ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಗಡಿ ಸ್ಥಳಾಂತರ: ಪುನರ್ವಸತಿ ಗ್ರಾಮದಲ್ಲಿ ಏನೇನಿರಲಿದೆ?

ಒಪ್ಪಿಗೆ ಸಿಕ್ಕಿದ ನಂತರ ಒಂದು ವರ್ಷ ಬೇಕು
Last Updated 22 ಅಕ್ಟೋಬರ್ 2021, 8:02 IST
ಅಕ್ಷರ ಗಾತ್ರ

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ಚಂಗಡಿ ಗ್ರಾಮ ಸ್ಥಳಾಂತರಗೊಳ್ಳಲಿರುವ ಹನೂರು ತಾಲ್ಲೂಕಿನ ಡಿ.ಎಂ.ಸಮುದ್ರದ ಬಳಿಯ ಪುನರ್ವಸತಿ ಕೇಂದ್ರದಲ್ಲಿ ಅರಣ್ಯ ಇಲಾಖೆಯು ಗ್ರಾಮಸ್ಥರಿಗೆ ಎಲ್ಲ ನಾಗರಿಕ ಸೌಲಭ್ಯ ಕಲ್ಪಿಸಲಿದೆ.

ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಸಮಗ್ರ ಯೋಜನಾ ವರದಿಯಲ್ಲಿ ಪುನರ್ವವತಿ ಕೇಂದ್ರದಲ್ಲಿ ಲಭ್ಯವಿರಲಿರುವ ಮೂಲಸೌಕರ್ಯಗಳ ಬಗ್ಗೆ ವಿವರ ನೀಡಲಾಗಿದೆ. ಮನೆ, ವಿದ್ಯುತ್‌, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಚರಂಡಿ, ಒಳಚರಂಡಿ, ಸಮುದಾಯ ಭವನ, ಆಟದ ಮೈದಾನ, ಸ್ಮಶಾನ ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ.

ಈಗಿನ ಲೆಕ್ಕಾಚಾರದಂತೆ 140 ಫಲಾನುಭವಿಗಳಿಗೆ ಮನೆ ನಿರ್ಮಿಸಬೇಕಾಗಿದೆ. ಪ್ರತಿ ಮನೆಯೂ 40x60 ಅಳತೆಯ ನಿವೇಶನದಲ್ಲಿ ನಿರ್ಮಾಣವಾಗಲಿದೆ. ನಿವೇಶನದಲ್ಲಿ ಜೈವಿಕ ಅನಿಲ (ಬಯೊ ಗ್ಯಾಸ್‌) ಘಟಕ ಹಾಗೂ ಮಳೆ ನೀರು ಸಂಗ್ರಹಕ್ಕೂ ವ್ಯವಸ್ಥೆ ಇರಲಿದೆ.40.36 ಚದರ ಮೀಟರ್‌ (5.85x6.90ಮೀ) ವಿಸ್ತೀರ್ಣದಲ್ಲಿ ಮನೆಗಳು ತಲೆ ಎತ್ತಲಿದ್ದು, ಒಂದು ಮಲಗುವ ಕೋಣೆಯ ಆರ್‌ಸಿಸಿ ಮನೆಗಳನ್ನು ನಿರ್ಮಿಸಲು ನಕ್ಷೆ ರೂಪಿಸಲಾಗಿದೆ. ಮನೆಯು ಹೊರ ಜಗಲಿ, ಹಾಲ್‌, ಅಡುಗೆ ಕೋಣೆ, ಸ್ನಾನದ ಕೋಣೆ, ಶೌಚಾಲಯ ಹೊಂದಿರಲಿದೆ.

ಮಧ್ಯದಲ್ಲಿ 40 ಅಡಿಗಳ ರಸ್ತೆ ಬಂದು ಎದುರು ಬದುರಾಗಿ ಸಾಲು ಮನೆಗಳನ್ನು ನಿರ್ಮಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.ಅಷ್ಟೂ ಮನೆಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 1 ಲಕ್ಷ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲಿದ್ದು, ಕೊಳವೆ ಬಾವಿಗಳನ್ನು ಕೊರೆದು ಟ್ಯಾಂಕ್‌ಗೆ ನೀರು ತುಂಬಿಸುವ ಯೋಜನೆ ಕೈಗೊಳ್ಳಲಾಗಿದೆ.

‘ಸದ್ಯ ನೀರಿಗಾಗಿ ಕೊಳವೆ ಬಾವಿ ಕೊರೆಯಬೇಕಾಗಿದೆ. ಚೆನ್ನಾಗಿ ನೀರು ಇರುವ ಎರಡು ಕೊಳವೆ ಬಾವಿಗಳು ಇದ್ದರೆ ಸಾಕು. ಮುಂದಿನ ದಿನಗಳಲ್ಲಿ ನೀರು ಪೂರೈಸಲು ಬೇರೆ ವ್ಯವಸ್ಥೆಯನ್ನೂ ಮಾಡಬಹುದಾಗಿದೆ. ಮನೆಗಳಿಗೆ ವಿದ್ಯುತ್‌ ಸಂಪರ್ಕ, ಚರಂಡಿ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗುವುದು’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ಪುನರ್ವಸತಿ ಗ್ರಾಮದಲ್ಲಿ 400 ಆಸನ ಸಾಮರ್ಥ್ಯದ ಸಮುದಾಯ ಭವನ₹ 19 ಲಕ್ಷದಲ್ಲಿ ನಿರ್ಮಾಣವಾಗಲಿದೆ. ಖರಾಬ್‌ ಜಮೀನಿನಲ್ಲಿ ಒಂದರಿಂದ ಒಂದೂವರೆ ಎಕರೆ ಜಾಗದಲ್ಲಿ ಸ್ಮಶಾನ ಅಭಿವೃದ್ಧಿಯಾಗಲಿದೆ.

ತಲಾ 3 ಎಕರೆ ಕೃಷಿ ಭೂಮಿ ಅಭಿವೃದ್ಧಿ

ಪರಿಹಾರ ಪ್ಯಾಕೇಜ್‌ನಲ್ಲಿ 116 ಕುಟುಂಬಗಳು ಮೂರು ಎಕರೆ ಜಮೀನು, ಮನೆ ಮತ್ತು ₹ 75 ಸಾವಿರ ನಗದು ಪರಿಹಾರವನ್ನು ಆಯ್ಕೆ ಮಾಡಿಕೊಂಡಿವೆ. ಈ ಕುಟುಂಬಗಳಿಗಾಗಿ ಪುನರ್ವಸತಿ ಸ್ಥಳದಲ್ಲಿ ತಲಾ ಮೂರು ಎಕರೆಯ ಪ್ಲಾಟ್‌ಗಳನ್ನು ಅರಣ್ಯ ಇಲಾಖೆ ಅಭಿವೃದ್ಧಿ ಪಡಿಸಲಿದೆ. ಪ್ರತಿ ಕೃಷಿ ಪ್ಲಾಟ್‌ ಅನ್ನೂ ಸಿಮೆಂಟ್‌ನ ಕಂಬ ನೆಟ್ಟು, ಬದುಗಳನ್ನು ನಿರ್ಮಿಸಿ ಪ್ರತ್ಯೇಕಿಸಲು ಯೋಜನೆ ರೂಪಿಸಲಾಗಿದೆ.

ಹೊಸದಾಗಿ ನಿರ್ಮಾಣವಾಗಲಿರುವ ಗ್ರಾಮದಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಎರಡು ಕೊಳಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಸಮುದಾಯ ವ್ಯವಸಾಯ:‍‘ಸಮುದಾಯ ವ್ಯವಸಾಯಕ್ಕೆ ಒತ್ತು ನೀಡಲು ನಿರ್ಧರಿಸಿದ್ದೇವೆ. 10ರಿಂದ 15 ರೈತರನ್ನು ಗುಂಪುಗಳನ್ನಾಗಿ ಮಾಡಿ ಅವರು ಒಟ್ಟಾಗಿ ಸಾವಯವ ವಿಧಾನದಲ್ಲಿ ವ್ಯವಸಾಯ ಮಾಡಲು ಉತ್ತೇಜನ ನೀಡಲಾಗುವುದು. ನೀರಾವರಿಗೆ ಸೋಲಾರ್‌ ವ್ಯವಸ್ಥೆ ಕಲ್ಪಿಸಲಾಗುವುದು. ಹನಿ ನೀರಾವರಿ ವ್ಯವಸ್ಥೆಯನ್ನೂ ಒದಗಿಸಲಾಗುವುದು’ ಎಂದು ಏಡುಕುಂಡಲು ವಿವರಿಸಿದರು.

‘ಅಧಿಕಾರಿಗಳು ನುಡಿದಂತೆ ನಡೆಯಲಿ’

ಅರಣ್ಯ ಇಲಾಖೆಯು ಪುನರ್ಸವತಿಯನ್ನು ಕಲ್ಪಿಸುವಾಗ ಯೋಜನೆಯಲ್ಲಿ ಇದ್ದಂತೆಯೇ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಚಂಗಡಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಮೂಲಸೌಕರ್ಯ ಇಲ್ಲ ಎಂಬ ಕಾರಣಕ್ಕೆ ಗ್ರಾಮವನ್ನು ತೊರೆಯಲು ನಾವು ಒಪ್ಪಿಕೊಂಡಿದ್ದೇವೆ. ನಮಗೆ ಪುನರ್ವಸತಿ ಕಲ್ಪಿಸಲಿರುವ ಸ್ಥಳದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಅಧಿಕಾರಿಗಳು ನೀಡಿದ್ದ ಭರವಸೆಯಂತೆ ನಡೆದುಕೊಳ್ಳಬೇಕು’ ಎಂದು ಗ್ರಾಮಸ್ಥ ದೊಡ್ಡೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿರೋಧ ಇಲ್ಲ: ‘ಸ್ಥಳಾಂತರದ ಬಗ್ಗೆ ಯಾವುದೇ ಗ್ರಾಮಸ್ಥರು ವಿರೋಧಿಸಿಲ್ಲ. ಆರಂಭದಲ್ಲಿ ಕೆಲವು ಕುಟುಂಬಗಳು ಬರುವುದಿಲ್ಲ ಎಂದು ಹೇಳಿದ್ದವು. ಅವರ ಮನವೊಲಿಸಿದ್ದೆವು. ಸಮಗ್ರ ಯೋಜನಾ ವರದಿಯಲ್ಲಿ ಏನಿದೆಯೋ ಅದೇ ರೀತಿ ಪುನರ್ವಸತಿ ಕಲ್ಪಿಸಲಾಗುವುದು. ಇದು ಜಿಲ್ಲೆಯ ಮೊದಲ ಗ್ರಾಮ ಸ್ಥಳಾಂತರ ಯೋಜನೆ. ಹಾಗಾಗಿ, ಇತರ ಯೋಜನೆಗಳಿಗೂ ಮಾದರಿಯಾಗುವ ರೀತಿಯಲ್ಲಿ ಅನುಷ್ಠಾನಕ್ಕೆ ತರುವುದು ನಮ್ಮ ಉದ್ದೇಶ ’ ಎಂದು ಏಡುಕುಂಡಲು ಅವರು ಹೇಳಿದರು.

* ರಾಜ್ಯ ಸರ್ಕಾರ ಪುನರ್ವಸತಿ ಯೋಜನೆಗೆ ಅನುಮತಿ ನೀಡಿದ ನಂತರ, ಒಂದು ವರ್ಷದ ಒಳಗಾಗಿ ಚಂಗಡಿ ಗ್ರಾಮ ಹೊಸ ಗ್ರಾಮಕ್ಕೆ ಸಂಪೂರ್ಣವಾಗಿ ಸ್ಥಳಾಂತರಗೊಳ್ಳಲಿದೆ

–ವಿ.ಏಡುಕುಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ

* ನಮ್ಮ ಸತತ ಮನವಿಗೆ ಓಗೊಟ್ಟಿರುವ ಸರ್ಕಾರ ಈಗ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದೆ. ಅರಣ್ಯ ಇಲಾಖೆ ನಿಗದಿತ ಯೋಜನೆಯಂತೆ ನಮಗೆ ಶೀಘ್ರ ಪುನರ್ವಸತಿ ಕಲ್ಪಿಸಬೇಕು

–ಚಂಗಡಿ ಕರಿಯಪ್ಪ, ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT