ಚಾಮರಾಜನಗರ: ಯುಗಾದಿ ಹಬ್ಬ ಮುಗಿದ ಕೂಡಲೇ ಕೃಷಿಕರ ದೃಷ್ಟಿ ಆಗಸದತ್ತ ನೆಟ್ಟಿರುತ್ತದೆ. ಮುಂಗಾರು ಪೂರ್ವ ಕೃಷಿ ಚಟುವಟಿಕೆ ಆರಂಭಿಸುವ ಸಮಯ. ಹಾಗಾಗಿ, ಮಳೆಯ ನಿರೀಕ್ಷೆಯಲ್ಲಿ ಕೃಷಿಕರು ಇರುತ್ತಾರೆ.
ಎರಡು ವಾರಗಳಿಂದ ಜಿಲ್ಲೆಯಲ್ಲಿ ಸುಡು ಬಿಸಿಲು ಹೆಚ್ಚಾಗಿದ್ದರೂ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಹಾಗಾಗಿ, ಕೆಲವು ರೈತರು ಮುಂಗಾರು ಪೂರ್ವ ಮಳೆಯ ನಿರೀಕ್ಷೆಯಲ್ಲಿ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕೊಳವೆ ಬಾವಿ, ನೀರಾವರಿ ವ್ಯವಸ್ಥೆ ಇರುವ ರೈತರಿಗೆ ಸಮಸ್ಯೆ ಇಲ್ಲ. ಆದರೆ, ಮಳೆ ನೀರನ್ನೇ ಅವಲಂಬಿಸಿ ಕೃಷಿ ಮಾಡುವವರಿಗೆ ವರುಣನ ಕೃಪೆ ಇರಲೇ ಬೇಕು.
ಕೃಷಿ ಇಲಾಖೆ ಕೂಡ ಮುಂಗಾರು ಪೂರ್ವ ಕೃಷಿ ಚಟುವಟಿಕೆಗೆ ಪೂರಕವಾದ ಸಿದ್ಧತೆ ಆರಂಭಿಸಿದೆ. ಈ ಬಾರಿ ಜೂನ್‌ಗಿಂತಲೂ ಮೊದಲು ಜಿಲ್ಲೆಯಾದ್ಯಂತ 54,440 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ.
ಮುಂಗಾರಿಗೂ ಮೊದಲು ರೈತರು ಜಿಲ್ಲೆಯಲ್ಲಿ ಹತ್ತಿ, ಸೂರ್ಯಕಾಂತಿ, ಉದ್ದು ಅಲಸಂದೆ, ಹೆಸರು, ಕಡಲೆಕಾಯಿ, ಕಬ್ಬು, ಮುಸುಕಿನ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತಾರೆ. ಮುಸುಕಿನ ಜೋಳವನ್ನು ಕೆಲವು ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ.
ಕೃಷಿ ಇಲಾಖೆ ಬಿತ್ತನೆ ಬೀಜ ಪೂರೈಕೆಗೆ ಸಿದ್ಧತೆ ಮಾಡಿಕೊಂಡಿದ್ದು, ಬೇಡಿಕೆಯನ್ನು ಸಲ್ಲಿಸಿದೆ. ಈ ಬಾರಿ ಎಲ್ಲ ಬೆಳೆಗಳು ಸೇರಿ 3,200 ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 11,500 ಟನ್‌ಗಳಷ್ಟು ರಸಗೊಬ್ಬರವನ್ನೂ ದಾಸ್ತಾನು ಇಡಲಾಗಿದೆ.
‘ಜಿಲ್ಲೆಯಲ್ಲಿ ಸಾಮಾನ್ಯವಾಗಿ ಏಪ್ರಿಲ್ ಮೊದಲ ವಾರ ಇಲ್ಲವೇ 2ನೇ ವಾರದಿಂದ ಮುಂಗಾರು ಪೂರ್ವ ಕೃಷಿ ಚಟುವಟಿಕೆ ಆರಂಭವಾಗುತ್ತದೆ. ಗುಂಡ್ಲುಪೇಟೆ ಭಾಗದಲ್ಲಿ ಮೊದಲು ಆರಂಭಗೊಂಡು, ನಂತರ ಇತರ ಕಡೆಗಳಲ್ಲೂ ಶುರುವಾಗುತ್ತದೆ. ಆರಂಭದಲ್ಲಿ ಸೂರ್ಯಕಾಂತಿ, ಹತ್ತಿ ಬಿತ್ತನೆ ಆರಂಭಿಸುತ್ತಾರೆ. ನಂತರ ಉಳಿದ ಬೆಳೆಗಳನ್ನು ಬಿತ್ತನೆ ಮಾಡುತ್ತಾರೆ’ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.
ಗುಂಡ್ಲುಪೇಟೆಯಲ್ಲಿ ಹೆಚ್ಚು: ಐದು ತಾಲ್ಲೂಕುಗಳ ಪೈಕಿ ಮುಂಗಾರು ಪೂರ್ವದಲ್ಲಿ ಗುಂಡ್ಲುಪೇಟೆಯಲ್ಲಿ ಹೆಚ್ಚು ವಿಸ್ತೀರ್ಣದಲ್ಲಿ ಬಿತ್ತನೆ ನಡೆಯುತ್ತದೆ. ಈ ಬಾರಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿಯನ್ನು ಇಲಾಖೆ ಹೊಂದಿದೆ. ರೈತರು ಸೂರ್ಯಕಾಂತಿಯನ್ನು ಹೆಚ್ಚು ಬೆಳೆಯುತ್ತಿದ್ದು, ಕಳೆದ ವಾರಿ 16,600 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿತ್ತು.
ಮಳೆಯ ನಿರೀಕ್ಷೆ: ಒಂದೆರಡು ಮಳೆ ಹನಿ ಬೀಳುತ್ತಿದ್ದಂತೆಯೇ ರೈತರು ಕೃಷಿ ಸಿದ್ಧತೆ ಆರಂಭಿಸಿದ್ದಾರೆ. ಆದರೆ, ಕೃಷಿ ಚಟುವಟಿಕೆಗೆ ಬೇಕಾದಷ್ಟು ಮಳೆಯಾಗಿಲ್ಲ. ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಜನವರಿ 1ರಿಂದ ಇಲ್ಲಿಯವರೆಗೆ ವಾಡಿಕೆಯಲ್ಲಿ 1.8 ಸೆಂ.ಮೀ ಮಳೆಯಾಗುತ್ತದೆ. ಆದರೆ, ಈ ಬಾರಿ 1.3 ಸೆಂ.ಮೀ ಮಾತ್ರ ಆಗಿದೆ. ಶೇ 18ರಷ್ಟು ಮಳೆ ಕೊರತೆ ಇದೆ. ಮಾರ್ಚ್ ತಿಂಗಳಲ್ಲಿ 1.1 ಸೆಂ.ಮೀವರಗೆ ಮಳೆಯಾಗುತ್ತದೆ. ಈ ಸಲ 0.9 ಸೆಂ.ಮೀನಷ್ಟು ಮಳೆ ಬಿದ್ದಿದೆ.
ಎರಡು ಮೂರು ದಿನಗಳಿಂದ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಏಪ್ರಿಲ್ ವೇಳೆಗೆ ಮುಂಗಾರು ಪೂರ್ವ ಮಳೆಯಾಗುವ ನಿರೀಕ್ಷೆ ಇದ್ದು, ಕೃಷಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ರೈತರು ಇದ್ದಾರೆ.
ಅರಿವು ಮೂಡಿಸಿ
ಪೂರ್ವ ಮುಂಗಾರು ಆರಂಭವಾಗುವ ಮುನ್ನ ಕೃಷಿ ಅಧಿಕಾರಿಗಳು ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕಗಳನ್ನು ಶೇಖರಿಸಿಕೊಂಡಿರಬೇಕು. ಮಳೆ ಬಿದ್ದ ನಂತರ ಸಕಾಲದಲ್ಲಿ ಪ್ರತಿ ರೈತರಿಗೆ ಕೃಷಿ ಸಲಕರಣೆ ಹಾಗೂ ಸವಲತ್ತು ದೊರಕಬೇಕು. ಜತೆಗೆ ಕೃಷಿ ವಿಜ್ಞಾನಿಗಳ ಮೂಲಕ ಯಾವ ಬೆಳೆ ಬೆಳೆದರೆ ಸೂಕ್ತ. ಬೀಜೋಪಚಾರದ ಬಗ್ಗೆ ಮುಂಜಾಗೃತವಾಗಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು.
ಎಂ.ಬಿ.ಕುಮಾರ್, ಸಂತೇಮರಹಳ್ಳಿ, ಚಾಮರಾಜನಗರ ತಾಲ್ಲೂಕು
ಮುಸುಕಿನ ಜೋಳಕ್ಕೆ ಒತ್ತು
ಈಗಾಗಲೇ ಮುಸುಕಿನ ಜೋಳ ಬಿತ್ತನೆ ನಡೆಸಿದ್ದೇವೆ. ಬೇಸಿಗೆ ತಾಪ ಹೆಚ್ಚಾಗಿದ್ದು, ಇತರ ಬೆಳೆಗಳನ್ನು ನಾಟಿ ಮಾಡಲು ರೈತರು ಹಿಂದೇಟು ಹಾಗುವಂತಾಗಿದೆ. ಮಳೆ ನಂತರ ಇತರ ಬೆಳೆಗಳನ್ನು ನಾಟಿ ಮಾಡಲು ಸಿದ್ಧತೆ ನಡೆಸಬೇಕಾಗಿದೆ.
ಶಿವರಾಜು, ಕೋಮರನಪುರ, ಯಳಂದೂರು ತಾಲ್ಲೂಕು
ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ
ಕೃಷಿ ಚಟುವಟಿಕೆ ಆರಂಭಿಸಲು ಮಳೆ ಬರುವುದಕ್ಕೆ ಕಾಯುತ್ತಿದ್ದೇವೆ. ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳಿಗೆ ಕೊರತೆಯಾಗದಂತೆ ಕೃಷಿ ಇಲಾಖೆ ನೋಡಿಕೊಳ್ಳಬೇಕು. ಸಮರ್ಪಕ ಸಮಯದಲ್ಲಿ ಬಿತ್ತನೆ ಬೀಜ ಸಿಗದಿದ್ದರೆ ರೈತರಿಗೆ ತೊಂದರೆಯಾಗುತ್ತದೆ
ಮಹೇಶ್ ಕುಮಾರ್, ಸಿದ್ದಯ್ಯನಪುರ, ಕೊಳ್ಳೇಗಾಲ ತಾಲ್ಲೂಕು
ಸಿದ್ಧತೆ ಆರಂಭಿಸಿಲ್ಲ
ಈ ಬಾರಿ ತೋಟಗಾರಿಕಾ ಬೆಳೆಯನ್ನು ಬಿಟ್ಟು ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳನ್ನು ಆರಂಭಿಸಿಲ್ಲ. ಶ್ರಮಿಕರ ಕೊರತೆ, ವೈಜ್ಞಾನಿಕ ಬೆಲೆ ಇಲ್ಲದಿರುವುದು ಹಾಗೂ ಆಗಾಗ ಕಾಡುವ ನೆರೆಯಿಂದಾಗಿ ಬಿತ್ತನೆ ತಡವಾಗಿದೆ.
ವಿಜಯ್, ಚಮಲಾಪುರ, ಯಳಂದೂರು ತಾಲ್ಲೂಕು
‘ಏಪ್ರಿಲ್ ಆರಂಭದಿಂದ ಬಿತ್ತನೆ ಬೀಜ ವಿತರಣೆ’
ಮುಂಗಾರು ಪೂರ್ವ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲೂ ಮಳೆಯಾಗಿಲ್ಲ. ಸಾಮಾನ್ಯವಾಗಿ ಏಪ್ರಿಲ್ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಬಿತ್ತನೆ ಆರಂಭಿಸುತ್ತಾರೆ. ರೈತರಿಗೆ ಬಿತ್ತನೆ ಬೀಜ ವಿತರಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ವಿವಿಧ ಬೆಳೆಗಳ ಬೀಜಗಳಿಗೆ ಬೇಡಿಕೆ ಇಟ್ಟಿದ್ದೇವೆ. ವಿತರಣೆಗೆ ಟೆಂಡರ್ ಪ‍್ರಕ್ರಿಯೆ ನಡೆಯುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನು ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂದನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಿದ್ಧತೆ ಆರಂಭ
ಬಿತ್ತನೆ ಬೀಜ ವಿತರಿಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಕಬ್ಬು ಬಾಳೆ ಮುಸುಕಿನ ಜೋಳದ ಬಿತ್ತನೆ ನಡೆದಿದೆ. ನೀರಾವರಿ ಪ್ರದೇಶದಲ್ಲಿ ಉದ್ದು ಹಸಿರು ಹಲಸಂದೆ ಸೇರಿದಂತೆ ರಾಗಿ ಭತ್ತ ನಾಟಿಗೆ ಬೀಜವನ್ನು ವಿತರಿಸುವ ಕಾರ್ಯ ಆರಂಭಿಸಲಾಗುತ್ತದೆ. ಯಳಂದೂರು ತಾಲ್ಲೂಕಿನಲ್ಲಿ 3000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.
ನಿರ್ವಹಣೆ:
ಸೂರ್ಯನಾರಾಯಣ ವಿ.
ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್ ಪ್ರಕಾಶ್ ವಿ., ಮಲ್ಲೇಶ ಎಂ., ಮಹದೇವ್ ಹೆಗ್ಗವಾಡಿಪುರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.