ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಡ್ಡಿ ಮನ್ನಾಗೆ ಆಗ್ರಹಿಸಿ ರೈತರ ಪ್ರತಿಭಟನೆ

ಪಿಎಲ್‌ಡಿ ಬ್ಯಾಂಕ್‌ ಮುಂದೆ ಧರಣಿ ಕುಳಿತ ರೈತ ಸಂಘದ ಪದಾಧಿಕಾರಿಗಳು
Last Updated 31 ಮಾರ್ಚ್ 2022, 12:10 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ (ಪಿಎಲ್‌ಡಿ) ಸಾಲ ಪಡೆದಿರುವ ರೈತರ ಸಾಲದ ಬಡ್ಡಿಯನ್ನು ಮನ್ನಾ ಮಾಡಿ ಅಸಲನ್ನು ಮಾತ್ರ ಕಟ್ಟಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದ ಪಿಎಲ್‌ಡಿ ಬ್ಯಾಂಕ್‌ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ರಥದ ಬೀದಿಯಲ್ಲಿರುವ ಪಿಎಲ್‌ಡಿ ಬ್ಯಾಂಕ್‌ ಮುಂಭಾಗ ಧರಣಿ ಕುಳಿತ ಪ್ರತಿಭಟನಕಾರರು ಬ್ಯಾಂಕ್‌ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ‍ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಅವರು ಮಾತನಾಡಿ, ‘ಕಳೆದ ವರ್ಷ, ಕೋವಿಡ್‌ ಕಾರಣಕ್ಕೆ ಸರ್ಕಾರವು ಪಿಎಲ್‌ಡಿ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರ ಬಡ್ಡಿ ಮನ್ನಾ ಮಾಡಿ ಅಸಲು ಕಟ್ಟುವಂತೆ ಆದೇಶಿಸಿ 15 ದಿನ ಅವಕಾಶ ನೀಡಿತ್ತು. ಈ ವೇಳೆ, ಮಾಹಿತಿ ಸಿಕ್ಕ ಶೇ 70ರಷ್ಟು ರೈತರು ಅಸಲು ಕಟ್ಟಿದರು. ಆದರೆ, ಮಾಹಿತಿ ಇಲ್ಲದೆ ಹಾಗೂ ಕಡಿಮೆ ಕಾಲಾವಕಾಶದ ಕಾರಣಕ್ಕೆ ಶೇ 30ರಷ್ಟು ರೈತರು ಅಸಲು ಕಟ್ಟಲು ಆಗಿಲ್ಲ’ ಎಂದು ಹೇಳಿದರು.

‘ಎರಡು ತಿಂಗಳು ಅವಕಾಶ ನೀಡಿದ್ದರೆ ಎಲ್ಲ ರೈತರು ಸಾಲ ಕಟ್ಟಿ ಋಣಮುಕ್ತರಾಗುತ್ತಿದ್ದರು. ಈ ಉದ್ದೇಶಕ್ಕೆ ಬಂದಿದ್ದ ₹160 ಕೋಟಿ ಹಣ ವಾಪಸ್‌ ‌ಹೋಗಿದೆ. ಈಗಸಾಲ ಕಟ್ಟದ ಶೇ 30ರಷ್ಟು ರೈತರಿಗೆ ಬ್ಯಾಂಕ್‌ನ ಅಧಿಕಾರಿಗಳು ಮನೆಗಳಿಗೆ ತೆರಳಿ, ‘ಆಸ್ತಿ ಜಪ್ತಿ ಮಾಡುತ್ತೇವೆ. ಜೊತೆಗೆ ನೋಟಿಸ್ ನೀಡುತ್ತೇವೆ‘ ಎಂದು ಹೆದರಿಸುತ್ತಿದ್ದಾರೆ. ಈ ಸಂಬಂಧ, ಬ್ಯಾಂಕ್‌ನ ಅಧಿಕಾರಿಗಳನ್ನು ಕೇಳಿದರೆ ಮೇಲಧಿಕಾರಿಗಳ ಒತ್ತಡವಿದೆ ಎಂದು ಹೇಳುತ್ತಾರೆ’ ಎಂದು ದೂರಿದರು.

ದೊಡ್ಡ ಕಂಪನಿಗಳು ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ಸಾಲ ಕಟ್ಟದೆ, ಅದರ ಮಾಲೀಕರು ಪರಾರಿಯಾಗುತ್ತಾರೆ. ಕೆಲವು ಲಕ್ಷಗಳಲ್ಲಿ ಸಾಲ ಪಡೆಯುವ ರೈತರು ಬಡ್ಡಿ ಕಟ್ಟದಿದ್ದರೆ ಅವರ ಮೇಲೆ ಬ್ಯಾಂಕು ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಾರೆ‘ ಎಂದು ಆರೋಪಿಸಿದರು.

‘ಕೋವಿಡ್‌ ಕಾರಣಕ್ಕೆ ರೈತರು ನಷ್ಟ ಅನುಭವಿಸಿದ್ದಾರೆ. ಈ ಬಾರಿಯೂ ಈರುಳ್ಳಿಗೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.ಪಿಎಲ್‌ಡಿ ಬ್ಯಾಂಕ್‌ ಬಡ್ಡಿಯನ್ನು ಮನ್ನಾ ಮಾಡಬೇಕು. ಎಲ್ಲ ರೈತರು ಅಸಲನ್ನು ಪಾವತಿಸುತ್ತಾರೆ. ಮನ್ನಾ ಮಾಡಿ ಅಸಲು ಕಟ್ಟಲು15 ದಿನಗಳ ಕಾಲಾವಕಾಶ ನೀಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ‘ ಎಂದು ಎಚ್ಚರಿಸಿದರು.

ಮನವೊಲಿಕೆ ಯತ್ನ:ಪ್ರತಿಭಟನಾ ಸ್ಥಳಕ್ಕೆ ಬಂದ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಚ್‌.ಎಂ.ಬಸವಣ್ಣ ಅವರು, ‘ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಸರ್ಕಾರ ಕ್ರಮ ಕೈಗೊಳ್ಳಬೇಕು. ನಾವೂ ಮೂರು ತಿಂಗಳ ಹಿಂದೆ ಸಚಿವರ ಗಮನಕ್ಕೆ ತಂದಿದ್ದೇವೆ. ನೀವು ಕೂಡ ಅವರ ಗಮನಕ್ಕೆ ತನ್ನಿ’ ಎಂದು ಮನವರಿಕೆ ಮಾಡಲು ಯತ್ನಿಸಿದರು.

ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ಅವರು ಮನವಿ ಸ್ವೀಕರಿಸಿ, ಸಹಕಾರ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು. ಅಲ್ಲದೇ, ರೈತರು ಹಾಗೂ ಬ್ಯಾಂಕ್‌‌ನ ಆಡಳಿತ ಮಂಡಳಿಯ ನಿಯೋಗವನ್ನು ಕರೆದುಕೊಂಡು ಹೋಗಿ ಸಚಿವರನ್ನು ಭೇಟಿ ಮಾಡುವಂತೆಯೂ ಬ್ಯಾಂಕ್‌ ಅಧ್ಯಕ್ಷರಿಗೆ ಸಲಹೆ ನೀಡಿದರು.

ರೈತ ಮುಖಂಡರಾದ ಅಂಬಳೆ ಬಸವಣ್ಣ, ಹೊನ್ನೂರು ಬಸವಣ್ಣ, ಪಾಳ್ಯ ಶಿವಮೂರ್ತಿ, ಪೃಥ್ವಿ, ಕುಮಾರ್, ಶಿವಪ್ಪದೇವರು, ಲಿಂಗಸ್ವಾಮಿ, ಮಲ್ಲಣ್ಣ, ಬಸವರಾಜು, ಸಿದ್ದರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT