ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸೋದ್ಯಮ: ಆದಾಯಕ್ಕೆ ಹೊಡೆತ

ಕೋಡಿ ಬಿದ್ದ ಕೆರೆ,ಕಟ್ಟೆ, ಗಾಳಕ್ಕೆ ಸಿಗದ ಮೀನು...
Last Updated 19 ಜೂನ್ 2022, 19:30 IST
ಅಕ್ಷರ ಗಾತ್ರ

ಯಳಂದೂರು: ಮಂಗಾರು ಕಾಲಿಟ್ಟಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿರುವುದರಿಂದ ಕಾಲುವೆ, ಜಲಾಶಯ, ಹೊಳೆಗಳಲ್ಲಿ ನೀರು ಹರಿಯುತ್ತಿದೆ. ನಿರೀಕ್ಷೆಗೂ ಮೀರಿ ವರ್ಷಧಾರೆ ಆಗಿದ್ದು, ಜಲಮೂಲಗಳಲ್ಲಿ ಬಿಟ್ಟ ಮೀನು ಕೋಡಿ ಬಿದ್ದ ಪ್ರದೇಶದಿಂದ ಕಾಲುವೆ, ಹಳ್ಳ, ಕೊಳ್ಳಗಳಲ್ಲಿ ಸೇರುತ್ತಿದೆ. ಇದರಿಂದಾಗಿ ಮತ್ಸೋದ್ಯಮ ನಂಬಿದವರ ಆದಾಯಕ್ಕೆ ಪೆಟ್ಟು ಬಿದ್ದಿದೆ.

ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚಿನ ಕೆರೆಗಳಿವೆ. ದೊಡ್ಡ ಕೆರೆಗಳು 5 ಇವೆ. ಹತ್ತಾರು ತಳಿಯ ಮೀನುಗಳನ್ನು ಇಲ್ಲಿ ಬಿಡಲಾಗಿದೆ.ಐದಕ್ಕೂ ಹೆಚ್ಚಿನ ಮೀನುಗಾರಿಕಾ ಸಂಘಗಳು, 1,500ಕ್ಕೂ ಹೆಚ್ಚಿನ ಜಲ ಕೃಷಿಕರು ಮೀನು ಸಾಕಣೆ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಪರೋಕ್ಷವಾಗಿ ನೂರಾರು ಜನರು ಮತ್ಸೋದ್ಯಮದಿಂದ ಸಂಪಾದನೆ ಕಾಣುತ್ತಿದ್ದಾರೆ.

ಈ ಬಾರಿ ಹೆಚ್ಚಾಗಿ ಸುರಿದ ಮಳೆಗೆ ಕೆರೆ, ಕಟ್ಟೆಗಳಲ್ಲಿ ನೀರು ಕೋಡಿಬಿದ್ದು ಮೀನಿನ ಆವಾಸವನ್ನು ಬಹುದೂರ ವಿಸ್ತರಿಸಿದೆ. ನೀರಿನ ಮೂಲಕ ನದಿ, ಕಾಲುವೆ, ಹೊಲ, ಗದ್ದೆಗಳತ್ತ ಮೀನು ಸೇರಿ ಹೋಗಿದ್ದು, ಬಲೆ ಬೀಸುವುದೇ ಮೀನುಗಾರರಿಗೆ ಸವಾಲಾಗಿ ಪರಿಣಮಿಸಿದೆ.

‘ದೊಡ್ಡ ಆಣೆಕಟ್ಟೆಗಳ ಮೂಲಕ ಹಲವು ಕೆರೆಗಳಿಗೆ ನೀರು ಪೂರೈಕೆ ಆಗುತ್ತದೆ. ಬೇಸಿಗೆಯಲ್ಲಿ ಬಿಟ್ಟ ಮೀನುಗಳು ಈಗ ದೊಡ್ಡದಾಗಿದ್ದು, 1 ರಿಂದ 2 ಕೆಜಿ ತೂಗುತ್ತವೆ. ಇವು ಹರಿಯುವ ನೀರಿನ ಜೊತೆ ಕೆಳ ಪಾತ್ರದ ಜಲ ಮೂಲಗಳಿಗೆ ಸೇರಿ ಹೋಗುತ್ತಿವೆ. ಶ್ರಮ ಹಾಕಿ ವರ್ಷಪೂರ್ತಿ ಸಾಕಣೆ ಮಾಡಿದವರಿಗೆ ಈಗ ಮೀನು ಹಿಡಿಯುವುದೇ ಸವಾಲಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ ಸಾಕಣೆದಾರರಿಗೆ ನಷ್ಟ ಆಗಲಿದೆ’ ಎಂದು ಸಾಕಣೆದಾರ ಗುಂಬಳ್ಳಿ ಬಸವರಾಜನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆ ಗಿಡಗಳೇ ಕಂಟಕ

ಕೆರೆಗಳಲ್ಲಿ ಕಳೆ ಗಿಡಗಳ ಹಾವಳಿ ಹೆಚ್ಚಾಗಿದ್ದು, ಮೀನು ಸಾಕಣಿಕೆಗೂ ತೊಂದರೆಯಾಗುತ್ತದೆ. ಮೀನುಗಾರರು ಕಳೆ ಗಿಡಗಳ ನಡುವೆ ಬಲೆ ಬೀಸಿ, ಅಳಿದುಳಿದ ಮೀನು ಕೊಯ್ಲು ಮಾಡುವ ಧಾವಂತದಲ್ಲಿ ಇದ್ದಾರೆ.

ಸುರಿಯುವ ಮಳೆಗೆ ನೀರು ಹೆಚ್ಚಾಗಿ, ಕೋಡಿ ಬೀಳುತ್ತಿರುವುದರಿಂದ ಮೀನು ಕಂದರ, ಕೊಳ್ಳ, ಕಲ್ಲಿನ ಪೊಟರೆಗಳ ನಡುವೆ ಸೇರಿ ಹೋಗುತ್ತಿವೆ. ಕಳೆ ಗಿಡಗಳು ಕೊಳೆತು ವಾಸನೆ ಬೀರಿದರೆ, ಮೀನುಗಳ ಸಾವಿಗೂ ಕಾರಣವಾಗುತ್ತದೆ ಎಂಬ ಆತಂಕ ಸಾಕಣೆದಾರರದ್ದು.

‘ಸತತ ಮಳೆಯಿಂದ ಕೆರೆ ಕಟ್ಟೆಗಳು ತುಂಬಿವೆ. ಕೆಲವು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಬೇಸಿಗೆಯಲ್ಲಿ ಜಲ ಕೃಷಿ ಆರಂಭಿಸಿದವರು ಈಗ ಮೀನುಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅದೇ ಸಮಯಲ್ಲಿ ಕೆರೆಗಳು ಕೋಡಿ ಬಿದ್ದಿರುವುದರಿಂದ ಮೀನು ಸಾಗಣೆದಾರರಿಗೆ ಕಷ್ಟವಾಗಿದೆ’ ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶ್ವೇತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT