ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರದಲ್ಲಿ ಆನೆ ದಾಳಿ; ಅರಣ್ಯ ಇಲಾಖೆಯ ನಾಲ್ವರು ಸಿಬ್ಬಂದಿ ಪಾರು

Last Updated 7 ಜನವರಿ 2022, 13:21 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕಾಡಿನಿಂದ ಗ್ರಾಮಗಳತ್ತ ಬರುತ್ತಿದ್ದ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಕಾಡಾನೆಯೊಂದು ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದ ವಾಹನದ ಮೇಲೆ ದಾಳಿ ನಡೆಸಿರುವ ಘಟನೆ ಬಂಡೀಪುರ ಸಂರಕ್ಷಿತ ಪ್ರದೇಶದ ಓಂಕಾರ ವಲಯದಲ್ಲಿ ಶುಕ್ರವಾರನಡೆದಿದೆ. ವಾಹನದಲ್ಲಿದ್ದ ನಾಲ್ವರು ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಒಂಕಾರ ವಲಯದ ಕುರುಬರ ಹುಂಡಿ ಗ್ರಾಮದ ಬಳಿ ಘಟನೆ ನಡೆದಿದ್ದು, ಆನೆಯ ದಾಳಿಗೆ ಅರಣ್ಯ ಇಲಾಖೆಯ ಜೀಪಿನ ಮುಂಭಾಗ ಹಾನಿಗೀಡಾಗಿದೆ.

ಆನೆ ದಾಳಿ ಮಾಡಿದ ಸಂದರ್ಭದಲ್ಲಿ ಜೀಪಿನಲ್ಲಿ ಉಪ ವಲಯಾರಣ್ಯಾಧಿಕಾರಿ ಕೆ.ಪಿ.ಅಮರ್, ಸಿಬ್ಬಂದಿ ಮಾದಪ್ಪ, ಶಿವು ಹಾಗೂ ರಾಜಣ್ಣ ಇದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಓಂಕಾರ ವಲಯದ ನೀರಳ್ಳ ಪ್ರದೇಶದ ಬಳಿ ಆನೆಗಳು ಬೀಡುಬಿಟ್ಟಿದ್ದು, ಪ್ರತಿದಿನ ಗ್ರಾಮಗಳಿಗೆ ಬರುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರುಗಳನ್ನು ನೀಡಿದ್ದರು.

ಶುಕ್ರವಾರವೂ ಬೆಳಿಗ್ಗೆ ಆನೆಗಳು ಗ್ರಾಮದತ್ತ ಬರುತ್ತಿದ್ದವು. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ನಾಲ್ವರು ಸಿಬ್ಬಂದಿ ಆನೆಗಳನ್ನು ಓಡಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಈ ಸಂದರ್ಭದಲ್ಲಿ ದಾಳಿ ಮಾಡಿದ ಸಲಗವೊಂದು ಜೀಪಿನ ಮುಂಭಾಗವನ್ನು ತುಳಿದಿದೆ. ನಂತರ ದಂತದಿಂದ ಜೀಪನ್ನು ಮಗುಚಿ ಹಾಕಿದೆ. ವಾಹನದಿಂದ ಹೊರಕ್ಕೆ ಬಂದ ಸಿಬ್ಬಂದಿ ತಕ್ಷಣವೇ ಅಲ್ಲಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ಅವರು, ’ಆನೆಗಳು ಗ್ರಾಮಗಳ ಕಡೆ ಬರುತ್ತಿರುವ ಬಗ್ಗೆ ದೂರುಗಳು ಬಂದಿತ್ತು. ಅವುಗಳನ್ನು ಕಾಡಿಗೆ ಓಡಿಸುವುದಕ್ಕಾಗಿ ಸಿಬ್ಬಂದಿ ಹೋಗಿದ್ದರು. ಈ ಸಂದರ್ಭದಲ್ಲಿ ಗಂಡಾನೆ ಜೀಪಿನ ಮುಂಭಾಗ ತುಳಿದಿದೆ.ಇದರಿಂದಾಗಿ ಜೀಪು ಪಲ್ಟಿಯಾಗಿದೆ. ಘಟನೆಯಲ್ಲಿ ಸಿಬ್ಬಂದಿಗೆ ಏನೂ ಆಗಿಲ್ಲ‘ ಎಂದರು.

ಈ ಸಂಬಂಧ, ಬೇಗೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT