ಭಾನುವಾರ, ನವೆಂಬರ್ 27, 2022
27 °C
ಬಿಳಿಗಿರಿರಂಗನಬೆಟ್ಟ ಮರೆಯಾದ ಬಿಸಿಲು: ಬೆಳೆಗಳನ್ನು ಕಾಡುವ ತುಂತುರು

ಯಳಂದೂರು: ಬೆಳೆಗಾರರಿಗೆ ಕಾಫಿ ಒಣಗಿಸುವುದೇ ಸವಾಲು!

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಕಾಫಿ ಕೊಯ್ಲು ಆರಂಭವಾಗಿದೆ. ಈ ಸಮಯದಲ್ಲಿ ಮತ್ತೆ ಮೋಡದ ಮಾಲೆ ಆವರಿಸಿದೆ. ಮಂಗಳವಾರ ರಾತ್ರಿ ಹಲವೆಡೆ ತುಂತುರು ಮಳೆ ಸುರಿದಿದ್ದು, ಮತ್ತೆ ಮೂರು ದಿನಗಳ ಮಳೆ ಸುರಿಯುವ ಸೂಚನೆ ಸಿಕ್ಕಿದೆ. ಇದು ವಾಣಿಜ್ಯ ಬೆಳೆ ಕಾಫಿ ಬೆಳೆಗಾರರಲ್ಲಿ ಆತಂಕ ತಂದಿತ್ತಿದೆ.

ತಾಲ್ಲೂಕಿನಲ್ಲಿ ಎಂಟತ್ತು ದಿನಗಳಿಂದ ಭರ್ಜರಿ ಬಿಸಿಲಿನ ವಾತಾವರಣ ಇತ್ತು. ಕೃಷಿ ಚಟುವಟಿಕೆ ಬಿರುಸು ಪಡೆದಿತ್ತು. ಆದರೆ, ಮೂರು ದಿನಗಳಿಂದ ಕೃಷಿಕರು ಬಿಸಿಲಿನ ಬರ ಎದುರಿಸುತ್ತಿದ್ದಾರೆ. ಇದರಿಂದ ಬೆಳೆಗಳನ್ನು ಒಣಗಿಸುವ, ಕಟಾವು ಮಾಡುವ ಕೆಲಸಗಳನ್ನು ಮುಂದೂಡುವಂತೆ ಆಗಿದೆ.

ಬಹುತೇಕ ಕಾಫಿ ಬೆಳೆಗಾರರು ಈ ಸಮಯದಲ್ಲಿ ಕಾಫಿ ಕಟಾವಿಗೆ ಒತ್ತು ನೀಡಿದ್ದು, ಪಲ್ಪಿಂಗ್ ಯಂತ್ರಗಳಿಂದ ಬೀಜ ಬಿಡಿಸುವ ಕಾಯಕ ಬಿರುಸುಗೊಂಡಿದೆ. ಶ್ರಮಿಕರಿಗೆ ದಿನಪೂರ್ತಿ ಕೆಲಸ ಸಿಕ್ಕಿದ್ದು, ತುಂತುರು ಮಳೆಯಿಂದ ಕೃಷಿ ಕೆಲಸಗಳಿಗೆ ಹಿನ್ನಡೆ ಆಗುವ ಆತಂಕ ಉಂಟಾಗಿದೆ. 

‘ಬಿಳಿಗಿರಿಬೆಟ್ಟದ ಬಂಗ್ಲೆಪೋಡು, ಮಂಜಿಗುಂಡಿಪೋಡು, ಯರಕನಗದ್ದೆ, ಗೊಂಬೆಗಲ್ಲು ಹಾಗೂ ಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಫಿ ಕೊಯ್ಲು ವೇಗ ಪಡೆದುಕೊಂಡಿದೆ. ಮಳೆ ಭೀತಿಯಿಂದ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಬೆಳೆಗಾರರು ಪರದಾಡುತ್ತಿದ್ದಾರೆ. ಬಿಸಿಲಿನ ತೀವ್ರತೆ ಇಲ್ಲದೆ ಇರುವುದರಿಂದ ಕಟಾವು ಮಾಡಿ ಸಂಗ್ರಹಿಸಿದ ಬೀಜವನ್ನು ಒಣಗಿಸಲು ವಾರಗಟ್ಟಲೆ ಕಾಯಬೇಕಿದೆ. ಈ ನಡುವೆ ತುಂತುರು ಮುಂದುವರಿದರೆ ಕಾಫಿ ಮುಗ್ಗಲು ಕಾಣಿಸಿಕೊಂಡು, ಕೊಳೆಯುತ್ತದೆ’ ಎಂದು ಬಂಗ್ಲೆಪೋಡು ರಂಗೇಗೌಡ ಹೇಳಿದರು. 

‘ಕಾಫಿಗೆ ಈ ಬಾರಿ ಉತ್ತಮ ಬೆಲೆ ಇದೆ. ತುಂತುರು ಮಳೆ, ಬಿಸಿಲಿನ ಕೊರತೆಯಿಂದ ಕಾಫಿಯ ಸಂಗ್ರಹ ಮತ್ತು ನಿರ್ವಹಣೆ ಕಷ್ಟವಾಗಿದೆ. ಶೀತ ವಾತಾವರಣದಿಂದ ಕಾಫಿ ಗುಣಮಟ್ಟ ಕಳೆದುಕೊಂಡರೆ ಉತ್ತಮ ಧಾರಣೆ ಸಿಗುವುದಿಲ್ಲ’ ಎಂದು ವಾಣಿಜ್ಯ ಹಿಡುವಳಿದಾರರು ಹೇಳುತ್ತಾರೆ.

‘ಕಾಫಿ ಬೀಜ ಸಂಗ್ರಹಕ್ಕೆ ಹಿನ್ನಡೆ’ 

‘ಮೂರ್ನಾಲ್ಕು ತಿಂಗಳಿಂದ ಮಳೆ ಕಾಡಿತ್ತು. ಕಾರ್ಮಿಕರು ಕೆಲಸವಿಲ್ಲದೆ ಬವಣೆ ಪಟ್ಟಿದ್ದರು.  ಈಗ ಕೃಷಿ ಕೆಲಸಗಳಿಗೆ ಬೇಡಿಕೆ ಇದೆ. ಬಹುತೇಕ ಮಹಿಳೆಯರೇ ಕಾಫಿ ತೋಟದ ನಿರ್ವಹಣೆ ಮತ್ತು ಬೀಜ ಒಣಗಿಸುವ ಕೆಲಸಗಳಲ್ಲಿ ತೊಡಗಿದ್ದಾರೆ. ಮಳೆಗಾಲ ಕಳೆದು, ಬಿಸಿಲಿನ ಪ್ರಖರತೆ ಕಾಣಿಸುತ್ತಿದ್ದಂತೆ ಇಲ್ಲಿನ ಶ್ರಮಿಕರು ದಿನಪೂರ್ತಿ ವರಮಾನ ಗಳಿಸುತ್ತಿದ್ದರು. ಆದರೆ, ರಾತ್ರಿ ತುಂತುರು ಮಳೆ ಕಾಣಿಸಿಕೊಂಡು, ಕಾಫಿ ಸಂಗ್ರಹಕ್ಕೆ ಹಿನ್ನಡೆಯಾಗಿದೆ. ನಿಗದಿತ ಅವಧಿಯೊಳಗೆ ಕೆಲಸಗಳು ಮುಗಿಯದಿದ್ದರೆ, ಕಾಫಿ ಗುಣಮಟ್ಟ ಕುಸಿಯಲಿದೆ. ಇದರಿಂದ ಕಾರ್ಮಿಕರು ಮತ್ತು ಬೆಳೆಗಾರರು ನಷ್ಟ ಅನುಭವಿಸಬೇಕು’ ಎಂದು ಮಂಜಿಗುಂಡಿ ಪೋಡಿನ ಸಿದ್ದಮ್ಮ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು