ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಮಳೆ: ರಾಗಿ ಕೊಯ್ಲಿಗೆ ತೊಂದರೆ

ಮಹದೇಶ್ವರ ಬೆಟ್ಟ; ರೈತರು ಕಂಗಾಲು, ಫಸಲು ಕೈತಪ್ಪಿ ಹೋಗುವ ಆತಂಕ
Last Updated 18 ನವೆಂಬರ್ 2020, 12:44 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾರದಿಂದೀಚೆಗೆ ಪ್ರತಿ ದಿನ ಮಳೆಯಾಗುತ್ತಿದ್ದು, ರಾಗಿ ಕೊಯ್ಲಿಗೆ ತೊಂದರೆಯಾಗಿದೆ.

ನಿರಂತರ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ರಾಗಿ ಬೆಳೆ ನೆಲಕ್ಕೆ ಬಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುವಆತಂಕವನ್ನು ಎದುರಿಸುತ್ತಿದ್ದಾರೆ.

ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಿಂಗಾರು ಬಿತ್ತನೆ ಆಗಸ್ಟ್‌ ತಿಂಗಳಲ್ಲೇ ಆರಂಭವಾಗಿದ್ದು, ಬೆಟ್ಟದ ವ್ಯಾಪ್ತಿಯಲ್ಲೂ ಹಲವು ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ನವೆಂಬರ್‌ 2ನೇ ವಾರದಲ್ಲಿ ಕೊಯ್ದು ಮಾಡಬೇಕಿತ್ತು. ಆದರೆ, ಐದಾರು ದಿನಗಳಿಂದ ಪ್ರತಿ ದಿನ ಮಳೆ ಸುರಿಯುತ್ತಿರುವುದರಿಂದ ಕೊಯ್ಲು ಮಾಡಲು ಆಗುತ್ತಿಲ್ಲ. ಕೆಲವು ಜಮೀನುಗಳಲ್ಲಿ ರಾಗಿ ಪೈರು ಮಳೆ ಗಾಳಿಗೆ ನೆಲಕ್ಕೆ ಬಾಗಿವೆ. ಇದರಿಂದ ಬೆಳೆ ನಷ್ಟ ಅನುಭವಿಸುವ ಭೀತಿಯನ್ನು ಬೆಳೆಗಾರರು ಎದುರಿಸುತ್ತಿದ್ದಾರೆ.

‘ಕಳೆದ ವರ್ಷವೂ ಇದೇ ರೀತಿ ಮಳೆಯಾಗಿ ಬಿತ್ತನೆ ಮಾಡಿದ್ದ ರಾಗಿ ಬೆಳೆ ಹಾಳಾಗಿತ್ತು. ಅರ್ಧ ಬೆಳೆ ಮಾತ್ರ ನಮ್ಮ ಕೈ ಸೇರಿತ್ತು. ಈ ವರ್ಷವೂ ಅದೇ ರೀತಿ ಆಗುವ ಭೀತಿ ಇದೆ. ಒಂದು ವಾರದಿಂದ ಮಳೆಯಾಗುತ್ತಿದ್ದು, ರಾಗಿ ಬೆಳೆ ನೆಲಕ್ಕಚ್ಚಿದೆ. ಈಗಾಗಲೇ ಕೊಯ್ಲು ಮುಗಿಯಬೇಕಿತ್ತು. ಮಳೆಯಿಂದಾಗಿ ಆಗುತ್ತಿಲ್ಲ’ ಎಂದು ಸ್ಥಳೀಯ ರೈತ ಚಿಕ್ಕಮಾದು ಅವರು ‘ಪ್ರಜಾವಾಣಿ’ ಮುಂದೆ ಕಳವಳ ವ್ಯಕ್ತಪಡಿಸಿದರು.

‘ಮಳೆ ಒಂದು ದಿನ ಬಿಡುವು ನೀಡಿದ್ದರೂ ಸಾಕಿತ್ತು. ಉತ್ತಮ ಫಸಲು ಕೈ ಸೇರುತ್ತಿತ್ತು. ಮಳೆ ನಿಲ್ಲುತ್ತಿಲ್ಲ. ಇದೇ ರೀತಿ ಮುಂದುವರಿದರೆ ಎಲ್ಲ ಬೆಳೆ ನಾಶವಾಗುವ ಆತಂಕ ಎದುರಾಗಿದೆ. ಕೃಷಿ ಇಲಾಖೆ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು, ‘ಕೆಲವು ಭಾಗದಲ್ಲಿ ಉತ್ತಮವಾಗಿ ಹಿಂಗಾರು ಮಳೆಯಾಗುತ್ತಿದೆ. ಮಳೆಯಿಂದಾಗಿ ಇದುವರೆಗೆ ಎಲ್ಲೂ ಬೆಳೆ ಹಾನಿಯಾಗಿಲ್ಲ. ಜಿಲ್ಲೆಯಲ್ಲಿ ರಾಗಿ ಬೆಳಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಎಡೆಬಿಡದೆ ಮಳೆಯಾಗುತ್ತಿಲ್ಲ. ಹಾಗಾಗಿ, ಬೆಳೆಗೆ ಹಾನಿಯಾಗುವ ಸಾಧ್ಯತೆ ಕಡಿಮೆ. ಒಂದೆರಡು ದಿನ ಮಳೆ ಬಂದರೂ ನಂತರ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ರೈತರು ಆತಂಕ ಪಡಬೇಕಾಗಿಲ್ಲ. ಬಿಸಿಲು ಬಂದ ತಕ್ಷಣ ಅದು ಸರಿಯಾಗುತ್ತದೆ. ಈ ಮಳೆ ಬೆಳೆಗಳಿಗೆ ಒಳ್ಳೆಯದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT