ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಿಂದ ಬಂದವರು 11 ಮಂದಿ

ಇದುವರೆಗೆ ಮೂವರ ಪರೀಕ್ಷೆ ನೆಗೆಟಿವ್‌, ಯಾರಲ್ಲೂ ರೋಗ ಲಕ್ಷಣಗಳಿಲ್ಲ– ಅಧಿಕಾರಿಗಳ ಹೇಳಿಕೆ
Last Updated 26 ಮೇ 2020, 1:25 IST
ಅಕ್ಷರ ಗಾತ್ರ

ಚಾಮರಾಜನಗರ:ಕೆಲಸ, ಶಿಕ್ಷಣ ಹಾಗೂ ಇನ್ನಿತರ ಕಾರಣದಿಂದ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಹೋದವರ ಪೈಕಿ 11 ಮಂದಿ ವಾಪಸ್‌ ಆಗಿದ್ದು, ಅವರನ್ನು ಕೊಳ್ಳೇಗಾಲ ತಾಲ್ಲೂಕಿನ ಹಾಸ್ಟೆಲ್‌ ಒಂದರಲ್ಲಿ ಕ್ವಾರಂಟೈನ್‌ ಮಾಡಿ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿರುವುದು ಸಹಜವಾಗಿ ಜಿಲ್ಲಾಡಳಿತದ ಚಿಂತೆಯನ್ನು ಹೆಚ್ಚಿಸಿದೆ. ಸಮಾಧಾನಕರ ಸಂಗತಿಯೆಂದರೆ, ಇದುವರೆಗೆ ಮೂವರ ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಎಲ್ಲವೂ ನೆಗೆಟಿವ್‌ ಬಂದಿದೆ. ಕ್ವಾರಂಟೈನ್‌ನಲ್ಲಿ ಇರುವವರಲ್ಲೂ ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ.

‘ಆರಂಭದಲ್ಲಿ ನಾವು ಮಹಾರಾಷ್ಟ್ರದಿಂದ ಬರಲು ಇಚ್ಛಿಸಿದ ಜಿಲ್ಲೆಯ ಯಾರಿಗೂ ಅನುಮತಿ ನೀಡಿಲ್ಲ. ನಂತರ ಅನಿವಾರ್ಯವಾಗಿ ಬರಲೇ ಬೇಕಾದ (ಉದಾ: ಹಾಸ್ಟೆಲ್‌ ಅವಧಿ ಮುಗಿದಿರುವುದು, ಚಿಕಿತ್ಸೆಗಾಗಿ) ಕೆಲವರಿಗೆ ಅನುಮತಿ ಕೊಟ್ಟಿದ್ದೇವೆ. 11 ಜನರು ಬಂದಿದ್ದಾರೆ. ಇವರೆಲ್ಲರೂ ಹಸಿರುವಲಯದಿಂದ ಬಂದವರು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ. ಕೆಲವರ ಗಂಟಲ ದ್ರವಗಳ ಮಾದರಿಯ ಪರೀಕ್ಷೆಯನ್ನೂ ನಡೆಸಿದ್ದೇವೆ. ನೆಗೆಟಿವ್ ಬಂದಿದೆ. ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ ಜಿಲ್ಲೆಗೆ ಬಂದ ಏಳು ದಿನಗಳ ನಂತರ ಪರೀಕ್ಷೆ ನಡೆಸಬೇಕು. ನೆಗೆಟಿವ್‌ ಬಂದರೆ ಮನೆಗೆ ಕಳುಹಿಸಬೇಕು. ನಮ್ಮ ಜಿಲ್ಲೆಯ ವಿವಿಧ ಹಾಸ್ಟೆಲ್‌ಗಳಲ್ಲಿ ಸದ್ಯ ಹೊರ ರಾಜ್ಯಗಳಿಂದ ಬಂದ 170 ಮಂದಿ ಇದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಆತಂಕ ಇಲ್ಲ:‘ಇದುವರೆಗೆ ನಡೆಸಿರುವ ವ್ಯಕ್ತಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಕ್ವಾರಂಟೈನ್‌ನಲ್ಲಿ ಇರುವವರಲ್ಲಿ ಕೋವಿಡ್‌–19 ಲಕ್ಷಣಗಳು ಕಂಡು ಬಂದಿಲ್ಲ. ಹಾಗಾಗಿ, ಯಾರೂ ಆತಂಕ ಪಡಬೇಕಾಗಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಬೇರೆ ರಾಜ್ಯಗಳಿಂದ ಬಂದವರನ್ನು ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ. ನಂತರ ಅವರ ಪರೀಕ್ಷೆ ನಡೆಸಿ, ನೆಗೆಟಿವ್‌ ಬಂದರೆ ಮನೆಗೆ ಕಳುಹಿಸುತ್ತಿದ್ದೇವೆ. ಉಳಿದ ಏಳು ದಿನಗಳು ಕಡ್ಡಾಯವಾಗಿ ಮನೆಯಲ್ಲಿ ಕ್ವಾರಂಟೈನ್‌ನಲ್ಲಿರಬೇಕು ಎಂದು ಸೂಚಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಜಿಲ್ಲೆಗೆ ಬಂದವರೆಷ್ಟು?:ಶುಕ್ರವಾರದ‌ವರೆಗಿನ (ಮೇ 22) ಅಂಕಿ ಅಂಶಗಳ ಪ್ರಕಾರ, ಜಿಲ್ಲಾಡಳಿತ ಹೊರರಾಜ್ಯಗಳಲ್ಲಿರುವ 371 ಮಂದಿಗೆ ಜಿಲ್ಲೆಗೆ ಬರಲು ಅನುಮತಿ ನೀಡಿದೆ. ಈ ಪೈಕಿ ಕೇರಳದವರೇ 164 ಮಂದಿ ಇದ್ದಾರೆ. ಆಂಧ್ರ ಪ್ರದೇಶದಲ್ಲಿರುವರು 93 ಹಾಗೂ ತೆಲಂಗಾಣದವರು 41 ಮಂದಿ ಇದ್ದಾರೆ.

ಇದುವರೆಗೆ 233 ಮಂದಿ ಬಂದಿದ್ದಾರೆ. ಈ ಪೈಕಿ, 132 ಜನರ ಗಂಟಲ ದ್ರವ ಸಂಗ್ರಹಿಸಲಾಗಿದೆ. 106 ಮಂದಿಯ ಕೋವಿಡ್‌–19 ಪರೀಕ್ಷೆ ನಡೆಸಲಾಗಿದೆ. 106 ವರದಿಗಳು ನೆಗೆಟಿವ್‌ ಬಂದಿದೆ. 26 ಮಂದಿಯ ವರದಿ ಇನ್ನು ಬರಬೇಕಿದೆ.

ಚಿಕಿತ್ಸೆ ನೀಡಲು ಮಾನಸಿಕವಾಗಿ ಸಜ್ಜು:ಇದುವರೆಗೆ ಜಿಲ್ಲೆಯನ್ನು ಹಸಿರು ವಲಯದಲ್ಲಿ ಉಳಿಸಿಕೊಳ್ಳಲು ಜಿಲ್ಲಾಡಳಿತ ಯಶಸ್ವಿಯಾಗಿದೆ. ಈಗ ಲಾಕ್‌ಡೌನ್‌ ಬಹುತೇಕ ಸಡಿಲಿಕೆಯಾಗಿ, ವಾಹನಗಳ ಸಂಚಾರ, ವಹಿವಾಟು, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರಲು ಅವಕಾಶ ಕಲ್ಪಿಸಿರುವುದರಿಂದ ಮುಂದಿನ ದಿನಗಳಲ್ಲಿ ಇದೇ ಸ್ಥಾ‌ನಮಾನ ಉಳಿಸಿಕೊಳ್ಳುವುದು ಸುಲಭವಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾಗಿ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಅವರು ಸಜ್ಜಾಗಿದ್ದಾರೆ.

ವೈದ್ಯಕೀಯ ಸಿಬ್ಬಂದಿ ಕೂಡ ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ.

‘ಸದ್ಯ, ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಯೂ ಇದೆ. ಪ್ರತ್ಯೇಕ ಆಸ್ಪತ್ರೆಯನ್ನೇ ತೆರೆದಿದ್ದೇವೆ. ಒಂದು ವೇಳೆ ಪ್ರಕರಣ ವರದಿಯಾದರೂ ಗಾಬರಿ ಪಡುವಂತಹದ್ದೇನಿಲ್ಲ. ಇದುವರೆಗೆ ಹಸಿರು ಜಿಲ್ಲೆ ಸ್ಥಾನಮಾನವನ್ನು ಕಾಪಾಡಿಕೊಂಡಿರುವ ತೃಪ್ತಿ ಇದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈಗಿನ ಪರಿಸ್ಥಿತಿಯಲ್ಲಿ ಕೋವಿಡ್‌–19 ಜಿಲ್ಲೆಯ ಸ್ಥಾನಮಾನವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ಈ ವೈರಸ್‌ ಇನ್ನೂ ಕೆಲವು ಸಮಯದ ಕಾಲ ನಮ್ಮೊಡನೇ ಇರುವುದು ಖಚಿತ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ತಿಳಿಸಿದರು.

ಅ‌ಂಕಿ ಅಂಶಗಳು

2,121

ಇದುವರೆಗೆ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿರುವ ಗಂಟಲ ದ್ರವ ಮಾದರಿಗಳು

2,050

ನಡೆಸಲಾದ ಕೋವಿಡ್‌–19 ಪರೀಕ್ಷೆ (ಎಲ್ಲವೂ ನೆಗೆಟಿವ್‌ ಬಂದಿವೆ)

70

ವರದಿ ಬರುವುದಕ್ಕೆ ಬಾಕಿ ಇರುವ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT