ಶುಕ್ರವಾರ, ಮಾರ್ಚ್ 31, 2023
31 °C
ಬಾರದ ಮಳೆ: ಒಣಗಿದ ಬೆಳೆ, ಬಿತ್ತನೆ ಕುಂಠಿತ

ಹನೂರು: ಮೋಡವಿದ್ದರೂ ಹನಿಯದ ಮಳೆ ಹನಿ, ಆಗಸದತ್ತ ರೈತರ ಚಿತ್ತ

 ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನಾದ್ಯಂತ ಬಿತ್ತನೆಗಾಗಿ ಜಮೀನುಗಳನ್ನು ಹದಗೊಳಿಸಿದ್ದರೂ, ಮುಂಗಾರು ಮಳೆ ಆರಂಭದಲ್ಲಿಯೇ ನಿರೀಕ್ಷಿತ ಮಟ್ಟದಲ್ಲಿ ಬೀಳದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಪೂರ್ವ ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡಿದ್ದ, ಬೆಳೆದ ಪೈರು ನೀರಿಲ್ಲದೆ ಒಣಗಲು ಆರಂಭಿಸಿದೆ. ತಾಲ್ಲೂಕಿನ ಮೂರು ಹೋಬಳಿಗಳಲ್ಲೂ ಈ ಬಾರಿ ಮಳೆಯ ಕೊರತೆ ಉಂಟಾಗಿದೆ. 

ತಾಲ್ಲೂಕಿನಲ್ಲಿ ಜೂನ್‌ ತಿಂಗಳಲ್ಲಿ 4.6 ಸೆಂ.ಮೀ ವಾಡಿಕೆ ಮಳೆಯಾಗುತ್ತದೆ. ಈ ಬಾರಿ 3.79 ಸೆಂ.ಮೀ. ಮಳೆಯಾಗಿದೆ. ಶೇ 18ರಷ್ಟು ಕಡಿಮೆ ಮಳೆಯಾಗಿದೆ. 

ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ಮಳೆಯನ್ನೇ ನಂಬಿರುವ ರೈತರು ಇನ್ನೂ ಬಿತ್ತನೆಗೆ ಮುಂದಾಗಿಲ್ಲ. ನೀರಾವರಿ ವ್ಯವಸ್ಥೆ ಹೊಂದಿರುವ ರೈತರು ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. 

ಸಾಮಾನ್ಯವಾಗಿ ಜೂನ್‌ ತಿಂಗಳ ಆರಂಭದಲ್ಲೇ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಈ ವರ್ಷ ಜುಲೈ ಬಂದರೂ ರೈತರು ಬೀಜ ಬಿತ್ತನೆ ಶುರು ಮಾಡಿಲ್ಲ. 

ತಾಲ್ಲೂಕಿನಾದ್ಯಂತ ಶೇಂಗಾ ಬಿತ್ತನೆ ಕಾರ್ಯ ಜೂನ್‌ 15ರಿಂದ ಜುಲೈ 5ರವರೆಗೆ ನಡೆಯುತ್ತದೆ. ಕಳೆದ ಬಾರಿ ತಾಲ್ಲೂಕಿನಲ್ಲಿ 360 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿತ್ತು. ಈ ಬಾರಿ 1,040 ಹೆಕ್ಟೇರ್‌ನಲ್ಲಿ ನೆಲಗಡಲೆ ಬೆಳೆಯುವ ಗುರಿ ಹೊಂದಲಾಗಿದೆ. ಮಳೆ ಕೊರತೆಯಿಂದಾಗಿ ನೀರಾವರಿ ಆಶ್ರಿತ 120 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.    

‘ಕಳೆದ ವರ್ಷ ಕಡಲೆಕಾಯಿ ಬಿತ್ತನೆ ಮಾಡಿದ್ದೆ. ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರದಿದ್ದರೂ ನಷ್ಟವಾಗಿರಲಿಲ್ಲ. ಈ ಸಲವೂ ಬಿತ್ತನೆ ಮಾಡಲು ಜಮೀನು ಹದಗೊಳಿಸಿದ್ದೇನೆ. ಮಳೆಗಾಗಿ ಕಾಯುತ್ತಿದ್ದೇನೆ’ ಎಂದು ರೈತ ಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷ ಮಳೆಯಾಶ್ರಿತ 11 ಸಾವಿರ ಹೆಕ್ಟೇರ್‌ನಲ್ಲಿ ರಾಗಿ, 13 ಸಾವಿರ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯಲಾಗಿತ್ತು. ಈ ವರ್ಷ 12,500 ಹೆಕ್ಟೇರ್‌ನಲ್ಲಿ ರಾಗಿ, 1,150 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ. ಈ ಬಾರಿ ನೀರಾವರಿ ಕೃಷಿ ಭೂಮಿಯ 4,300 ಹೆಕ್ಟೇರ್‌ನಲ್ಲಿ ಮಾತ್ರ ಮುಸುಕಿನ ಜೋಳ ಬೆಳೆಯಲಾಗಿದೆ. ಮಳೆ ಕೊರತೆಯಿಂದಾಗಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಬಿತ್ತನೆ ನಡೆದಿಲ್ಲ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ನೆಲಕಚ್ಚಿದ ಸಜ್ಜೆ‌–ಎಳ್ಳು: ಹನೂರು ಭಾಗದ ಹಲವು ಪ್ರದೇಶಗಳಲ್ಲಿ ಪೂರ್ವ ಮುಂಗಾರಿನಲ್ಲಿ ಎಳ್ಳು ಮತ್ತು ಸಜ್ಜೆಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ. 824 ಹೆಕ್ಟೇರ್‌ನಲ್ಲಿ ಸಜ್ಜೆ ಹಾಗೂ 1,100 ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆ ಮಾಡಲಾಗಿತ್ತು. ಮಳೆಯಾಗದೆ ಫಸಲು ನೆಲಕಚ್ಚಿವೆ.  

‘ರೈತರು ಲಕ್ಷಾಂತರ ಖರ್ಚು ಮಾಡಿ ಬಿತ್ತನೆ ಕಾರ್ಯ ಮಾಡಿದ್ದರು. ಲಾಭ ಇರಲಿ; ಬಿತ್ತನೆಗೆ ಮಾಡಿರುವ ಖರ್ಚು ಕೂಡ ಈ ಬಾರಿ ಸಿಗುವುದಿಲ್ಲ. ಆದ್ದರಿಂದ ನಷ್ಟಕ್ಕೊಳಗಾದ ರೈತರಿಗೆ ಇಲಾಖೆ ಪರಿಹಾರ ನೀಡಬೇಕು’ ಎಂದು ಮುಖಂಡ ಮುರುಡೇಶ್ವರಸ್ವಾಮಿ ಒತ್ತಾಯಿಸಿದರು.

ಹೆಚ್ಚಿದ ಸೂರ್ಯಕಾಂತಿ ಬಿತ್ತನೆ
ತಾಲ್ಲೂಕಿನ ರೈತರು ಈಗ ಸೂರ್ಯಕಾಂತಿ ಬೆಳೆಯತ್ತ ಒಲವು ತೋರಿದ್ದಾರೆ. ಇದುವರೆಗೂ ಸೂರ್ಯಕಾಂತಿ ಬೆಳೆಯುತ್ತಿದ್ದ ರೈತರ ಸಂಖ್ಯೆ ಕಡಿಮೆ ಇತ್ತು. ಈ ಬಾರಿ ನಿರೀಕ್ಷೆಗೂ ಮೀರಿ ಸೂರ್ಯಕಾಂತಿ ಬಿತ್ತನೆ ನಡೆದಿದೆ. ನೀರಾವರಿ ಕೃಷಿ ಭೂಮಿಯಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

‘ಎರಡೂವರೆ ಎಕರೆಯಲ್ಲಿ ಸೂರ್ಯಕಾಂತಿ ಬೆಳೆದಿದ್ದೇನೆ. ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದೆ. ಈಗ ಮಳೆ ಬಿದ್ದರೆ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು. ಮಳೆ ಬೀಳದಿದ್ದರೆ ಈಗ ಸಮೃದ್ಧವಾಗಿ ಬೆಳೆದಿರುವ ಫಸಲು ಹಾಳಾಗಲಿದೆ’ ಎಂದು ರೈತ ಮಹದೇವಸ್ವಾಮಿ ಕಳವಳ ವ್ಯಕ್ತಪಡಿಸಿದರು.

ವಿಮಾ ಪರಿಹಾರ: 15ರವರೆಗೆ ಅವಕಾಶ
ಹನೂರು ತಾಲ್ಲೂಕಿನಾದ್ಯಂತ ಬೆಳೆಯಲಾಗಿರುವ ಸಜ್ಜೆ, ಎಳ್ಳು ಮಳೆಯಿಲ್ಲದೆ ಹಾಳಾಗಿವೆ. ಈ ಬಗ್ಗೆ ರೈತರಿಂದ ಬೆಳೆ ನಷ್ಟ ಪರಿಹಾರಕ್ಕಾಗಿ ವಿಮಾ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಎಳ್ಳು ಫಸಲಿಗೆ ಕೊನೆ ದಿನ ಮುಗಿದಿದೆ.

ಆದರೆ ಸಜ್ಜೆ ಬೆಳೆ ವಿಮಾ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಇದೇ 15ರವರೆಗೆ ಅವಕಾಶವಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಘುವೀರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು