ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಕಾಡಾನೆ ದಾಳಿ: ಅರಣ್ಯ ಇಲಾಖೆ ದಿನಗೂಲಿ ನೌಕರ ಸಾವು

ಎತ್ತಗಟ್ಟಿ ಬೆಟ್ಟ: ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟಿಸುವ ವೇಳೆ ಘಟನೆ
Last Updated 19 ಜನವರಿ 2023, 12:27 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಎತ್ತಗಟ್ಟಿ ಬೆಟ್ಟ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಆನೆಗಳನ್ನು ಕಾಡಿಗಟ್ಟುವ ವೇಳೆ ಹೆಣ್ಣಾನೆಯೊಂದು ನಡೆಸಿದ ದಾಳಿಯಲ್ಲಿ ಅರಣ್ಯ ಇಲಾಖೆ ದಿನಗೂಲಿ ನೌಕರ, ಪುಣಜನೂರಿನ ಹೊಸಪೋಡು ನಿವಾಸಿ ನಂಜಯ್ಯ (35) ಮೃತಪಟ್ಟಿದ್ದಾರೆ.

ತಾಲ್ಲೂಕಿನ ವಡ್ಗಲ್‌ಪುರ, ಹೊನ್ನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಟ ನೀಡುತ್ತಿದ್ದ ತಮಿಳುನಾಡಿನ ಸತ್ಯಮಂಗಲ ಅರಣ್ಯದಿಂದ ಬಂದ ಕಾಡಾನೆಗಳನ್ನು ವಾಪಸ್‌ ಕಾಡಿಗೆ ಅಟ್ಟುವ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಪ್ರಾದೇಶಿಕ ವಲಯದ 20ಕ್ಕೂ ಹೆಚ್ಚು ಸಿಬ್ಬಂದಿ ಬುಧವಾರ ಸಂಜೆ ಕಾಡಾನೆಗಳ ಹಿಂಡನ್ನು ತಮಿಳುನಾಡಿನ ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಗಡಿಭಾಗದಲ್ಲಿರುವ ಎತ್ತಗಟ್ಟಿ ಬೆಟ್ಟದ ವ್ಯಾಪ್ತಿಯಲ್ಲಿ ಆನೆಗಳ ಹಿಂಡಿನಲ್ಲಿ ಕೊನೆಯಲ್ಲಿದ್ದ ಹೆಣ್ಣಾನೆಯೊಂದು ಗಾಬರಿ ಬಿದ್ದು, ಏಕಾಏಕಿ ವಾಪಸ್‌ ಬಂದು ನಂಜಯ್ಯ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಅವರು ಗಾಯಗೊಂಡರು. ತಕ್ಷಣವೇ ಅವರನ್ನು ಯಡಬೆಟ್ಟದ ಸಿಮ್ಸ್‌ ಬೋಧನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ತಡರಾತ್ರಿ ನಿಧನರಾದರು.

‘ನಂಜಯ್ಯ ಅವರ ಪಕ್ಕೆಲೆಬುಗಳು ಮುರಿದಿದ್ದವು. ಆಂತರಿಕ ರಕ್ತಸ್ರಾವ ಆಗಿತ್ತು. ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದೆವು. ಆದರೆ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ, ಡಿಸಿಎಫ್‌ ದೀಪ್‌ ಜೆ.ಕಾಂಟ್ರಾಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಂಜಯ್ಯ ಅವರು ಬಿಆರ್‌ಟಿಯ ವಾಚರ್‌ ಒಬ್ಬರ ಸಹೋದರನಾಗಿದ್ದು, ಎರಡು ದಿನಗಳ ಹಿಂದೆಯಷ್ಟೇ ದಿನಗೂಲಿ ನೌಕರರಾಗಿ ಇಲಾಖೆಗೆ ಸೇರಿದ್ದರು.

₹15 ಲಕ್ಷ ಪರಿಹಾರ: ‘ನಂಜಯ್ಯ ಕುಟುಂಬಕ್ಕೆ ₹15 ಲಕ್ಷ ಪರಿಹಾರ ನೀಡಲು ಕ್ರಮವಹಿಸಲಾಗುವುದು. ಈಗಾಗಲೇ ಪ್ರಕ್ರಿಯೆ ಶುರು ಮಾಡಲಾಗಿದೆ. ತಕ್ಷಣಕ್ಕೆ ₹2 ಲಕ್ಷದ ಚೆಕ್‌ ಅನ್ನು ಅವರ ತಂದೆಗೆ ನೀಡಲಾಗಿದೆ’ ಎಂದು ಡಿಸಿಎಫ್‌ ಮಾಹಿತಿ ನೀಡಿದರು.

ಶಾಸಕರ ಸಾಂತ್ವನ: ಈ ಮಧ್ಯೆ, ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಸಿಮ್ಸ್‌ ಬೋಧನಾ ಆಸ್ಪತ್ರೆಗೆ ಭೇಟಿ ನೀಡಿ ನಂಜಯ್ಯ ಅವರ ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಅವರು, ‘ಈ ಭಾಗದಲ್ಲಿ ಆಗಾಗ್ಗೆ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಫಸಲನ್ನು ನಾಶಪಡಿಸಿ, ಜನರ ಮೇಲೂ ದಾಳಿ ನಡೆಸುತ್ತಿವೆ. ಈಗ ಇಲಾಖೆಗೆ ಕೆಲಸ ಮಾಡುತ್ತಿದ್ದ ಸೋಲಿಗ ಸಮುದಾಯದ ಯುವಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಆತನ ಕುಟುಂಬಕ್ಕೆ ಇಲಾಖೆಯಿಂದ ನೀಡುವ ₹15 ಲಕ್ಷ ಪರಿಹಾರ ಯಾವುದಕ್ಕೂ ಸಾಲದು. ₹50 ಲಕ್ಷ ಪರಿಹಾರ ಕೊಡಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಆನೆಗಳನ್ನು ಓಡಿಸುವ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಬೇಕು. ಇದರಿಂದ ಎದುರಾಗುವ ಅಪಾಯವನ್ನು ತಪ್ಪಿಸಬಹುದು. ಆನೆಗಳನ್ನು ಕಾಡಿಗೆ ಓಡಿಸುವಾಗ ಇಂತಹ ಘಟನೆಗಳು ನಡೆಯದಂತೆ ಇಲಾಖೆಯವರು ಎಚ್ಚರವಹಿಸಬೇಕು’ ಎಂದರು.

ಎಸಿಎಫ್‌ ಸುರೇಶ್‌, ಆರ್‌ಎಫ್‌ಒ ಉಮೇಶ್, ಡಿಆರ್‌ಎಫ್‌ಒ ಚಂದ್ರಕುಮಾರ್, ನಂಜಯ್ಯ ಅವರ ಕುಟುಂಬವರ್ಗದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT