ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ‌ರ ವರ್ಗಾವಣೆಗೆ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಮುಂದೆ ದಿಢೀರ್‌ ಪ್ರತಿಭಟನೆ ಆರಂಭಿಸಿದ ರೈತ ಮುಖಂಡರು
Last Updated 14 ಸೆಪ್ಟೆಂಬರ್ 2021, 5:21 IST
ಅಕ್ಷರ ಗಾತ್ರ

ಚಾಮರಾಜನಗರ: ರೈತ ಸಂಘಟನೆಗಳನ್ನು ಅವಹೇಳನ ಮಾಡಿರುವ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರನ್ನು ಕಂಪನಿಯು ವರ್ಗಾವಣೆ ಮಾಡಿಲ್ಲ ಎಂದು ಆರೋಪಿಸಿ ರೈತ ಸಂಘಗಳ ಎರಡು ಬಣಗಳು, ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ದಿಢೀರ್‌ ಪ್ರತಿಭಟನೆ ಆರಂಭಿಸಿದ್ದಾರೆ.

ಶರವಣ ಅವರನ್ನು ವರ್ಗಾವಣೆ ಮಾಡಿರುವ ಆದೇಶ ಪ್ರತಿ ತೋರಿಸುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಯೋಗಾನಂದ ರೈತ ಮುಖಂಡರನ್ನು ಮನವೊಲಿಸಲು ಪ್ರಯತ್ನ ಪಟ್ಟರೂ, ಪ್ರತಿಭಟನಕಾರರು ಬಗ್ಗಲಿಲ್ಲ. ರಾತ್ರಿಯೂ ಪ್ರತಿಭಟನೆ ಮುಂದುವರಿಸಿದ್ದಾರೆ.

‘ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾಗಿರುವ ಶರವಣ, ‘ಕಬ್ಬು ಖರೀದಿ, ಅರೆಯುವುದು ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ರೈತ ಸಂಘ ಹಾಗೂ ಮುಖಂಡರು ಕಾರ್ಖಾನೆಯ ಮೇಲೆ ಮಾಡಿರುವ ಆರೋಪಗಳು ಆಧಾರ ರಹಿತ.ರೈತ ಸಂಘದವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹಾಗೂ ಸಂಘಟನೆಯ ಅಸ್ತಿತ್ವ ತೋರ್ಪಡಿಸುವುದಕ್ಕಾಗಿ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಸಭೆಯ ನಡವಳಿಯಲ್ಲಿ ಬರೆದಿದ್ದಾರೆ’ ಎಂದು ಆರೋಪಿಸಿ ಮೂರೂ ಸಂಘಟನೆಗಳ ಮುಖಂಡರು ಆ.9, 10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸಮ್ಮುಖದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು, ಇತರ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆದಿತ್ತು. ಉಪಾಧ್ಯಕ್ಷ ಶರವಣ ಅವರನ್ನು ಹೊರ ರಾಜ್ಯಕ್ಕೆ ವರ್ಗಾವಣೆ ಮಾಡಲು ಕಾರ್ಖಾನೆಯ ಆಡಳಿತ ಮಂಡಳಿ ಒಪ್ಪಿತ್ತು. ಇದಕ್ಕಾಗಿ 15 ದಿನ ಕಾಲಾವಕಾಶ ತೆಗೆದುಕೊಂಡಿತ್ತು.

ಸಭೆ ನಡೆದು ಒಂದು ತಿಂಗಳು ಕಳೆದರೂ ಶರವಣ ಹುದ್ದೆಯಲ್ಲೇ ಮುಂದುವರೆದಿದ್ದಾರೆ. ಆಡಳಿತ ಮಂಡಳಿಯು ಕೊಟ್ಟ ಮಾತಿಗೆ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತ ಮುಖಂಡರು ಸೋಮವಾರ ಬೆಳಿಗ್ಗೆಯೇ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಎದುರು ಪ್ರತಿಭಟನೆ ಆರಂಭಿಸಿದರು. ಸಕ್ಕರೆ ಕಾರ್ಖಾನೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಇನ್ನೊಂದು ಬಣ‌ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌,ದೇವರಾಜ್ ಕಿರಗಸೂರು, ಶಂಕರ್ ಮೇಲಾಜಿಪುರ, ವಿಜಿ, ರವಿ, ಕುರುಬೂರು ಸಿದ್ದೇಶ್, ಶಂಭು ದೇವನಪುರ, ನಂಜುಂಡಸ್ವಾಮಿ, ಲಿಂಗರಾಜು, ಕುಮಾರ್, ಬೆನಕನಳ್ಳಿ ಪರಶಿವಮೂರ್ತಿ, ಗೌರೀಶ್, ಮಂಜು, ಶಿವಸ್ವಾಮಿ, ಬನ್ನಳ್ಳಿಹುಂಡಿ ರಾಜೇಂದ್ರ, ಅಂಬಳೆ ಮಂಜುನಾಥ್, ಮಲ್ಲೇಶ್, ಹೊನ್ನೇಗೌಡನಹುಂಡಿ ಸಿದ್ದರಾಜು, ಹೆಗ್ಗೋಠಾರ ಶಿವಸ್ವಾಮಿ, ಬನ್ನೂರು ಕೃಷ್ಣಪ್ಪ ಇದ್ದರು.

‘ವರ್ಗ ಆಗುವವರೆಗೆ ಪ್ರತಿಭಟನೆ’

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಯೋಗಾನಂದ ಮೂರು ಬಾರಿ ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು.

‘ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಜೊತೆ ಮಾತನಾಡಿ ಉಪಾಧ್ಯಕ್ಷರ ವರ್ಗಾವಣೆಗೆ ಕ್ರಮ ವಹಿಸಲಾಗುವುದು. ಮಂಗಳವಾರ ಆದೇಶ ಹೊರಡಿಸುವಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಹಾಗಿದ್ದರೂ ಪ್ರತಿಭಟನಕಾರರು ಪಟ್ಟು ಸಡಿಲಿಸಲಿಲ್ಲ. ಆಹೋರಾತ್ರಿ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು, ‘ಆ.10ರಂದು ಸಭೆ ನಡೆದಿತ್ತು. ವರ್ಗಾವಣೆಗೆ 15 ದಿನ ಗಡುವು ನೀಡಿದ್ದೆವು. ಒಂದು ತಿಂಗಳು ಆದರೂ, ಶರವಣ ಅವರನ್ನು ವರ್ಗಾವಣೆ ಮಾಡಿಲ್ಲ. ಅವರ ವರ್ಗಾವಣೆ ಆದೇಶವನ್ನು ತೋರಿಸುವವರೆಗೂ ನಾವು ಸ್ಥಳ ಬಿಟ್ಟು ಕದಲುವುದಿಲ್ಲ. ರಾತ್ರಿಯೂ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT