ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದಿರುವ ಕಟ್ಟಡಗಳ ಕಾಯಕಲ್ಪ: ಸೋಮಣ್ಣ

ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರ ಉದ್ಘಾಟನೆ, ಸ‌ದ್ಬಳಕೆಗೆ ಮನವಿ
Last Updated 15 ಆಗಸ್ಟ್ 2022, 16:39 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿವಿಧ ಕಟ್ಟಡಗಳಿಗೆ ಕಾಯಕಲ್ಪ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರ ಸಭೆ ನಡೆಸಿ, ಕೆಲಸ ಆರಂಭವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೋಮವಾರ ಹೇಳಿದರು.

ನಗರದಲ್ಲಿ ವರನಟ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ‘11,12 ವರ್ಷಗಳಿಂದ ಯಾವುದೇ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೇ ಇದ್ದರೆ ಅದು ಬೇಸರದ ವಿಚಾರ. ಜನರಿಗೂ ಇದರಿಂದ ಮುಜುಗರವಾಗುತ್ತದೆ. ಕಲಾಮಂದಿರದ ಕಾಮಗಾರಿ 11 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ನಾನು ಹಲವು ಬಾರಿ ಗದ್ದಲ ಮಾಡಿದ್ದೆ. ಹಾಗಿದ್ದರೂ ಆಗಿಲ್ಲ. ಈ ಬಾರಿ ಅದಕ್ಕೆ ಅಗತ್ಯ ಅನುದಾನ ಕೊಡಿಸಿ, ಆಗಸ್ಟ್‌ 15ರಂದು ಉದ್ಘಾಟನೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದ್ದೆ. ಈಗ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುತ್ತಿದೆ. ಜಿಲ್ಲೆಯ ರಜತ ಮಹೋತ್ಸವ, ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ಉದ್ಘಾಟನೆಯಾಗುತ್ತಿರುವುದು ಮೈಲಿಗಲ್ಲು’ ಎಂದರು.

‘ರಂಗಮಂದಿರಕ್ಕೆ ಇದೇ ಜಿಲ್ಲೆಯವರಾದ ಡಾ.ರಾಜ್‌ಕುಮಾರ್‌ ಅವರ ಹೆಸರು ಇಡಲಾಗಿದೆ. ರಾಜ್‌ಕುಮಾರ್‌ ಅವರು ರಾಜ್ಯ, ರಾಷ್ಟ್ರದ ಸಂಪತ್ತು. ಅವರ ಕುಟುಂಬದವರ ಸಮ್ಮುಖದಲ್ಲಿ ಇನ್ನೊಂದು ಕಾರ್ಯಕ್ರಮ ಮಾಡೋಣ’ ಎಂದರು.

‘ರಂಗಮಂದಿರ ಚೆನ್ನಾಗಿ ಹಾಗೂ ವ್ಯವಸ್ಥಿತವಾಗಿ ಮೂಡಿಬಂದಿದೆ. ಇನ್ನೂ ಕೆಲವು ಕೆಲಸಗಳು ಬಾಕಿ ಇವೆ. ಅವುಗಳನ್ನು ಪೂರ್ಣಗೊಳಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ಸರ್ಕಾರವೂ ಎಲ್ಲ ಕ್ರಮ ಕೈಗೊಳ್ಳಲಿದೆ. ಈ ರಂಗಮಂದಿರ ಸದ್ಬಳಕೆಯಾಗಬೇಕು’ ಎಂದು ಆಶಿಸಿದರು.

‘ಜಿಲ್ಲಾಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಕಟ್ಟಡದಲ್ಲೇ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ಕಟ್ಟಡವೂ ನಿರ್ಮಾಣವಾಗುತ್ತಿದ್ದು, ಇದು ತ್ವರಿತವಾಗಿ ಪೂರ್ಣವಾಗಬೇಕಿದೆ’ ಎಂದರು.

ಶೀಘ್ರ ದಿನಾಂಕ ಪ್ರಕಟ:ಜಿಲ್ಲೆ ರಚನೆಯಾಗಿ 25 ವರ್ಷ ಆಗಿರುವುದುರಿಂದ ರಜತ ಮಹೋತ್ಸವ ಕಾರ್ಯಕ್ರಮವನ್ನು ಮೂರು ದಿನಗಳ ಅದ್ದೂರಿಯಾಗಿ ಆಚರಿಸಲಾಗುವುದು. ಶೀಘ್ರವೇ ದಿನಾಂಕ ಪ್ರಕಟಿಸಲಾಗುವುದು. ಇದಲ್ಲದೇ ಶಿವನಸಮುದ್ರದ ಭರಚುಕ್ಕಿಯಲ್ಲಿ ಜಲಪಾತೋತ್ಸವ ಆಚರಿಸುವುದಕ್ಕೂ ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಸಚಿವರು ಹೇಳಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿದರು. ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ವಾರ್ಡ್‌ ಸದಸ್ಯೆ ಮಮತಾ ಬಾಲಸುಬ್ರಹ್ಮಣ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಎಸ್‌ಪಿ ಟಿ.ಪಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯತ್ರಿ, ಎಡಿಸಿ ಎಸ್.ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್.ಸುಂದರರಾಜು. ಲೋಕೋಪಯೋಗಿ ಇಲಾಖೆಯ ಇಇ ವಿನಯ್‌ಕುಮಾರ್, ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಆರ್. ಜಯಪ್ರಕಾಶ್ ಇತರರು ಇದ್ದರು.

ಕಲಾವಿದರು, ರಂಗಾಸಕ್ತರ ಸಂಭ್ರಮ

ಬಹು ದಿನಗಳ ನಿರೀಕ್ಷೆ ಬಳಿಕ ರಂಗಮಂದಿರ ಲೋಕಾರ್ಪಣೆಗೊಂಡಿದ್ದು ಕಲಾವಿದರು, ರಂಗಾಸಕ್ತರಲ್ಲಿ ಸಂಭ್ರಮ ಉಂಟು ಮಾಡಿತ್ತು.

ಗಾಯಕರಾದ ನರಸಿಂಹಮೂರ್ತಿ, ಅರುಣ್‌ಕುಮಾರ್‌ ಹಾಗೂ ಇತರರು ಸಚಿವ ವಿ.ಸೋಮಣ್ಣ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಖುಷಿಯಿಂದ ಸನ್ಮಾನಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕಸ್ಥಳೀಯ ಕಲಾವಿದರು ರಂಗ ಮಂದಿರದ ವೇದಿಕೆಯಲ್ಲಿ ಜಾನಪದ ಗೀತೆಗಳು, ನಾಟಕದ ಹಾಡುಗಳನ್ನು ಹೇಳಿ ಸಂಭ್ರಮಿಸಿದರು. ಜನರು ಕೂಡ ಸ್ವಲ್ಪ ಹೊತ್ತು ಕುಳಿತು ಹಾಡುಗಳನ್ನು ಕೇಳಿ ಪುಳಕಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT