ಭಾನುವಾರ, ಏಪ್ರಿಲ್ 5, 2020
19 °C
ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ 15 ಮಕ್ಕಳ ಮನೆಗೆ ಭೇಟಿ ನೀಡಿದ ಸಚಿವರು

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ/ಸಂತೇಮರಹಳ್ಳಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶನಿವಾರ ಕೊಳ್ಳೇಗಾಲ, ಯಳಂದೂರು ಹಾಗೂ ಚಾಮರಾಜನಗರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗೆ ತೆರಳಿ ಪರಿಕ್ಷಾ ಸಿದ್ಧತೆಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡಿದರು. 

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮಕ್ಕೆ ಬೆಳಿಗ್ಗೆ 7.45ಕ್ಕೆ ಬಂದ ಸಚಿವರು ಸರ್ಕಾರಿ ಪ್ರಾಢಶಾಲೆ ವಿದ್ಯಾರ್ಥಿಗಳಾದ ಭಾನುಪ್ರಿಯ, ಸಂತೋಷ, ಮೋನಿಕಾ ಮತ್ತು ಸ್ಫೂರ್ತಿ ಮನೆಗೆ ಭೇಟಿ ನೀಡಿದರು. ಅಲ್ಲಿಂದ ಕೊಳ್ಳಾಗಾಲದ ಭೀಮನಗರ ಬಡಾವಣೆಯ ಸರ್ಕಾರಿ ಎಸ್.ವಿ.ಕೆ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿ ಸ್ನೇಹ, ನಿಸರ್ಗಪ್ರಿಯ ಹಾಗೂ ನಾಯಕರ ಬಡಾವಣೆಯ ದಿವ್ಯ, ಅಶ್ವಿನಿ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಜೊತೆ ಸಂವಾದ ನಡೆಸಿ ಮಾತನಾಡಿದರು.

ನಂತರ ಸಂತೇಮರಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಕೆಲವು ಮಕ್ಕಳ ಮನೆಗೆ ತೆರಳಿ, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು. 

ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನಾ ತಿಂಡಿ ತಿಂದು ಹೋಗಬೇಕು. ಪರೀಕ್ಷೆ ಬಗ್ಗೆ ಯಾರೂ ಭಯ, ಆತಂಕ ಪಡಬಾರದು. ಪರೀಕ್ಷಾ ಕೊಠಡಿಗೆ ಪ್ರವೇಶಿಸಿದ ನಂತರ ಎರಡು ನಿಮಿಷ ಮೌನವಾಗಿ ಕುಳಿತುಕೊಳ್ಳಬೇಕು. ನಂತರ ಪ್ರಶ್ನೆ ಪತ್ರಿಕೆಯನ್ನು 15 ನಿಮಿಷಗಳ ಕಾಲ ಓದಬೇಕು. ನಿಮಗೆ ಯಾವ ಪ್ರಶ್ನೆಗೆ ಉತ್ತರ ಗೊತ್ತಿದೆಯೋ, ಮೊದಲು ಅದನ್ನು ಬರೆಯಬೇಕು. ಆಮೇಲೆ ಉಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸಚಿವರು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಈಗ ಪ್ರತಿ ದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಅಭ್ಯಾಸ ಮಾಡಿ. ಕಷ್ಟ ಎನಿಸುವ ವಿಷಯವನ್ನು ಎರಡು ಮೂರು ಬಾರಿ ಬರೆದು ಅಭ್ಯಸಿಸಿ ಎಂದೂ ಸಲಹೆ ನೀಡಿದರು.

‘ಕೊರೊನಾ ವೈರಸ್‌ ಭೀತಿಯ ಕಾರಣಕ್ಕೆ 1ರಿಂದ 6 ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಿದ್ದೇವೆ. ನಿಮ್ಮನ್ನೂ ಅದೇ ರೀತಿ ಮಾಡೋಣವೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು, ‘ದಯವಿಟ್ಟು ಬೇಡ ಸರ್, ನಾವು ಪ್ರತಿನಿತ್ಯ ಓದುತ್ತಿದ್ದೇವೆ. ಪರೀಕ್ಷೆ ಬರೆಯಲೇ ಬೇಕು’ ಎಂದು ಹೇಳಿದರು. ಸಚಿವರು ಖುಷಿಯಿಂದ ಮಕ್ಕಳಿಗೆ ಬೆನ್ನು ತಟ್ಟಿದರು.

ಪೋಷಕರೊಡನೆಯೂ ಮಾತನಾಡಿದ ಸುರೇಶ್‌ ಕುಮಾರ್‌ ಅವರು ‘ನೀವು ಧೈರ್ಯ ತುಂಬ ಬೇಕು. ಯಾವ ಮಕ್ಕಳನ್ನೂ ಗದರಿಸಬಾರದು ಮತ್ತು ಓದು ಓದು  ಎಂದು ಒತ್ತಡವನ್ನು ಹೇರಬಾರದು’ ಎಂದರು 

ಶಾಸಕರಾದ ಎನ್.ಮಹೇಶ್, ಆರ್.ನರೇಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣ ರಾವ್, ಉಪವಿಭಾಗಾಧಿಕಾರಿ ನಿಖಿತ ಚಿನ್ನಸ್ವಾಮಿ, ಶಿಕ್ಷಣ ಇಲಾಖೆ ಡಿಡಿಪಿಐ ಜವರೇಗೌಡ, ಡಿವೈಎಸ್‌ಪಿ ನವೀನ್ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

‘ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಆತ್ಮವಿಶ್ವಾಸ ಇರಲಿ’

ಯಳಂದೂರು: ಪಟ್ಟಣದ ಗೌತಮ್ ಬಡಾವಣೆಯ ಆದರ್ಶ ವಿದ್ಯಾಲಯಲದ ಹತ್ತನೇ ತರಗತಿ ವಿದ್ಯಾರ್ಥಿನಿ ಕೀರ್ತನಾ ಅವರ ಮನೆಗೆ ಭೇಟಿ ನೀಡಿದ ಸಚಿವರು ಪೋಷಕರು ಮತ್ತು ಮಕ್ಕಳೊಂದಿಗೆ ಅವರು ಮಾತುಕತೆ ನಡೆಸಿದರು.

‘ಧೈರ್ಯದಿಂದ ಪರೀಕ್ಷೆ ಎದುರಿಸಬೇಕು. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಪರೀಕ್ಷೆ ಕೇಂದ್ರಕ್ಕೆ ಆತ್ಮ ವಿಶ್ವಾಸದಿಂದ ತೆರಳಬೇಕು. ಪಾಠ ಮತ್ತು ಸಿದ್ಧತೆ ಬಗ್ಗೆ ಏನೆಲ್ಲ ಯೋಜನೆ ರೂಪಸಿದ್ದೀರಿ ಅದರಂತೆ ಮುಂದುವರಿಯಿರಿ’ ಎಂದರು.

‘ಮಕ್ಕಳು ಎಷ್ಷು ಪ್ರಶ್ನೆ ಪತ್ರಿಕೆ ಬಿಡಿಸಿದ್ದೀರಿ. ಪೂರ್ವ ಸಿದ್ಧತಾ ಪರೀಕ್ಷೆ ಹೇಗೆ ಎದುರಿಸಿದ್ದೀರಿ. ಸರ್ಕಾರಿ ಶಾಲೆಯ ಶಿಕ್ಷಕರು ಹೇಗೆ ನೆರವಾಗಿದ್ದಾರೆ’ ಮೊದಲಾದ ಪ್ರಶ್ನೆಗಳನ್ನೂ ಕೇಳಿದರು. 

‘ಬೆಳಿಗ್ಗೆಯಿಂದ ಹಲವಾರು ವಿದ್ಯಾರ್ಥಿಗಳ ಜೊತೆ ಪರೀಕ್ಷೆ ಮತ್ತು ಸಿದ್ಧತೆ ಬಗ್ಗೆ ಸಚಿವರು ಚರ್ಚಿಸಿದ್ದಾರೆ. ಎಲ್ಲಾ ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಪೋಷಕರು ಅಭಿಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಪರೀಕ್ಷೆ ಮತ್ತು ಕೊರೊನಾ ಭೀತಿಯನ್ನು ಬಿಟ್ಟು, ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ಸ್ವಚ್ಛತೆಗೆ ಒತ್ತು ನೀಡಬೇಕು. ಮಕ್ಕಳು ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು’ ಎಂದು ಶಾಸಕ ಎನ್.ಮಹೇಶ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು