ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ವನ್ಯ ಜೀವಿಗಳ ಉಪಟಳ ತಡೆಯುವ 'ಡಬ್ಬ'

ಉಪಾಯ ಕಂಡುಕೊಂಡ ಬಿಆರ್‌ಟಿ ಕಾಡಂಚಿನ ಕೃಷಿಕರು
Last Updated 27 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಯಳಂದೂರು:ಕಾಡಂಚಿನ ಗ್ರಾಮಗಳ ರೈತರು ವನ್ಯ ಜೀವಿಗಳ ಹಾವಳಿ ತಡೆಗೆ ನವನವೀನ ತಂತ್ರಗಳನ್ನುಹುಡುಕುತ್ತಲೇ ಬಂದಿದ್ದಾರೆ. ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ರೈತರು ಕೂಡ ಇಂತಹ ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

'ನೋ ಕಾಸ್ಟ್ ಮತ್ತು ಲೋ ಕಾಸ್ಟ್' (ಖರ್ಚು ರಹಿತ ಮತ್ತು ಕಡಿಮೆ ಖರ್ಚು)ನಲ್ಲಿ ಲಭ್ಯವಿರುವ ಅನುಪಯುಕ್ತ ವಸ್ತುಗಳನ್ನೇ ತಮ್ಮ ಪ್ರಯೋಗಕ್ಕೆ ಬಳಸುತ್ತಿದ್ದಾರೆ.

ತಾಲ್ಲೂಕಿನ ಕಾನನದಂಚಿನ ಗ್ರಾಮಗಳು, ಹಾಡಿ ಮತ್ತು ಅಣೆಕಟ್ಟೆ, ಜಲಾವರಗಳ ಸಮೀಪದ ಕೃಷಿಭೂಮಿಯ ಸುತ್ತಲೂ ತಂತಿಗಳನ್ನು ಎಳೆದು ಕಟ್ಟುವ ಪದ್ಧತಿ ಇದೆ. ಇದು ಹಂದಿ,ಜಿಂಕೆಗಳನ್ನು ಹೊಲಗಳತ್ತ ನುಸುಳದಂತೆ ತಡೆಯುತ್ತದೆ. ಆದರೆ, ಆನೆ, ಕಡವೆ, ಕರಡಿಗಳ ನಿಯಂತ್ರಣ ಕಷ್ಟ. ಇವುಗಳು ಯಾವ ಹೊತ್ತಿಗೆ ಜಮೀನುಗಳಿಗೆ ನುಗ್ಗುತ್ತವೆ ಎಂಬುದೇ ಗೊತ್ತಾಗುವುದಿಲ್ಲ. ಯಾವುದೇ ಪ್ರಾಣಿಗಳು ಹೊಲ ಗದ್ದೆಗಳಿಗೆ ಪ್ರವೇಶಿಸಿದ ತಕ್ಷಣ ತಿಳಿಯಬೇಕು ಎಂಬ ಉದ್ದೇಶದಿಂದ, ಶಬ್ದ ಹೊಮ್ಮಿಸುವ ಖಾಲಿ ಡಬ್ಬಗಳನ್ನು ತಂತಿಗೆ ಸೇರಿಸುತ್ತಿದ್ದಾರೆ.

ಪ್ರಾಣಿಗಳು ತಂತಿ ಬೇಲಿಯ ಮೂಲಕ ಜಮೀನುಗಳಿಗೆ ನುಗ್ಗುವಾಗ ಡಬ್ಬಗಳು ಶಬ್ದ ಮಾಡುತ್ತವೆ. ಇದರಿಂದ ಪ್ರಾಣಿಗಳು ಬಂದಿರುವುದು ಗೊತ್ತಾಗುತ್ತದೆ. ಶಬ್ದ ಕೇಳಿ ಪ್ರಾಣಿಗಳು ಭಯ ಬಿದ್ದು ವಾಪ‍ಸ್ ಹೋಗುವ ಸಾಧ್ಯತೆಯೂ ಇರುತ್ತದೆ ಎಂದು ಹೇಳುತ್ತಾರೆ ರೈತರು.

‘ಕೆಲವರು ಡಬ್ಬದ ಎರಡು ಬದಿಗೆ ತಂತಿ ಬಿಗಿದು ಕಟ್ಟುತ್ತಾರೆ. ಗಾಜಿನ ಸೀಸ, ಬಾಟಲಿ ಮತ್ತು ಗಂಟೆಗಳನ್ನು ಬಳಕೆ ಮಾಡುವವರು ಇದ್ದಾರೆ. 100 ಮೀಟರ್‌ ತಂತಿಗೆ ಇಂತಹ ಹಳೆಯವಸ್ತುಗಳನ್ನು ಸೇರಿಸಿ ಜಮೀನು ಸುತ್ತಲೂ, ಭೂಮಿಯಿಂದ 1 ಇಲ್ಲವೇ 2 ಮೀಟರ್ ಎತ್ತರ ಇರುವಂತೆ ಬಿಗಿಯುತ್ತಾರೆ. ರಾತ್ರಿ ಅಥವಾ ಹಗಲಿನಲ್ಲಿ ಆಹಾರ ಅರಸುತ್ತ ಜಮೀನುಗಳ ಬಳಿಬರುವ ಪ್ರಾಣಿಗಳು ಈ ತಂತಿಗೆ ಸ್ಪರ್ಶ ಮಾಡುತ್ತವೆ. ಪ್ರಾಣಿಗಳ ಕಾಲು ಇಲ್ಲವೇ ದೇಹಸಿಲುಕಿದ ತಕ್ಷಣ ತಂತಿಗೆ ಬಿಗಿದ ನೂರಾರು ಡಬ್ಬಗಳು ವಿಚಿತ್ರ ಶಬ್ದ ಹೊಮ್ಮಿಸುತ್ತವೆ. ಇದರಿಂದಲೇ ಕಾಡು ಪ್ರಾಣಿಗಳ ಆಗಮನದ ಬಗ್ಗೆ ರೈತರು ತಿಳಿದು, ಮುನ್ನೆಚ್ಚರಿಕೆವಹಿಸಬಹುದು’ ಎನ್ನುತ್ತಾರೆ ಈರನದೊಡ್ಡಿ ಮಾದೇಗೌಡ.

‘ನಮ್ಮ ಮನೆ ಮತ್ತು ಹೊಲ ಕಾಡಿನಬಳಿ ಇದೆ. ಆನೆ ಮತ್ತು ಕರಡಿಗಳು ಸಮೀಪದಲ್ಲಿಅಡ್ಡಾಡುತ್ತವೆ. ರಾತ್ರಿ ವೇಳೆ ಇವುಗಳ ಉಪಟಳ ಹೆಚ್ಚು. ಈ ವಿಧಾನದಿಂದ ಅರಣ್ಯಗಳಿಂದಬರುವ ಜೀವಿಗಳನ್ನು 100 ಮೀಟರ್ ದೂರದಲ್ಲಿ ಗುರುತಿಸಬಹುದು. ಪ್ರಾಣಿಗಳ ದೇಹಕ್ಕೆಡಬ್ಬಗಳು ತಗುಲಿ ತಂತಿಗಳಲ್ಲಿ ಚಲಿಸುವಾಗ ನಾದಮಯ ತರಂಗ ಕೇಳಿ ಬರುತ್ತದೆ. ಇಂತಹವಿಚಿತ್ರ ಸದ್ದಿಗೆ ಬೆದರುವ ಜೀವಿಗಳು ವಾಪಸ್ ಕಾಡಿನೊಳಗೆ ತೆರಳುವುದೂ ಇದೆ’ ಎನ್ನುತ್ತಾರೆ ಹಿಡುವಳಿದಾರರು.

ಸುಲಭ ಉಪಾಯ; ಹಲವು ಲಾಭ

‘ತಂತಿಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕಿಲ್ಲ. ಹೆಚ್ಚು ವೆಚ್ಚ ಮಾಡಬೇಕಿಲ್ಲ. ಬಿಸಾಡಿದತಂತಿ ಮತ್ತು ಡಬ್ಬಗಳನ್ನೇ ಬಳಸಿ ಪ್ರಾಣಿಗಳನ್ನು ಓಡಿಸಬಹುದು. ದೂರದಿಂದ ಅಪಾಯಕಾರಿಪ್ರಾಣಿಗಳನ್ನು ವೀಕ್ಷಿಸಬಹುದು. ಆ ಮೂಲಕ ಅರಣ್ಯ ಸಂರಕ್ಷಕರ ಗಮನಕ್ಕೂ ವನ್ಯಜೀವಿಗಳಉಪಟಳದ ಬಗ್ಗೆ ತಿಳಿಸಬಹುದು. ಪರಿಸರ ಸ್ನೇಹಿ ವಿಧಾನದಲ್ಲಿ ಫಸಲು ಉಳಿಸಿಕೊಳ್ಳಲುನೆರವಾಗಬಲ್ಲದು’ ಎಂದು ಗೌಡಹಳ್ಳಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇಸಿಗೆ, ಮಳೆಗಾಲದಲ್ಲಿ ಇಂತಹ ತಂತ್ರ ಬಹು ಉಪಯುಕ್ತ. ಕೇಳಿ ಬರುವ ಸದ್ದಿನ ಪ್ರಮಾಣ ಗಮನಿಸಿ ಯಾವ ಪ್ರಾಣಿ ಬಂದಿರಬಹುದು ಎಂದು ಅಂದಾಜಿಸಬಹುದು. ಹೊಲ, ಗದ್ದೆಗಳನಿರ್ವಹಣೆಗೆ ತೆರಳುವವರಿಗೆ ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ.ಅಟ್ಟಣಿಗೆಯಲ್ಲಿ ಕುಳಿತವರಿಗೆ ಇಲ್ಲವೇ ಗುಡಿಸಲಲ್ಲಿ ವಾಸಿಸುವ ಮಂದಿಗೂ ವನ್ಯಜೀವಿಗಳಬಗ್ಗೆ ತಿಳಿಯಲು ಸಾಧ್ಯ’ ಎಂದು ಪುರಾಣಿಪೋಡು ರಂಗಮ್ಮ ಉಪಾಯದ ಪ್ರಯೋಜನಗಳನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT