ಸೋಮವಾರ, ಅಕ್ಟೋಬರ್ 18, 2021
23 °C
ಬೀನ್ಸ್‌, ಕ್ಯಾರೆಟ್‌ ಬೆಲೆ ಹೆಚ್ಚಳ, ಏಲಕಿ ಬಾಳೆಹಣ್ಣು ಕೊಂಚ ತುಟ್ಟಿ

ಆಯುಧಪೂಜೆ: ಹೂವಿನ ಧಾರಣೆ ಏರುಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ದಸರಾ ಹಬ್ಬದ ಕಾರಣಕ್ಕೆ ಜಿಲ್ಲೆಯಲ್ಲಿ ಹೂವಿನ ಧಾರಣೆ ಏರುಗತಿಯಲ್ಲಿದ್ದು, ಆಯುಧಪೂಜೆ, ವಿಜಯ ದಶಮಿಯ ದಿನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಗೌರಿ– ಗಣೇಶ ಹಬ್ಬದ ಸಂದರ್ಭದಲ್ಲಿ ಗಗನಕ್ಕೆ ಏರಿದ್ದ ಹೂವುಗಳ ಬೆಲೆ, ನಂತರದ ವಾರಗಳಲ್ಲಿ ಇಳಿದಿತ್ತು. ಎರಡು ವಾರಗಳಿಂದ ಹೂವುಗಳಿಗೆ ಸ್ವಲ್ಪ ಬೇಡಿಕೆ ಬಂದು ಧಾರಣೆ ಚೇತರಿಸಿಕೊಂಡಿತ್ತು. 

ನವರಾತ್ರಿ ಹಬ್ಬ ಆರಂಭಗೊಂಡ ನಂತರ ಹೂವು ಖರೀದಿಸುತ್ತಿರುವವರ ಸಂಖ್ಯೆ ಹೆಚ್ಚಿದ್ದು ಕೆಲವು ಹೂವುಗಳ ಬೆಲೆ ಹೆಚ್ಚಾಗಿದೆ. 

ನಗರಕ್ಕೆ ಸಮೀಪದಲ್ಲಿರುವ ಚೆನ್ನೀಪುರದ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರಕ್ಕೆ ಕೆಜಿಗೆ ₹600ರಿಂದ ₹800ರವೆಗೆ ಇತ್ತು. ಕಳೆದ ವಾರ ₹400  ಇತ್ತು. ಕಾಕಡ, ಸೇವಂತಿಗೆ, ಸುಗಂಧರಾಜ ಹಾಗೂ ಚೆಂಡು ಹೂವುಗಳ ಬೆಲೆಯೂ ಈ ವಾರ ಹೆಚ್ಚಾಗಿದೆ. ಕಾಕಡಕ್ಕೆ ಕೆಜಿಗೆ ₹400, ಸೇವಂತಿಗೆಗೆ ₹100–₹120, ಸುಗಂಧರಾಜ ₹120ರಿಂದ ₹160 ಹಾಗೂ ಚೆಂಡು ಹೂವಿಗೆ ₹20ರಿಂದ ₹40ರವರೆಗೆ ಬೆಲೆ ಇದೆ. 

‘ಮಳೆಯ ವಾತಾವರಣ ಇರುವುದರಿಂದ ಚೆನ್ನಾಗಿರುವ ಹೂವುಗಳು ಬರುತ್ತಿಲ್ಲ. ಇದರ ಜೊತೆಗೆ ಹಬ್ಬವೂ ಆರಂಭವಾಗಿರುವುದರಿಂದ ಬೆಲೆ ಹೆಚ್ಚಾಗಿದೆ. ಆಯುಧಪೂಜೆ, ವಿಜಯದಶಮಿ ದಿನಗಳಲ್ಲಿ ಧಾರಣೆ ಇನ್ನಷ್ಟು ಹೆಚ್ಚಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಹಬ್ಬದ ಕಾರಣಕ್ಕೆ ಹಣ್ಣುಗಳ ಪೈಕಿ ಏಲಕ್ಕಿ ಬಾಳೆ ಹಣ್ಣಿನ ಬೆಲೆ ಕೆಜಿಗೆ ₹10 ಹೆಚ್ಚಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರದವರೆಗೂ ಕೆಜಿ ಏಲಕ್ಕಿ ಬಾಳೆ ಹಣ್ಣಿಗೆ ₹40 ಇತ್ತು. ಈ ವಾರ ₹50 ಆಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. 

ಬೀನ್ಸ್‌, ಕ್ಯಾರೆಟ್‌ ತುಟ್ಟಿ: ತರಕಾರಿಗಳ ಮಾರುಕಟ್ಟೆಯಲ್ಲಿ ಈ ವಾರ ಬೀನ್ಸ್‌ ಮತ್ತು ಕ್ಯಾರೆಟ್‌ ಬೆಲೆ ಹೆಚ್ಚಾಗಿದೆ. 

ಹಾಪ್‌ಕಾಮ್ಸ್‌ನಲ್ಲಿ ಬೀನ್ಸ್‌ ಬೆಲೆ ಕೆಜಿಗೆ ₹30ರಷ್ಟು ಹೆಚ್ಚಾಗಿದೆ. ಕಳೆದವಾರ ₹30 ಇದ್ದ ಬೆಲೆ ಈ ವಾರ ₹60ಕ್ಕೆ ಏರಿದೆ. ಕ್ಯಾರೆಟ್‌ ಬೆಲೆಯೂ 10 ಹೆಚ್ಚಾಗಿ ₹40ಕ್ಕೆ ತಲುಪಿದೆ. ಈರುಳ್ಳಿ, ಮೂಲಂಗಿ ಸೇರಿದಂತೆ ಇತರ ತರಕಾರಿಗಳ ಧಾರಣೆ ಯಥಾಸ್ಥಿತಿ ಮುಂದುವರೆದಿದೆ.

‘ಮಳೆಯ ಕಾರಣಕ್ಕೆ ಬೀನ್ಸ್‌, ಕ್ಯಾರೆಟ್‌ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಆವಕವಾಗುತ್ತಿದೆ. ಹಾಗಾಗಿ. ಬೆಲೆ ಹೆಚ್ಚಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ತಿಳಿಸಿದರು.  

ತಳ್ಳುಗಾಡಿಗಳ ವ್ಯಾಪಾರಿಗಳು ಪೈಪೋಟಿ ದರದಲ್ಲಿ ಬೀನ್ಸ್‌, ಕ್ಯಾರೆಟ್‌ಗಳನ್ನು ಮಾರುತ್ತಿದ್ದಾರೆ. ಕೆಲವರು ಕೆಜಿ ಬೀನ್ಸ್‌ಗೆ ₹30 ಹಾಗೂ ಇನ್ನೂ ಕೆಲವರು ₹40ಕ್ಕೆ ಮಾರುತ್ತಿದ್ದಾರೆ. 

ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.