ಬುಧವಾರ, ಆಗಸ್ಟ್ 21, 2019
25 °C
ಪ್ರವಾಹ ಇಳಿಯುತ್ತಿದ್ದಂತೆಯೆ ನಿಟ್ಟುಸಿರುಬಿಟ್ಟ ಅಧಿಕಾರಿಗಳು

ಗೊಂದಲವಿಲ್ಲದೆ ನಿಭಾಯಿಸಿದ ಜಿಲ್ಲಾಡಳಿತ

Published:
Updated:
Prajavani

ಕೊಳ್ಳೇಗಾಲ: ಈ ಬಾರಿ ಪ್ರವಾಹ ಪರಿಸ್ಥಿತಿಯನ್ನು ಜಿಲ್ಲಾಡಳಿತ ಯಾವುದೇ ಗೊಂದಲಕ್ಕೆ ಎಡೆ ಮಾಡದಂತೆ ನಿಭಾಯಿಸಿದೆ. ಕಾವೇರಿ ನದಿಯ ನೀರಿನ ಮಟ್ಟ ಏರುತ್ತಲೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಜನರ ಸ್ಥಳಾಂತರ ಹಾಗೂ ಪರಿಹಾರ ಕೇಂದ್ರ ತೆರೆಯಲು ಬೇಕಾದ ಎಲ್ಲ ವ್ಯವಸ್ಥೆ ಮಾಡಿದರು. 

ಅಧಿಕಾರಿಗಳ ತಂಡದೊಂದಿಗೆ ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡರು. ನೋಡೆಲ್‌ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಮೇಲ್ವಿಚಾರಣೆಯ ಜವಾಬ್ದಾರಿ ಕೊಟ್ಟರು. 

ಕಳೆದ ವರ್ಷ ಪರಿಹಾರ ಕೇಂದ್ರದಲ್ಲಿ ಎರಡು ಊರುಗಳ ಸಂತ್ರಸ್ತರಿಗೆ ಒಂದೇ ಕಡೆ ವ್ಯವಸ್ಥೆ ಮಾಡಿದ್ದಕ್ಕೆ ಆಕ್ಷೇಪ ಕೇಳಿ ಬಂದಿತ್ತು. ಸಣ್ಣ ಗೊಂದಲವೂ ಉಂಟಾಗಿತ್ತು. ಇದರಿಂದ ಪಾಠ ಕಲಿತಿದ್ದ ಜಿಲ್ಲಾಡಳಿತ, ನೆರೆಪೀಡಿತವಾದ ಪ್ರತಿ ಗ್ರಾಮಕ್ಕೂ ಪ್ರತ್ಯೇಕ ಪರಿಹಾರ ಕೇಂದ್ರಗಳನ್ನು ತೆರೆಯಿತು. ಹಾಗಾಗಿ, ಎಲ್ಲೂ ಏನೂ ಅಸಮಾಧಾನ ಉಂಟಾಗಲಿಲ್ಲ. 

ಸಂತ್ರಸ್ತರಿಗೆ ನೀಡಬೇಕಾದ ಊಟ ಹಾಗೂ ಅವಶ್ಯಕ ವಸ್ತುಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳಲಾಗಿತ್ತು. ಸಾಲು ಸಾಲು ರಜೆಗಳಿದ್ದರೂ ಜಿಲ್ಲಾಧಿಕಾರಿಯಿಂದ ಹಿಡಿದು ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳು ಹಾಗೂ ತಾಲ್ಲೂಕುಮಟ್ಟದ ಎಲ್ಲ ಅಧಿಕಾರಿಗಳು ಸ್ಥಳದಲ್ಲಿದ್ದು, ನೆರೆ ‍ಪರಿಸ್ಥಿತಿ ನಿಭಾಯಿಸುವುದರಲ್ಲಿ ತೊಡಗಿಕೊಂಡಿದ್ದರು. 

ಜಾನುವಾರುಗಳನ್ನು ಕಟ್ಟಿ ಹಾಕಲು ಹಾಗೂ ಅವುಗಳಿಗೆ ಮೇವು ನೀಡಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಕೆಲವು ರೈತರು ದೂರಿದ್ದು ಬಿಟ್ಟರೆ, ಜಿಲ್ಲಾಡಳಿತದ ವಿರುದ್ಧ ಬೇರೆ ಯಾವ ದೂರು ಬರಲಿಲ್ಲ. 

ಮೆಚ್ಚುಗೆ: ಪರಿಹಾರ ಕೇಂದ್ರದಲ್ಲಿನ ವ್ಯವಸ್ಥೆ, ನೀಡಿದ ಊಟ ಹಾಗೂ ಅಧಿಕಾರಿಗಳು ತೋರಿದ ಕಾಳಜಿ ಬಗ್ಗೆ ಸಂತ್ರಸ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪ್ರವಾಹಕ್ಕೆ ಸಿಲುಕಿದ್ದ ನಮ್ಮನ್ನು ರಕ್ಷಣೆ ಮಾಡಿ ಪರಿಹಾರ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ನಮಗೆ ಯಾವುದೇ ತೊಂದರೆಯಾಗಿಲ್ಲ. ನಮ್ಮನ್ನು ಉತ್ತಮವಾಗಿ ನೋಡಿಕೊಂಡಿದ್ದಾರೆ’ ಎಂದು ಹಳೆ ಅಣಗಳ್ಳಿಯ ಕುಳ್ಳನಂಜಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಸಕರೂ ಭಾಗಿ: ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಕೂಡ ನೆರೆಪೀಡಿತ ಗ್ರಾಮಸ್ಥರ ಸ್ಥಳಾಂತರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ನೀರಿನ ಮಟ್ಟ ಏರುತ್ತಿದ್ದಂತೆಯೇ ಅಧಿಕಾರಿಗಳೊಂದಿಗೆ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಪರಿಹಾರ ಕೇಂದ್ರಗಳಿಗೂ ಭೇಟಿ ಕೊಟ್ಟು ಸಾಂತ್ವನ ಹೇಳುವುದರ ಜೊತೆಗೆ ಪರಿಹಾರ ಕೊಡಿಸುವ ಭರವಸೆಯನ್ನೂ ನೀಡಿದರು. 

ಪರಿಹಾರದ ಮೇಲೆ ಜನರ ನಿರೀಕ್ಷೆ

ಇದುವರೆಗೆ ಜಿಲ್ಲಾಡಳಿತದ ಕಾರ್ಯವೈಖರಿಯ ಬಗ್ಗೆ ಸಂತ್ರಸ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರವಾಹದಿಂದಾಗಿ ಆಗಿರುವ ನಷ್ಟಕ್ಕೆ ನೀಡಲಾಗುವ ಪರಿಹಾರದ ನಿರೀಕ್ಷೆಯಲ್ಲಿ ಜನರಿದ್ದಾರೆ.

‘ಕಳೆದ ವರ್ಷ ಸರಿಯಾಗಿ ಪರಿಹಾರ ಕೊಟ್ಟಿರಲಿಲ್ಲ. ಹೆಚ್ಚು ನಷ್ಟ ಅನುಭವಿಸಿದ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿತ್ತು. ಸಣ್ಣಪುಟ್ಟ ಹಾನಿಯಾದವರನ್ನು ನಿರ್ಲಕ್ಷಿಸಲಾಗಿತ್ತು’ ಎಂದು ಆರೋಪಿಸಿದ್ದ ಕೆಲವು ಗ್ರಾಮಸ್ಥರು, ನೆರೆ ಬಂದಾ‌ಗ ಊರು ಬಿಡಲು ಹಿಂದೇಟು ಹಾಕಿದ್ದರು. 

‘ಈ ವರ್ಷ ತಾರತಮ್ಯ ಮಾಡದೆ ನಷ್ಟ ಅನುಭವಿಸಿದವರಿಗೆ ಎಲ್ಲರಿಗೂ ಪರಿಹಾರ ನೀಡಲಾಗುವುದು’ ಎಂದು ಶಾಸಕರು, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಂತ್ರಸ್ತರು ಕೂಡ ಅದೇ ಭರವಸೆ ಇಟ್ಟುಕೊಂಡು ಪರಿಹಾರ ಕೇಂದ್ರಗಳಿಂದ ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. 

Post Comments (+)