ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ

Last Updated 12 ಸೆಪ್ಟೆಂಬರ್ 2022, 13:41 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯದಲ್ಲಿ ವನ್ಯಜೀವಿ ತಜ್ಞ ಡಾ.ಸಂಜಯ್‌ ಗುಬ್ಬಿ ಅವರು ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌ನ ಗೌರವ ಅಧ್ಯಕ್ಷ ಹಾಗೂ ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಜೋಸೆಫ್‌ ಹೂವರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದು, ‘ಸಂಜಯ್‌ ಗುಬ್ಬಿ ಅವರು ಪರಿಸರ ಸೂಕ್ಷ್ಮ ವಲಯದ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ದೂರಿದ್ದಾರೆ.

ಆರೋಪ ನಿರಾಕರಿಸಿರುವ ಸಂಜಯ್‌ ಗುಬ್ಬಿ, ‘ವೈಯಕ್ತಿಕ ಬಳಕೆಗಾಗಿ ಮನೆ ನಿರ್ಮಿಸುತ್ತಿದ್ದು, ಎಲ್ಲ ನಿಯಮಗಳ್ನು ಪಾಲಿಸಲಾಗಿದೆ’ ಎಂದಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕು ಹಂಗಳ ಹೋಬಳಿಯ ಬಾಚಹಳ್ಳಿಯ ಸರ್ವೆ ನಂಬರ್‌ 279ರಲ್ಲಿ 4 ಎಕರೆ 15 ಗುಂಟೆ ಜಮೀನನ್ನು ಸಂಜಯ್‌ ಗುಬ್ಬಿ ಹೊಂದಿದ್ದಾರೆ. ಜಮೀನು ಅವರ ಪತ್ನಿ ಹೆಸರಿನಲ್ಲಿದೆ. ಇದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿದೆ. ಕಣಿಯನಪುರ ಆನೆ ಕಾರಿಡಾರ್‌ ಕೂಡ ಈ ಪ್ರದೇಶದಲ್ಲಿ ಹಾದು ಹೋಗುತ್ತದೆ.

‘ವನ್ಯಜೀವಿಗಳ ಸಂರಕ್ಷಣೆಯಲ್ಲಿ ಎರಡೂವರೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ತೊಡಗಿಸಿಕೊಂಡಿರುವ ಸಂಜಯ್‌ ಗುಬ್ಬಿಯವರೇ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಿಸುತ್ತಿರುವುದು ದುರದೃಷ್ಟಕರ. ಜಮೀನು ಪರಿಸರ ಸೂಕ್ಷ್ಮ ವಲಯ ಹಾಗೂ ಆನೆ ಕಾರಿಡಾರ್‌ನಲ್ಲಿದೆ ಎಂದು ತಿಳಿದಿದ್ದರೂ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಿಂದಿನ ನಿರ್ದೇಶಕ ಎಸ್‌.ಆರ್‌.ನಟೇಶ್‌ ಅವರು ಎರಡನೇ ದಿನಗಳಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ನೀಡಿದ್ದಾರೆ’ ಎಂದು ಜೋಸೆಫ್‌ ಹೂವರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲಚಂದ್ರ ಅವರು ಬಂಡೀಪುರದ ನಿರ್ದೇಶಕರಾಗಿದ್ದಾಗ ಪರಿಸರ ಸೂಕ್ಷ್ಮವಲಯದಲ್ಲಿರುವ ರೆಸಾರ್ಟ್‌, ಹೋಂ ಸ್ಟೇ ಮುಂತಾದ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಕಣಿಯನಪುರ ಆನೆ ಕಾರಿಡಾರ್‌ ಉಳಿಸುವುದಕ್ಕಾಗಿ ಅರಣ್ಯ ಇಲಾಖೆ ಎನ್‌ಜಿಒಗಳು, ಸಂಘ ಸಂಸ್ಥೆಗಳ ನೆರವು ಕೇಳುತ್ತಿದೆ. ಹಾಗಿರುವಾಗ, ಗುಬ್ಬಿ ಅವರಿಗೆ ಅನುಮತಿ ನೀಡಿದ್ದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

ಮನೆ ನಿರ್ಮಾಣಕ್ಕೆ ಅನುಮತಿ: ಸಂಜಯ್‌ ಗುಬ್ಬಿ ಅವರು 2021ರ ಫೆಬ್ರುವರಿ 22ರಂದು ವಾಸಹಾಗೂ ಕೃಷಿ ಉಪಕರಣಗಳನ್ನು ಇರಿಸಲು ಮನೆ ನಿರ್ಮಿಸಲು ಅನುಮತಿ ನೀಡಬೇಕು ಎಂದು ಕೋರಿದ್ದರು. 24ರಂದು ಐದು ಗುಂಟೆ ಜಮೀನಿನಲ್ಲಿ ಸ್ವಂತ ಉಪಯೋಗಕ್ಕೆ ಮನೆ ನಿರ್ಮಿಸಲು ಬಂಡೀಪುರ ನಿರ್ದೇಶಕರು ಅನುಮತಿ ನೀಡಿದ್ದರು. ಐದು ಗುಂಟೆಗಿಂತ ಹೆಚ್ಚು ಜಾಗದಲ್ಲಿ ಮನೆ ನಿರ್ಮಿಸುವಂತಿಲ್ಲ. ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ಷರತ್ತನ್ನೂ ಹಾಕಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ರಮೇಶ್‌ಕುಮಾರ್‌ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

‘ನಿಯಮಗಳ ಅನುಸಾರವಾಗಿ ಐದು ಗುಂಟೆ ಜಾಗದಲ್ಲಿ ವಾಸದ ಉದ್ದೇಶಕ್ಕಾಗಿ ಮನೆ ನಿರ್ಮಿಸಲು ಅನುಮತಿ ನೀಡಲಾಗಿದೆ’ ಎಂದು ಕೆಳ ಹಂತದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕಾನೂನಿನ ಪ್ರಕಾರ ನಿರ್ಮಾಣ’

ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಂಜಯ್‌ ಗುಬ್ಬಿ, ‘ಕಾನೂನಿನ ಪ್ರಕಾರ ಮನೆ ಕಟ್ಟುತ್ತಿದ್ದೇವೆ. ವನ್ಯಜೀವಿಗಳ ಓಡಾಟಕ್ಕೆ ತೊಂದರೆಯಾಗದ ಹಾಗೆ ಕಾಮಗಾರಿ ಕೈಗೊಂಡಿದ್ದೇವೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಲಾಗಿದೆ’ ಎಂದರು.

ಸೂಕ್ಷ್ಮ ಪರಿಸರ ವಲಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆಯೇ ಮುಖ್ಯ. ಕೃಷಿ ಬಿಟ್ಟು ವಾಣಿಜ್ಯ ಚಟುವಟಿಕೆ ಮಾಡಿದರೆ ಕ್ರಮ ವಹಿಸಲಾಗುವುದು.
–ರವಿಶಂಕರ್, ಗುಂಡ್ಲುಪೇಟೆ ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT