ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಮೋನಿಶಾ ಪ್ರಥಮ, ಡಾ.ಆಸ್ತಾಗೆ ದ್ವಿತೀಯ ರ‍್ಯಾಂಕ್‌

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೊದಲ ಘಟಿಕೋತ್ಸವ ಇಂದು
Last Updated 13 ಮೇ 2022, 16:04 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್‌) ಮೊದಲ ಘಟಿಕೋತ್ಸವ ಶನಿವಾರ (ಮೇ 14) ನಡೆಯಲಿದೆ.

2016ರಲ್ಲಿ ಆರಂಭಗೊಂಡಿದ್ದ ವೈದ್ಯಕೀಯ ಕಾಲೇಜಿನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು, ಐದು ವರ್ಷದ ಎಂಬಿಬಿಎಸ್ ಕೋರ್ಸ್‌ ಹಾಗೂ ಒಂದು ವರ್ಷದ ಹೌಸ್‌ ಸರ್ಜನ್‌ ಅವಧಿಯನ್ನು ಪೂರ್ಣಗೊಳಿಸಿ ಪದವಿ ಪಡೆಯುತ್ತಿದ್ದಾರೆ.

ಅಂತಿಮ ವರ್ಷದ ಪರೀಕ್ಷೆಯಲ್ಲಿ ಡಾ.ಮೋನಿಶಾ ಶೇ 77.2 ಅಂಕ ಗಳಿಸಿ ಕಾಲೇಜಿಗೆ ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ಶೇ 76ರಷ್ಟು ಅಂಕ ಗಳಿಸಿರುವ ಡಾ.ಆಸ್ತಾ ಅರೋರಾ ಎರಡನೇ ರ‍್ಯಾಂಕ್‌ ಹಾಗೂ ಶೇ 75.2ರಷ್ಟು ಅಂಕ ಪಡೆದಿರುವ ಡಾ.ಸಚಿನ್‌ ಮೂರನೇ ರ‍್ಯಾಂಕ್‌ ಗಳಿಸಿದ್ದಾರೆ.

138 ವಿದ್ಯಾರ್ಥಿಗಳು ತೇರ್ಗಡೆ:ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಘಟಿಕೋತ್ಸವದ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಡೀನ್‌ ಡಾ.ಜಿ.ಎಂ.ಸಂಜೀವ್‌ ‘2016ರಲ್ಲಿ ಕಾಲೇಜು ಪ್ರಾರಂಭವಾಗಿತ್ತು. ಮೊದಲ ವರ್ಷ 146 ವಿದ್ಯಾರ್ಥಿಗಳು ದಾಖಲಾಗಿದ್ದರು. ಒಬ್ಬಳು ವಿದ್ಯಾರ್ಥಿನಿ ಅರ್ಧದಲ್ಲೇ ಬಿಟ್ಟಿದ್ದಳು. 145 ಮಂದಿಯ ಪೈಕಿ 138 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಮೂವರು ಉನ್ನತ ಶ್ರೇಣಿಯಲ್ಲಿ, 58 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 77 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ’ ಎಂದರು.

‘ಸಂಸ್ಥೆಯ ಮೊದಲ ಘಟಿಕೋತ್ಸವ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ.ಎಂ.ಕೆ.ರಮೇಶ್ ಸಮಾರಂಭ ಉದ್ಘಾಟಿಸುವರು. ಅತಿಥಿಗಳಾಗಿ ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ, ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ಎಂ.ಎ.ಆರ್.ಬಿ ವಿಭಾಗದ ಅಧ್ಯಕ್ಷ ಡಾ.ಬಿ.ಎನ್.ಗಂಗಾಧರ, ಬಿಳಿಗಿರಿರಂಗನ ಬೆಟ್ಟದ ಬುಡಕಟ್ಟು ಆರೋಗ್ಯ ಚಟುವಟಿಕೆ ಹಾಗೂ ವಿಜಿಕೆಕೆ ಸಂಸ್ಥಾಪಕ ಡಾ.ಎಚ್.ಆರ್.ಸುದರ್ಶನ್ ಅವರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ವರ್ಷ 150 ಮಕ್ಕಳು ಎಂಬಿಬಿಎಸ್‌ ಕೋರ್ಸ್‌ಗೆ ದಾಖಲಾಗುತ್ತಿದ್ದಾರೆ. ಸದ್ಯ ಕಾಲೇಜಿನಲ್ಲಿ ಎಲ್ಲ ಸೌಕರ್ಯಗಳಿದ್ದು, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕ ವಾತಾವರಣ ಇದೆ. ಮೊದಲ ಎರಡ್ಮೂರು ವರ್ಷ ಆಸ್ಪತ್ರೆ ದೂರದಲ್ಲಿದ್ದು, ಜಾಗದ ಕೊರತೆಯಿಂದ ಸ್ವಲ್ಪ ಸಮಸ್ಯೆಯಾಗಿತ್ತು. ಹೊಸ ಆಸ್ಪತ್ರೆ ಉದ್ಘಾಟನೆಯಾದ ಬಳಿಕ ಆ ಸಮಸ್ಯೆ ಬಗೆಹರಿದಿದೆ. ನಮ್ಮ ಕಾಲೇಜಿನಿಂದ 138 ವೈದ್ಯರು ಪದವಿಯೊಂದಿಗೆ ಹೊರ ಬರುತ್ತಿರುವುದು ಖುಷಿಯ ವಿಚಾರ’ ಎಂದರು.

ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಾರುತಿ ಮಾತನಾಡಿ ‘ನಮ್ಮ ಬೋಧನಾ ಆಸ್ಪತ್ರೆಯಲ್ಲಿ ಈಗ ಬಹುತೇಕ ಎಲ್ಲ ಸೌಕರ್ಯಗಳಿದ್ದು, ಬೆಂಗಳೂರು ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ದೊರಕುತ್ತಿದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಅನುಕೂಲವಾಗಿದೆ’ ಎಂದು ಹೇಳಿದರು.

ಜನರಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ.ರಮೇಶ್‌ ಮಾತನಾಡಿದರು. ಸಿಮ್ಸ್‌ ಪ್ರಾಂಶುಪಾಲ ಡಾ.ಗಿರೀಶ್ ವಿ.ಪಾಟೀಲ, ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ ಇದ್ದರು.

‘ಕಲಿಕೆಗೆ ಉತ್ತಮ ವಾತಾವರಣ’

ಕೋರ್ಸ್‌ ಮುಗಿಸಿ ಎಂಬಿಬಿಎಸ್‌ ಪದವಿ ಪಡೆಯಲಿರುವ ಡಾ.ಸಚಿನ್‌, ಡಾ.ಸ್ಫೂರ್ತಿ ಮಾತನಾಡಿ ‘ಹೊಸ ಕಾಲೇಜಿಗೆ ಸೇರ್ಪಡೆಯಾಗಿದ್ದರಿಂದ ಮೊದಲ ಒಂದೆರಡು ವರ್ಷ ಕಷ್ಟವಾಗಿತ್ತು. ಕಾಲೇಜು ನಗರದಿಂದ ದೂರ ಇತ್ತು. ಆಸ್ಪತ್ರೆಗೆ ಇಲ್ಲಿಂದ ಓಡಾಡಬೇಕಿತ್ತು. ಅದು ಬಿಟ್ಟರೆ, ಕಾಲೇಜಿನಲ್ಲಿ ಹಾಸ್ಟೆಲ್‌ ಸೌಲಭ್ಯ, ಗ್ರಂಥಾಲಯ ಸೇರಿದಂತೆ ಎಲ್ಲ ಸೌಕರ್ಯಗಳಿದ್ದವು. ಉತ್ತಮ ಪರಿಸರ ಇರುವುದರಿಂದ ಅಧ್ಯಯನಕ್ಕೆ ಸಹಕಾರಿಯಾಯಿತು’ ಎಂದರು.

‘ಕಾಲೇಜಿನ ಬೋಧಕರು ಹಾಗೂ ಸಿಬ್ಬಂದಿ ಎಲ್ಲ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದರು. ಸ್ನಾತಕೋತ್ತರ ಪದವಿಗೆ ಇಲ್ಲಿ ಸೀಟು ಲಭ್ಯವಿದ್ದರೆ ಖಂಡಿತ ಸೇರುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT