ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎಸಿಎಫ್‌, ಆರ್‌ಎಫ್‌ಒ ಕೊರತೆ; ಅರಣ್ಯ ರಕ್ಷಣೆಗೆ ಹಿನ್ನಡೆ

ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಿದ ಅರಣ್ಯ ಅಪರಾಧ ಚಟುವಟಿಕೆಗಳು, ಜಾಗೃತಿ ಮೂಡಿಸಲು ಇಲಾಖೆಯಿಂದ ಕ್ರಮ
Last Updated 1 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಅರಣ್ಯ ಇಲಾಖೆಯ ಚಾಮರಾಜನಗರ ವೃತ್ತದ ವ್ಯಾಪ್ತಿಗೆ ಬರುವ ಮೂರು ರಕ್ಷಿತಾರಣ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅರಣ್ಯ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು, ಅವುಗಳನ್ನು ನಿಯಂತ್ರಿಸುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

‌ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶವನ್ನು ಬಿಟ್ಟು, ಉಳಿದೆರಡು ವನ್ಯಧಾಮಗಳಾದ ಮಲೆ ಮಹದೇಶ್ವರ ಹಾಗೂ ಕಾವೇರಿ ವ‌ನ್ಯಧಾಮಗಳಲ್ಲಿ ಎರಡು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಹಾಗೂ ಐದು ವಲಯ ಅರಣ್ಯ ಅಧಿಕಾರಿಗಳ (ಆರ್‌ಎಫ್‌ಒ) ಹುದ್ದೆ ಖಾಲಿ ಇದ್ದು, ಕಾಡಿನ ರಕ್ಷಣೆಯ ಕೆಲಸಕ್ಕೆ ತೊಂದರೆಯಾಗಿದೆ.

ಮಲೆ ಮಹದೇಶ್ವರ ವನ್ಯಧಾಮದ ಹನೂರು ವಲಯದಲ್ಲಿ ಎಸಿಎಫ್‌ ಇಲ್ಲ. ಮಹದೇಶ್ವರ ಬೆಟ್ಟದಲ್ಲೂ ಎಸಿಎಫ್‌ ಇರಲಿಲ್ಲ. ಮೂರು ವಾರಗಳ ಹಿಂದೆಯಷ್ಟೇ ಒಬ್ಬರು ನೇಮಕಕೊಂಡಿದ್ದಾರೆ. ಕಾವೇರಿ ವನ್ಯಧಾಮದ ಕನಕಪುರ ಉಪವಿಭಾಗದಲ್ಲಿ ಎಸಿಎಫ್‌ ಹುದ್ದೆ ಖಾಲಿ ಇದೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮೂರು ಆರ್‌ಎಫ್‌ಒ ಹಾಗೂ ಕಾವೇರಿ ವನ್ಯಧಾಮದಲ್ಲಿ ಇಬ್ಬರು ಆರ್‌ಎಫ್‌ಒಗಳಿಲ್ಲ. ಮಲೆ ಮಹದೇಶ್ವರ ವನ್ಯಧಾಮದ ಹನೂರು, ಮಲೆ ಮಹದೇಶ್ವರ ಹಾಗೂ ಪಾಲಾರ್‌ ವಲಯಗಳಲ್ಲಿ ಆರ್‌ಎಫ್‌ಒ ಹುದ್ದೆ ಖಾಲಿ ಇದ್ದರೆ, ಕಾವೇರಿ ವನ್ಯಧಾಮದ ಕೊತ್ತನೂರು ಹಾಗೂ ಸಂಗಮ ವಲಯಗಳಲ್ಲಿ ಆರ್‌ಎಫ್‌ಒ ಹುದ್ದೆ ಭರ್ತಿಯಾಗಬೇಕಿದೆ. ‌‌

ಡಿಸಿಎಫ್‌ ನಂತರ ಬರುವ ಎಸಿಎಫ್‌ ಹುದ್ದೆಗಳು ಹಾಗೂ ಅದರ ನಂತರದ ಆರ್‌ಎಫ್‌ಒ ಹುದ್ದೆಗಳು ಆಡಳಿತಾತ್ಮಕ ದೃಷ್ಟಿಯಿಂದ ಮುಖ್ಯವಾದ ಹುದ್ದೆಗಳು. ಅರಣ್ಯ ರಕ್ಷಣೆಯಲ್ಲಿ ಆರ್‌ಎಫ್‌ಒಗಳು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಇಡೀ ವಲಯದ ಮಾಹಿತಿ ಅವರ ಬಳಿ ಇರುತ್ತದೆ. ಆರ್‌ಎಫ್‌ಒಗಳು ಇಲ್ಲದಿದ್ದರೆ ಸಿಬ್ಬಂದಿಗಳ ಮೇಲೆ ನಿಗಾ ಇಡುವುದು ಹಾಗೂ ಅವರಿಂದ ಕೆಲಸ ಪಡೆಯುವುದಕ್ಕೆ ತೊಂದರೆಯಾಗುತ್ತದೆ. ಇದು ಅರಣ್ಯ ಸಂರಕ್ಷಣೆ ಕಾರ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

‘ನಮ್ಮಲ್ಲಿ ಕೆಳ ಹಂತದ ಸಿಬ್ಬಂದಿಯ ಕೊರತೆ ಇಲ್ಲ. ಉಪ ವಲಯ ಅರಣ್ಯ ಅಧಿಕಾರಿಗಳವರೆಗೆ ಸಿಬ್ಬಂದಿ ಇದ್ದಾರೆ. ಆರ್‌ಎಫ್‌ಒ ಹಾಗೂ ಎಸಿಎಫ್‌ಗಳ ಕೊರತೆ ಇದೆ. ಇದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತಿರುವುದು ನಿಜ’ ಎಂದು ಚಾಮರಾಜನಗರ ಪ್ರಾದೇಶಿಕ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಲೆಮಹದೇಶ್ವರ ವನ್ಯಧಾಮದಲ್ಲಿ ಎರಡು ಎಸಿಎಫ್‌ ಹುದ್ದೆಗಳು ಖಾಲಿ ಇದ್ದವು. ಇತ್ತೀಚೆಗೆ ಒಂದು ಹುದ್ದೆ ಭರ್ತಿಯಾಗಿದೆ. ಎರಡು ವನ್ಯಧಾಮಗಳಲ್ಲಿ ಇನ್ನೂ ಎರಡು ಎಸಿಎಫ್‌ ಹಾಗೂ ಐದು ಆರ್‌ಎಫ್‌ಒಗಳ ಕೊರತೆ ಇದೆ. ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವಾಗಿ ಭರ್ತಿಯಾಗುವ ನಿರೀಕ್ಷೆ ಇದೆ’ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚಿದ ಕಳ್ಳಬೇಟೆ ಪ್ರಕರಣಗಳು
ಇತ್ತೀಚಿನ ತಿಂಗಳುಗಳಲ್ಲಿ ಮೂರು ರಕ್ಷಿತಾರಣ್ಯಗಳಲ್ಲಿ ಕಳ್ಳಬೇಟೆ ಸೇರಿದಂತೆ ಅರಣ್ಯ ಅಪರಾಧ ಪ್ರಕರಣಗಳು ಹೆಚ್ಚಿವೆ. ಕೋವಿಡ್‌ ಹಾವಳಿ ಆರಂಭಗೊಂಡು ಲಾಕ್‌ಡೌನ್‌ ಜಾರಿಗೊಳಿಸಿದ ನಂತರದ ಮೂರು ತಿಂಗಳ ಅವಧಿಯಲ್ಲಿ ಸ್ವಲ್ಪ ಜಾಸ್ತಿ ಪ್ರಕರಣಗಳು ವರದಿಯಾಗಿವೆ.

ಅರಣ್ಯ ಇಲಾಖೆಯಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, 2020ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಮೂರು ರಕ್ಷಿತಾರಣ್ಯಗಳಲ್ಲಿ 47 ಕಳ್ಳಬೇಟೆ ಪ್ರಕರಣಗಳು ದಾಖಲಾಗಿವೆ. ಶ್ರೀಗಂಧ ಮರಕಳ್ಳತನ ನಡೆದಿರುವ ಎಂಟು ಪ್ರಕರಣಗಳು ವರದಿಯಾಗಿವೆ.

ಏಪ್ರಿಲ್‌ನಿಂದ ಜೂನ್‌ ತಿಂಗಳ ಅವಧಿಯಲ್ಲೇ (ಲಾಕ್‌ಡೌನ್‌ ಜಾರಿಯಲ್ಲಿದ್ದ ಸಮಯ) 25 ಕಳ್ಳಬೇಟೆ ಮೊಕದ್ದಮೆಗಳು ನಡೆದಿವೆ. ಗಂಧ ಕಳ್ಳತನದ ಎರಡು ಪ್ರಕರಣ ದಾಖಲಾಗಿವೆ.‌‌‌

ಒಂಬತ್ತು ತಿಂಗಳ ಅವಧಿಯಲ್ಲಿ ಕಳ್ಳಬೇಟೆ ಪ್ರಕರಣಗಳು ಬಿಆರ್‌ಟಿ ಅರಣ್ಯದಲ್ಲಿ ಹೆಚ್ಚು ನಡೆದಿದ್ದರೆ (19), ಗಂಧದ ಕಳ್ಳತನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹೆಚ್ಚು (6) ವರದಿಯಾಗಿವೆ. ಮಲೆ ಮಹದೇಶ್ವರ ವನ್ಯಧಾಮಕ್ಕೆ ಹೋಲಿಸಿದರೆ (13) ಕಾವೇರಿ ವನ್ಯಧಾಮದಲ್ಲಿ 15 ಪ್ರಕರಣಗಳು ದಾಖಲಾಗಿವೆ.

‘ಹಿಂದಿನ ವರ್ಷದ ಪ್ರಕರಣಗಳಿಗೆ ಈ ವರ್ಷ ದಾಖಲಾಗಿರುವ ಪ್ರಕರಣಗಳನ್ನು ಹೋಲಿಸಿ ನೋಡಿ, ಹೆಚ್ಚಾಗಿದೆ ಅಥವಾ ಕಡಿಮೆಯಾಗಿದೆ ಎಂದು ಹೇಳುವುದು ಅಷ್ಟೊಂದು ಸಮಂಜಸವಾಗುವುದಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿದರೆ, ಹೆಚ್ಚು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಹೆಚ್ಚು. ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳು ಗಡಿ ಭಾಗದಲ್ಲಿರುವುದರಿಂದ ನೆರೆ ರಾಜ್ಯದ ಕಳ್ಳಬೇಟೆಗಾರರ ಹಾವಳಿಯೂ ಇದೆ’ ಎಂದು ಸಿಸಿಎಫ್‌ ಮನೋಜ್‌ ಕುಮಾರ್‌ ಅವರು ಹೇಳಿದರು.

‌‘ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ಇದ್ದವರು, ತಮ್ಮ ಊರಿಗೆ ಹಿಂದಿರುಗಿದ್ದರು. ನಿರುದ್ಯೋಗ ಸಮಸ್ಯೆ ಅವರನ್ನು ಕಾಡುತ್ತಿತ್ತು. ಇದು ಕೂಡ ಅರಣ್ಯ ಅಪರಾಧಗಳು ಹೆಚ್ಚಾಗಲು ಕಾರಣವಿರಬಹುದು’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು. ‌

ರಕ್ಷಣೆಗೆ ಮೂರು ಕಾರ್ಯಕ್ರಮ
ಅರಣ್ಯ ಅಪರಾಧಗಳನ್ನು ತಡೆಯುವುದಕ್ಕಾಗಿ ಇಲಾಖೆಯು ಈ ವರ್ಷ ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ ತರಬೇತಿ, ಶಸ್ತ್ರಾಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸುವ ಕೌಶಲ ಹೆಚ್ಚಿಸಲು ಮಾರ್ಗದರ್ಶನ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಆಯೋಜನೆ.

‘ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಯಾವುದಾದರೂ ಅಪರಾಧ ಸಂಬಂಧಿಸಿದಾಗ ಅದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಅತ್ಯಂತ ಮುಖ್ಯ. ಇಲ್ಲದಿದ್ದರೆ ಪ್ರಕರಣ ದುರ್ಬಲವಾಗುತ್ತದೆ. ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾದ ಜಾಣ್ಮೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇರಬೇಕಾಗುತ್ತದೆ. ಇದಕ್ಕಾಗಿ ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಾರ್ಗದರ್ಶನ ನೀಡಲಾಗುತ್ತಿದೆ’ ಎಂದು ಮನೋಜ್‌ ಕುಮಾರ್‌ ಅವರು ಹೇಳಿದರು. ‌

‌‘ಅರಣ್ಯ ಸಂರಕ್ಷಣೆಯಲ್ಲಿ ಶಸ್ತ್ರಾಸ್ತ್ರಗಳ ಪರಿಣಾಮಕಾರಿ ಬಳಕೆ ಕೂಡ ಮುಖ್ಯವಾಗುತ್ತದೆ. ಎಲ್ಲ ಸಿಬ್ಬಂದಿಗೆ ಅವುಗಳನ್ನು ಬಳಸಲು ಕೌಶಲ ತಿಳಿದಿಲ್ಲ. ಅದಕ್ಕಾಗಿ ಪೊಲೀಸ್‌ ಇಲಾಖೆಯ ಸಹಯೋಗ ಪಡೆದುಕೊಂಡು, ಶಸ್ತ್ರಾಸ್ತ್ರಗಳ ನಿರ್ವಹಣೆಯ ಬಗ್ಗೆ ತರಬೇತಿ ಕೊಡಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಅರಣ್ಯ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲೂ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲ ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಹಳ್ಳಿಗಳಿಗೆ ಹೋಗಿ ಗ್ರಾಮಸ್ಥರು, ಅಲ್ಲಿನ ಮುಖಂಡರು, ರೈತ ಮುಖಂಡರಿಗೆ ಅರಣ್ಯ ಅಪರಾಧಗಳನ್ನು ತಡೆಯುವುದರ ಬಗ್ಗೆ ತಿಳಿ ಹೇಳುತ್ತಿದ್ದೇವೆ’ ಎಂದು ಮನೋಜ್‌ ಕುಮಾರ್‌ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT