ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ದುರಂತಕ್ಕೆ 5 ತಿಂಗಳು: ಸಂತ್ರಸ್ತರ ಕುಟುಂಬದಲ್ಲಿ ನ್ಯಾಯದ ನಿರೀಕ್ಷೆ

ಚಾಮರಾಜನಗರ: ಕೋವಿಡ್‌ ಆಸ್ಪತ್ರೆಯ ಆಮ್ಲಜನಕ ದುರಂತಕ್ಕೆ ಐದು ತಿಂಗಳು
Last Updated 2 ಅಕ್ಟೋಬರ್ 2021, 2:16 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 2ರ ರಾತ್ರಿ ಆಮ್ಲಜನಕದ ಕೊರತೆಯಿಂದ 24 ಕೋವಿಡ್‌ ರೋಗಿಗಳು ಮೃತಪಟ್ಟ ಘಟನೆ ನಡೆದು ಐದು ತಿಂಗಳಾದರೂ; ದುರಂತಕ್ಕೆ ಕಾರಣರಾದವರ ಮೇಲೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಆಘಾತದಿಂದ ಪೂರ್ಣವಾಗಿ ಹೊರಬರಲಾಗದ ಕೆಲವು ಸಂತ್ರಸ್ತರ ಕುಟುಂಬಗಳು ಶಾಶ್ವತ ಪರಿಹಾರ ಹಾಗೂ ನ್ಯಾಯದ ನಿರೀಕ್ಷೆಯಲ್ಲಿ ದಿನ ದೂಡುತ್ತಿವೆ.

ಹೈಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಡೆದಿರುವ ತನಿಖೆಯು ವಿಚಾರಣೆ ಹಂತದಲ್ಲಿದೆ. ಸರ್ಕಾರ ನೇಮಿಸಿರುವ ಆಯೋಗದ ತನಿಖೆ ಪ್ರಗತಿಯಲ್ಲಿದ್ದು, ಇನ್ನೂ ವರದಿ ಸಲ್ಲಿಕೆಯಾಗಿಲ್ಲ.

ಮೇ 2ರಂದು ಜಿಲ್ಲೆಯ ಕೋವಿಡ್‌ ಆಸ್ಪತ್ರೆಗೆ ಮೈಸೂರಿನಿಂದ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೇ ಇದ್ದುದರಿಂದ ರಾತ್ರಿ 10.30ರಿಂದ ಬೆಳಗಿನ ಜಾವ 2.30ರವರೆಗೆ ಆಮ್ಲಜನಕದ ಕೊರತೆ ಉಂಟಾಗಿತ್ತು. ಆ ಅವಧಿಯಲ್ಲಿ ವೆಂಟಿಲೇಟರ್‌, ಐಸಿಯು, ಆಮ್ಲಜನಕದ ನೆರವಿನಲ್ಲಿದ್ದ ಹಲವು ರೋಗಿಗಳು ಕೊನೆಯುಸಿರೆಳೆದಿದ್ದರು.

‘ಜಿಲ್ಲಾಡಳಿತ ಹಾಗೂ ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದಿಂದಲೇ ದುರ್ಘಟನೆ ನಡೆದಿದೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿ ಹೇಳಿತ್ತು.

ಹೈಕೋರ್ಟ್‌ನ ಸೂಚನೆಯಂತೆ, ಮೃತಪಟ್ಟ 24 ಮಂದಿಯ ಕುಟುಂಬಗಳಿಗೆ ಜೂನ್‌ ತಿಂಗಳ ಆರಂಭದಲ್ಲಿ ತಲಾ ₹2 ಲಕ್ಷ ಹಾಗೂ ಆಗಸ್ಟ್‌ ಎರಡನೇ ವಾರದಲ್ಲಿ 13 ಮಂದಿಯ ಕುಟುಂಬಗಳಿಗೆ ಹೆಚ್ಚುವರಿಯಾಗಿ ತಲಾ ₹3 ಲಕ್ಷ ಹಣವನ್ನು ತಾತ್ಕಾಲಿಕ ಪರಿಹಾರವಾಗಿ ಜಿಲ್ಲಾಡಳಿತ ವಿತರಿಸಿದೆ.ಮೇ 2ರ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ಅವಧಿಯಲ್ಲಿ ಮೃತಪಟ್ಟ ಕೋವಿಡ್‌ ರೋಗಿಗಳನ್ನು ಮಾತ್ರ ಹೆಚ್ಚುವರಿ ಪರಿಹಾರಕ್ಕೆ ಪರಿಗಣಿಸಲಾಗಿದೆ. ಆ ಅವಧಿಯಲ್ಲಿ ಮೃತಪಟ್ಟಿದ್ದ ಇಬ್ಬರ ಕುಟುಂಬದ ಸದಸ್ಯರು ₹ 5 ಲಕ್ಷ ಪರಿಹಾರ ಬಂದಿರುವುದನ್ನು ದೃಢಪಡಿಸಿದ್ದಾರೆ.

ಸಿಗದ ಪರಿಹಾರ: ದುರಂತದಲ್ಲಿ ಕೋವಿಡ್‌ ರೋಗಿಗಳು ಮಾತ್ರವಲ್ಲದೇ, ಕೋವಿಡ್‌ ರೋಗ ಲಕ್ಷಣ ಇದ್ದರೂ ಸೋಂಕು ದೃಢಪಡದೆ ಇದ್ದ ರೋಗಿಗಳೂ ಮೃತಪಟ್ಟಿದ್ದರು (ರಾತ್ರಿ 10.30ರ ನಂತರ ಐವರು ಮೃತ‍ಪಟ್ಟಿದ್ದಾರೆ). ಅವರ ಕುಟುಂಬದವರಿಗೆ ಪರಿಹಾರ ಸಿಕ್ಕಿಲ್ಲ.

‘ಆಮ್ಲಜನಕದ ನೆರವಿನಲ್ಲಿದ್ದ ನನ್ನ ಪತಿ ಸಿದ್ದನಾಯಕ ಅವರು ಘಟನೆ ನಡೆದ ದಿನ ರಾತ್ರಿ 11 ಗಂಟೆಗೆ ಮೃತಪಟ್ಟರು. ಆದರೆ, ಕೋವಿಡ್‌ಯೇತರ ರೋಗಿ ಎಂದು ಅವರನ್ನು ಪಟ್ಟಿಯಲ್ಲಿ ಸೇರಿಸದೇ ಇದ್ದುದರಿಂದ ನಮಗೆ ಪರಿಹಾರ ಬಂದಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ತನಿಖಾ ಆಯೋಗದ ಮುಂದೆಯೂ ಹಾಜರಾಗಿ ಮನವಿ ಮಾಡಿದ್ದೇನೆ. ಪರಿಹಾರ ಬರಬಹುದು ಎಂದು ಹೇಳುತ್ತಿದ್ದಾರೆ. ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಈಗ ತಂದೆಯ ಆಶ್ರಯದಲ್ಲಿದ್ದೇನೆ. ಮಕ್ಕಳಿಬ್ಬರನ್ನೂ ಸುತ್ತೂರು ಮಠದಲ್ಲಿ ಓದುವುದಕ್ಕೆ ಬಿಟ್ಟಿದ್ದೇನೆ’ ಎಂದು ತಾಲ್ಲೂಕಿನ ಬಿಸಲವಾಡಿಯ ಜ್ಯೋತಿ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

‘ಅಣ್ಣ ಗುರುಪ್ರಸಾದ್ ರಾತ್ರಿ 10.30ಕ್ಕೆ ಕೊನೆಯುಸಿರೆಳೆದ. ₹2 ಲಕ್ಷ ಪರಿಹಾರ ಬಂದಿದೆ. ಹೆಚ್ಚುವರಿ ಪರಿಹಾರ ಬರಲಿಲ್ಲ. ಅಧಿಕಾರಿಗಳಲ್ಲಿ ವಿಚಾರಿಸಿದಾಗ ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆ ನಡುವೆ ಮೃತಪಟ್ಟವರ ಕುಟುಂಬಗಳಿಗಷ್ಟೇ ಪರಿಹಾರ ಎಂದಿದ್ದಾರೆ’ ಎಂದು ಲಕ್ಕೂರಿನ ಸಂಪತ್‌ಕುಮಾರ್‌ ತಿಳಿಸಿದರು.

ಶಾಶ್ವತ ಪರಿಹಾರ, ಉದ್ಯೋಗ ನೀಡಲು ಆಗ್ರಹ

‘ಪ್ರಕರಣವನ್ನು ಹೈಕೋರ್ಟ್‌ ಕೈಗೆತ್ತಿಕೊಳ್ಳದಿದ್ದರೆ ಸರ್ಕಾರ ಮುಚ್ಚಿ ಹಾಕುತ್ತಿತ್ತು. ಹೈಕೋರ್ಟ್‌ ನೇಮಿಸಿದ್ದ ಸಮಿತಿಯು ನೈಜ, ಪಾರದರ್ಶಕ ವರದಿ ನೀಡಿದೆ. ನ್ಯಾಯಾಲಯದ ಸೂಚನೆಯಂತೆ ತಾತ್ಕಾಲಿಕ ಪರಿಹಾರವನ್ನು ಸರ್ಕಾರ ನೀಡಿದೆ. ಆ ದಿನ ಮೃತಪಟ್ಟ 36 ಮಂದಿಯ ಕುಟುಂಬಗಳಿಗೂ ಪರಿಹಾರ ನೀಡಬೇಕು. ಚಾಮರಾಜನಗರದಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ಉದ್ಘಾಟನೆಯಾಗುತ್ತಿದ್ದು, 36 ಮಂದಿಯ ಕುಟುಂಬದ ತಲಾ ಒಬ್ಬರಿಗೆ ಆಸ್ಪತ್ರೆಯಲ್ಲಿ ಉದ್ಯೋಗ ನೀಡಬೇಕು’ ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆಗ್ರಹಿಸಿದರು.

***

ಹಿಂದಿನ ವಾರ ಸಿ.ಎಂ ಜೊತೆ ಮಾತನಾಡಿದ್ದು, ಶೀಘ್ರ ತನಿಖಾ ವರದಿ ಬರಲಿದೆ ಎಂದಿದ್ದಾರೆ. ವರದಿಯ ಬಗ್ಗೆ ನನಗೂ ಕುತೂಹಲವಿದೆ

- ಎಸ್‌.ಟಿ.ಸೋಮಶೇಖರ್‌, ಜಿಲ್ಲಾ ಉಸ್ತುವಾರಿ ಸಚಿವ ( ಗುರುವಾರ ಮಾಧ್ಯಮಗಳಿಗೆ ನೀಡಿದ ಹೇಳಿಕೆ)

––

ಸರ್ಕಾರ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸಂಭವಿಸಿದ ಘಟನೆ ಇದು. ಸಂತ್ರಸ್ತರಿಗೆ ಹೈಕೋರ್ಟ್‌ ನ್ಯಾಯ ಕೊಡಿಸಲಿದೆ ಎಂಬ ವಿಶ್ವಾಸವಿದೆ

- ಆರ್‌.ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT