ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎವರ್ ಗ್ರೀನ್ ಚಾಮರಾಜನಗರ ಅಭಿಯಾನ

ಕೋವಿಡ್‌–19 ಮುಕ್ತ ಜಿಲ್ಲೆಯಾಗಿಯೇ ಉಳಿಸಿಕೊಳ್ಳಲು ಜಿಲ್ಲಾಡಳಿತ ಯೋಜನೆ
Last Updated 20 ಮೇ 2020, 16:12 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಇದುವರೆಗೂ ಕೋವಿಡ್‌–19 ಮುಕ್ತವಾಗಿದೆ. ಮುಂದೆಯೂ ಹಸಿರು ಜಿಲ್ಲೆಯಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ‘ಎವರ್ ಗ್ರೀನ್ ಚಾಮರಾಜನಗರ ಅಭಿಯಾನ’ ಎಂಬ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಹೊರ ರಾಜ್ಯಗಳಿಂದ ಮತ್ತು ರಾಜ್ಯದ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಿಲ್ಲೆಗೆ ಬರುವ ಸಾಧ್ಯತೆ ಇರುವುದರಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಸಾಮಾಜಿಕ ಹೊಣೆಗಾರಿಕೆಯಾಗಿ ಬದಲಾಗಬೇಕು. ಪ್ರತಿಯೊಬ್ಬರೂ ಸ್ವಯಂ ಘೋಷಿತ ಕೊರೊನಾ ಸೇನಾನಿಗಳಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಹೇಳಿದ್ದಾರೆ.

ಗ್ರಾಮ ಮಟ್ಟದಲ್ಲಿರುವ ಗ್ರಾಮ ಕಾರ್ಯಪಡೆ ಮತ್ತು ಕೊರೊನಾ ಸೈನಿಕರನ್ನು ಕ್ರಿಯಾಶೀಲಗೊಳಿಸಿ ನಗರ ಮತ್ತು ಪಟ್ಟಣಗಳಲ್ಲಿ ಹೊಸದಾಗಿ ಕಾರ್ಯಪಡೆ ರಚಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಮನೆ ಮನೆ ಭೇಟಿ, ಆರೋಗ್ಯ ವಿಚಾರಣೆ, ಕರ ಪತ್ರಗಳು ಹಾಗೂ ಟಾಂ ಟಾಂ ಮೂಲಕ ನಿರಂತರ ಜಾಗೃತಿ ಮೂಡಿಸುವುದು, ಶಾಸಕರು, ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜನಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ.

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ಆರೋಗ್ಯಾಧಿಕಾರಿಗಳು ತಂಡವಾಗಿ ಪ್ರತಿ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡುವುದು. ಸಾರ್ವಜನಿಕರಲ್ಲಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವುದು. ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ತಾಲ್ಲೂಕಿನ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ವಹಿಸುವುದು. ಲಾಕ್‌ಡೌನ್ ಕಾಯ್ದೆ ಉಲ್ಲಂಘನೆ ಪ್ರಕರಣ ಕಂಡುಬಂದಲ್ಲಿ ಸೆಕ್ಟರ್ ಮ್ಯಾಜಿಸ್ಟ್ರೇಟರ್‌ಗಳು ನಗರ, ಗ್ರಾಮೀಣ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸುವುದು. ಸಾರ್ವಜನಿಕರು ಹಾಗೂ ವಾಹನಗಳ ತಪಾಸಣೆ, ವೈದ್ಯಕೀಯ ಸ್ಕ್ರೀನಿಂಗ್ ಅನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಸೂಚಿಸಲಾಗಿದೆ.

ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸಾಬೂನು‌ಗಳಿಂದ ಕೈಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆಹಚ್ಚಿ ಸ್ಥಳೀಯ ವೈದ್ಯರಿಗೆ ಮಾಹಿತಿಯನ್ನು ನೀಡುವುದು.

ಆರೋಗ್ಯ ಸೇತು ಆ್ಯಪ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಪ್ರತಿಯೊಬ್ಬರೂ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರೇರಣೆ ನೀಡುವುದು. 60 ವರ್ಷ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರುವಂತೆ ಮನವರಿಕೆ ಮಾಡುವುದು.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ತಂಬಾಕು, ಗುಟ್ಕಾ, ಧೂಮಪಾನ ನಿಷೇಧ, ನಗರ ಪ್ರದೇಶ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವದ ಬಗ್ಗೆ ಗಮನ ಹರಿಸಲು ತಿಳಿವಳಿಕೆ ಮೂಡಿಸುವಂತೆಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಆರೋಗ್ಯ ಇಲಾಖೆ, ಕಂಟ್ರೋಲ್‌ ರೂಂ ಸಂಪರ್ಕಿಸಿ’
‘ಜ್ವರ, ಶೀತ, ಕೆಮ್ಮು ಉಸಿರಾಟದ ತೊಂದರೆಯ ಲಕ್ಷಣಗಳಿರುವವರು ಕಂಡುಬಂದಲ್ಲಿ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿ ಅಥವಾ ಜಿಲ್ಲಾ ಕಂಟ್ರೋಲ್ ಟೋಲ್ ಫ್ರೀ ಸಂಖ್ಯೆ 1077ಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT