ಸಂತೇಮರಹಳ್ಳಿ: ಇಲ್ಲಿನ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಆವರಣ ಮದ್ಯ ವ್ಯಸನಿಗಳಿಗೆ ಮೋಜು ಮಸ್ತಿ ಮಾಡುವ ತಾಣವಾಗಿದೆ.
ಚಾಮರಾಜನಗರ ರಸ್ತೆಯಲ್ಲಿರುವ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಪ್ರಾಂಗಣ 25 ಎಕರೆಗೂ ಹೆಚ್ಚು ವಿಸ್ತೀರ್ಣವಿದೆ. ಗಿಡ ಮರಗಳಿಂದ ಕೂಡಿದ ಈ ಜಾಗದಲ್ಲಿ ಸ್ಥಳೀಯರು ಮುಂಜಾನೆ ಮತ್ತು ಸಂಜೆ ವಾಯುವಿಹಾರ ಮಾಡುತ್ತಾರೆ.
ಮುಸ್ಸಂಜೆಯಾಗುತ್ತಿದ್ದಂತೆ ಆವರಣದ ಒಳಗಡೆ ಇರುವ ಮರಗಳ ಕೆಳಗೆ ಕುಳಿತು ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮದ್ಯ ಬಾಟಲಿಗಳು, ಪೌಚ್‌ಗಳು ಹಾಗೂ ಕಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದಾಗಿ ಸಂತೆಯ ದಿನ ವ್ಯಾಪಾರಸ್ಥರು ಹಾಗೂ ಗ್ರಾಹಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ ದೊಡ್ಡ ಮಟ್ಟದಲ್ಲಿ ಸಂತೆ ನಡೆಯುತ್ತದೆ. ತರಕಾರಿ, ಹಣ್ಣು, ದಿನಸಿಗಳು ಹಾಗೂ ಆಡು ಕುರಿಗಳ ಮಾರಾಟ ನಡೆಯುತ್ತದೆ. ಹಿಂದಿನ ರಾತ್ರಿ ಸೋಮವಾರವೇ ಹೆಚ್ಚು ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರೆ. ಇವರು ಬಂದು ತಂಗುವ ವ್ಯವಸ್ಥೆ ಇಲ್ಲ. ಮೈಸೂರು, ಮಂಡ್ಯ ಜಿಲ್ಲೆಗಳಿಂದ ಬರುವ ವಾಪಾರಸ್ಥರು ಬಯಲಿನಲ್ಲಿ ಮಲಗಿ ಹಾವು ಚೇಳಿನ ಸಮಸ್ಯೆಯ ಜತೆಯಲ್ಲಿಯೇ ಕುಡುಕರ ಹಾವಳಿ ಎದುರಿಸಬೇಕಾಗಿದೆ.
ವ್ಯಾಪಾರ ನಡೆಯುವ ಸ್ಥಳದಲ್ಲಿಯೇ ಮದ್ಯದ ಬಾಟಲಿಗಳು, ಪೌಚ್‌ಗಳು ಹಾಗೂ ನೀರಿನ ಬಾಟಲಿಗಳನ್ನು ಕುಡುಕರು ಬೀಸಾಡುವುದರಿಂದ ವ್ಯಾಪಾರಸ್ಥರೇ ಸ್ವಚ್ಛಗೊಳಿಸಿಕೊಂಡು ವ್ಯಾಪಾರ ಮಾಡಬೇಕಾಗಿದೆ.
ಬಾಟಲಿಗಳನ್ನು ಒಡೆದು ಗಾಜಿನ ಚೂರುಗಳನ್ನು ವ್ಯಾಪಾರದ ಸ್ಥಳದಲ್ಲಿ ಬಿಡಲಾಗುತ್ತಿದೆ. ಪೌಚ್‌ಗಳು ಹಾಗೂ ನೀರಿನ ಬಾಟಲಿಗಳಿಗೆ ಬೆಂಕಿ ಹಾಕಲಾಗಿದೆ. ಈ ಆಶುಚಿತ್ವದ ನಡುವೆ ವ್ಯಾಪಾರ ನಡೆಯುತ್ತದೆ. ಜತೆಗೆ ಮುಂಜಾನೆ ಹಾಗೂ ಸಂಜೆ ವೇಳೆ ವಾಯು ವಿಹಾರಿಗಳಿಗೆ ದುರ್ವಾಸನೆಯು ಉಂಟಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ಕಾವಲುಗಾರರನ್ನು ನೇಮಿಸದ ಕಾರಣ ಮದ್ಯ ವ್ಯಸನಿಗಳಿಗೆ ಕಡಿವಾಣ ಹಾಕಲು ಆಗುತ್ತಿಲ್ಲ.
ಮರದ ನೆರಳಿನ ಆಶ್ರಯದಲ್ಲಿ ಆಡು ಕುರಿಗಳ ವ್ಯಾಪಾರ ನಡೆಯುತ್ತದೆ. ಇದೇ ಸ್ಥಳದಲ್ಲಿ ಬಾಟಲಿಗಳ ಚೂರುಗಳು ಬಿದ್ದಿರುವುದರಿಂದ ಕುರಿ, ಮೇಕೆಗಳನ್ನು ಕಟ್ಟಿ ಹಾಕುವುದಕ್ಕೆ ಆಗುತ್ತಿಲ್ಲ. ರೈತರಿಗೂ ವ್ಯಾಪಾರ ಮಾಡಲು ತೊಂದರೆಯಾಗಿದೆ.
‘ಮದ್ಯ ವ್ಯಸನಿಗಳಿಂದಾಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಅನೈರ್ಮಲ್ಯ ಹೆಚ್ಚಾಗಿದೆ. ವಾಯು ವಿಹಾರಿಗಳಿಗೆ, ವ್ಯಾಪಾರಿಗಳಿಗೆ ಕಲ್ಪಿಸುವುದಕ್ಕಾಗಿ ಸಂತೆ ಪ್ರಾಂಗಣದಲ್ಲಿ ಕುಡಿತ ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳು ನಡೆಯುವುದಕ್ಕೆ ಅವಕಾಶ ನೀಡಬಾರದು’ ಎಂದು ಗ್ರಾಮಪಂಚಾಯಿತಿ ಸದಸ್ಯ ಶಂಕರಪ್ಪ ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಾಶ್, ‘ಸಂತೆ ಪ್ರಾಂಗಣದಲ್ಲಿ ಮದ್ಯ ವ್ಯಸನಿಗಳ ಹಾವಳಿ ನಿಯಂತ್ರಣಕ್ಕೆ ಈಗಾಗಲೇ ಪೊಲೀಸರಿಗೆ ತಿಳಿಸಲಾಗಿದೆ. ಪ್ರಾಂಗಣದ ಎರಡು ಕಡೆಯ ಗೇಟ್‌ಗಳಿಗೆ ಬೀಗ ಹಾಕಲು ತಿಳಿಸಲಾಗಿದೆ’ ಎಂದರು.
ಬಾಟಲಿ ಸಂಗ್ರಹಿಸಿದ ಪರಿಸರ ಪ್ರಿಯರು
ಪರಿಸರ ಪ್ರಿಯರು ಹಾಗೂ ವಾಯು ವಿಹಾರಿಗಳು ಪ್ರಾಂಗಣದಲ್ಲಿ ಬಿದ್ದಿರುವ ಖಾಲಿ ಮದ್ಯದ ಬಾಟಲಿಗಳು ಹಾಗೂ ಪೌಚ್‌ಗಳನ್ನು ಸಂಗ್ರಹಿಸಿದ್ದಾರೆ. ಇದರಿಂದಾಗುವ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಿದ್ದಾರೆ. ಜತೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೂ ಈ ಬಗ್ಗೆ ದೂರು ನೀಡಿದ್ದಾರೆ. ‘ಇಲ್ಲಿ ಸುಂದರವಾದ ಮರ ಗಿಡಗಳಿವೆ. ಇವುಗಳಿಗೆ ರಕ್ಷಣೆ ನೀಡಿದರೆ ವಾತಾವರಣ ಉತ್ತಮವಾಗಿರುತ್ತದೆ. ಕುಡುಕರ ಹಾವಳಿಗೆ ಕಡಿವಾಣ ಹಾಕಬೇಕು. ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು’ ಎಂದು ಪರಿಸರ ಪ್ರಿಯರಾದ ಮಹದೇವಪ್ರಸಾದ್ ಹಾಗೂ ಎಂ.ಸಿ.ಮಹದೇವಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.