ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲದಲ್ಲಿ ಪ್ರವಾಹ ಭೀತಿ; ಕಟ್ಟೆಚ್ಚರ

ನಾಲ್ಕನೇ ದಿನವೂ ಜಿಲ್ಲೆಯಾದ್ಯಂತ ಮಳೆ, ಕಾಲುವೆಗಳಿಗೆ ನೀರು, ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
Last Updated 9 ಆಗಸ್ಟ್ 2019, 15:30 IST
ಅಕ್ಷರ ಗಾತ್ರ

ಚಾಮರಾಜನಗರ/ ಕೊಳ್ಳೇಗಾಲ: ಜಿಲ್ಲೆಯಾದ್ಯಂತ ಶುಕ್ರವಾರವೂ ಉತ್ತಮ ಮಳೆಯಾಗಿದೆ. ಹೆಚ್ಚಿನ ಆಸ್ತಿ, ಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ಈ ಮಧ್ಯೆ, ಕಬಿನಿ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿರುವುದರಿಂದ ಕೊಳ್ಳೇಗಾಲ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

ಕೆಆರ್‌ಎಸ್‌ ಅಣೆಕಟ್ಟೆಯಿಂದ ಇನ್ನೂ ನೀರು ಹೊರಕ್ಕೆ ಬಿಡದೇ ಇರುವುದರಿಂದ ತಕ್ಷಣಕ್ಕೆ ಗ್ರಾಮಗಳು ಮುಳುಗುವ ಸಾಧ್ಯತೆ ಕಡಿಮೆ. ಆದರೆ, ಗುರುವಾರ ರಾತ್ರಿಯಿಂದೀಚೆಗೆ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಶುಕ್ರವಾರ ತಡ ರಾತ್ರಿ ಅಥವಾ ಶನಿವಾರ ನೀರು ಗ್ರಾಮಕ್ಕೆ ಬರಲಿದೆ ಎಂದು ಸ್ಥಳೀಯರು ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ.

ಜಿಲ್ಲಾಧಿಕಾರಿ ಭೇಟಿ: ನೆರೆ ಭೀತಿ ಎದುರಿಸುತ್ತಿರುವ ದಾಸನಪುರ ಮತ್ತು ಯಡಕುರಿಯಾ ಗ್ರಾಮಗಳಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಕಬಿನಿ ಜಲಾಶಯದಿಂದ 1.25 ಲಕ್ಷ ಕ್ಯುಸೆಕ್‌ ನೀರನ್ನು ಬಿಡಲಾಗುತ್ತಿದೆ. ಗ್ರಾಮದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇವೆ. ಪ್ರವಾಹ ಎದುರಾಗು ಸಾಧ್ಯತೆ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿಸಲಾಗಿದೆ’ ಎಂದು ಕಾವೇರಿ ಅವರು ತಿಳಿಸಿದರು.

‘ನದಿ ತೀರದ ಗ್ರಾಮಗಳಾದ ದಾಸನಪುರ, ಹಳೇಹಂಪಾಪುರ, ಮುಳ್ಳೂರು, ಹಳೆ ಅಣ್ಣಗಳ್ಳಿ, ಹರಳೆ, ನರೀಪುರ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿಯಾ ಗ್ರಾಮಗಳ ಜನರ ಪ್ರತಿಯೊಂದು ಮನೆಗಳಿಗೂ ಅಧಿಕಾರಿಗಳು ಭೇಟಿ ನೀಡಿ ಪ್ರವಾಹದ ಮಾಹಿತಿಯನ್ನು ನೀಡಿದ್ದಾರೆ. ಕಾವೇರಿ ನದಿಯ ಹತ್ತಿರ ಯಾರೂ ಹೋಗಬಾರದು ಮತ್ತು ಜಾನುವಾರುಗಳನ್ನೂ ಕರೆದುಕೊಂಡು ಹೋಗಬಾರದು. ಬ್ಯಾರಿಗೇಟ್‍ಗಳನ್ನು ಅಳವಡಿಸಲಾಗಿದೆ. ಪೊಲೀಸ್ ಭದ್ರತೆ ಒದಗಿಲಾಗಿದೆಯನ್ನೂ ಒದಗಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಶುಕ್ರವಾರ ಮಧ್ಯಾಹ್ನದವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 36 ಮಿ.ಮೀ ಮಳೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 82 ಮಿ.ಮೀ ಮಳೆಯಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 10 ಮಿ.ಮೀ ಹಾಗೂ ಯಳಂದೂರು ತಾಲ್ಲೂಕಿನಲ್ಲಿ 30 ಮಿ.ಮೀ ಮಳೆ ಸುರಿದಿದೆ.

ಆಗಸ್ಟ್‌ ತಿಂಗಳ, ಈ ಒಂಬತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 72 ಮಿ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 15 ಮಿ.ಮೀ ಮಳೆಯಾಗುತ್ತದೆ.

ಇನ್ನಷ್ಟು ಮಳೆ: ಮೈಸೂರಿನ ನಾಗನಹಳ್ಳಿಯಲ್ಲಿರುವ ಗ್ರಾಮೀಣ ಕೃಷಿ ಹವಾಮಾನ ಸೇವಾ ಕೇಂದ್ರದ ನೀಡಿರುವ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಇದೇ 14ರವೆಗೂ ಸಾಧಾರಣ ಮಳೆಯಾಗಲಿದೆ.

ಕಾಲುವೆಗಳಿಗೆ ನೀರು; ರೈತರ ಸಂತಸ
ಯಳಂದೂರು:
ನಿರಂತರ ಮಳೆಯಾಗುತ್ತಿರುವುದರಿಂದ ಹಾಗೂ ಕಾವೇರಿ, ಕಬಿನಿ ನದಿಗಳಿಗೆ ಒಳ ಹರಿವು ಹೆಚ್ಚಿರುವುದರಿಂದ ಕಾವೇರಿ ನೀರಾವರಿ ನಿಗಮವು ತಾಲ್ಲೂಕಿನ ಕಾಲುವೆ, ನಾಲೆಗಳಿಗೆ ನೀರು ಹರಿಸಲು ಆರಂಭಿಸಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಕಾಲುವೆಗಳಿಗೆ ನೀರು ಬಿಟ್ಟಿರುವುದರಿಂದ ತಾಲ್ಲೂಕಿನ ಹೊಲ, ಗದ್ದೆಗಳ ಸಮೀಪದಲ್ಲಿನ ಪ್ರದೇಶಗಳು ಜಲಾವೃತವಾಗಿವೆ. ಇದರಿಂದ ಕೆಳಪಾತ್ರದ ವ್ಯವಸಾಯದ ಭೂಮಿಗಳಲ್ಲಿ ನೀರು ಆವರಿಸಿದೆ.‌

ವೈ.ಕೆ.ಮೋಳೆ ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಶುಕ್ರವಾರ ನೀರು ತುಂಬಿದೆ. ಇದರಿಂದ ಭತ್ತ ನಾಟಿ ಮಾಡುವ ಕೃಷಿಕರ ಆಸೆ ಗರಿಗೆದರಿದೆ. ಕೆಲವೆಡೆ ಕೆರೆಕಟ್ಟೆಗಳಿಗೂ ನೀರು ಹರಿಸಲಾಗುತ್ತಿದೆ. ಜಲಮೂಲಗಳು ಸುಸ್ಥಿತಿಯಲ್ಲಿ ಇಲ್ಲದ ಸ್ಥಳಗಳಲ್ಲಿ ನೀರು ನುಗ್ಗವ ಸ್ಥಿತಿ ಎದುರಾಗಿದೆ.

‘ಬಿತ್ತನೆಗೆ ಸಿದ್ಧತೆ ನಡೆಸಿದ್ದೆವು. ನೀರು ಇಳಿದ ನಂತರ ವ್ಯವಸಾಯ ಮಾಡಬೇಕಿದೆ. ಗದ್ದೆಗಳಲ್ಲಿ ನೀರು ತುಂಬಿರುವುದರಿಂದ ಅಂತರ್ಜಲವೂ ಏರಿಕೆ ಆಗಬಹುದು’ ಎಂದು ವೈ‌.ಕೆ.ಮೋಳೆ ಕೃಷಿಕ ಮಾದಶೆಟ್ಟಿ‌ ಹೇಳಿದರು.

ಯಳಂದೂರು ತಾಲ್ಲೂಕಿನ ರಾಘವೇಂದ್ರ ಚಿತ್ರಮಂದಿರದ ಸಮೀಪದ ಗದ್ದೆಗಳಲ್ಲಿ ಶುಕ್ರವಾರ ಕಾಲುವೆ ನೀರು ತುಂಬಿ ಕೆರೆಯಂತಾಗಿದೆ

ತುಂಬಿದಕೆರೆ: 940 ಎಕರೆಗಳಷ್ಟು ವಿಸ್ತಾರವಾಗಿರುವ ಮಲ್ಲಿಗೆಹಳ್ಳಿಕೆರೆ ಒಂದೇ ದಿನದಲ್ಲಿ ಅರ್ಧ ತುಂಬಿದೆ. ಶುಕ್ರವಾರ ನಾಲೆಯಲ್ಲಿ ಇನ್ನೂ ಹೆಚ್ಚಿನ ನೀರು ಹರಿಯುತ್ತಿದ್ದು, ಶನಿವಾರ ಭರ್ತಿಯಾಗುವ ನಿರೀಕ್ಷೆ ಇದೆ.

‘ಕಾಲುವೆಯಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಸಮೀಪದ ಗ್ರಾಮಗಳ ಜನರು ಎಚ್ಚರಿಕೆ ವಹಿಸಬೇಕು. ನೀರು ಗ್ರಾಮಕ್ಕೆ ನುಗ್ಗುವ ಅಪಾಯ ಎದುರಾದರೆ ಶೀಘ್ರ ಮಾಹಿತಿ ನೀಡಬೇಕು’ ಎಂದು ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆ ನೀಡಿದೆ.

ಕಂಟ್ರೋಲ್‌ ರೂಂ ಸ್ಥಾಪನೆ
ಪ್ರವಾಹ ಪರಿಸ್ಥಿತಿ ಎದುರಾದರೆ ನಾಗರಿಕರ ನೆರವಿಗಾಗಿ ಕೊಳ್ಳೇಗಾಲ ತಾಲ್ಲೂಕು ಕಚೇರಿಯಲ್ಲಿ 24X7ರ ಅವಧಿಯಲ್ಲಿಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ (ದೂ.ಸಂ. 8224-251042) ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT