ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ, ಚಿಕೂನ್‌ಗುನ್ಯಾ ವಿರುದ್ಧ ಸಮರ

ಪ್ರಕರಣಗಳ ಸಂಖ್ಯೆ ಇಳಿಕೆ, ತೆರೆದ ಚರಂಡಿಯ ಅನೈರ್ಮಲ್ಯವೇ ಸಮಸ್ಯೆ
Last Updated 26 ಜೂನ್ 2022, 16:17 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಗಾರು ಆರಂಭವಾಗಿದೆ. ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯದಂತಹ ಕಾಯಿಲೆಗಳು ಈ ಸಂದರ್ಭದಲ್ಲಿ ಸಾಮಾನ್ಯ. ಸೊಳ್ಳೆಯಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಪ್ರಯತ್ನ ನಡೆಸಿದರೂ, ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.

ಹಾಗಾಗಿ, ಮುಂಗಾರು ಪೂರ್ವ ಮಳೆ ಆರಂಭವಾದ ನಂತರ ಮುಂದಿನ ಬೇಸಿಗೆಯವರೆಗೆ ಆರೋಗ್ಯ ಇಲಾಖೆಯು ಈ ಕಾಯಿಲೆಗಳ ವಿರುದ್ಧ ಸಮರ ಸಾರುತ್ತಿರುತ್ತದೆ. ಮಲೇರಿಯ ಪ್ರಕರಣಗಳು ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಗಣನೀಯವಾಗಿ ಕಡಿಮೆಯಾಗಿರುವುದಿಂದ ಅಧಿಕಾರಿ
ಗಳು ಡೆಂಗಿ ಮತ್ತು ಚಿಕೂನ್‌ಗುನ್ಯಾ ಕಾಯಿಲೆಗಳ ನಿಯಂತ್ರಣಕ್ಕೆ ಹೆಚ್ಚು ಗಮನ ನೀಡುತ್ತಿದ್ದಾರೆ.

ಕೋವಿಡ್‌ ಅಬ್ಬರದ ಕಾರಣಕ್ಕೋ ಏನೋ, ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಡೆಂಗಿ, ಚಿಕೂನ್‌ಗುನ್ಯಾ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ವರದಿಯಾಗಿರುವುದನ್ನು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ. ಕಾಯಿಲೆಯಿಂದಾಗಿ ಜೀವ ಹಾನಿ ಸಂಭವಿಸಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

2019ರಲ್ಲಿ ಜಿಲ್ಲೆಯಲ್ಲಿ 306 ಡೆಂಗಿ ಪ್ರಕರಣಗಳು ವರದಿಯಾಗಿದ್ದವು. 2020ರಲ್ಲಿ42 ಮಂದಿ ಡೆಂಗಿ ಜ್ವರದಿಂದ ನರಳಿದ್ದರು. ಕಳೆದ ವರ್ಷ ಈ ಸಂಖ್ಯೆ 58ಕ್ಕೆ ಏರಿತ್ತು. ಈ ವರ್ಷ ಆರು ತಿಂಗಳಲ್ಲಿ 26 ಪ್ರಕರಣಗಳಷ್ಟೇ ವರದಿಯಾಗಿವೆ. ಎರಡು ವರ್ಷಗಳಿಂದ ಮಲೇರಿಯ ಪ್ರಕರಣ ವರದಿಯಾಗಿಲ್ಲ ಎಂದು ಹೇಳುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು. 2019ರಲ್ಲಿ 55 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿದ್ದವು. 2020ರಲ್ಲಿ ಈ ಸಂಖ್ಯೆ 16ಕ್ಕೆ ಇಳಿದಿತ್ತು. ಕಳೆದ ವರ್ಷ ವರದಿಯಾಗಿದ್ದು ಬರೀ ಮೂರು ಪ್ರಕರಣಗಳು. ಈ ವರ್ಷ ಒಂದೇ ಊರಿನಲ್ಲಿ ಏಳು ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಇಲಾಖೆಯ ಬಳಿ ಇರುವ ಬಹುತೇಕ ಮಾಹಿತಿಗಳು ಸರ್ಕಾರಿ ಆರೋಗ್ಯ ವ್ಯವಸ್ಥೆಗೆ ಸಂಬಂಧಿಸಿದ್ದು. ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಿಸ್ಟಿಕ್‌ ಕೇಂದ್ರಗಳಲ್ಲೂ ರೋಗ ಪತ್ತೆಯಾದರೆ ಇಲಾಖೆಯ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳು ಸೂಚಿಸಿದರೂ ಎಲ್ಲ ಆಸ್ಪತ್ರೆಗಳು, ರೋಗ ಪತ್ತೆ ಕೇಂದ್ರಗಳು ಆ ಕೆಲಸ ಮಾಡುವುದಿಲ್ಲ. ಕೆಲವು ಆಸ್ಪ‍ತ್ರೆಗಳು ಮಾಹಿತಿ ನೀಡುತ್ತವೆ.

ಹಲವು ಕಾರ್ಯಕ್ರಮ: ಸೊಳ್ಳೆಯಿಂದ ಹರಡುವ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಮುಂಜಾಗ್ರತಾ ಕಾರ್ಯಕ್ರಮಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.

‘ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಜಿಲ್ಲೆಯಾದ್ಯಂತ ಲಾರ್ವಾ ಸಮೀಕ್ಷೆ ನಡೆಸಲಾಗುತ್ತದೆ. ಮನೆ ಮನೆಗಳಿಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿಯಾಗುವ ಜಾಗಗಳನ್ನು ಗುರುತಿಸಿ ಮನೆಯವರಿಗೆ ತಿಳಿ ಹೇಳುವ ಕೆಲಸ ನಿರಂತರವಾಗಿ ಮಾಡುತ್ತೇವೆ. ಲಾರ್ವ ಕಂಡು ಬಂದರೆ ಅವುಗಳನ್ನು ನಾಶ ಪಡಿಸಲಾಗುತ್ತದೆ. ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಹೇಳಲಾಗುತ್ತದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್‌.ಕಾಂತರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೈವಿಕ ವಿಧಾನಗಳಿಂದ ಲಾರ್ವಗಳನ್ನು ನಾಶ ಪಡಿಸಲೂ ಕ್ರಮ ವಹಿಸಲಾಗುತ್ತಿದೆ. ಸೊಳ್ಳೆಯ ಮೊಟ್ಟೆಗಳನ್ನು ತಿನ್ನುವಂತಹ ಗಾಂಬೂಸಿಯಾ ಮತ್ತು ಗಪ್ಪಿ ಮೀನುಗಳನ್ನು ನೀರಿನಲ್ಲಿ ಬಿಡುವುದರ ಮೂಲಕ ರೋಗ ನಿಯಂತ್ರಿಸಲು ಪ್ರಯತ್ನ ಪಡಲಾಗುತ್ತಿದೆ. ಈ ವರ್ಷ ಮೀನುಗಾರಿಕಾ ಇಲಾಖೆಯವರು 2000 ಮೀನುಗಳನ್ನು ನೀಡಿದ್ದಾರೆ. ಅವುಗಳನ್ನು ನಾವು ಬೆಳೆಸಿ ನಂತರ ಅಗತ್ಯವಿರುವವರಿಗೆ ನೀಡಲಾಗುತ್ತಿದೆ.ಇದರ ಜೊತೆಗೆ ಶಾಲಾ ಶಿಕ್ಷಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವ ಪ‍್ರಯತ್ನವನ್ನೂ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಅನೈರ್ಮಲ್ಯವೇ ಸವಾಲು:ಪಂಚಾಯಿತಿ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಎನ್ನುವುದು ಕಾಣುವುದಿಲ್ಲ. ಕೊಳಚೆ ನೀರು ನಿಂತಿರುವ ಜಾಗಗಳಲ್ಲೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.

ಜಿಲ್ಲೆಯ ನಗರ ಪ್ರದೇಶಗಳು ಸೇರಿದಂತೆ ಎಲ್ಲ ಕಡೆಗಳಲ್ಲೂ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ತೆರೆದ ಚರಂಡಿಯಲ್ಲಿ ಕೊಳಚೆ ನೀರು ಕಟ್ಟಿಕೊಂಡಿರುತ್ತದೆ. ಚರಂಡಿ ಹೂಳು ತೆಗೆಯುವ ಕಾರ್ಯವೂ ಸರಿಯಾಗಿ ನಡೆಯುವುದಿಲ್ಲ. ತೊಂಬೆ, ಟ್ಯಾಂಕ್‌,ಶೌಚಾಲಯಗಳ ಆಸುಪಾಸು ನೀರು ನಿಂತಿರುತ್ತದೆ. ಇಲ್ಲೆಲ್ಲ ಸ್ವಚ್ಛತೆ ಕಾಪಾಡುವವರು ಯಾರೂ ಇಲ್ಲ. ಅನೈರ್ಮಲ್ಯದ ವಾತಾವರಣ ರೋಗ ಹರಡಲು ಕಾರಣವಾಗಬಹುದು ಎಂದು ಗೊತ್ತಿದ್ದರೂ, ಜನರೂ ಸ್ವಚ್ಛತೆ ಬಗ್ಗೆ ಕಾಳಜಿ ತೋರುವುದಿಲ್ಲ.

ಜನರು ಏನಂತಾರೆ?

ಸ್ವಚ್ಛತೆಗೆ ಗಮನ ಹರಿಸುತ್ತಿಲ್ಲ

ಯಾರಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಬಂದರೆ ಮಾತ್ರ ಗ್ರಾಮಗಳನ್ನು ಸ್ವಚ್ಚ ಮಾಡುತ್ತಾರೆ. ಇಲ್ಲವಾದರೆ ಅದೇ ಚಾಳಿ ಮುಂದುವರೆಯುತ್ತದೆ. ಗ್ರಾಮ ಪಂಚಾಯಿತಿಯವರು ಚರಂಡಿಗಳನ್ನು ಸ್ವಚ್ಚ ಮಾಡುತ್ತಿಲ್ಲ

ನಂಜಪ್ಪ,ಹರಳೆ, ಕೊಳ್ಳೇಗಾಲ ತಾಲ್ಲೂಕು

ಚರಂಡಿ ಸ್ವಚ್ಛಗೊಳಿಸಿ

ಗ್ರಾಮದಲ್ಲಿ ನಿಗದಿತ ವೇಳೆಗೆ ಚರಂಡಿಯಲ್ಲಿನ ಹೂಳು ತೆಗೆಸದೇ ಇರುವುದರಿಂದ ಬಡಾವಣೆಯ ನಿವಾಸಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯಲ್ಲಿದ್ದಾರೆ

ದಯಾಳ್,ಮಾರ್ಟಳ್ಳಿ.

ಚರಂಡಿಯಲ್ಲಿ ಕೊಚ್ಚೆ

ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದ ಕೆಲವೆಡೆ ಇನ್ನೂ ಚರಂಡಿ ಸುಸ್ಥಿತಿಯಲ್ಲಿ ಇಲ್ಲ. ಮಳೆ ಬಂದರೆ ಬಚ್ಚಲ ನೀರು ಮನೆಯೊಳಗೆ ನುಗ್ಗುತ್ತದೆ. ಇದು ಸಾಂಕ್ರಮಿಕ ರೋಗಗಳಿಗೆ ಕಾರಣವಾಗುತ್ತದೆ. ಗ್ರಾಮ ಪಂಚಾಯಿತಿಯವರು ಚರಂಡಿ ಸ್ವಚ್ಛತೆಗೆ ಕಾಳಜಿ ವಹಿಸಬೇಕು.

ಶಿವು,ಮಲ್ಲಿಗಹಳ್ಳಿ, ಯಳಂದೂರು ತಾಲ್ಲೂಕು

–––

ಲಾರ್ವ ಸಮೀಕ್ಷೆ ಮಾಡುತ್ತೇವೆ. ಇದಲ್ಲದೇ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ
ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯ ಅಧಿಕಾರಿ

––

ರೋಗ ಹರುಡುವಿಕೆ ನಿಯಂತ್ರಣಕ್ಕೆ ವಿವಿಧ ಇಲಾಖೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜನರು ಸಹಕರಿಸಬೇಕು

–ಡಾ.ಎನ್‌.ಕಾಂತರಾಜ್‌, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

––––

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಬಿ.ಬಸವರಾಜು, ಅವಿನ್‌ ಪ್ರಕಾಶ್‌, ಮಲ್ಲೇಶ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT