ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಳಿ ಟೊಮೆಟೊ; ಕೈ ಸುಟ್ಟುಕೊಂಡ ರೈತರು

ಸಂತೇಮರಹಳ್ಳಿ; ಐಎನ್‌ ತಳಿಯ ಟೊಮೆಟೊ ಬೆಳೆದ ಕೆಲವು ಬೆಳೆಗಾರರು
Last Updated 9 ಜನವರಿ 2022, 15:20 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಖಾಸಗಿ ಕಂಪನಿಯ ಹೊಸ ಟೊಮೆಟೊ ತಳಿಯನ್ನು ನಂಬಿದ್ದ ಹೋಬಳಿಯ ಕೆಲವು ರೈತರು ನಷ್ಟ ಅನುಭವಿಸಿದ್ದಾರೆ.

ಹೆಗ್ಗವಾಡಿ, ಬಸವಟ್ಟಿ ಸೇರಿದಂತೆ ಕೆಲವು ಗ್ರಾಮಗಳ ರೈತರು ಬೆಳೆದಿರುವ ಟೊಮೆಟೊ ಬೆಳೆ ಸೊರಗಿ ಹೋಗಿದ್ದು, ನಷ್ಟ ಅನುಭವಿಸಿದ್ದಾರೆ.

ಟೊಮೆಟೊಗೆ ಈಗ ಬೇಡಿಕೆ ಇದ್ದು, ರೈತರಿಗೂ ಉತ್ತಮ ಬೆಲೆ ಸಿಗುತ್ತಿದೆ. ಈಗ ಫಸಲು ಬಂದು ಮಾರಾಟವಾಗಿದ್ದರೆ ಲಕ್ಷಾಂತರ ರೂಪಾಯಿ ಲಾಭವಾಗುತ್ತಿತ್ತು. ಆದರೆ, ಈಗ ಮಾಡಿರುವ ಖರ್ಚು ಕೂಡ ಬಾರದ ಸ್ಥಿತಿಯಲ್ಲಿದ್ದಾರೆ.

ಸಿಂಜೆಂಟಾ ಕಂಪನಿಯ ಹೊಸ ತಳಿ ಐಎನ್‌ ಟೊಮೆಟೊವನ್ನು ಇಲ್ಲಿನ ಕೆಲವು ರೈತರು ಬೆಳೆದಿದ್ದಾರೆ.

ಸುತ್ತಮುತ್ತಲಿನ ರೈತರ ಸಭೆ ಕರೆದಿದ್ದ ಕಂಪನಿಯವರು, ಹೊಸ ತಳಿಯನ್ನು ಪರಿಚಯಿಸಿದ್ದರು. ಹೆಚ್ಚು ಇಳುವರಿ ಸಿಗುವ ಭರವಸೆಯನ್ನು ನೀಡಿದ್ದರು.

ಇದನ್ನು ನಂಬಿದ ರೈತರು ಈ ತಳಿಯನ್ನು ನಾಟಿ ಮಾಡಿದ್ದರು. ಗಿಡ ಚೆನ್ನಾಗಿ ಬಂದಿತ್ತು. ಆದರೆ, ಕಾಯಿ ಬಿಡುವ ಹೊತ್ತಿಗೆ ಗಿಡ ಒಣಗಲು ಆರಂಭಿಸಿದೆ.

ಹೆಗ್ಗವಾಡಿ ಗ್ರಾಮದ ರೈತ ಪರಶಿವಮೂರ್ತಿ ಅವರು ತಮ್ಮ ಎರಡು ಎಕರೆಗೆ ₹7,000 ವೆಚ್ಚದಲ್ಲಿ ಟೊಮೆಟೊ ಗಿಡವನ್ನು ನಾಟಿ ಮಾಡಿದರು. ಕೊಟ್ಟಿಗೆ, ಕೋಳಿ ಗೊಬ್ಬರ ಸೇರಿದಂತೆ ರಸಾಯನಿಕ ಗೊಬ್ಬರವನ್ನು ಹಾಕಿದ್ದರು. ಒಂದೂವರೆ ತಿಂಗಳು ಕಳೆಯುತ್ತಿದ್ದಂತೆ ಪೈರು ಒಣಗಲು ಆರಂಭಿಸಿತು. ರೋಗ ಬಾದಿಸಿರಬಹುದು ಎಂದು ಔಷಧಿ ಸಿಂಪಡಿಸಿದರು. ಮೂರು ತಿಂಗಳಾದರೂ ಟೊಮೆಟೊ ಕಾಯಿ ಬಿಡಲಿಲ್ಲ. ಬುಡದಿಂದಲೇ ಬೆಳೆದಿರುವ ಟೊಮೆಟೋ ಪೈರು ಒಣಗಿ ಎಲೆಗಳು ಉದುರುತ್ತಿವೆ. ಗಿಡಗಳು ಹೆಚ್ಚು ಉದ್ದ ಬೆಳೆದು ನಿಂತಿವೆ. ಈಗಾಗಲೇ 4 ತಿಂಗಳು ಕಳೆಯುತ್ತಾ ಬಂದಿದೆ. ಸ್ವಲ್ಪ ಪ್ರಮಾಣದಲ್ಲಿ ಕಾಯಿ ಬಿಟ್ಟಿವೆ. ಆದರೆ ಇವು ಕಪ್ಪು ಬಣ್ಣಕ್ಕೆ ತಿರುಗಿ ಗಿಡದಿಂದ ಕಳಚಿ ಬೀಳುತ್ತಿವೆ. ಇದೀಗ ಅಲ್ಲಲ್ಲಿ ಹಣ್ಣುಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಗುಣಮಟ್ಟವಿಲ್ಲ. ಎರಡು ದಿನಕ್ಕಿಂತ ಹೆಚ್ಚು ಇಡಲು ಆಗದೆ ಕೊಳೆಯುತ್ತಿವೆ.

’ಮಾರಾಟಕ್ಕೆ ಯೋಗ್ಯವಲ್ಲದ ಹಾಗೂ ಸಾಗಣೆ ಮಾಡಲು ಆಗದ ಸ್ಥಿತಿಯಲ್ಲಿ ಹಣ್ಣುಗಳಿವೆ‘ ಎಂದು ರೈತರು ದೂರುತ್ತಾರೆ.

’ಎರಡು ಎಕರೆಯಲ್ಲಿ ಬೆಳೆದಿರುವ ಟೊಮೆಟೊ ಬೆಳೆಯಲು ಇದುವರೆಗೆ ₹2.50 ಖರ್ಚಾಗಿದೆ. ಎಕರೆಗೆ 20ರಿಂದ 25 ಟನ್ ವರೆಗೆ ಇಳುವರಿ ಬರಬೇಕಾಗಿತ್ತು. ಈಗಿನ ಬೇಡಿಕೆ ದರದಲ್ಲಿ ₹20 ಲಕ್ಷಕ್ಕೂ ಹೆಚ್ಚು ಲಾಭ ಬರುತ್ತಿತ್ತು. ಈ ನಷ್ಟವನ್ನು ಕಂಪನಿಯವರೇ ಭರಿಸಿಕೊಡಬೇಕು‘ ಎಂದು ರೈತ ಪರಶಿವಮೂರ್ತಿ ಅವರು ಒತ್ತಾಯಿಸಿದರು.

ಈ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಸಿಂಜೆಂಟಾ ಕಂಪನಿ ವ್ಯವಸ್ಥಾಪಕ ಸುನಿಲ್‌ ಅವರು, ’ಕಂಪನಿಯಿಂದ ನೀಡಿರುವ ಈ ಟೊಮೆಟೊ ತಳಿ ಕೆಲವು ಭಾಗಗಳಲ್ಲಿ ವಾತಾವರಣಕ್ಕೆ ತಕ್ಕಂತೆ ಬೆಳೆದಿವೆ. ಕೆಲವು ಕಡೆಗಳಲ್ಲಿ ಚೆನ್ನಾಗಿ ಬಂದಿವೆ. ಉತ್ತಮ ಇಳುವರಿಯೂ ಸಿಕ್ಕಿದೆ. ಕೆಲವು ಕಡೆಗಳಲ್ಲಿ ಫಸಲು ಬೆಳೆಯದೇ ನಷ್ಟವಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT