ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಡಿಸಿಎಫ್‌ ಶ್ರೀನಿವಾಸ್‌ ಬಳಸಿದ್ದ ಜೀಪಿಗೆ ಮರುಜೀವ

ಕೊಳ್ಳೇಗಾಲ: ಮಲೆ ಮಹದೇಶ್ವರ ವನ್ಯಧಾಮ ಡಿಸಿಎಫ್‌ ಕಚೇರಿಯಲ್ಲಿ ಸ್ಮಾರಕ, ವಸ್ತುಸಂಗ್ರಹಾಲಯ
Last Updated 4 ಮೇ 2022, 16:18 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕಾಡುಗಳ್ಳ ವೀರಪ್ಪನ್‌ನಿಂದ ಹತ್ಯೆಗೀಡಾಗಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಪಿ.ಶ್ರೀನಿವಾಸ್‌ ಅವರು ಎಸ್‌ಟಿಎಫ್‌ ಕಾರ್ಯಾಚರಣೆಯಲ್ಲಿ ಬಳಸಿದ್ದ, ಜೀರ್ಣಾವಸ್ಥೆಯಲ್ಲಿದ್ದ ಜೀಪನ್ನು ಅರಣ್ಯ ಇಲಾಖೆ ದುರಸ್ತಿ ಮಾಡಿ ಸಂರಕ್ಷಿಸಿದೆ.

ಕೊಳ್ಳೇಗಾಲದ ಮಲೆ ಮಹದೇಶ್ವರ ವನ್ಯಧಾಮದ ಕಚೇರಿ ಆವರಣದಲ್ಲಿ ಜೀಪನ್ನು ಸಂರಕ್ಷಿಸಿ ಇಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಈಚೆಗೆ ಉದ್ಘಾಟಿಸಿದ್ದಾರೆ. ಸ್ಮಾರಕದ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ.

ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ಶ್ರೀನಿವಾಸ್‌ ಬಳಸುತ್ತಿದ್ದ ಜೀಪು, ಪಾಲಾರ್‌ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಇತ್ತು. ತುಕ್ಕು ಹಿಡಿದು ಜೀರ್ಣಾವಸ್ಥೆ ತಲುಪಿದ್ದ ಜೀಪನ್ನು ₹ 1.10 ಲಕ್ಷ ವೆಚ್ಚ ಮಾಡಿ ದುರಸ್ತಿ ಮಾಡಲಾಗಿದೆ.

ಕಾಡುಗಳ್ಳ ವೀರಪ್ಪನ್‌ ಉಪಟಳವಿದ್ದ ಸಮಯದಲ್ಲಿ, 1990–91ರ ಅವಧಿಯಲ್ಲಿ ಆಂಧ್ರಪ್ರದೇಶದವರಾದ ಐಎಫ್‌ಎಸ್‌ ಅಧಿಕಾರಿ ಪಿ.ಶ್ರೀನಿವಾಸ್‌ ಅವರನ್ನು ರಾಜ್ಯ ಸರ್ಕಾರ ಚಾಮರಾಜನಗರ ಡಿಸಿಎಫ್‌ ಆಗಿ ನಿಯೋಜನೆ ಮಾಡಿತ್ತು.

ವೀರಪ್ಪನ್‌ ಅಟ್ಟಹಾಸವನ್ನು ಸದ್ದಡಗಿಸುವ ಉದ್ದೇಶದಿಂದ ಗೋಪಿನಾಥಂನಲ್ಲಿ ಸ್ಥಳೀಯರ ವಿಶ್ವಾಸ ಗಳಿಸಲು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಜನಾನುರಾಗಿಯಾಗಿದ್ದ ಶ್ರೀನಿವಾಸ್‌ ಅವರನ್ನು ವೀರಪ್ಪನ್‌, ಶರಣಾಗತಿಯ ನಾಟಕವಾಡಿ ಎರಕೆಯಂ ಪ್ರದೇಶದಲ್ಲಿ 1991ರ ನವೆಂಬರ್‌ 10ರಂದು ಹತ್ಯೆ ಮಾಡಿದ್ದ.

ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಗಾಗಿ ಸರ್ಕಾರ ಶ್ರೀನಿವಾಸ್‌ ಅವರಿಗೆ ಮೂರು ಜೀಪುಗಳನ್ನು ನೀಡಿತ್ತು. ಈ ಪೈಕಿ ಒಂದು ಜೀಪನ್ನು ಶ್ರೀನಿವಾಸ್‌ ಬಳಸಿದ್ದರು. ಅದನ್ನೇ ಈಗ ದುರಸ್ತಿ ಮಾಡಿ, ಸ್ಮಾರಕವನ್ನಾಗಿ ಮಾಡಲಾಗಿದೆ.

ಶ್ರೀನಿವಾಸ್ ಹೆಸರಿನಲ್ಲಿ ಅಥಿತಿಗೃಹ
ಕೊಳ್ಳೇಗಾಲದ ಡಿಸಿಎಫ್‌ ಕಚೇರಿ ಆವರಣದಲ್ಲಿರುವ ಅತಿಥಿ ಗೃಹವನ್ನು ನವೀಕರಿಸಿ ಶ್ರೀನಿವಾಸ್‌ ಹೆಸರಿಡಲಾಗಿದೆ. ಅವರ ಹೆಸರಿನಲ್ಲೇ ಗ್ರಂಥಾಲಯವನ್ನೂ ಸ್ಥಾಪಿಸಲಾಗಿದೆ. ಇದರಲ್ಲಿ ಶ್ರೀನಿವಾಸ್‌ ಅವರಿಗೆ ಸೇರಿದ ವಸ್ತುಗಳು, ಫೋಟೊಗಳನ್ನು ಸಂಗ್ರಹಿಸಿ ವಸ್ತುಸಂಗ್ರಹಾಲಯ ಮಾಡುವ ಕೆಲಸ ಪ್ರಗತಿಯಲ್ಲಿದೆ.

‘ಶ್ರೀನಿವಾಸ್ ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಸಿಗಬೇಕು ಎಂಬ ದೃಷ್ಟಿಯಿಂದ ಅವರ ಹೆಸರಿನಲ್ಲಿ ಗ್ರಂಥಾಲಯ ಮಾಡಲಾಗಿದೆ. ಅವರು ಗೋಪಿನಾಥಂನಲ್ಲಿ ಬಡವರಿಗಾಗಿ ನಿರ್ಮಿಸಿಕೊಟ್ಟ ಮನೆಗಳು, ದೇವಾಲಯ, ಎಸ್.ಟಿ.ಎಫ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು... ಹೀಗೆ ಅವರಿಗೆ ಸಂಬಂಧಿಸಿದ ಭಾವಚಿತ್ರಗಳು, ಸಾಹಿತ್ಯ, ಬರಹ, ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿದೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

*
ಶ್ರೀನಿವಾಸ್ ಅರಣ್ಯ ಇಲಾಖೆಗೆ ವಜ್ರ ಇದ್ದಂತೆ. ಇಲಾಖೆಗೆ ಸೇರುವವರಿಗೆ ಹಾಗೂ ಜನರಿಗೆ ಅವರ ಬಗ್ಗೆ ತಿಳಿಸುವ ಉದ್ದೇಶದಿಂದ ಅವರು ಬಳಸಿದ ಜೀಪು, ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.
–ವಿ.ಏಡುಕುಂಡಲು, ಡಿಸಿಎಫ್‌, ಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT