ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳ್ಳುಗಾಡಿ, ಫುಟ್‌ಪಾತ್‌ ವ್ಯಾಪಾರಿಗಳ ತೆರವು

ನಿಗದಿತ ಸ್ಥಳದಲ್ಲಿ ವ್ಯಾಪಾರ ನಡೆಸಲು ನಗರಸಭೆ ಅಧಿಕಾರಿಗಳ ಸೂಚನೆ
Last Updated 21 ಮೇ 2020, 16:00 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ವಿವಿಧ ಸ್ಥಳಗಳಲ್ಲಿದ್ದ ತಳ್ಳುಗಾಡಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು ಹಾಗೂ ಫುಟ್‌ಪಾತ್‌ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಗರಸಭೆ ಅಧಿಕಾರಿಗಳು ಆರಂಭಿಸಿದ್ದು, ನಿಗದಿತ ಸ್ಥಳದಲ್ಲಿ ವ್ಯಾಪಾರ ನಡೆಸುವಂತೆ ಸೂಚಿಸಿದ್ದಾರೆ.

ಅಧಿಕಾರಿಗಳ ಕ್ರಮವನ್ನು ಖಂಡಿಸಿ ವ್ಯಾಪಾರಿಗಳು ಗುರುವಾರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್‌ ಅವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.

ಗುರುವಾರ ಬೆಳಿಗ್ಗೆಯೇ ನಗರಸಭೆ ಅಧಿಕಾರಿಗಳು, ನೌಕರರು ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಿದರು.

ನಗರಸಭೆ ಕಚೇರಿ ಮುಂಭಾಗದಲ್ಲಿದ್ದ ಹತ್ತಾರು ತಳ್ಳುಗಾಡಿ ವ್ಯಾಪಾರಿಗಳು, ಮಹಾವೀರ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಚಾಮರಾಜೇಶ್ವರ ದೇವಾಲಯದ ಸುತ್ತ ಸೇರಿದಂತೆ ವಿವಿಧ ಕಡೆಗಳಲ್ಲಿದ್ದ ತಳ್ಳುಗಾಡಿ, ಫುಟ್‌ಪಾತ್‌ ವ್ಯಾಪಾರಿಗಳನ್ನು ತೆರವುಗೊಳಿಸಿ ಬೇರೆ ಕಡೆಗೆ ಸ್ಥಳಾಂತರಿಸಿದರು.

ತಳ್ಳುಗಾಡಿ ತರಕಾರಿ ವ್ಯಾಪಾರಿಗಳನ್ನು ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಿದರು. ಹಣ್ಣು ಮಾರಾಟ ಮಾಡುತ್ತಿದ್ದವರಿಗೆ ವೀರಭದ್ರ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ವ್ಯಾಪಾರ ಮಾಡಲು ಸೂಚಿಸಿದರು.

ಹೂವಿನ ವ್ಯಾಪಾರಿಗಳಿಗೆ ಹಳೇ ಖಾಸಗಿ ಬಸ್‌ ನಿಲ್ದಾಣ ಬಳಿಯ ಮಾರಿಗುಡಿ ಮುಂಭಾಗದಲ್ಲಿ ಜಾಗ ತೋರಿಸಲಾಗಿದೆ. ಫುಟ್‌ಪಾತ್‌ನಲ್ಲಿ ಪೂಜಾ ಸಾಮಗ್ರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರನ್ನು ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗಕ್ಕೆ ಕಳುಹಿಸಲಾಯಿತು.

116 ಜನರನ್ನು ತೆರವುಗೊಳಿಸಲಾಗಿದೆ. ಇನ್ನು ಮುಂದೆ ನಿರ್ದಿಷ್ಟ ಸ್ಥಳಗಳಲ್ಲೇ ವ್ಯಾಪಾರ ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ.

ನಿಗದಿ ಪಡಿಸಿದ ಸ್ಥಳಗಳಲ್ಲಿ ವ್ಯಾಪಾರಿಗಳಿಗೆ ಕುಡಿಯುವ ನೀರು, ನೆರಳು ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.

‘ವ್ಯಾಪಾರಿಗಳಿಗೆ ನಿಗದಿತ ಜಾಗ ಗುರುತಿಸಿ, ಅಲ್ಲಿಯೇ ವ್ಯಾಪಾರ ನಡೆಸಲು ಸೂಚಿಸಬೇಕು. ಅವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದ್ದರು.

ಅಧಿಕಾರಿಗಳ ಕಿರುಕುಳ: ಆರೋಪ
ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ ಚಾಮರಾಜೇಶ್ವರ ಬೀದಿಬದಿ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ವ್ಯಾಪಾರಿಗಳು ಜಿಲ್ಲಾಡಳಿತ ಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

‘ಬಡವರಾದ ನಾವು ನಗರದ ದೊಡ್ಡಂಗಡಿ ಬೀದಿಯಲ್ಲಿ ಅರಿಸಿನ, ಕುಂಕುಮ, ತರಕಾರಿ, ನಿಂಬೆಹಣ್ಣು, ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಗರಸಭೆ ಅಧಿಕಾರಿಗಳುಕಿರುಕುಳ ನೀಡುತ್ತಿದ್ದು, ವ್ಯಾಪಾರ ಮಾಡಲು ತೊಂದರೆ ಮಾಡುತ್ತಿದ್ದಾರೆ’ ಎಂದು ದೂರಿದರು.

‘ತಳ್ಳು ಗಾಡಿಗಳನ್ನು ಎತ್ತಿ ಬಿಸಾಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುತ್ತಾ ಜೀವನ ದೂಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯಾವುದೇ ಸೂಚನೆ ನೀಡದೆ ನಮ್ಮನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಸಂಘದ ಪದಾಧಿಕಾರಿಗಳ ಗಮನಕ್ಕೂ ತಂದಿಲ್ಲ’ ಎಂದರು.

ಮುಖಂಡರಾದ ಸುಂದರ್‌ರಾಜು, ಚಂದ್ರಶೇಖರ್‌ರಾವ್, ಆಲೂರುನಾಗೇಂದ್ರ, ಚಾಮರಾಜೇಶ್ವರ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಬ್ರಾರ್ ‌ಅಹಮದ್, ಕಾರ್ಯದರ್ಶಿ ಸಿದ್ದನಾಯಕ, ಖಜಾಂಚಿ ರಾಜಪ್ಪ, ಉಪಾಧ್ಯಕ್ಷ ಮಹದೇವಶೆಟ್ಟಿ, ಸಂತೋಷ್‌ಕುಮಾರ್, ರುದ್ರಮ್ಮ, ಶಿವರುದ್ರಮ್ಮ, ಕೃಷ್ಣ, ನಾಗಮ್ಮ, ಶಿವಮ್ಮ, ರಾಜು, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT