ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಉತ್ತಮ ರಸ್ತೆ,  ಕ್ಷೇತ್ರದ ಸಮಗ್ರ ಅಭಿವೃದ್ಧಿ ಬೇಕು

ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರ: ಹುಸಿಯಾಗುತ್ತಲೇ ಬಂದ ಮತದಾರರ ನಿರೀಕ್ಷೆ, ಈ ಬಾರಿ ಜನ ಹೇಳುವುದೇನು?
Last Updated 10 ಏಪ್ರಿಲ್ 2023, 5:51 IST
ಅಕ್ಷರ ಗಾತ್ರ

ಕೊಳ್ಳೇಗಾಲ: ರೇಷ್ಮೆ ನಗರಿ ಎಂದು ಕರೆಸಿಕೊಳ್ಳುವ ಕೊಳ್ಳೇಗಾಲ ನಗರ, ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದಂತಹ ಪ್ರವಾಸಿ- ಧಾರ್ಮಿಕ ಕೇಂದ್ರಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರವು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಲು ಆರಂಭಿಸಿ ದಶಕಗಳು ಕಳೆದರೂ, ಪ್ರಗತಿಯ ವೇಗ ನಿಧಾನವಾಗಿದೆ.

ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುವವರಿಂದ ಇಲ್ಲಿನ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಪ್ರತಿ ಬಾರಿ ಅವರ ನಿರೀಕ್ಷೆಗಳು ಈಡೇರಿಲ್ಲ. ಮೂರೂವರೆ ದಶಕಗಳಲ್ಲಿ ಇಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನು ನೋಡಿದರೆ ಇದು ಗೊತ್ತಾಗುತ್ತದೆ. ಇಲ್ಲಿನ ಮತದಾರರು ಒಬ್ಬ ಶಾಸಕನಿಗೆ ಸತತ ಎರಡನೇ ಬಾರಿ ಅವಕಾಶ ನೀಡಿಲ್ಲ. ಈ ಬಾರಿಯೂ ಕ್ಷೇತ್ರದ ಜನರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿಯಾಗಿರುವ ಕೊಳ್ಳೇಗಾಲ ಇನ್ನೂ ಸಮಗ್ರವಾಗಿ ಅಭಿವೃದ್ಧಿಯಾಗಿಲ್ಲ. ಹಲವು ಕಾಮಗಾರಿಗಳು ಇನ್ನೂ ನಿಧಾನವಾಗಿ ನಡೆಯುತ್ತಿದೆ. ಕೆಲವು ಕಾಮಗಾರಿಗಳು ಮುಕ್ತಾಯ ಹಂತದಲ್ಲಿ ಇದ್ದರೂ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಮಾತ್ರ ಶಾಸಕರು, ಸಚಿವರು, ಸಂಸದರು ಹಾಗೂ ಜನಪ್ರತಿನಿಧಿಗಳು ಇನ್ನಿಲ್ಲದ ಭರವಸೆಗಳನ್ನು ನೀಡಿ ಹೋಗುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ಈ ಬಗ್ಗೆ ಗಮನಹರಿಸುವುದಿಲ್ಲ ಎಂಬುದು ಜನರ ಆರೋಪ.

ಸಾರ್ವಜನಿಕರ ಕೂಗುಗಳು: ಕೊಳ್ಳೇಗಾಲ ನಗರದಲ್ಲಿ ಸರ್ಕಟನ್ ಕಾಲುವೆ ಕಾಮಗಾರಿ ಆರಂಭವಾಗಿ ಆರು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳದೆ ಕಾಲುವೆಯ ಸಮೀಪದ ನಿವಾಸಿಗಳು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕಾಮಗಾರಿ ಮುಕ್ತಾಯವಾದರೆ ಮಳೆಯ ನೀರು ಹಾಗೂ ಚಿಕ್ಕ ರಂಗನಾಥನ ಕೆರೆಯ ನೀರು ಸಂಪೂರ್ಣವಾಗಿ ಕಾಲುವೆಯ ಮೂಲಕ ಹರಿದು ಹೋಗುತ್ತದೆ. ಇಲ್ಲದಿದ್ದರೆ ಬಡಾವಣೆಗಳಿಗೆ ನುಗ್ಗುತ್ತದೆ.

ಕ್ಷೇತ್ರದಾದ್ಯಂತ ಸಮುದಾಯ ಭವನಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ನಗರದ ಮಹದೇಶ್ವರ ಕಾಲೇಜಿನ ಆವರಣದಲ್ಲಿ ಒಳಾಂಗಣ ಕ್ರೀಡಾಂಗಣ ಕಾಮಗಾರಿಯು ಐದು ವರ್ಷಗಳಿಂದ ನಡೆಯುತ್ತಿದೆ. ಗಡಿ ಭವನ ಕಾಮಗಾರಿ 13 ವರ್ಷದಿಂದಲೂ ಕುಂಟುತ್ತಾ ನಡೆಯುತ್ತಿದೆ. ಸದ್ಯಕ್ಕೆ ಕಾಮಗಾರಿ ಸ್ಥಗಿತವಾಗಿದೆ. ಡಾ.ರಾಜಕುಮಾರ್ ರಸ್ತೆ, ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ ವಿಸ್ತರಣೆಯಾಗಬೇಕಿದೆ. ಕೊಳ್ಳೇಗಾಲಕ್ಕೆ ರೈಲು ಬೇಕು ಎಂಬ ಕೂಗು ಒಂದೂವರೆ ದಶಕದಿಂದ
ಕೇಳಿ ಬರುತ್ತಿದೆ. ಕ್ಷೇತ್ರದ ಗ್ರಾಮೀಣ ಭಾಗಗಳ ರಸ್ತೆಗಳು ಹದಗೆಟ್ಟಿವೆ. ಸರ್ವ ಋತು ಗುಣಮಟ್ಟದ ರಸ್ತೆಗಳು ಅಗತ್ಯವಿದೆ.

ಯಳಂದೂರು ತಾಲ್ಲೂಕು ಹಾಗೂ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿ ಕೂಡ ಕೊಳ್ಳೇಗಾಲ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಕಳೆದ ವರ್ಷ ಯಳಂದೂರು ತಾಲ್ಲೂಕಿನಲ್ಲಿ ನೆರೆ ಹಾವಳಿ ಹೆಚ್ಚಾಗಿತ್ತು. ರೈತರು, ನದಿ ಪಾತ್ರದ ಜನರು ತೀವ್ರ ಸಂಕಷ್ಟ ಅನುಭವಿಸಿದ್ದರು. ನೆರೆ ಸಮಸ್ಯೆಗೆ ಶಾಶ್ವತ ‍ಪರಿಹಾರ ಕಲ್ಪಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಪರಿಶಿಷ್ಟ ಜಾತಿಯವರಿಗೆ ಸ್ಮಶಾನದ ವ್ಯವಸ್ಥೆ ಕಲ್ಪಿಸಬೇಕಿದೆ. ಯಳಂದೂರು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಿಳಂಬವಾಗಿದೆ. ಯಳಂದೂರು ಪಟ್ಟಣದ ಸಮಗ್ರ ಅಭಿವೃದ್ಧಿ. ಬಿಳಿಗಿರಿರಂಗನಬೆಟ್ಟದ ಅಭಿವೃದ್ಧಿ, ಕಾಡಂಚಿನ ಗ್ರಾಮಗಳಲ್ಲಿ ಮಾನವ ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ, ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆಗಳು ಯಳಂದೂರು ತಾಲ್ಲೂಕಿನ ಜನರ ಪ್ರಮುಖ ಬೇಡಿಕೆಗಳು.

ಕ್ಷೇತ್ರ ವ್ಯಾಪ್ತಿಗೆ ಬರುವ ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿ ಬಸ್‌ ನಿಲ್ದಾಣ ಆಗಬೇಕಿದೆ. ರೇಷ್ಮೆ ಕಾರ್ಖಾನೆ ಪುನಶ್ಚೇತನಗೊಳಿಸಬೇಕಾಗಿದೆ. ಉಮ್ಮತ್ತೂರಿನ ಕೃಷ್ಣಮೃಗ ವನ್ಯಧಾಮದ ಅಭಿವೃದ್ಧಿಯೂ ಆಗಬೇಕಿದೆ.

ಕೈಗಾರಿಕೆಗೆ ಬೇಕಾಗಿದೆ ಒತ್ತು

ಕೊಳ್ಳೇಗಾಲ ರೇಷ್ಮೆ ಉದ್ದಿಮೆಗೆ ಹೆಸರಾಗಿತ್ತು. ಆ ಕಾರಣಕ್ಕೆ ರೇಷ್ಮೆ ನಗರಿ ಎಂಬ ಹೆಸರು ಬಂದಿದೆ. ಈಗ ರೇಷ್ಮೆ ಮಾರುಕಟ್ಟೆ ಮಾತ್ರ ಇದೆ. ರೇಷ್ಮೆ ಕಾರ್ಖಾನೆ ಮುಚ್ಚಿ ಹೋಗಿತ್ತು. ಸಂತೇಮರಹಳ್ಳಿಯಲ್ಲಿನ ರೇಷ್ಮೆ ಕಾರ್ಖಾನೆ ಕೂಡ ಪಾಳು ಬಿದ್ದಿದೆ. ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರ ಕಾರ್ಖಾನೆಗಳ ಪುನಶ್ಚೇತನಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಿಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ.

ರೇಷ್ಮೆ ನೂಲಿನ ಉದ್ದಿಗೆ ಅಭಿವೃದ್ಧಿಯಾಗಬೇಕಿದೆ. ಬೆರಳೆಣಿಕೆಯಷ್ಟು ಕೈಮಗ್ಗಗಳು ಈಗ ಕಾರ್ಯನಿರ್ವಹಿಸುತ್ತಿವೆ. ಕೊಳ್ಳೇಗಾಲ ರೇಷ್ಮೆ ಬ್ರ್ಯಾಂಡ್‌ಗೆ ಕಾಯಕಲ್ಪ ಕೊಡುವ ಪ್ರಯತ್ನ ಪೂರ್ಣವಾಗಿ ಯಶಸ್ಸು ಸಾಧಿಸಿಲ್ಲ.

ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹದ ಅಗತ್ಯವಿದೆ. ಶಾಸಕರಾಗಿ ಆಯ್ಕೆಯಾದವರು, ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು ಎಂಬುದು ಇಲ್ಲಿನ ವ್ಯಾ‍ಪಾರಿಗಳು, ಉದ್ಯಮಿಗಳ ಪ್ರಮುಖ ಬೇಡಿಕೆ.

ನಗರ ಅಭಿವೃದ್ಧಿಗೊಳಿಸಿ

ಕೊಳ್ಳೇಗಾಲ ನಗರಸಭೆ ಎಂಬುದು ಫಲಕಕಷ್ಟೇ ಸೀಮಿತ. ನಗರಸಭೆಯಲ್ಲಿ ಇರಬೇಕಾದ ಸೌಕರ್ಯಗಳು ಇಲ್ಲಿಲ್ಲ. ಆ ಮಟ್ಟಿನ ಅಭಿವೃದ್ಧಿಯೂ ಆಗಿಲ್ಲ. ಯಾವ ಬಡಾವಣೆಯೂ ಇಲ್ಲಿ ವ್ಯವಸ್ಥಿತವಾಗಿ ಅಭಿವೃದ್ಧಿಯಾಗಿಲ್ಲ. ರಸ್ತೆಗಳಂತೂ ಹಳ್ಳ ಕೊಳ್ಳಗಳಿಂದ ಕೂಡಿದೆ. ಮಳೆ ಬಂದರೆ ಸಂಚಾರ ಮಾಡುವುದಕ್ಕೆ ಆಗುವುದಿಲ್ಲ. 24x7 ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಯಿಂದಾಗಿ ಇದ್ದ ರಸ್ತೆಗಳೆಲ್ಲಾ ಹಾಳಾಗಿದೆ. ಶಾಸಕರಾದವರು ನಗರದ ಅಭಿವೃದ್ಧಿಗೆ ಒತ್ತು ನೀಡಬೇಕು.

–ಸುಂದರ್, ಈಡಿಗರ ಬಡಾವಣೆ, ಕೊಳ್ಳೇಗಾಲ

ಬರೀ ಸುಳ್ಳು ಭರವಸೆಗಳು

ಜನಪ್ರತಿನಿಧಿಗಳು ಚುನಾವಣೆ ಹತ್ತಿರ ಬಂದಾಗ ಮಾತ್ರ ಇಡೀ ಕೊಳ್ಳೇಗಾಲ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ, ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುತ್ತೇವೆ ಎಂದು ಸುಳ್ಳು ಭರವಸೆಗಳನ್ನು ಹೇಳಿ ಹೋಗುತ್ತಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಸಮರ್ಪಕವಾಗಿ ಆಗುತ್ತಿಲ್ಲ. ಸರ್ಕಾರಿ ಕಚೇರಿಗಳೇ ಇಲ್ಲಿ ಸುಸಜ್ಜಿತವಾಗಿಲ್ಲ.

ಉಪೇಂದ್ರ, ನರೀಪುರ, ಕೊಳ್ಳೇಗಾಲ ತಾಲ್ಲೂಕು

ಮಹಿಳೆಯರ ಅಭಿವೃದ್ಧಿಗೆ ಗಮನ ಬೇಕು

ಶಾಸಕರಾಗುವವರು ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಒತ್ತು ನೀಡಬೇಕು. ಕೌಶಲ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವುದು. ಮಹಿಳೆಯರನ್ನು ಆರ್ಥಿಕವಾಗಿ ಇನ್ನಷ್ಟು ಸಬಲರನ್ನಾಗಿಸುವ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಯಳಂದೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಬೇಕು.

– ಸುನೀತ.ಬಿ, ಮಲಾರಪಾಳ್ಯ, ಯಳಂದೂರು ತಾಲ್ಲೂಕು.

ಅಭಿವೃದ್ಧಿ ಶೂನ್ಯ

ಕೊಳ್ಳೇಗಾಲ ಜಿಲ್ಲೆಯ ಪ್ರಮುಖ ಕೇಂದ್ರ . ಆದರೆ, ಇಲ್ಲಿ ಅಭಿವೃದ್ಧಿ ಎಂಬುದು ಶೂನ್ಯ. 40 ವರ್ಷಗಳಿಂದಲೂ ಇಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಚುನಾವಣೆ ಹತ್ತಿರ ಬಂದಾಗ ಮಾತ್ರ ಅಭ್ಯರ್ಥಿಗಳು ಕೊಳ್ಳೆಗಾಲವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾರೆ. ಗೆದ್ದ ಮೇಲೆ ಅವರು ತಮ್ಮ ಮನೆ ಹಾಗೂ ಬೆಂಬಲಿಗರನ್ನು ಅಭಿವೃದ್ಧಿ ಮಾಡುವುದರಲ್ಲಿ ಮುಂದೆ ಇರುತ್ತಾರೆ ವಿನಾಃ ಕ್ಷೇತ್ರದ ಅಭಿವೃದ್ಧಿ ಮಾಡಲು ಅಲ್ಲ.

–ಭೀಮರಾವ್, ಕೊಳ್ಳೇಗಾಲ

ಅಭಿವೃದ್ಧಿ ಕಾಳಜಿ ಇಲ್ಲ

ಇಡೀ ರಾಜ್ಯದಲ್ಲಿ ಹಿಂದುಳಿದ ತಾಲ್ಲೂಕು ಎಂದರೆ ಅದು ನಮ್ಮ ಕೊಳ್ಳೇಗಾಲ. ಕೊಳ್ಳೇಗಾಲ ಎಂದರೆ ಮಾಟ ಮಂತ್ರ ಎಂದು ಹೇಳುತ್ತಾರೆಯೇ ವಿನಾಃ, ಅಭಿವೃದ್ಧಿಯಾಗಿದೆ ಎಂದು ಯಾರೂ ಹೇಳುವುದಿಲ್ಲ. ರಾಜ್ಯ, ರಾಷ್ಟ್ರನಾಯಕರೂ ಇಲ್ಲಿಗೆ ಬಂದು ಹೋಗಿದ್ದಾರೆ. ಆದರೆ ಅಭಿವೃದ್ಧಿಯಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಬರೀ ಭರವಸೆಗಳನ್ನು ನೀಡಿ, ಮತದಾರರನ್ನು ಸೆಳೆಯಲು ಯತ್ನಿಸುತ್ತಾರೆ. ಅವರಿಗೆ ನಿಜವಾಗಿ ಅಭಿವೃದ್ಧಿ ಬಗ್ಗೆ ಕಾಳಜಿ ಇರುವುದಿಲ್ಲ.

–ನಾಗರಾಜು, ಕೊಳ್ಳೇಗಾಲ

ಮಾಹಿತಿ:

ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT