ಸೋಮವಾರ, ಸೆಪ್ಟೆಂಬರ್ 26, 2022
20 °C
ಎಪಿಎಂಸಿಯಲ್ಲಿ ಕೆಜಿಗೆ ₹3ರಿಂದ ₹5, ನಷ್ಟ ಅನುಭವಿಸುತ್ತಿರುವ ರೈತರು

ಗುಂಡ್ಲುಪೇಟೆ: ಟೊಮೆಟೊ ಬೆಲೆ ಕುಸಿತ, ಚರಂಡಿಗೆ ಎಸೆತ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಟೊಮೊಟೊ ಬೆಲೆ ತೀವ್ರ ಕುಸಿತ ಕಂಡಿರುವುದರಿಂದ ಬೆಳೆಗಾರರು ನೂರಾರು ಕೆಜಿ ಟೊಮೆಟೊವನ್ನು ರಸ್ತೆ ಬದಿ, ಮಾರುಕಟ್ಟೆ ಪ್ರಾಂಗಣದಲ್ಲೇ ಸುರಿದು ಹೋಗುತ್ತಿದ್ದಾರೆ.

ಒಂದು ತಿಂಗಳಿನಿಂದ ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಹಾಗೂ ಈ ಬಾರಿ ಟೊಮೆಟೊ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೇಡಿಕೆ ಕುಸಿದಿದೆ. ಈ ಕಾರಣದಿಂದ ಬೆಲೆಯೂ ಬಿದ್ದಿದೆ. 

ಮಂಡಿಯಲ್ಲಿ ಕೆಜಿ ಟೊಮೆಟೊಕ್ಕೆ ₹3ರಿಂದ ₹5ವರೆಗೆ ಇದೆ. ಹೊರಗಡೆ ಕೆಜಿಗೆ ₹10 ಇದೆ.

ಬೇಡಿಕೆ ಇಲ್ಲದಿರುವುದರಿಂದ ವ್ಯಾಪಾರಿಗಳು, ಮಧ್ಯವರ್ತಿಗಳು ಕಡಿಮೆ ಬೆಲೆಗೆ ಟೊಮೆಟೊ ಕೇಳುತ್ತಿದ್ದಾರೆ. ಹಾಕಿದ ಬಂಡವಾಳವೂ ಕೈಸೇರದ ಕೋಪದಲ್ಲಿ ಟೊಮೆಟೊವನ್ನು ರಸ್ತೆ ಬದಿ, ಎಪಿಎಂಸಿ ಆವರಣದಲ್ಲೇ ಸುರಿದು ಹೋಗುತ್ತಿದ್ದಾರೆ. 

ಕೇಳುವ ಬೆಲೆಗೆ ಮಾರಿದರೂ ಕಮಿಷನ್ ಹಾಗೂ ವಾಹನದ ಬಾಡಿಗೆಗೆ ಆಗುವುದಿಲ್ಲ ಆದ್ದರಿಂದ ದನಕರುಗಳಾದರೂ ತಿನ್ನಲಿ ಎಂದು ರೈತರು ಹೇಳುತ್ತಿದ್ದಾರೆ. 

ಆಟೋ ಬಾಡಿಗೆಯೂ ಬರುತ್ತಿಲ್ಲ: ಮಾರುಕಟ್ಟೆಗೆ ದೂರದ ಊರುಗಳಿಂದ ಹಲವು ರೈತರು ಆಟೊವನ್ನು ಬಾಡಿಗೆ ಮಾಡಿಕೊಂಡು ಟೊಮೆಟೊ ತರುತ್ತಿದ್ದಾರೆ. ಬೆಲೆ ಇಲ್ಲದಿರುವುದರಿಂದ ಆಟೊ ಬಾಡಿಗೆಯಷ್ಟು ಹಣವೂ ಸಿಗುತ್ತಿಲ್ಲ. ರೈತರು ಜೇಬಿನಿಂದಲೇ ಬಾಡಿಗೆ ಕೊಡುವಂತಾಗಿದೆ.

ಕೆಲ ರೈತರು ಜಮೀನಿನ ಹೊರಗೆ ಅಥವಾ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸುರಿಯುತ್ತಿದ್ದಾರೆ. ಕೆಲವರು ಜಮೀನಿನಲ್ಲಿ ಟೊಮೆಟೊ ಕಟಾವು ಮಾಡುವುದಕ್ಕೂ ಹೋಗಿಲ್ಲ. ಸಾರ್ವಜನಿಕರು ಕಿತ್ತುಕೊಂಡು ಹೋಗಲಿ ಎಂದು ಸುಮ್ಮನಾಗಿದ್ದಾರೆ.

ಎರಡು ತಿಂಗಳ ಹಿಂದೆ ₹90: ಎರಡು ತಿಂಗಳ ಹಿಂದೆ ಕೆ.ಜಿ ಟೊಮೊಟೊ ಬೆಲೆ ₹90ರವರೆಗೂ ಏರಿತ್ತು. ಆ ವೇಳೆ ಬೆಳೆ ಬೆಳೆದಿದ್ದ ರೈತರಿಗೆ ಕೆಜಿಗೆ ₹70–₹75ರವರೆಗೂ ಬೆಲೆ ಸಿಕ್ಕಿತ್ತು. ಹೆಚ್ಚಿನ ಲಾಭವನ್ನೂ ಪಡೆದರು. ಇದನ್ನು ಮನಗಂಡ ರೈತರು ನಂತರ ಟೊಮೆಟೊ ಹೆಚ್ಚು ಬೆಳೆದರು. ಇದೀಗ ಬೆಲೆ ಕುಸಿತಗೊಂಡು ನಷ್ಟ ಅನುಭವಿಸುವಂತಾಗಿದೆ.

‘ಟೊಮೆಟೊಗೆ ಹೆಚ್ಚು ಬೆಲೆ ಸಿಕ್ಕಿದ ಸಂದರ್ಭದಲ್ಲಿ ಕೆಲವರಿಗೆ ಆದ ಲಾಭವನ್ನು ಕಂಡು ರೈತರು ಹೆಚ್ಚು ಟೊಮೆಟೊ ಬೆಳೆದರು. ಇದರ ಜೊತೆಗೆ 20 ದಿನಗಳಿಂದ ಮಳೆಯಾಗಿರುವುದರಿಂದ ಬೇಡಿಕೆ ಹಾಗೂ ಬೆಲೆ ದಿಢೀರ್‌ ಕುಸಿದಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಶ್ರೀಧರ್‌ ಅವರು ತಿಳಿಸಿದರು. 

‘ಬೆಂಬಲ ಬೆಲೆ ಬೇಕು’
‘ರೈತ ಬೆಳೆದ ಬೆಳೆಗೆ ಒಂದಿಲ್ಲೊಂದು ಸಂದರ್ಭದಲ್ಲಿ ಬೆಲೆ ಸಿಗದೆ ನಷ್ಟವಾಗುತ್ತಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಬೆಳೆದ ಪ್ರತಿಯೊಂದು ವಸ್ತುವಿಗೂ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ರೈತರು ಇನ್ನಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಹೇಳಿದರು.

‘ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ₹50 ಸಾವಿರ ಖರ್ಚು ಆಗುತ್ತದೆ. ಆದರೆ, ಈ ಸಂದರ್ಭದಲ್ಲಿ ಕಿತ್ತು ಇಳುವರಿ ಬಿದ್ದರೂ ಹಾಕಿದ ಬಂಡವಾಳ ಸಿಗುವುದಿಲ್ಲ ಎಂದು ರೈತರು ಟೊಮೆಟೊ ಕೀಳುತ್ತಿಲ್ಲ. ಕೆಜಿಗೆ ₹20 ಸಿಕ್ಕರೆ ಮಾತ್ರ ಲಾಭ ಕಾಣಬಹುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು