ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌದಳ್ಳಿ: ಪ್ಲೋರೈಡ್‌ಯುಕ್ತ ನೀರು; ಜನರ ಆತಂಕ

ಪಂಚಾಯಿತಿ ಕೇಂದ್ರ ಸ್ಥಾನದಲ್ಲೇ ಕುಡಿಯುವ ನೀರಿಗಾಗಿ ಕಿಲೋ ಮೀಟರ್‌ ದೂರ ಅಲೆಯಬೇಕಾದ ಸ್ಥಿತಿ
Last Updated 30 ಮೇ 2021, 5:31 IST
ಅಕ್ಷರ ಗಾತ್ರ

ಹನೂರು: ಚರಂಡಿಯಲ್ಲಿ ತುಂಬಿರುವ ಹೂಳು, ರಸ್ತೆ ಬದಿಯಲ್ಲೇ ರಾಶಿ ರಾಶಿ ಕಸ, ಕುಡಿಯುವ ನೀರಿಗಾಗಿ ದಿನವಿಡೀ ತುಂಬೆಯ ಮುಂದೆ ನಿಲ್ಲಬೇಕಾದ ಸ್ಥಿತಿ…

ಮಲೆಮಹದೇಶ್ವರ ಬೆಟ್ಟ ಸಂಪರ್ಕಿಸುವ ಮಾರ್ಗದಲ್ಲಿ ಸಿಗುವ ಕೌದಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲೇ ಗ್ರಾಮಸ್ಥರು ಇಂಥ ಸ್ಥಿತಿಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೌದಳ್ಳಿಯಲ್ಲಿ ದಿನೇ ದಿನೇ ಕಲುಷಿತ ವಾತಾವರಣ ಹೆಚ್ಚುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಗ್ರಾಮದ 4ನೇ ವಾರ್ಡ್‌ನಲ್ಲಿ 1500 ಮುಸ್ಲಿಂ ಕುಟುಂಬಗಳಿವೆ. ಆದರೆ, ಪ್ರತಿನಿತ್ಯ ಕುಡಿಯುವ ನೀರಿಗಾಗಿ ಇವರು ಪಡುವ ಪಾಡು ಹೇಳತೀರದು. ಎರಡು ತಿಂಗಳಿನಿಂದ ಈ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರ ಕಕ್ಕೇರಿದೆ. ಈ ಬಗ್ಗೆ ನಿವಾಸಿಗಳು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ.

ವಾರಕ್ಕೊಮ್ಮೆ ಬಿಡುವ ನೀರು ಸಹ ಪ್ಲೋರೈಡ್ ಯುಕ್ತವಾಗಿದೆ. ಇದನ್ನು ಕುಡಿಯುತ್ತಿರುವುದರಿಂದ ಮಕ್ಕಳು ಹಾಗೂ ವೃದ್ಧರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಂಭವ ಇದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಇದ್ದರೂ ಕೌದಳ್ಳಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸುತ್ತಾರೆ ಗ್ರಾಮದ ಮುಬಾರಕ್ ಖಾನ್.

ಚರಂಡಿಯಲ್ಲಿ ಹೂಳು ತುಂಬಿ ವರ್ಷ ಕಳೆಯುತ್ತಿದ್ದರೂ ಅದನ್ನು ಅದನ್ನು ಪಂಚಾಯಿತಿ ಅಧಿಕಾರಿಗಳು ತೆಗೆಸಿಲ್ಲ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಮಲೇರಿಯ, ಚಿಕೂನ್‌ಗುನ್ಯ ಮೊದಲಾದ ರೋಗಗಳಿಗೆ ಇಲ್ಲಿನ ಜನರು ಆಗಾಗ್ಗೆ ತುತ್ತಾಗುತ್ತಿದ್ದಾರೆ. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವಂತೆ ಇಲ್ಲಿನ ಪ್ರಗತಿಪರ ಸಂಘಟನೆಗಳು ಹಲವು ಬಾರಿ ಪಿಡಿಒಗೆ ಮನವಿ ಸಲ್ಲಿಸಿದ್ದಾರೆ. ಪಂಚಾಯಿತಿ ಮುಂಭಾಗ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂದು ನೂರುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಬದಿ ಕಸದ ರಾಶಿ: ಗ್ರಾಮಕ್ಕೆ ಕಾಲಿಡುತ್ತಿದ್ದಂತೆ ಮುಖ್ಯ ರಸ್ತೆ ಹಾಗೂ ಬಡಾವಣೆಯ ರಸ್ತೆ ಸೇರಿದಂತೆ ಎಲ್ಲೆಡೆ ಕಸದ ರಾಶಿ ಕಣ್ಣಿಗೆ
ರಾಚುತ್ತದೆ. ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳು, ಕೋಳಿ ಅಂಗಡಿಗಳ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲೇ ಎಸೆಯುವುದರಿಂದ ದುರ್ವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ.

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹೆಚ್ಚು ಆಳ ಕೊರೆದಂತೆ ನೀರು ಪ್ಲೋರೈಡ್ ಯುಕ್ತವಾಗಿ ಬರುತ್ತಿದೆ. ಈ ಬಗ್ಗೆ ಭೂಗರ್ಭ ಶಾಸ್ತ್ರಜ್ಞರಿಂದಲೂ ಪರಿಶೀಲನೆ ನಡೆಸಲಾಗಿದೆ. ನೀರನ್ನು ಕುದಿಸಿ ಆರಿಸಿ ಕುಡಿಯಬಹುದು ಎಂದು ಅವರು ಹೇಳಿದ್ದಾರೆ. ಗ್ರಾಮದ ಸ್ವಚ್ಛತೆ ಬಗ್ಗೆ ಕ್ರಮ ವಹಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹೊಸ ಬೋರ್‌ವೆಲ್ ಪಾಯಿಂಟ್‌ ಗುರುತಿಸಲಾಗಿದ್ದು, ಕೊರೆಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮರಿಸ್ವಾಮಿ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT