ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ: ತೀವ್ರಗೊಂಡ ರೈತರ ಪ್ರತಿಭಟನೆ

ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷರ ವರ್ಗಾವಣೆಗೆ ಆಗ್ರಹಿಸಿ ಮುಂದುವರೆದ ಹೋರಾಟ
Last Updated 16 ಸೆಪ್ಟೆಂಬರ್ 2021, 16:07 IST
ಅಕ್ಷರ ಗಾತ್ರ

ಚಾಮರಾಜನಗರ: ರೈತ ಸಂಘಟನೆ ಹಾಗೂ ರೈತ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣನ್‌ ಅವರನ್ನು ರಾಜ್ಯದಿಂದ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ, ನಾಲ್ಕು ದಿನದಿಂದ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಗುರುವಾರ ತೀವ್ರ ಸ್ವರೂಪ ಪಡೆದಿದೆ.

ಜಿಲ್ಲಾ ಕೇಂದ್ರವಲ್ಲದೇ ತಾಲ್ಲೂಕು ಕೇಂದ್ರಗಳಲ್ಲೂ ರೈತ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಕೊಳ್ಳೇಗಾಲದಲ್ಲಿ ಹಸು ಕರುಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆದರೆ, ಹನೂರಿನಲ್ಲಿ ಪೊರಕೆ ಚಳವಳಿ ನಡೆಸಿದ್ದಾರೆ. ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಪೊರಕೆ ಚಳವಳಿ ನಡೆಸಿರುವ ಪ್ರತಿಭಟನಕಾರರು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.

ಜಿಲ್ಲಾಡಳಿತ ಭವನಕ್ಕೆ ದಿಗ್ಬಂಧನ: ಗುರುವಾರ ಬೆಳಿಗ್ಗೆಯವರೆಗೂ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಧರಣಿ ನಡೆಸಿದ ಪ್ರತಿಭಟನಕಾರರು, ಬಳಿಕ ನಗರದ ಭುವನೇಶ್ವರಿ ವೃತ್ತದಲ್ಲಿ ಪೊರಕೆ ಹಿಡಿದು ಚಳವಳಿ ನಡೆಸಿದರು. ಅಲ್ಲಿಂದ ಜಿಲ್ಲಾಡಳಿತ ಭವನದವರೆಗೂ ಮೆರವಣಿಗೆ ನಡೆಸಿದರು.

ಈ ಹೊತ್ತಿನಲ್ಲಿ ಜಿಲ್ಲಾಡಳಿತದ ಪ್ರವೇಶ ದ್ವಾರವನ್ನು ಬಂದ್‌ ಮಾಡಿದ ಪೊಲೀಸರು ಪ್ರತಿಭಟನಕಾರರನ್ನು ಒಳಗಡೆ ಹೋಗಲು ಬಿಡಲಿಲ್ಲ. ಜಿಲ್ಲಾಡಳಿತ ಭವನದ ಎಲ್ಲ ಬಾಗಿಲುಗಳನ್ನೂ ಮುಚ್ಚಲಾಯಿತು. ಪ್ರತಿಭಟನಕಾರರು ಪ್ರವೇಶದ್ವಾರದ ಎದುರು ಇರುವ ವಾಹನ ನಿಲ್ಲಿಸುವ ಜಾಗದಲ್ಲೇ ಧರಣಿ ಕುಳಿತರು. ಮಧ್ಯಾಹ್ನದ ಊಟವನ್ನು ತರಿಸಿಕೊಂಡು ಅಲ್ಲೇ ಉಂಡರು. ರಾತ್ರಿವರೆಗೂ ಅಲ್ಲಿಯೇ ಧರಣಿ ಮುಂದುವರೆಸಿದರು.

‘ಆ.10ರಂದು ನಡೆದ ಸಭೆಯಲ್ಲಿ 15 ದಿನದ ಒಳಗಾಗಿ ಶರವಣ ಅವರನ್ನು ವರ್ಗಾವಣೆ ಮಾಡುವುದಾಗಿ ಜಿಲ್ಲಾಧಿಕಾರಿ ಮುಂದೆ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಲಿಖಿತ ಹೇಳಿಕೆ ನೀಡಿತ್ತು. ಆದರೆ, ಒಂದು ತಿಂಗಳು ಕಳೆದರೂ ವರ್ಗಾವಣೆ ಮಾಡಿಲ್ಲ. ಜಿಲ್ಲಾಡಳಿತ ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ, ಜಿಲ್ಲಾಡಳಿತವಾಗಲಿ, ಸಕ್ಕರೆ ಕಾರ್ಖಾನೆಯಾಗಲಿ ಸ್ಪಂದಿಸಿಲ್ಲ’ ಎಂದು ಕಬ್ಬು ಬೆಳೆಗಾರರ ಸಂಘದ‌ಮೈಸೂರು–ಚಾಮರಾಜನಗರ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುರುವಾರ ಸಂಜೆ ಶರವಣನ್‌ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಒಕ್ಕಣೆಯುಳ್ಳ ಪತ್ರವನ್ನು ನಮಗೆ ನೀಡಲಾಗಿದೆ. ಆದರೆ, ಅದರಲ್ಲಿ ಅವರು ಕರ್ತವ್ಯದಿಂದ ಬಿಡುಗಡೆ ಹೊಂದಿರುವ ಬಗ್ಗೆ ಸ್ಪಷ್ಟವಾದ ವಿವರ ಇಲ್ಲ. ಹಾಗಾಗಿ, ನಮ್ಮ ಹೋರಾಟ ಮುಂದುವರೆಸಿದ್ದೇವೆ’ ಎಂದು ಅವರು ತಿಳಿಸಿದರು.

ಕುರುಬೂರು ಸಿದ್ದೇಶ್, ಪ್ರದೀಪ್, ಶಂಭು ದೇವನಪುರ, ನಂಜುಂಡಸ್ವಾಮಿ, ಪಟೇಲ್ ಶಿವಮೂರ್ತಿ, ಬನ್ನೂರು ಕೃಷ್ಣಪ್ಪ, ಕಿರಗಸೂರು ಶಂಕರ್, ಮಹೇಶ್.ಜೆ, ಮೂಕಳ್ಳಿ ಮಹದೇವಸ್ವಾಮಿ, ಸೋಮಶೇಖರ್, ಅಂಬಳೆ ಮಂಜುನಾಥ್, ಗೌರಿಶಂಕರ್, ರಂಗರಾಜು, ನಿಂಗರಾಜು, ಗಿರೀಶ್, ರವೀಶ್ ಬೆನಕನಳ್ಳಿ, ಪರಶಿವಮೂರ್ತಿ, ಸಿದ್ದರಾಜು, ಯರಿಯೂರು ಮಹೇಶ್, ಕುಂತೂರ್ ನಂಜುಂಡಸ್ವಾಮಿ, ಪಪ್ಪು, ವಾಚ್ ಕುಮಾರ್, ಕೆ.ಕೆ.ಹುಂಡಿ ಮಾದಪ್ಪ, ಬಾನಹಳ್ಳಿ ಕುಮಾರ್ ಪ್ರತಿಭಟನೆಯಲ್ಲಿದ್ದರು.

ಶರವಣನ್‌ ಗಡಿಪಾರಿಗೆ ಆಗ್ರಹ

‌ಕೊಳ್ಳೇಗಾಲ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ, ಇಲ್ಲಿನ ರೈತ ಸಂಘದ ಪದಾಧಿಕಾರಿಗಳು ತಾಲ್ಲೂಕಿನ ನರೀಪುರ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಸಮಾವೇಶಗೊಂಡ ರೈತರು, ದನ-ಕುರಿಗಳನ್ನು ರಸ್ತೆಗೆ ತಂದು 15 ನಿಮಿಷ ಪ್ರತಿಭಟಿಸಿದರು.

ಹೊನ್ನೂರು ಪ್ರಕಾಶ್ ಮಾತನಾಡಿ ‘ಶರವಣ ಅವರನ್ನು 15 ದಿನದೊಳಗೆ ವರ್ಗಾವಣೆ ಮಾಡುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಕಾರ್ಖಾನೆಯ ಅಧ್ಯಕ್ಷ ವೆಂಕಟೇಶ್ ಹೇಳಿದ್ದರು. ಆದರೆ ವರ್ಗಾವಣೆ ಮಾಡಿಲ್ಲ. ರೈತರು ಹಾಗೂ ರೈತ ಸಂಘದ ಬಗ್ಗೆ ಕೆಳ ಮಟ್ಟದಲ್ಲಿ ಮಾತನಾಡಿರುವ ಶರವಣನನ್ನು ನಮ್ಮ ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ’ ಹೇಳಿದರು.

ಪಾಳ್ಯ ಗ್ರಾಮ ಶಾಖೆಯ ಅಧ್ಯಕ್ಷ ಶಿವಮೂರ್ತಿ, ಉಪಾಧ್ಯಕ್ಷ ಸಿದ್ದರಾಜು ನಾಯಕ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಮಲ್ಲಣ್ಣ ನಾಯಕ, ಉಗನಿಯ ಗ್ರಾಮದ ರಾಜಣ್ಣ, ಮಹೇಶ್, ಪುಟ್ಟನಂಜ, ಶೇಷಯ್ಯ, ಪ್ರದೀಪ್, ಮರಿಸ್ವಾಮಿ, ಗೋವಿಂದರಾಜು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT