ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಿನಾಥಂ: ನಿರ್ಲಕ್ಷಿತ ಪ್ರದೇಶದಲ್ಲಿ ಅಭಿವೃದ್ಧಿ ಶಕೆ?

ಅಭಿವೃದ್ಧಿಗೆ ₹ 5 ಕೋಟಿ ಅನುದಾನ ಘೋಷಣೆ: ಅರಣ್ಯ ಇಲಾಖೆಯಿಂದ ವಿವಿಧ ಅಭಿವೃದ್ಧಿ ಯೋಜನೆ ರೂಪಿಸುವಿಕೆಯ ಕಸರತ್ತು
Last Updated 12 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ₹ 5 ಕೋಟಿ ಅನುದಾನ ಘೋಷಣೆ ಮಾಡುತ್ತಿದ್ದಂತೆಯೇ ಅರಣ್ಯ ಇಲಾಖೆಯು ಅದಕ್ಕೆ ಪೂರಕವಾದ ಯೋಜನೆ ರೂಪಿಸುವುದರಲ್ಲಿ ನಿರತವಾಗಿದೆ.

ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಗೋಪಿನಾಥಂ ಪ್ರದೇಶದಲ್ಲಿ ಸಫಾರಿ ವಲಯ ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಸುಪರ್ದಿನಲ್ಲಿರುವ ಪ್ರವಾಸಿ ತಾಣಗಳನ್ನು ಮೂಲಸೌಕರ್ಯಗಳ ಸಹಿತ ಇನ್ನಷ್ಟು ಆಕರ್ಷಣೀಯವಾಗಿಸುವ ಯೋಜನೆಯನ್ನು ಅಧಿಕಾರಿಗಳು ಹಾಕಿಕೊಂಡಿದ್ದಾರೆ.

ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಮೀನಾ ಕೆಲವು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದು, ಅದಕ್ಕೆ ಪೂರಕ ವಾಗಿ ಪ್ರಸ್ತಾವ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

'ಬಜೆಟ್‌ನಲ್ಲಿ ಘೋಷಿಸಿರುವ ₹ 5 ಕೋಟಿ ಪೂರ್ತಿ ಹಣ ಗೋಪಿನಾಥಂನಲ್ಲಿ ಸಫಾರಿ ಸ್ಥಾಪಿಸುವುದಕ್ಕೆ ಅಗತ್ಯವಿಲ್ಲ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಆ ಮೊತ್ತವನ್ನು ಬಳಸಲಾಗುವುದು' ಎಂದು ಮನೋಜ್ ಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.

ಗೋಪಿನಾಥಂನಲ್ಲಿ ಅಭಿವೃದ್ಧಿ ಶಕೆ: ಕಾಡುಗಳ್ಳ ವೀರಪ್ಪನ್ ಹುಟ್ಟೂರು ಹಾಗೂ ಕಾರ್ಯಕ್ಷೇತ್ರವಾಗಿದ್ದ ಕಾರಣಕ್ಕೆ ಅಭಿವೃದ್ಧಿಯಿಂದ ವಂಚಿತವಾಗಿದ್ದ ಗೋಪಿನಾಥಂ, ಆತನ ಸಾವಿನ ನಂತರ ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದೆ.

ಸುಂದರವಾದ ಹೊಗೆನಕಲ್ ಜಲಪಾತ, ರಮಣೀಯ ಅರಣ್ಯ ಪ್ರದೇಶ ಇದ್ದರೂ, ಇಲ್ಲಿ ಹೇಳಿಕೊಳ್ಳುವಂತಹ ಪ್ರವಾಸೋದ್ಯಮ ಅಭಿವೃದ್ಧಿ ಆಗಿಲ್ಲ. ಗೋಪಿನಾಥಂ ಅಣೆಕಟ್ಟು ಬಳಿ ಯಲ್ಲೇ ಅರಣ್ಯ ಇಲಾಖೆಯು ಮಿಸ್ಟ್ರಿ ಟ್ರೇಲ್‌ ಕ್ಯಾಂಪ್ ನಡೆಸುತ್ತಿದ್ದರೂ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಈ ಪ್ರದೇಶದಲ್ಲಿ ಸಫಾರಿ ವಲಯ ಸ್ಥಾಪಿಸಿದರೆ, ಪ್ರವಾಸಿ ಗರ ಸಂಖ್ಯೆ ಹೆಚ್ಚಾಗಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಗೋಪಿನಾಥಂ ಪ್ರದೇಶದಲ್ಲಿ ಚಾರಣಕ್ಕೆ ಸೂಕ್ತವಾದ ಮೇಲು ಮಲೆ ಇದೆ. ವೀರಪ್ಪನ್‌ನಿಂದ ಹತ್ಯೆಗೀಡಾದ ಡಿಸಿಎಫ್ ಪಿ.ಶ್ರೀನಿವಾಸ್‌ ಅವರ ಸ್ಮಾರಕವಿದೆ. ಸುಂದರ ಅಣೆಕಟ್ಟು ಇದೆ. ಈಗಾಗಲೇ ವಸತಿ ವ್ಯವಸ್ಥೆಗೆ ಮಿಸ್ಟ್ರಿ ಟ್ರೇಲ್‌ ಕ್ಯಾಂಪ್ ಲಭ್ಯವಿದೆ. 12 ಕಿ.ಮೀ ದೂರದಲ್ಲಿ ಹೊಗೆನಕಲ್ ಜಲಪಾತ ಇದೆ. ಇದನ್ನೆಲ್ಲ ಬಳಸಿಕೊಂಡು ಪ್ರವಾಸಿ ಸರ್ಕಿಟ್ ಮಾಡಿದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಸಫಾರಿ ಎಂದರೆ ಬರೀ ಪ್ರಾಣಿ ಅಲ್ಲ: ‘ಗೋಪಿನಾಥಂನಲ್ಲಿ ನಮಗೆ ಬಹುತೇಕ ಎಲ್ಲ ಮೂಲ ಸೌಕರ್ಯಗಳು ಇವೆ. ಸಫಾರಿ ವಾಹನಗಳನ್ನು ಖರೀದಿಸ ಬೇಕಾಗಬಹುದು. ಕಾಡಿನೊಳಗಿರುವ ಕಚ್ಚಾ ರಸ್ತೆಯನ್ನು ಇನ್ನಷ್ಟು ಅಗಲ ಮಾಡಬೇಕಾಗುತ್ತದೆ. ಅದು ಬಿಟ್ಟರೆ ಅಲ್ಲಿ ಹೆಚ್ಚಿನ ಕೆಲಸ ಇಲ್ಲ’ ಎಂದು ಸಿಸಿಎಫ್ ಮೀನಾ ಹೇಳಿದರು.‌

'ಸಫಾರಿ ಎಂದರೆ ಪ್ರಾಣಿಗಳನ್ನು ತೋರಿಸುವುದು ಮಾತ್ರ ಅಲ್ಲ. ಅಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಇರುತ್ತದೆ. ಕಾವೇರಿ ವನ್ಯಧಾಮದ ಭೂದೃಶ್ಯ (ಲ್ಯಾಂಡ್ ಸ್ಕೇಪ್) ರಮಣೀಯವಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗ ಬಲಿದಾನದ ಸಂಕೇತವಾದ ಶ್ರೀನಿವಾಸ್ ಅವರ ಸ್ಮಾರಕ ಇದೆ. ಇದರ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಲಿದ್ದೇವೆ' ಎಂದು ಅವರು ವಿವರಿಸಿದರು.

ಹೆಚ್ಚಲಿದೆ ಚಟುವಟಿಕೆ: ‘ಗೋಪಿನಾಥಂ ಪ್ರದೇಶ ಜನವಸತಿ ಪ್ರದೇಶದಿಂದ ದೂರ ಇದೆ. ತಮಿಳುನಾಡು ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಕಳ್ಳಬೇಟೆ ಸೇರಿದಂತೆ ಅರಣ್ಯ ಅಪರಾಧಗಳ ಸಂಖ್ಯೆ ಹೆಚ್ಚು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ, ಆ ಪ್ರದೇಶದಲ್ಲಿ ಜನರ ಓಡಾಟ ಹೆಚ್ಚಾಗುತ್ತದೆ. ಇದಲ್ಲದೇ ಸ್ಥಳೀಯರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗವೂ ಲಭಿಸುತ್ತದೆ. ಇದರಿಂದ ಅರಣ್ಯ ಇಲಾಖೆಗೆ ಅನುಕೂಲವಾಗುತ್ತದೆ. ಕನಿಷ್ಠ 20ರಿಂದ 30 ಮಂದಿಗೆ ಉದ್ಯೋಗ ಕೊಡುವುದಕ್ಕೂ ನಮಗೆ ಸಾಧ್ಯವಾಗುತ್ತದೆ’ ಎಂದು ಮನೋಜ್ ಕುಮಾರ್ ತಿಳಿಸಿದರು.

ಕರಕುಶಲ ವಸ್ತುಗಳ ಮ್ಯೂಸಿಯಂ

ಬಜೆಟ್‌ನಲ್ಲಿ ಘೋಷಿಸಲಾದ ಅನುದಾನದಲ್ಲಿ, ಭರಚುಕ್ಕಿ-ಗಗನಚುಕ್ಕಿ ಜಲಪಾತದ ಪ್ರದೇಶದಲ್ಲಿ ಇನ್ನಷ್ಟು ಮೂಲಸೌಕರ್ಯ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಇದಲ್ಲದೇ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದಲ್ಲಿ ಸೋಲಿಗರು ಸೇರಿದಂತೆ ಅರಣ್ಯ ವಾಸಿಗಳು ತಯಾರಿಸುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ‌ ಮ್ಯೂಸಿಯಂ ಸ್ಥಾಪನೆಗೂ ಅಧಿಕಾರಿಗಳು ಯೋಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT