ಶನಿವಾರ, ಜೂನ್ 25, 2022
24 °C
ಗುಂಡ್ಲುಪೇಟೆ: ಹೈನುಗಾರರಲ್ಲಿ ಆತಂಕ, ಕೋವಿಡ್‌ ಕಾರಣಕ್ಕೆ ನಡೆಯದ ಲಸಿಕೆ ಅಭಿಯಾನ

ಕಾಲುಬಾಯಿ ಜ್ವರ: ಜಾನುವಾರುಗಳ ಸರಣಿ ಸಾವು

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಹಲವು ಜಾನುವಾರುಗಳು ಮೃತಪಟ್ಟಿವೆ. ಇದು ಹೈನುಗಾರಿಕೆ ಮಾಡುವ ರೈತರಲ್ಲಿ ಆತಂಕ ಸೃಷ್ಟಿಸಿದೆ.

ಬೇಗೂರು ಭಾಗದ ಹೆಗ್ಗಡಹಳ್ಳಿ, ಕೋಟೆಕೆರೆ, ಭೋಗಯ್ಯನಹುಂಡಿ, ನೇನೆಕಟ್ಟೆ ಸೇರಿದಂತೆ ಹಂಗಳ ಭಾಗದ ಶಿವಪುರ, ಬಾಚಹಳ್ಳಿ, ಕಾಡಂಚಿನ ಗ್ರಾಮಗಳಾದ ಮಂಗಲ, ಯಲಚೆಟ್ಟಿ ಭಾಗದಲ್ಲಿ ಹೆಚ್ಚು ಜಾನುವಾರುಗಳು ಈ ಕಾಯಿಲೆಗೆ ತುತ್ತಾಗಿವೆ. 

ನವೆಂಬರ್‌, ಡಿಸೆಂಬರ್‌ನಲ್ಲಿ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕಲಾಗಿತ್ತು. ಆರು ತಿಂಗಳಿಗೊಮ್ಮೆ ಲಸಿಕೆ ಹಾಕಲಾಗುತ್ತಿದೆ. ಕೋವಿಡ್‌ 2ನೇ ಅಲೆಯ ಕಾರಣದಿಂದ ಲಸಿಕೆ ಅಭಿಯಾನ ನಡೆದಿಲ್ಲ. 

‘ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸದೆ ಇರುವುದರಿಂದ ಇಂತಹ ರೋಗಗಳು ಹರಡುತ್ತವೆ. ರೈತರು ಮುಂಜಾಗ್ರತಾ ಕ್ರಮವಾಗಿ ಮುಂಗಾರು ಆರಂಭವಾಗುತ್ತಿದ್ದಂತೆ ಜಾನುವಾರುಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು’ ಎಂಬುದು ಪಶು ವೈದ್ಯರ‌ ಸಲಹೆ.

ಕೆಲವು ರೈತರು ಲಸಿಕೆ ಹಾಕಿಸಿದರೆ ಜಾನುವಾರುಗಳಿಗೆ ತೊಂದರೆಯಾಗುತ್ತದೆ. ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಭಯದಲ್ಲಿ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ರಾಸುಗಳು ಬೇಗ ಸೋಂಕಿಗೆ ತುತ್ತಾಗುತ್ತವೆ ಎಂದು ಹೇಳುತ್ತಾರೆ ಅವರು. 

‘ಸಣ್ಣ ಕರುಗಳಿಗೆ ಈ ರೋಗ ತಗಲಿದರೆ ಬೇಗ ಮೃತಪಡುತ್ತವೆ. ದನದ ಕೊಟ್ಟಿಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಜಾನುವಾರುಗಳನ್ನು ಶುಚಿಯಾಗಿ ತೊಳೆಯಬೇಕು. ಜಾನುವಾರುಗಳು ಮೃತಪಟ್ಟಾಗ ಪಶು ಇಲಾಖೆಗೆ ತಿಳಿಸಿದರೆ ಶವಪರೀಕ್ಷೆ ನಡೆಸಿ ಕಾರಣ ಕಂಡುಹಿಡಿಯಬಹುದು’ ಎಂದು ಪಶು ವೈದ್ಯ ಮಾದೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ರೋಗ ಕಾಣಿಸಿಕೊಂಡ ಗ್ರಾಮಗಳಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಿಂಗಳ ಹಿಂದೆ ಸಹ ಕೆಲ ಭಾಗಗಳಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿ ಈಗ ನಿಯಂತ್ರಣಕ್ಕೆ ಬಂದಿದೆ’ ಎಂದು ಅವರು ಹೇಳಿದರು.  

‘ಕಾಲುಬಾಯಿ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ವೇಗವಾಗಿ ಹರಡುತ್ತದೆ. ರೋಗ ಕಾಣಿಸಿಕೊಂಡ ತಕ್ಷಣವೇ ಬಾಧಿತ ಹಸುವನ್ನು ಉಳಿದವುಗಳಿಂದ ಬೇರ್ಪಡಿಸಬೇಕು. ಸೋಡಿಯಂ ಕಾರ್ಬೊನೇಟ್ (ಅಡುಗೆ ಸೋಡಾ) ದ್ರಾವಣದಿಂದ ಕಾಲು ಮತ್ತು ಬಾಯಿಯನ್ನು ನಾಲ್ಕೈದು ಬಾರಿ  ಶುದ್ಧಗೊಳಿಸಬೇಕು. ವಿಟಮಿನ್ ಎ ಚುಚ್ಚುಮದ್ದು ಕೊಡಿಸಬೇಕು. ರೋಗದಿಂದ ಮೃತ‌ಪಟ್ಟ ಜಾನುವಾರುಗಳನ್ನು ಆಳವಾದ ಗುಂಡಿ ತೆಗೆದು ಸುಣ್ಣ ಹಾಕಿ ಮತ್ತೆ ಕಳೆಬರದ ಮೇಲೆ ಸುಣ್ಣ ಸುರಿದು ಮುಚ್ಚಬೇಕು’ ಎಂದು ವೈದ್ಯರು ಸಲಹೆ ನೀಡಿದರು. 

ಲಸಿಕೆ ನೀಡಿ: ‘ತಾಲ್ಲೂಕಿನಲ್ಲಿ ಕಾಲು ಬಾಯಿ ಜ್ವರದಿಂದ ಜಾನುವಾರುಗಳು ಸಾಯುತ್ತಿವೆ. ಇದರಿಂದ ಹೈನುಗಾರಿಕೆ ನಂಬಿಕೊಂಡು ಜೀವನ ಮಾಡುವ ರೈತರಿಗೆ ತೊಂದರೆ ಆಗುತ್ತದೆ. ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಲಸಿಕೆ ನೀಡಿ ಜಾನುವಾರುಗಳನ್ನು ಉಳಿಸದಿದ್ದಲ್ಲಿ ತಾಲ್ಲೂಕಿನ ಕಚೇರಿ ಮುಂಬಾಗ ಜಾನುವಾರುಗಳ ಜೊತೆಗೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ರೈತ ಮುಖಂಡ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಸ್ಥಿತಿ ನಿಯಂತ್ರಣದಲ್ಲಿದೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ ಅವರು, ‘ಮೇ ತಿಂಗಳ ಕೊನೆಯವಾರದಲ್ಲಿ ಕಾಲು ಬಾಯಿ ಜ್ವರದ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿದ್ದವು. ತಕ್ಷಣವೇ ಎಲ್ಲ ಕಡೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಹೇಳಿದರು.

‘ಪ್ರತಿ ಆರು ತಿಂಗಳಿಗೊಮ್ಮೆ ಕಾಲುಬಾಯಿ ಜ್ವರದ ಲಸಿಕೆ ನೀಡಲಾಗುತ್ತದೆ. ಕಳೆದ ವರ್ಷ ನವೆಂಬರ್‌–ಡಿಸೆಂಬರ್‌ ಅವಧಿಯಲ್ಲಿ ನೀಡಿದ್ದೆವು. ಈಗ ಮತ್ತೆ ನೀಡಬೇಕಿತ್ತು. ಆದರೆ, ಕೋವಿಡ್‌ ಎರಡನೇ ಅಲೆಯಿಂದಾಗಿ ಅದು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದಿಂದ ಯಾವ ಸೂಚನೆಯೂ ಬಂದಿಲ್ಲ. ಹಾಗಾಗಿ, ಸದ್ಯಕ್ಕೆ ರೋಗ ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು