ಗುರುವಾರ , ಅಕ್ಟೋಬರ್ 21, 2021
27 °C
ತಿಂಗಳಿನಿಂದ ಉಮ್ಮತ್ತೂರು ಕೆರೆಗೆ ಹರಿಯುತ್ತಿದೆ ಕಪಿಲೆಯ ನೀರು, ಅರ್ಧಕ್ಕೂ ಹೆಚ್ಚು ಭರ್ತಿ

ಸಂತೇಮರಹಳ್ಳಿ: ಕೆರೆಯಲ್ಲಿ ಜಲರಾಶಿ; ಅನ್ನದಾತನ ಹರ್ಷ

ಮಹದೇವ್‌ ಹೆಗ್ಗವಾಡಿಪುರ‌ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಸುತ್ತೂರು ಬಳಿಯ ಕಪಿಲಾ ನದಿಯಿಂದ ಉಮ್ಮತ್ತೂರು ದೊಡ್ಡಕೆರೆಗೆ ಒಂದು ತಿಂಗಳಿನಿಂದ ನೀರು ಹರಿಯುತ್ತಿದ್ದು, ಕೆರೆ ಅರ್ಧಕ್ಕಿಂತಲೂ ಹೆಚ್ಚು ಭರ್ತಿಯಾಗಿದೆ. ಇನ್ನೂ ಮೂರ್ನಾಲ್ಕು ವಾರಗಳಲ್ಲಿ ಕೆರೆ ಕೋಡಿ ಬೀಳುವ ನಿರೀಕ್ಷೆ ಇದೆ. 

ದೀರ್ಘ ಹೋರಾಟದ ನಂತರ ಕೆರೆಗೆ ನೀರು ಹರಿಸಲು ಉಮ್ಮತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಯಶಸ್ವಿಯಾಗಿದ್ದು, ಕೆರೆಯಲ್ಲಿ ಜಲರಾಶಿ ಹೆಚ್ಚಾಗುತ್ತಿರುವುದನ್ನು ಕಂಡು ಗ್ರಾಮದ ರೈತರು ಸಂಭ್ರಮಿಸುತ್ತಿದ್ದಾರೆ. ಪ್ರತಿ ನಿತ್ಯ ಕೆರೆಗೆ ನೀರು ತುಂಬುವ ಸೊಬಗನ್ನು ಕಣ್ತುಂಬಿಕೊಳ್ಳಲು ಹತ್ತಾರು ಜನರು ಬರುತ್ತಿದ್ದಾರೆ. 

ಒಂದು ಕಾಲದಲ್ಲಿ ನೂರಾರು ಎಕರೆಗೆ ನೀರುಣಿಸುತ್ತಿದ್ದ ದೊಡ್ಡ ಕೆರೆಯ ವಿಸ್ತೀರ್ಣ 350 ಎಕರೆ ಇದೆ. ಹಾಗಾಗಿ ಕೆರೆ ಭರ್ತಿಯಾಗಲು ಇನ್ನಷ್ಟು ಸಮಯ ಬೇಕು. ಕೆರೆಯ ಅಂಗಳದಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆ ಕಟಾವು ಮಾಡಿಲ್ಲ. ನೀರು ತುಂಬಿಕೊಂಡು ಬರುತ್ತಿದ್ದಂತೆಯೇ ಮರಗಳು ಮುಳುಗುತ್ತಿದ್ದು, ರೆಂಬೆಗಳು ಮಾತ್ರ ಕಾಣಿಸುತ್ತಿವೆ. 

ಸುತ್ತೂರು ಏತ ನೀರಾವರಿ ಯೋಜನೆಗೆ 2017ರಲ್ಲಿ ಚಾಲನೆ ನೀಡಿದ್ದರೂ, ನಿಧಾನಗತಿ ಕಾಮಗಾರಿಯಿಂದ ಯೋಜನೆ ಅನುಷ್ಠಾನ ವಿಳಂಬವಾಗಿತ್ತು. ಸರ್ಕಾರ, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಲು ಗ್ರಾಮಸ್ಥರು ಹಾಗೂ ರೈತರು ಪದೇ ಪದೇ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರು. ಕೊನೆ ಹಂತದಲ್ಲೂ ಅಧಿಕಾರಿಗಳು ನೀಡಿದ ಗಡುವಿಗೆ ಸರಿಯಾಗಿ ನೀರು ಹರಿಸದೇ ಇದ್ದಾಗ ಗ್ರಾಮಸ್ಥರು ಆಹೋರಾತ್ರಿ ಧರಣಿ ಕುಳಿತು ಆಡಳಿತ ಹಾಗೂ ಅಧಿಕಾರಕ್ಕೆ ಬಿಸಿಮುಟ್ಟಿಸಿದ್ದರು. 

ಅಂತರ್ಜಲ ಹೆಚ್ಚುವ ವಿಶ್ವಾಸ: ಇದೀಗ ಕೆರೆ ಭರ್ತಿಯಾಗುವತ್ತ ದಾಪುಗಾಲು ಇಟ್ಟಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಕೆರೆಯಲ್ಲಿ ನೀರಿನ ಸಂಗ್ರಹದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿ ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ಮತ್ತೆ ನೀರಿನ ಸೆಲೆ ಒಸರಲಿದೆ ಎಂಬ ನಿರೀಕ್ಷೆಯಲ್ಲಿದೆ. ಈಗಾಗಲೇ ಕೆರೆಯ ಮಗ್ಗುಲಲ್ಲಿರುವ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಾದ ಅನುಭವವಾಗುತ್ತಿದೆ. 

‘ಮತ್ತೆ ವ್ಯವಸಾಯಕ್ಕೆ ಮುಂದಾದ ರೈತರು’
‘ಬಹು ದಿನಗಳಿಂದ ನಡೆದಿದ್ದ ಕೆರೆಗೆ ನೀರು ತುಂಬಿಸುವ ಹೋರಾಟ ಈಗ ಯಶಸ್ವಿಯಾಗಿದೆ. ಇದರಿಂದ ಉಮ್ಮತ್ತೂರು ಸೇರಿದಂತೆ ಸುತ್ತಮುತ್ತಲಿನ ಜನರು ಸಂತಸಗೊಂಡಿದ್ದಾರೆ. ಜತೆಗೆ ಅಂತರ್ಜಲ ವೃದ್ಧಿಯಾಗುತ್ತಿದೆ. ಈ ವಿಚಾರದಲ್ಲಿ ಹೋರಾಟಗಾರರು ಹಾಗೂ ಸ್ಥಳೀಯ ಶಾಸಕರನ್ನು ಅಭಿನಂದಿಸಬೇಕಾಗಿದೆ’ ಎಂದು ಕೆರೆ ಅಭಿವೃದ್ಧಿ ಹೋರಾಟ ಸಮಿತಿಯ ಚಿಕ್ಕಬಸಪ್ಪ ಹೇಳುತ್ತಾರೆ.

‘ಗ್ರಾಮದ ಕೆರೆಗೆ ನೀರು ತುಂಬುತ್ತಿರುವುದರಿಂದ ಅಂತರ್ಜಲ ವೃದ್ಧಿಸುತ್ತಿದೆ. ಸುತ್ತಮುತ್ತಲಿನ ಗ್ರಾಮದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಪಟ್ಟಣ ಪ್ರದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದ ಜನರು ಮತ್ತೆ ಗ್ರಾಮಕ್ಕೆ ವಾಪಸ್ ಬಂದು ವ್ಯವಸಾಯ ಮಾಡಲು ಮುಂದಾಗಿದ್ದಾರೆ. ಇದು ನಮ್ಮ ಗ್ರಾಮಕ್ಕೆ ಸಂತಷದ ವಿಷಯ’ ಎಂದು ಮುಖಂಡ ಸೋಮಣ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.