರ ಪರದಾಟ

ಮಾರ್ಟಳ್ಳಿಯಲ್ಲಿ ತಲೆದೋರಿದ ನೀರಿನ ಸಮಸ್ಯೆ, ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
Last Updated 12 ಫೆಬ್ರುವರಿ 2021, 16:45 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಪ್ರತಿನಿತ್ಯ ಗ್ರಾಮಸ್ಥರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲೇ ಹೆಚ್ಚು ವಿಸ್ತಾರವಾದ ಗ್ರಾಮಪಂಚಾಯಿತಿ ಮಾರ್ಟಳ್ಳಿಯಲ್ಲಿ ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಒಂದು ದಶಕದಿಂದಲೂ ಈ ಸಮಸ್ಯೆ ಮರುಕಳಿಸುತ್ತಲೇ ಇದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬುದು ಇಲ್ಲಿನ ಜನರ ಆರೋಪ.

ಸಾವಿರ ಅಡಿ ಕೊರೆದು ನೀರಿಲ್ಲ: ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಿಂದೆ 300 ರಿಂದ 400 ಅಡಿಗಳವೆರೆಗೆ ಕೊಳವೆ ಬಾವಿ ಕೊರೆದರೆ ನೀರು ಸಿಗುತ್ತಿತ್ತು.

‘ಈಗ ಸಾವಿರ ಅಡಿ ಕೊರೆದರೂ ನೀರು ಸಿಗುವುದು ಅಪರೂಪವಾಗಿದೆ. ವಡ್ಡರದೊಡ್ಡಿ ಗ್ರಾಮದ ಸಮೀಪ ಹಳ್ಳ ತುಂಬಿ ಹರಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ನೀರು ಬರುತ್ತಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಹಳ್ಳದಲ್ಲಿ ನೀರು ಹರಿದಿಲ್ಲ ಇದರಿಂದ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

ಪಂಚಾಯಿತಿ ಮುಂದೆ ಪ್ರತಿಭಟನೆ: ‘ಸಂದನಪಾಳ್ಯ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಈ ಬಗ್ಗೆ ತಿಳಿಸಿದರೂ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಜನತೆ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರೂ ಅವರು ನಮ್ಮ ಗೋಳು ಕೇಳಲು ತಯಾರಿಲ್ಲ. ಗ್ರಾಮಸ್ಥರೆಲ್ಲ ಸೇರಿ ನಾಲ್ಕೈದು ಬಾರಿ ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಸ್ಪಂದಿಸಿದ್ದರಿಂದ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆಯನ್ನು ಮಾಡಿದ್ದೇವೆ. ಆದರೂ ನಮಗೆ ಕುಡಿಯುವ ನೀರು ಸಿಕ್ಕಿಲ್ಲ’ ಎಂದು ಕರ್ನಾಟಕ ತಮಿಳರ್ ಕಲಂ ನ ಪ್ರಧಾನ ಕಾರ್ಯದರ್ಶಿ ಅರ್ಪುದರಾಜ್ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ತಕ್ಷಣ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಸಂಘಟನೆಯ ವತಿಯಿಂದ ವಡಕೆಹಳ್ಳದಿಂದ ನಾಲ್‌ರೋಡ್ವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದು’ ಎಂದುಅರ್ಪುದರಾಜ್ ಅವರು ಹೇಳಿದರು.

‘ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮದ ಜನರು ಇತ್ತೀಚೆಗೆ ಸುಳ್ವಾಡಿಗೆ ಬಂದಿದ್ದ ಶಾಸಕ ಆರ್‌.ನರೇಂದ್ರ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ಅವರು ಕೂಡಲೇ ಜಿಲ್ಲಾ ಅಥವಾ ತಾಲ್ಲೂಕು ಪಂಚಾಯಿತಿ ವತಿಯಿಂದ ಕೊಳವೆಬಾವಿ ಕೊರೆಸಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಗ್ರಾಮಸ್ಥರು ದೂರಿದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ನೋಟಿಸ್‌
ಈ ಮಧ್ಯೆ, 2020-21 ಸಾಲಿನಲ್ಲಿ ಮಾರ್ಟಳ್ಳಿ ಗ್ರಾಮಪಂಚಾಯಿತಿಗೆ 15ನೇ ಹಣಕಾಸು ಯೋಜನೆಯಡಿ ₹49 ಲಕ್ಷ ಅನುದಾನ ಬಂದಿದ್ದು ಇದನ್ನು ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದ್ದರಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ. ಶ್ರೀನಿವಾಸ್ ಅವರು ಪಿಡಿಒ ಶಿವಣ್ಣ ಅವರಿಗೆ ನೋಟೀಸ್ ನೀಡಿದ್ದಾರೆ.

‘ಪಂಚಾಯಿತಿಗೆ ಬಂದಿದ್ದ ಶೇ 25 ರಷ್ಟು ಹಣ ಅಂದರೆ ₹25 ಲಕ್ಷವನ್ನು ಕುಡಿಯುವ ನೀರಿನ ವ್ಯವಸ್ಥೆಗಾಗಿ ವೆಚ್ಚ ಮಾಡಬಹುದಿತ್ತು. ಮಾಡಬಹುದಿತ್ತು. ಅನಗತ್ಯವಾಗಿ ಹಣ ವೆಚ್ಚ ಮಾಡಿರುವ ಬಗ್ಗೆ ದೂರುಗಳಿವೆ. ಈ ಕಾರಣಕ್ಕೆ ಪಿಡಿಒಗೆ ನೋಟೀಸ್ ನೀಡಿದ್ದೇನೆ’ ಎಂದು ಪಿ. ಶ್ರೀನಿವಾಸ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೀಘ್ರದಲ್ಲೇ ಮಾರ್ಟಳ್ಳಿಗೆ ತಹಶೀಲ್ದಾರ್ ಹಾಗೂ ಎಇಇ ಹಾಗೂ ನಾನು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಭೆ ನಡೆಸಿ ಚರ್ಚಿಸುತ್ತೇವೆ. ಅಗತ್ಯ ಕ್ರಮಗಳನ್ನೂ ಕೈಗೊಳ್ಳುತ್ತೇವೆ’ ಎಂದು ಶ್ರೀನಿವಾಸ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT