ಶನಿವಾರ, ಜುಲೈ 31, 2021
27 °C
ಗೋಪಾಲಸ್ವಾಮಿ ಬೆಟ್ಟ, ಕುಂದುಕೆರೆ, ಓಂಕಾರ ವಲಯಗಳಲ್ಲಿ ನಿರ್ಮಾಣ

ಬಂಡೀಪುರ: 30 ಕಿ.ಮೀ ಕಂದಕ; ಆನೆ ಹಾವಳಿ ಕುಂಠಿತ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ರೈತರು ಇತ್ತೀವೆಗೆ ಆನೆಗಳ ಹಾವಳಿಯಿಂದ ಕೊಂಚ ನಿರಾಳರಾಗಿದ್ದಾರೆ.  

ಕಾಡಂಚಿನ ಪ್ರದೇಶದಲ್ಲಿ 30 ಕಿ.ಮೀ ಉದ್ದದ ಆನೆ ಕಂದಕವನ್ನು ನಿರ್ಮಾಣ ಮಾಡಿರುವುದರಿಂದ ರೈತರ ಜಮೀನುಗಳಿಗೆ ಪ್ರತಿ ದಿನ ಲಗ್ಗೆ ಇಡುತ್ತಿದ್ದ ಆನೆಗಳ ಸಮಸ್ಯೆ ಸದ್ಯಕ್ಕೆ ದೂರವಾಗಿದೆ.

ಗೋಪಾಲಸ್ವಾಮಿ ಬೆಟ್ಟ ವಲಯದ ಹಂಗಳ, ದೇವರ ಹಳ್ಳಿ, ಗೋಪಾಲಪುರ, ಶಿವಪುರ ಚೌಡಹಳ್ಳಿ, ಕುಂದುಕೆರೆ ವಲಯದ ಕಡಬೂರು, ಚಿರಲನಹಳ್ಳಿ, ಮಾಲಾಪುರ, ಕುಂದುಕೆರೆ, ಬೊಮ್ಮನಹಳ್ಳಿ ಹಾಗೂ ಓಂಕಾರ ವಲಯದ ನಾಲ್ಕೈದು ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿತ್ತು.

ಪ್ರತಿ ದಿನ ರಾತ್ರಿ ಇಲಾಖೆಯ ಸಿಬ್ಬಂದಿ ರೈತರ ಜಮೀನಿನ ಕಡೆಗೆ ಬರದಂತೆ ಆನೆಗಳನ್ನು ತಡೆದು ಮತ್ತೆ ಕಾಡಿಗೆ ಓಡಿಸುತ್ತಿದ್ದರು. ಅಲ್ಲದೇ ರಾತ್ರಿ ಸಮಯದಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೂ ತೊಂದರೆ ಆಗುತ್ತಿತ್ತು. ಸಿಬ್ಬಂದಿ ಪ್ರತಿ ರಾತ್ರಿ ರಾಷ್ಟ್ರೀಯ ಹೆದ್ದಾರಿ 67 ರ ಮೇಲುಕಾಮನಹಳ್ಳಿ ಬಳಿ ಮತ್ತು ಬೇಗೂರು- ಹೆಡಿಯಾಲ ರಸ್ತೆಯಲ್ಲಿ ವಾಹನದಲ್ಲಿ ಗಸ್ತು ತಿರುಗಿ ಆನೆಯನ್ನು ಕಾಡಿಗೆ ಓಡಿಸುತ್ತಿದ್ದರು.

ಹಾಗಿದ್ದರೂ, ಆನೆಗಳು ನಿರ್ದಿಷ್ಟ ಮಾರ್ಗ, ಪ್ರದೇಶದ ಮೂಲಕ ಕಾಡಿನಿಂದ ಬಂದು ರೈತರ ಜಮೀನುಗಳಿಗೆ ನುಗ್ಗುತ್ತಿದ್ದವು. ಈ ಜಾಗಗಳನ್ನು ಗುರುತಿಸಿರುವ ಅರಣ್ಯ ಅಧಿಕಾರಿಗಳು ಅಲ್ಲಿ ಕಂದಕ ಹಾಗೂ ರೈಲ್ವೆ ಕಂಬಿ ಬೇಲಿಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ, ಆನೆ ಕಾಟ ಕಡಿಮೆಯಾಗಿದೆ.  

‘ಓಂಕಾರ, ಕುಂದುಕೆರೆ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯಗಳಲ್ಲಿ 30 ಕಿ.ಮೀ ಉದ್ದದ ಆನೆ ಕಂದಕ ನಿರ್ಮಾಣ ಮಾಡಲಾಗಿದೆ. ಇನ್ನೂ 5 ಕಿ.ಮೀಗಳಷ್ಟು ಕಂದಕ ನಿರ್ಮಿಸಬೇಕಿದೆ. ಇದಕ್ಕಾಗಿ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ಆನೆ ಕಂದಕ ನಿರ್ಮಿಸಿದ್ದ ಜಾಗದಲ್ಲಿ ಕಲ್ಲು ಬಂಡೆಗಳು ಇದ್ದ ಜಾಗದಲ್ಲಿ ಹೆಚ್ಚು ಆಳ ಇರಲಿಲ್ಲ. ಅಂತಹ ಪ್ರದೇಶದಲ್ಲಿ ಆನೆಗಳು ಕಾಡಿನಿಂದ ಹೊರಬರುತ್ತಿದ್ದವು. ಇಲಾಖೆಯ ಸಿಬ್ಬಂದಿ ಹಾಗೂ ರೈತರು ಅಂತಹ ಜಾಗವನ್ನು ಗುರುತಿಸಿ ಬಂಡೆಗಳನ್ನು ಒಡೆಸಿ, ಕಂದಕವನ್ನು ಇನ್ನಷ್ಟು ಆಳ ಮಾಡಿದ್ದಾರೆ. ಇದರಿಂದಾಗಿ ಆನೆಗಳ ಕಾಡ ಕಡಿಮೆಯಾಗಿದೆ’ ಎಂದು ರೈತ ಕಲ್ಲಿಗೌಡನಹಳ್ಳಿ ದೊರೆಸ್ವಾಮಿ ಅವರು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು