ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸಂರಕ್ಷಣೆ: ಮಾಧ್ಯಮಗಳ ಪಾತ್ರ ಮುಖ್ಯ: ದೀಪ್‌ ಜೆ

ಅರಣ್ಯ ಮತ್ತು ವನ್ಯಜೀವಿ: ಪತ್ರಕರ್ತರಿಗೆ ಕಾರ್ಯಾಗಾರದಲ್ಲಿ ದೀಪ್‌ ಜೆ. ಕಾಂಟ್ರ್ಯಾಕ್ಟರ್‌ ಮಾತು
Last Updated 29 ಮಾರ್ಚ್ 2023, 5:23 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅರಣ್ಯ, ವನ್ಯಜೀವಿ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಅವುಗಳಲ್ಲಿ ಬರುವ ವರದಿಗಳು ಸರ್ಕಾರದ ಮೇಲೆ ಪ್ರಭಾವ ಬೀರಿ, ಕಾಡಿನ ರಕ್ಷಣೆಗೆ ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಸಹಾಯ ಮಾಡುತ್ತವೆ’ ಎಂದು ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕಿ ದೀಪ್‌ ಜೆ.ಕಾಂಟ್ರಾಕ್ಟರ್‌ ಮಂಗಳವಾರ ಹೇಳಿದರು.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನ ಬೆಟ್ಟದ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ನ ಸಹಯೋಗದಲ್ಲಿ ಕೆ.ಗುಡಿಯಲ್ಲಿ ಪತ್ರಕರ್ತರಿಗಾಗಿ ಅರಣ್ಯ ಮತ್ತು ವನ್ಯಜೀವಿ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಅರಣ್ಯಕ್ಕೆ ಸಂಬಂಧಿಸಿದ ಮಾಹಿತಿ, ವನ್ಯಜೀವಿ ಸಂರಕ್ಷಣೆಗೆ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಮಾಹಿತಿಗಳು ಆಡಳಿತದಲ್ಲಿರುವವರ, ಅಧಿಕಾರಿಗಳ, ಜನ ಸಾಮಾನ್ಯರಿಗೆ ಅರಣ್ಯದ ಬಗ್ಗೆ ಒಳನೋಟವನ್ನು ಕೊಡುತ್ತವೆ’ ಎಂದು ಲಂಟಾನ ಸಮಸ್ಯೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು, ಈ ಸಮಸ್ಯೆಯನ್ನು ಬಗೆಹರಿಸುವತ್ತ ಸರ್ಕಾರ ಯೋಚಿಸುವಂತೆ ಮಾಡಿದ್ದನ್ನು ಉದಾಹರಣೆಯಾಗಿ ನೀಡಿದರು.

‘ಕಾಡು, ವನ್ಯಜೀವಿಗಳ ಬಗ್ಗೆ ಜನಸಾಮಾನ್ಯರಿಗೆ ತಪ್ಪು ಮಾಹಿತಿಗಳಿರುತ್ತವೆ. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಮಾಧ್ಯಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬಹುದು. ಇದು ಅರಣ್ಯ ಸಂರಕ್ಷಣೆಗೆ ನೆರವಾಗುತ್ತದೆ’ ಎಂದರು.

‘ಕಾಡಿನಲ್ಲಿ ನೀರು ಆಹಾರ ಇಲ್ಲದಿರುವುದಿಂದ ಆನೆಗಳು, ಇತರ ಪ್ರಾಣಿಗಳು ಕೃಷಿಕರ ಜಮೀನುಗಳಿಗೆ ನುಗ್ಗುತ್ತಿವೆ. ನಾಡಿಗೆ ಬರುತ್ತವೆ ಎಂದು ಜನ ಸಾಮಾನ್ಯರು ತಿಳಿದುಕೊಂಡಿರುತ್ತಾರೆ. ಇದು ನಿಜವಲ್ಲ. ನಮ್ಮ ರಾಜ್ಯದಲ್ಲಿ 6,500ಕ್ಕೂ ಹೆಚ್ಚು ಆನೆಗಳಿವೆ. ಈ ಪೈಕಿ ಕೆಲವಷ್ಟೇ ಆನೆಗಳು ಜಮೀನುಗಳಿಗೆ ನುಗ್ಗುತ್ತವೆ’ ಎಂದರು.

ಮಾನವ ಮತ್ತು ವನ್ಯಜೀವಿ ಸಂಘರ್ಷದ ಬಗ್ಗೆ ಮಾತನಾಡಿದ ಅರಣ್ಯ ಇಲಾಖೆಯ ಮೈಸೂರು ಕಾರ್ಯ ಯೋಜನೆ ವಿಭಾಗದ ಡಿಸಿಎಫ್‌ ಮಹೇಶ್‌ ಕುಮಾರ್, ‘ಭೂಮಿಯ ಬಳಕೆ ಬದಲಾಗಿರುವುದರಿಂದ ಮಾನವ ವನ್ಯಜೀವಿ ಸಂಘರ್ಷಗಳು ಹೆಚ್ಚಾಗುತ್ತಿವೆ. ಮೊದಲೆಲ್ಲ ಒಂದು ಕಾಡು, ಇನ್ನೊಂದು ಕಾಡನ್ನು ಸಂಪರ್ಕಿಸುತ್ತಿತ್ತು. ಇದರಿಂದ ಪ್ರಾಣಿಗಳ ಓಡಾಟಕ್ಕೆ ಅಡ್ಡಿ ಇರಲಿಲ್ಲ. ಈಗ ಅಭಿವೃದ್ಧಿಯ ಕಾರಣಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಅರಣ್ಯಗಳು ದ್ವೀಪದಂತೆ ಆಗಿವೆ. ಹಾಗಾಗಿ, ಪ್ರಾಣಿಗಳ ಓಡಾಟಕ್ಕೆ ಜಾಗ ಇಲ್ಲದಂತಾಗಿದೆ’ ಎಂದರು.

‘ಮಾನವ ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಲೇ ಇದೆ. ಕಾಡಂಚಿನ ಪ್ರದೇಶಗಳಲ್ಲಿ ಕೃಷಿ ಬೆಳೆ ವಿಧಾನಗಳನ್ನು ಬದಲಿಸುವ ಅಗತ್ಯವಿದೆ. ಪ್ರಾಣಿಗಳಿಗೆ ಇಷ್ಟವಿಲ್ಲದ ಬೆಳೆಗಳನ್ನು ಕೃಷಿಕರು ಬೆಳೆಯಬೇಕು. ಇದರಿಂದ ಪ್ರಾಣಿಗಳ ಹಾವಳಿಯನ್ನು ತಡೆಯಬಹುದು’ ಎಂದರು.

‘ಮಾನವ–ವನ್ಯಜೀವಿ ಸಂಘರ್ಷ, ಪ್ರಾಣಿಗಳ ದಾಳಿ ಸೇರಿದಂತೆ ಅರಣ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಬರೆಯುವಾಗ ಪತ್ರಕರ್ತರು ಹೆಚ್ಚು ಸೂಕ್ಷ್ಮವಾಗಿರಬೇಕು. ಬಹುತೇಕ ಸಂದರ್ಭಗಳಲ್ಲಿ ಪ್ರಾಣಿಗಳ ತಪ್ಪಿರುವುದಿಲ್ಲ. ಅದನ್ನು ನಾವು ಅರಿತುಕೊಳ್ಳಬೇಕು. ಘಟನೆಯನ್ನು ಆಳವಾಗಿ ವಿಶ್ಲೇಷಿಸಿ ಬರೆದಾಗ ಜನರಿಗೆ ಸರಿಯಾದ ಮಾಹಿತಿ ಸಿಗುತ್ತದೆ’ ಎಂದರು.

ಕೆ.ಗುಡಿ ವಲಯ ಅರಣ್ಯಾಧಿಕಾರಿ ವಿನೋದ್‌ ಗೌಡ, ಡಿಆರ್‌ಎಫ್‌ಒಗಳಾದ ಮಂಜುನಾಥ್‌, ಇಕ್ರಂ ಪಾಷಾ,ಅರಣ್ಯ ರಕ್ಷಕರಾದ ಕಾರ್ತಿಕ್‌, ಮುಬಾರಕ್‌, ಇತರ ಸಿಬ್ಬಂದಿ ಇದ್ದರು.

‘ಕಾಡಂಚಿನಲ್ಲಿ ಪರ್ಯಾಯ ಬೆಳೆ ಬೆಳೆಯಿರಿ’

‘ನೀರಾವರಿ ವ್ಯವಸ್ಥೆ ಬಂದ ಮೇಲೆ ಜನರ ಕೃಷಿ ವಿಧಾನ ಬದಲಾಗಿದೆ. ಕಾಡಂಚಿನಲ್ಲೂ ಈಗ ಕಬ್ಬು, ಬಾಳೆಯಂತಹ ಬೆಳೆಗಳನ್ನು ಬೆಳೆಯುತ್ತಾರೆ. ಮೊದಲು ರೈತರು ಇಂತಹ ಬೆಳೆ ಬೆಳೆಯುತ್ತಿರಲಿಲ್ಲ. ಬಾಳೆ, ಕಬ್ಬನ್ನು ಕಂಡಾಗ ಆನೆಗಳು ಸಹಜವಾಗಿ ಜಮೀನಿಗೆ ಬರಲು ಪ್ರಯತ್ನಿಸುತ್ತವೆ. ಅದಕ್ಕಾಗಿ ರೈತರು ಕಾಡಂಚಿನ ಭಾಗದಲ್ಲಿ ಬೇರೆ ಬೆಳೆಗಳನ್ನು ಬೆಳೆಯಲು ಯತ್ನಿಸಬೇಕು’ ಎಂದು ದೀಪ್‌ ಜೆ. ಕಾಂಟ್ರ್ಯಾಕ್ಟರ್‌ ಸಲಹೆ ನೀಡಿದರು.

ಲಂಟಾನ ತೆರವಿಗೆ ಕ್ರಮ: ‘ಕಾಡನ್ನು ಆವರಿಸಿರುವ ಲಂಟಾನ ತೆಗೆಯಲು ಕ್ರಮವಹಿಸಲಾಗುತ್ತಿದೆ. ನರೇಗಾ ಅಡಿಯಲ್ಲಿ ತೆರವುಗೊಳಿಸುತ್ತಿರುವುದರಿಂದ ಸ್ಥಳೀಯರಿಗೆ ಕೂಲಿ ಸಿಗುತ್ತಿದೆ. ಲಂಟಾನ ತೆಗೆದ ಜಾಗದಲ್ಲಿ ಹುಲ್ಲು ನಾಟಿ, ಬೀಜ ಬಿತ್ತನೆ ಮಾಡಲಾಗುತ್ತಿದೆ. ಈಗಾಗಲೇ 200 ಹೆಕ್ಟೇರ್‌ ಪ್ರದೇಶದಲ್ಲಿ ತೆರವುಗೊಳಿಸಲಾಗಿದ್ದು, ಮುಂದಿನ ಸಾಲಿನಲ್ಲಿ 500 ಹೆಕ್ಟೇರ್‌ ಪ್ರದೇಶದಲ್ಲಿ ತೆರವುಗೊಳಿಸುವ ಗುರಿ ಹೊಂದಲಾಗಿದೆ. ಲಂಟಾನದಿಂದ ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ತರಬೇತಿಯನ್ನು ಸೋಲಿಗರಿಗೆ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT