ಚಾಮರಾಜನಗರ: ಶಾಲಾ–ಕಾಲೇಜು, ಕಚೇರಿ, ಮಾರುಕಟ್ಟೆ ಸೇರಿದಂತೆ ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ಸುರಕ್ಷಿತವಾಗಿ ನಡೆದಾಡಲು ಜಿಲ್ಲೆಯಲ್ಲಿ ಪಾದಚಾರಿ ಮಾರ್ಗಗಳು ಇಲ್ಲದಂತಾಗಿದೆ.
ನಗರ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿರುವ ಫುಟ್‌ಪಾತ್‌ಗಳ ಅತಿಕ್ರಮಣದಿಂದ ಪಾದಚಾರಿಗಳು ರಸ್ತೆ ಮೇಲೆ ಜೀವ ಕೈಯಲ್ಲಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ರಸ್ತೆಗಳು ಇರುವುದು ವಾಹನಗಳ ಸಂಚಾರಕ್ಕೋ ಅಥವಾ ಪಾದಚಾರಿಗಳ ಓಡಾಟಕ್ಕೋ ಎಂಬ ಗೊಂದಲಗಳು ಕಾಡುತ್ತಿವೆ.
ಚಾಮರಾಜನಗರ ವ್ಯಾಪ್ತಿಯ ಹಲವು ಕಡೆಗಳಲ್ಲಿ ಫುಟ್‌ಪಾತ್‌ಗೆ ಜಾಗವನ್ನೇ ಮೀಸಲಿರಿಸದೆ ರಸ್ತೆ ನಿರ್ಮಾಣ ಮಾಡಿರುವ ಪರಿಣಾಮ ಪಾದಚಾರಿ ಮಾರ್ಗಗಗಳನ್ನು ದುರ್ಬೀನು ಹಾಕಿ ಹುಡುಕಬೇಕಾಗಿದೆ. ಕೆಲವು ರಸ್ತೆಗಳಲ್ಲಿ ನಾಮಕಾವಸ್ತೆಗೆ ಫುಟ್‌ಪಾತ್‌ಗಳು ಇದ್ದರೂ ವಾಣಿಜ್ಯ ಮಳಿಗೆಗಳ ಜಾಹೀರಾತು ಫಲಕಗಳ ಪ್ರದರ್ಶನಕ್ಕೆ, ತರಕಾರಿ, ಹೂ, ಹಣ್ಣು, ದಿನಸಿ ವಸ್ತುಗಳ ಮಾರಾಟಕ್ಕೆ ಅತಿಕ್ರಮಿಸಲಾಗಿದೆ.
ಪಾನಿಪುರಿ, ಚಾಟ್ಸ್ ಸೆಂಟರ್‌ಗಳು, ಬಟ್ಟೆ, ದಿನಸಿ ವಸ್ತುಗಳ ಮಾರಾಟ ಮಳಿಗೆ, ಪಾತ್ರೆ ಅಂಗಡಿ, ಹಾರ್ಡ್‌ವೇರ್, ಗ್ಯಾರೇಜ್, ಕೋಳಿ, ಕುರಿ ಮಾಂಸ ಮಾರಾಟ ಅಂಗಡಿಗಳು ಫುಟ್‌ಪಾತ್‌ಗಳನ್ನು ಸ್ವಂತದ ವ್ಯಾಪಾರದ ಜಾಗಗಳನ್ನಾಗಿ ಮಾಡಿಕೊಂಡಿವೆ. ಪರಿಣಾಮ ಪಾದಚಾರಿಗಳಿಗೆ ನಡೆಯಲು ಜಾಗ ಇಲ್ಲದಂತಾಗಿ ರಸ್ತೆಗಳ ಮೇಲೆ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದಾರೆ.
ಹೆಚ್ಚು ಜನಸಂದಣಿ ಇರುವ ಸಮಯವಾದ ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ನಗರದ ಪ್ರಮುಖ ರಸ್ತೆಗಳು ಮಾರುಕಟ್ಟೆಯಂತೆ ಗಿಜಿಗುಡುತ್ತವೆ. ನಡೆಯುವಾಗ ನಾಗರಿಕರಿಗೆ ವಾಹನಗಳು ತಾಗುವುದು, ನಿತ್ಯವೂ ಸವಾರರ ಹಾಗೂ ಪಾದಚಾರಿಗಳ ನಡುವೆ ಜಟಾಪಟಿ ಸಾಮಾನ್ಯವಾಗಿದೆ. ಸಾರ್ವಜನಿಕರೂ ಕೂಡ ವ್ಯವಸ್ಥೆಗೆ ಹೊಂದಿಕೊಂಡು ರಸ್ತೆಗಳನ್ನೇ ಫುಟ್‌ಪಾತ್‌ಗಳಂತೆ ಬಳಸುತ್ತಿದ್ದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ನಗರದ ಪ್ರಮುಖ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಫುಟ್‌ಪಾತ್ ಇದ್ದರೂ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಸೀಮಿತವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿರುವ ಪಾದಚಾರಿ ಮಾರ್ಗದಲ್ಲಿ ತರಕಾರಿ, ಹಣ್ಣು, ಎಳನೀರು, ಪಾನಿಪುರಿ, ಕಬ್ಬಿನ ಹಾಲು, ಚಾಟ್ಸ್ ಸೆಂಟರ್‌ಗಳ ಮಾರಾಟ ಎಗ್ಗಿಲ್ಲದೆ ನಡೆದಿದೆ.
ಈ ರಸ್ತೆಯಲ್ಲಿ ಜಿಲ್ಲಾಡಳಿತ ಭವನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಡಿವೈಎಸ್‌ಪಿ ಕಚೇರಿ, ಜಿಲ್ಲಾ ಆಸ್ಪತ್ರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೆಎಸ್‌ಎಸ್ ಶಾಲೆ, ಕಾಲೇಜು, ಬ್ಯಾಂಕ್‌ಗಳು, ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು ಇದ್ದು ಸದಾ ಜನದಟ್ಟಣೆಯಿಂದ ಕೂಡಿರುತ್ತದೆ.
ಈ ರಸ್ತೆಯ ಪಾದಚಾರಿ ಮಾರ್ಗ ಬಹುತೇಕ ಕಡೆಗಳಲ್ಲಿ ಅತಿಕ್ರಮಣವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ಗರ್ಭಿಣಿಯರು ರಸ್ತೆಯ ಮಧ್ಯೆ ಅಪಾಯಕಾರಿಯಾಗಿ ಮೇಲೆ ನಡೆದುಹೋಗುವ ದೃಶ್ಯಗಳು ಭಯ ಹುಟ್ಟಿಸುತ್ತವೆ. ರಸ್ತೆಯಲ್ಲಿ ವೇಗವಾಗಿ ನುಗ್ಗುವ ವಾಹನಗಳು ರೋಗಿಗಳಲ್ಲಿ ಜೀವ ಭಯ ಹುಟ್ಟಿಸುತ್ತವೆ.
ಆಸ್ಪತ್ರೆ, ಶಾಲಾ ಕಾಲೇಜು, ಮಾರುಕಟ್ಟೆಯಂತಹ ಜನನಿಬಿಡ ಪ್ರದೇಶಗಳಲ್ಲೂ ಅತಿಕ್ರಮಣವಾಗಿರುವ ಫುಟ್‌ಪಾತ್ ತೆರವುಗೊಳಿಸಲು ಮುಂದಾಗದ ನಗರಸಭೆ ಆಡಳಿತ ವೈಖರಿಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಡಿವಿಯೇಷನ್ ಹಾಗೂ ಕೆಎಸ್‌ಆರ್‌ಟಿಸಿ ರಸ್ತೆಯ ಫುಟ್‌ಪಾತ್ ಗ್ಯಾರೇಜ್, ಪಂಕ್ಚರ್ ಶಾಪ್, ಕೋಳಿ ಮಾಂಸ ಮಾರಾಟ ಅಂಗಡಿಗಳ ಪಾಲಾದರೆ, ಚಾಮರಾಜೇಶ್ವರ ದೇವಸ್ಥಾನ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗಗಳು ಪಾನಿಪುರಿ, ಗೋಬಿ ಮಂಜೂರಿ, ಬಟ್ಟೆ, ತರಕಾರಿ, ಹೂ, ಹಣ್ಣು ಮಾರಾಟಗಾರರ ವಶವಾಗಿದೆ. ದೊಡ್ಡ ಅಂಗಡಿ, ಚಿಕ್ಕ ಅಂಗಡಿ, ಸಂಪಿಗೆ ರಸ್ತೆಗಳೆಲ್ಲವೂ ದಿನಸಿ ಮಾರಾಟ ಮಳಿಗೆಗಳ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಮಾರಾಟಕ್ಕೆ ಪ್ರದರ್ಶನಕ್ಕೆ ಇರಿಸಲು ಮೀಸಲಾಗಿದೆ.
ಕೊಳ್ಳೇಗಾಲ ವರದಿ: ನಗರದದಲ್ಲಿ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್ ಒತ್ತುವರಿಯಾಗಿದ್ದು ಪಾದಚಾರಿಗಳು ನಡೆಯಲು ರಸ್ತೆಗೆ ಇಳಿಯುತ್ತಿದ್ದಾರೆ. ನಗರಸಭೆ ಕೋಟ್ಯಂತರ ರೂಪಾಯಿ ವ್ಯಯಿಸಿ ಫುಟ್‌ಪಾತ್ ನಿರ್ಮಿಸಿದ್ದರೂ ಅವುಗಳ ಉಪಯೋಗ ಪಾದಚಾರಿಗಳಿಗೆ ದೊರೆಯದೆ ವ್ಯಾಪಾರಸ್ಥರು, ಆಟೊ ಟ್ಯಾಕ್ಸಿ ಚಾಲಕರ ಪಾಲಾಗಿದೆ. ಪುಟ್‌ಪಾತ್‌ಗಳು ಬೈಕ್, ಕಾರ್ ಸೇರಿದಂತೆ ವಾಹನಗಳ ನಿಲುಗಡೆಯ ತಾಣವಾಗಿಯೂ ಬದಲಾಗಿದೆ.
ತಳ್ಳುವ ಗಾಡಿಗಳು, ಟೀ ಅಂಗಡಿ, ಹೂ, ಹಣ್ಣಿನ ಅಂಗಡಿಗಳು ಸೇರಿದಂತೆ ವಾಣಿಜ್ಯ ಮಳಿಗೆಗಳ ನಾಮಫಲಕ ಹಾಗೂ ಸೂಚನಾ ಫಲಕಗಳಿಗೂ ಫುಟ್‌ಪಾತ್‌ಗಳ ಬಳಕೆ ಮಾಡಲಾಗಿದೆ. ಸಮಸ್ಯೆ ಬಗ್ಗೆ ನಗರಸಭೆ, ಪೊಲೀಸ್ ಇಲಾಖೆ ಗಮನಹರಿಸಿಲ್ಲ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ದೂರು ನೀಡಿದರು ಪ್ರಯೋಜನವಾಗಿಲ್ಲ. ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ಹಾಕುವ ಪೊಲೀಸರು ಒತ್ತುವರಿದಾರರ ವಿರುದ್ಧ ಏಕೆ ದಂಡ ಪ್ರಯೋಗ ಮಾಡುವುದಿಲ್ಲ ಎಂದು ಪ್ರಶ್ನಿಸುತ್ತಾರೆ ಮುಖಂಡ ಗುರುಮೂರ್ತಿ.
ಯಳಂದೂರು ವರದಿ: ಪಟ್ಟಣದ ನಡುವೆ ರಾಷ್ಟೀಯ ಹೆದ್ದಾರಿ ಹಾದುಹೋಗಿದ್ದು ಹೆದ್ದಾರಿಯ ಎರಡೂ ಬದಿಯ ಪಾದಚಾರಿ ಮಾರ್ಗ ವಾಣಿಜ್ಯ ಅಂಗಡಿಗಳ, ಹೋಟೆಲ್‌ಗಳ ಪಾಲಾಗಿದೆ. ಕೆಲವು ಕಡೆ ದ್ವಿಚ್ರ ವಾಹನಗಳಿಂದ ತುಂಬಿಹೋಗಿದೆ. ಆಟೊಗಳನ್ನು ಫುಟ್‌ಪಾತ್‌ಗಳ ಮೇಲೆ ನಿಲ್ಲಿಸುವುದರಿಂದ ಓಡಾಟಕ್ಕೆ ಸಂಚಕಾರ ಎದುರಾಗಿದೆ.
ಪಟ್ಟಣ ಸುಮಾರು ಎರಡು ಕಿ.ಮೀ ದ ಮೀಟರ್ ತನಕ ಜನದರ್ಶನದಿಂದ ಕೂಡಿರುತ್ತದೆ. ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಶಾಲಾ ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ರಸ್ತೆ ನಡುವೆ ವಾಹನಗಳ ಅಬ್ಬರದ ಮಧ್ಯೆ ಕಾಲೇಜು ಮುಟ್ಟಬೇಕಿದೆ. ಈ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ ಎಂಬುದು ನಾಗರಿಕರ ದೂರು.
ಪೂರಕ ಮಾಹಿತಿ: ಅವಿನ್ ಪ್ರಕಾಶ್, ನಾ.ಮಂಜುನಾಥ ಸ್ವಾಮಿ, ಮಹದೇವ್ ಹೆಗ್ಗವಾಡಿಪುರ
ರಸ್ತೆಯಲ್ಲಿ ಜನರ ಮೈಮೇಲೆ ನುಗ್ಗುವ ವಾಹನಗಳು ಅಪಾಯಕಾರಿ ಸಂಚಾರದಿಂದ ನಿತ್ಯವೂ ಅಪಘಾತ ಮಹಿಳೆಯರು, ಮಕ್ಕಳು, ವೃದ್ಧರಿಗೆ ಹೆಚ್ಚು ಅಪಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.