ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಹಾನಿ: ಪರಿಹಾರಕ್ಕೆ ವಾಟಾಳ್‌ ಆಗ್ರಹ

ದಿನ ಬಳಕೆ ಆಹಾರ ಪದಾರ್ಥಗಳಿಗೆ ಜಿಎಸ್‌ಟಿ; ಕೇಂದ್ರದ ವಿರುದ್ಧ ವಾಗ್ದಾಳಿ
Last Updated 17 ಜುಲೈ 2022, 14:14 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದಲ್ಲಿ ನೆರೆಯಿಂದಾಗಿ ಮೃತಪಟ್ಟವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್‌ ಅವರು ಭಾನುವಾರ ಒತ್ತಾಯಿಸಿದರು.

ನಗರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ, ಬೆಂಬಲಿಗರೊಂದಿಗೆ ಛತ್ರಿ ಹಿಡಿದು ಪ್ರತಿಭಟನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮಳೆ ಹಾಗೂ ಪ್ರವಾಹದಿಂದಾಗಿ ಜಾನುವಾರುಗಳನ್ನು ಕಳೆದುಕೊಂಡವರಿಗೆ ದನ, ಕರು ಖರೀದಿಸಲು ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ಮನೆಗಳನ್ನು ಕಳೆದುಕೊಂಡವರಿಗೆ ತಕ್ಷಣ ಮನೆಗಳನ್ನು ಕಟ್ಟಿಸಿಕೊಡಲು ಸರ್ಕಾರ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

‘ಕರ್ನಾಟಕದ್ದು ಕಣ್ಣೀರಿನ ಕಥೆಯಾಗಿದೆ. ರಾಜ್ಯದ ಉದ್ದಗಲಕ್ಕೂ ನೆರೆ ಹಾವಳಿಯಿಂದ ಜನತೆ ತತ್ತರಿಸಿದ್ದಾರೆ. ಬೀದರ್‌ನಿಂದ ಚಾಮರಾಜನಗರದವರಗೆ, ಮಂಗಳೂರಿನಿಂದ- ಕೋಲಾರದವರೆಗೂ ಅತ್ಯಂತ ಗಂಭೀರ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಉಂಟಾಗಿರುವ ನೆರೆ ಪ‍ರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿಲ್ಲ’ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಅವರು ಉತ್ತರಪ್ರದೇಶದಲ್ಲಿ ಏನಾದರೂ ಆದರೆ ಓಡುಹೋಗ್ತಾರೆ. ಕರ್ನಾಟಕ ಮಳೆಯಿಂದ ತತ್ತರಿಸಿದೆ. ಅಪಾರ ಪ್ರಮಾಣದಲ್ಲಿ ಹಾನಿಯಾದರೂ ಯಾಕೆ ಬಂದಿಲ್ಲ? ಪ್ರಧಾನಿ ರಾಜ್ಯ ಭೇಟಿ ನೀಡಿ ಪರಿಶೀಲಿಸಬೇಕು. ಹೆಚ್ಚಿನ ಪರಿಹಾರವನ್ನು ರಾಜ್ಯಕ್ಕೆ ನೀಡಬೇಕು‌’ ಎಂದು ಆಗ್ರಹಿಸಿದರು.

ಕೇಂದ್ರದ ವಿರುದ್ಧ ವಾಗ್ದಾಳಿ: ಹಾಲು, ಮಜ್ಜಿಗೆ ಸೇರಿದಂತೆ ಇತರೆ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ಹೇರುವ ನಿರ್ಧಾರಕ್ಕೆ ಕೇಂದ್ರದ ವಿರುದ್ಧ ಹರಿಹಾಯ್ದ ವಾಟಾಳ್‌ ನಾಗರಾಜ್‌, ಮೋದಿ ಸರ್ಕಾರ ಇನ್ನು ಮೂತ್ರ ವಿಸರ್ಜನೆಗೂ ಜಿಎಸ್‌ಟಿ ವಿಧಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿರುವುದು ಆರ್‌ಎಸ್‌ಎಸ್‌ ಸರ್ಕಾರ. ಆಹಾರ ಪದಾರ್ಥಗಳಿಗೆ ಜಿಎಸ್‌ಟಿ ಯಾಕೆ? ಇದಕ್ಕಿಂತ ಅಪಮಾನ, ಅಗೌರವ ಇನ್ನೊಂದಿಲ್ಲ. ಬಡವರನ್ನು ಸರ್ಕಾರ ಕೊಲ್ಲುತ್ತಿದೆ’ ಎಂದು ಆರೋಪಿಸಿದರು.

‘ಮೋದಿ ಅಧಿಕಾರದಿಂದ ಕೆಳಗಿಳಿದರೆ ದೇಶ ಉದ್ದಾರವಾಗುತ್ತದೆ. ಮೋದಿ ಯಾವಾಗಲೂ ಶ್ರೀಮಂತರ ಪರ. ಮಾತು ಬಡವರ ಪರ ನಡೆನುಡಿ ಶ್ರೀಮಂತರ ಪರ. ಅದಾನಿ, ಅಂಬಾನಿ ಮೋದಿಯವರ ಎಡ ಬಲ. ಪೆಟ್ರೋಲ್, ಡಿಸೇಲ್ ವ್ಯಾಪಾರ ಶ್ರೀಮಂತರ ವ್ಯಾಪಾರವಾಗಿರುವುದರಿಂದ ಅದರ ಮೇಲೆ ಜಿಎಸ್‌ಟಿ ಹಾಕದೆ, ಬಡವರು ಬಳಸುವ ಬಳಸುವ ಆಹಾರ ಪದಾರ್ಥಗಳ ಮೇಲೆ ಜಿಟಿಎಸ್ ವಿಧಿಸಿದ್ದಾರೆ’ ಎಂದು ದೂರಿದರು.

ಹುಂಡಿ ಬಸವಣ್ಣ, ಶಿವಲಿಂಗಮೂರ್ತಿ, ಗು.ಪುರುಷೋತ್ತಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT