ಶನಿವಾರ, ಮೇ 28, 2022
26 °C
ರಾಮಾಪುರ:ಪೊಲೀಸರ ಗಮನಕ್ಕೆ ಆತ್ಮಹತ್ಯೆ ಮಾಡಿದ ಬಾಲಕಿಯ ಅಂತ್ಯಸಂಸ್ಕಾರ

122ಕ್ಕೆ ಬಂದ ಕರೆಯಿಂದ ಬಾಲಕಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಶವವನ್ನು ಪೊಲೀಸರ ಗಮನಕ್ಕೆ ತರದೇ ಅಂತ್ಯ ಸಂಸ್ಕಾರ ನಡೆಸುತ್ತಿದ್ದಾಗ ಪೊಲೀಸರು ಸ್ಥಳಕ್ಕೆ ತೆರಳಿ ದೂರು ದಾಖಲಿಸಿಕೊಂಡಿರುವ ಪ್ರಕರಣ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಸಪ್ಪನದೊಡ್ಡಿ (ಸೂಳೇರಿಪಾಳ್ಯ) ಗ್ರಾಮದಲ್ಲಿ ಮಂಗಳವಾರ ನಡೆದಿದೆ. 

ಪೊಲೀಸ್‌ ಇಲಾಖೆಯ ತುರ್ತು ಸ್ಪಂದನ ಸಹಾಯ ಯೋಜನೆ–112ಕ್ಕೆ (ಇಆರ್‌ಎಸ್‌ಎಸ್‌–112) ಬಂದ ಕರೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.   

ಮೂಲತಃ ಹುಣಸೆಪಾಳ್ಯ ಗ್ರಾಮದ ಬಾಲಕಿ ಕೆಲವು ದಿನಗಳ ಹಿಂದೆ ಬಸಪ್ಪನದೊಡ್ಡಿ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಬಂದು ವಾಸವಾಗಿದ್ದಳು. ಮಂಗಳವಾರ ಬಾಲಕಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆ ಪ್ರಕರಣದಲ್ಲಿ ಠಾಣೆಯಲ್ಲಿ ದೂರು ದಾಖಲಾಗಬೇಕು. ಮರಣೋತ್ತರ ಪರೀಕ್ಷೆಯೂ ನಡೆಯಬೇಕು. ಆದರೆ, ಮಾಹಿತಿ ನೀಡದ ಬಾಲಕಿಯ ಕಡೆಯವರು ವಡ್ಡರಗಾಳಿ ಬಳಿಯ ಹಳ್ಳವೊಂದರಲ್ಲಿ ಮಂಗಳವಾರ ಮಧ್ಯಾಹ್ನ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿದ್ದಾರೆ. 

‘ಸಾರ್ವಜನಿಕರು ಓಡಾಡುವ ಸ್ಥಳವಾಗಿರುವುದರಿಂದ ಇಲ್ಲಿ ಮೃತದೇಹ ಸುಡಬೇಡಿ ಎಂದು ಸುತ್ತಮುತ್ತಲಿನ ಜಮೀನುಗಳ ಮಾಲೀಕರು ಕೇಳಿಕೊಂಡರೂ ಅವರು ಕೇಳಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. 

ಸಮೀಪದ ಜಮೀನಿನ ಮಾಲೀಕರೊಬ್ಬರು ಇಆರ್‌ಎಸ್‌ಎಸ್‌–112ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮಂಗಳವಾರ ರಾತ್ರಿ ಬಂದ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ ಸ್ಥಳವನ್ನು ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ. 

‘ಬಾಲಕಿಯ ಸಾವಿಗೆ ಕಾರಣ ತಿಳಿದಿಲ್ಲ. 112ಕ್ಕೆ ಕರೆ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಘಟನೆ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುವುದು’ ಎಂದು ರಾಮಾಪುರ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು