ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಕೃಷಿ, ನೈಸರ್ಗಿಕ ಬೆಲ್ಲದ ಪುಡಿ; ಯುವಕನ ಸಾಧನೆ

ಎಂಜಿನಿಯರಿಂಗ್‌ ಮುಗಿಸಿ ವ್ಯವಸಾಯಕ್ಕೆ ಧುಮುಕಿದ ಚಾಮರಾಜನಗರದ ಶ್ರೀನಿಧಿ
Last Updated 23 ಡಿಸೆಂಬರ್ 2021, 4:16 IST
ಅಕ್ಷರ ಗಾತ್ರ

ಚಾಮರಾಜನಗರ: ಓದಿದ್ದು ಎಂಜಿನಿಯರಿಂಗ್‌, ಸೆಳೆದಿದ್ದು ಸಹಜ ಕೃಷಿ. ತಮ್ಮ ಜಮೀನಿನಲ್ಲಿ ಕಬ್ಬು ಬೆಳೆದು, ಅದನ್ನು ಮಾರಾಟ ಮಾಡದೆ, ಅದರಿಂರಾಸಾಯನಿಕ ಮುಕ್ತ ಬೆಲ್ಲ ತಯಾರಿಸಿ, ಗ್ರಾಹಕರಿಗೆ ನೇರ ಮಾರಾಟ. ನಾಲ್ಕೈದು ವರ್ಷಗಳ ಸ್ವಯಂ ಪರಿಶ್ರಮ, ಏಳು ಬೀಳುಗಳ ನಡುವೆ ಕಂಡ ಯಶಸ್ಸು.

–ಇದು, ಚಾಮರಾಜನಗರದ ಯುವ ರೈತ, 31 ವರ್ಷ ವಯಸ್ಸಿನ ಶ್ರೀನಿಧಿ ಸಿ.ವಿ ಅವರ ಕೃಷಿ ಸಾಹಸದ ಕಿರು ನೋಟ ಇದು.

ದಿವಂಗತ ಸಿ.ವಿ.ವೆಂಕಟೇಶ್‌ ಮೂರ್ತಿ ಹಾಗೂ ಮೀನಾಕ್ಷಿ ದಂಪತಿಯ ಮಗ ಶ್ರೀನಿಧಿ ಅವರು 2012ರಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಎಂಜಿನಿಯರಿಂಗ್‌ ಪೂರೈಸಿದ್ದರು. ದೊಡ್ಡ ಕಂಪನಿಗಳಿಗೆ ಸೇರಲು ಮನಸ್ಸಾಗಲಿಲ್ಲ. ಊರಿಗೆ ಮರಳಿ, 2013ರಲ್ಲಿ ಜಿಲ್ಲಾ ಆಹಾರ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಎಂಜಿನಿಯರ್‌ ಆಗಿ ಸೇರ್ಪಡೆಗೊಂಡರು.

ಶ್ರೀನಿಧಿ ಅವರಿಗೆ ಕೃಷಿಯಲ್ಲಿ ಅಂತಹ ಆಸಕ್ತಿ ಏನಿರಲಿಲ್ಲ. ಸುಭಾಷ್‌ ಪಾಳೇಕರ್‌ ಅವರ ‘ಶೂನ್ಯ ಬಂಡವಾಳದಿಂದ ನೈಸರ್ಗಿಕ ಕೃಷಿ’ ಪುಸ್ತಕದಿಂದ ಪ್ರೇರಣೆಗೊಂಡವರು. ಅ‌ವರಿಗೆ ಮಾರ್ಗದರ್ಶನ ಮಾಡುವವರು ಯಾರೂ ಇರಲಿಲ್ಲ. ಪಾಳೇಕರ್‌ ಅವರ ಇತರ ಪುಸ್ತಕಗಳನ್ನೂ ಓದಿಕೊಂಡು, ಉದ್ಯೋಗದ ನಡುವೆ ಕುಟುಂಬಕ್ಕೆ ಸೇರಿದ ಒಂದೆಕ್ರೆಯಲ್ಲಿ 2015ರಲ್ಲಿ ಸಹಜ ಕೃಷಿ ಆರಂಭಿಸಿಯೇ ಬಿಟ್ಟರು.

ಆರಂಭದಲ್ಲಿ ಬಾಳೆ, ತರಕಾರಿ, ಅರಿಸಿನ ಎಲ್ಲವನ್ನೂ ಬೆಳೆದರು. ಫಸಲು ಚೆನ್ನಾಗಿ ಬಂದರೂ, ದರದ ಏರಿಳಿತದಿಂದಾಗಿ ಅವರಿಗೆ ಹೆಚ್ಚು ಲಾಭವಾಗಲಿಲ್ಲ. 2017ರಲ್ಲಿ ಕಬ್ಬು ಬೆಳೆಯಲು ಆರಂಭಿಸಿದರು. ಕಬ್ಬನ್ನು ಮಾರಾಟ ಮಾಡುವ ಬದಲು, ಅದರಿಂದ ಬೆಲ್ಲ ತಯಾರಿಸಿ ಮಾರಾಟ ಮಾಡಿದರೆ ಹೇಗೆ ಎಂದು ಯೋಚಿಸಿ ಆ ಸಾಹಸಕ್ಕೂ ಕೈ ಹಾಕಿದರು. 2019ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ಪೂರ್ಣ ಕೃಷಿಯಲ್ಲಿ ತೊಡಗಿಕೊಂಡರು.

ಶ್ರೀನಿ ಫಾರ್ಮ್‌ ಬ್ರ್ಯಾಂಡ್‌: ರಾಸಾಯನಿಕ ಮುಕ್ತವಾದ ಬೆಲ್ಲವನ್ನು ತಯಾರಿಸಲು ಶ್ರೀನಿಧಿ ಅವರು ನಾಲ್ಕು ವರ್ಷಗಳಿಂದ ಸತತ ಪರಿಶ್ರಮ ಪಟ್ಟಿದ್ದಾರೆ. ಬೇರೆಲ್ಲೂ ಇಂತಹ ಪ್ರಯತ್ನಗಳು ನಡೆಯದೇ ಇದ್ದುದರಿಂದ, ಅವರಿಗೆ ಈ ಬಗ್ಗೆ ಸ್ಪಷ್ಟವಾದ ಸಿಗಲಿಲ್ಲ. ತಾನೇ ಓದಿಕೊಂಡು ಪ್ರಯೋಗಗಳನ್ನು ಮಾಡಿದರು. ಒಂದು ವರ್ಷ ಪೂರ್ಣ ನಷ್ಟವೂ ಆಯಿತು. ಪಟ್ಟು ಬಿಡದೆ ಪ್ರಯೋಗ ಮುಂದುವರಿಸಿ, ಈ ಬಾರಿ ಶೇ 100ರಷ್ಟು ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಿಸಿದ್ದಾರೆ. ಸೆಡಿಮೆಂಟೇಶನ್‌ ವಿಧಾನದಲ್ಲಿ ಅವರು ಬೆಲ್ಲವನ್ನು ತಯಾರಿಸುತ್ತಿದ್ದಾರೆ.

‘ಶ್ರೀನಿ ಫಾರ್ಮ್‌’ ಎಂಬ ಬ್ರ್ಯಾಂಡ್‌ ಸೃಷ್ಟಿಸಿ, ಅದರ ಅಡಿಯಲ್ಲಿ ಶುದ್ಧ ನೈಸರ್ಗಿಕ ಬೆಲ್ಲದ ಪುಡಿಯನ್ನು ಮಾರಾಟ ಮಾಡುತ್ತಿದ್ದಾರೆ. ಅಂಗಡಿಗಳು, ಮಧ್ಯವರ್ತಿಗಳ ಸಹಾಯವಿಲ್ಲದೇ ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ತಲುಪಿಸುತ್ತಿದ್ದಾರೆ.

‘ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ, ಸಾವಯವ ಬೆಲ್ಲಕ್ಕಿಂತ ನೈಸರ್ಗಿಕ ಬೆಲ್ಲಕ್ಕೆ ಹೆಚ್ಚು ಬೆಲೆ ಇದ್ದರೂ, ಬೆಂಗಳೂರು, ಮುಂಬೈ, ಪುಣೆ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಬೇಡಿಕೆ ಇದೆ, ಎಲ್ಲರಿಗೂ ಕೊರಿಯರ್‌ ಮೂಲಕ ಕಳುಹಿಸುತ್ತಿದ್ದೇನೆ. ಸ್ಥಳೀಯವಾಗಿಯೂ ಗ್ರಾಹಕರು ಖರೀದಿಸುತ್ತಿದ್ದಾರೆ’ ಎಂದು ಹೇಳುತ್ತಾರೆ ಶ್ರೀನಿಧಿ.

ಉತ್ತಮ ಇಳುವರಿ: ‘ನೈಸರ್ಗಿಕ ವಿಧಾನದ ಕೃಷಿಗೆ ದೇಸಿ ಹಸುವಿನ ಸೆಗಣಿ, ಗಂಜಲ ಬಳಸಿ ಮಾಡಿದ ಜೀವಾಮೃತವನ್ನು ಬಳಸುತ್ತಿದ್ದೇನೆ. ಎರಡು ಎಕರೆ ಜಾಗವನ್ನು ಗುತ್ತಿಗೆಗೆ ಪಡೆದಿದ್ದೇನೆ. ಈಗ ಮೂರು ಎಕರೆಯಲ್ಲಿ ನನ್ನ ಕೃಷಿ ಚಟುವಟಿಕೆ ನಡೆಯುತ್ತಿದೆ. ಎರಡು ಎಕರೆಯಲ್ಲಿ ಕಬ್ಬು ಬೆಳೆಯುತ್ತೇನೆ. ಎಕರೆಗೆ 50 ಟನ್‌ವರೆಗೂ ಇಳುವರಿ ಬರುತ್ತದೆ. ವರ್ಷಕ್ಕೆ ಒಂದು ಬಾರಿ ಬೆಲ್ಲದ ಪುಡಿ ತಯಾರಿಸಿ, ನಂತರ ಮಾರಾಟ ಮಾಡುತ್ತೇನೆ’ ಎಂದು ಶ್ರೀನಿಧಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಬ್ಬಿನ ಹಾಲು ಮಾರಾಟ

ಶ್ರೀನಿಧಿ ಅವರು ಬೆಲ್ಲದ ಪುಡಿ ಮಾತ್ರವಲ್ಲದೇ, ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬಿನ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ನಗರದ ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಬಳಿ ಕಬ್ಬಿನ ಹಾಲಿನ ಅಂಗಡಿ ತೆರೆದಿದ್ದಾರೆ.ಪ್ರತಿ ದಿನ ಜಮೀನಿಂದ ಕಬ್ಬು ತಂದು ಅಂಗಡಿಗೆ ಪೂರೈಸುತ್ತಾರೆ.

‘ಇದು ಕೂಡ ನನ್ನ ಕೃಷಿ ಚಟುವಟಿಕೆಯ ಭಾಗ. ನೈಸರ್ಗಿಕ ಕಬ್ಬಿನ ಹಾಲಿನಿಂದ ಆರೋಗ್ಯಕ್ಕೆ ಸಾಕಷ್ಟು ಉಪಯೋಗ ಇದೆ. ಜನರಿಗೆ ಈ ಬಗ್ಗೆ ತಿಳಿ ಹೇಳಬೇಕಿದೆ. ಸಂಚಾರಿ ಕಬ್ಬಿನ ಹಾಲಿನ ಮಳಿಗೆಯನ್ನು ಆರಂಭಿಸುವ ಯೋಚನೆ ಇದೆ’ ಎಂದು ತಮ್ಮ ಯೋಜನೆ ವಿವರಿಸುತ್ತಾರೆ ಅವರು.

ಖುಷಿ ಇದೆ: ‘ನನ್ನ ಇದುವರೆಗಿನ ಕೃಷಿಯಿಂದ ದೊಡ್ಡ ಲಾಭ ಆಗಿದೆ ಎಂದು ನಾನು ಹೇಳುವುದಿಲ್ಲ. ಆದರೆ, ನಾನು ಮಾಡಿರುವ ಕೆಲಸದಲ್ಲಿ ಖುಷಿ ಇದೆ. ಈಗ ಕೃಷಿ, ಬೆಲ್ಲದ ಪುಡಿ ತಯಾರಿಕೆ ಹಾಗೂ ಮಾರುಕಟ್ಟೆಯ ಸಂಪೂರ್ಣ ಪರಿಚಯ ಆಗಿದೆ. ಖಂಡಿತ ಯಶಸ್ಸು ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಶ್ರೀನಿಧಿ.

* ರೈತರು ತಮ್ಮ ಬೆಳೆಯನ್ನು ಆರಂಭಿಕ ಹಂತದಲ್ಲೇ ಬ್ರ್ಯಾಂಡ್‌ ಮಾಡಬೇಕು. ಆಗ ಮಾತ್ರ ಯಶಸ್ಸು ಕಾಣಬಹುದು. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕು.

- ಶ್ರೀನಿಧಿ, ಯುವ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT