ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ರೋಪ್‌ ವೈರ್‌ ಬೇಲಿ ನಿರ್ಮಾಣಕ್ಕೆ ಚಿಂತನೆ

ಅರಣ್ಯ ಸಚಿವ ಉಮೇಶ ಕತ್ತಿ ಮಾಹಿತಿ, ರಾಂಪುರ ಆನೆ ಶಿಬಿರಕ್ಕೆ ಭೇಟಿ ಪರಿಶೀಲನೆ
Last Updated 7 ಏಪ್ರಿಲ್ 2022, 14:49 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಮಾನವ ವನ್ಯಜೀವಿ ಸಂಘರ್ಷ ತಡೆಯುವುದಕ್ಕಾಗಿ ರೈಲ್ವೆ ಕಂಬಿಯ ಬೇಲಿ ಬದಲು ರೋಪ್‌ ವೈರ್‌ ಬೇಲಿ ನಿರ್ಮಿಸುವ ಉದ್ದೇಶವಿದೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಅವರು ಹೇಳಿದರು.

ಬಂಡೀಪುರಕ್ಕೆ ಭೇಟಿ ನೀಡಿ ಸಂರಕ್ಷಿತ ಪ್ರದೇಶವನ್ನು ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಲಿ ಸಂರಕ್ಷಿತ ಪ್ರದೇಶವುಗ್ರಾಮಗಳಿಗೆ ಹೊಂದಿಕೊಂಡಿರುವುದರಿಂದ ವನ್ಯಪ್ರಾಣಿಗಳು ಮತ್ತು ಮಾನವನ ಸಂಘರ್ಷದ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ. ಈ ಬಗ್ಗೆ ಸದನದಲ್ಲೂ ಚರ್ಚೆ ಆಗಿದೆ. ಬಂಡೀಪುರದ ಕಾಡಂಚಿನ 600 ಕಿ.ಮೀ ಪ್ರದೇಶದ ಪೈಕಿ 180 ಕಿ.ಮೀ ರೈಲ್ವೆ ಕಂಬಿಗಳ ಬೇಲಿ ನಿರ್ಮಿಸಲಾಗಿದೆ. ಒಂದು ಕಿ.ಮೀ ಉದ್ದದ ರೈಲ್ವೆ ಕಂಬಿ ಬೇಲಿ ನಿರ್ಮಿಸಲು ₹1.50 ಕೋಟಿ ಬೇಕು. ಇದಲ್ಲದೇ ಕಂಬಿಗಳ ಲಭ್ಯತೆಯೂ ಇಲ್ಲ. ಹೀಗಾಗಿ ರೋಪ್‌ ವೈರ್‌ ಬೇಲಿ ನಿರ್ಮಿಸುವ ಚಿಂತನೆ ಇದೆ. ಈ ಬೇಲಿ ನಿರ್ಮಾಣಕ್ಕೆ ಕಿ.ಮೀಗೆ ₹50 ಲಕ್ಷ ವೆಚ್ಚಾಗುತ್ತದೆ’ ಎಂದರು.

ಹುಲಿ ಸಂರಕ್ಷಣೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಎಲ್ಲ ಸಂರಕ್ಷಿತಾರಣ್ಯಗಳಲ್ಲಿ 6,800 ಆನೆಗಳು, 560 ಹುಲಿಗಳಿವೆ. ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ರಾಜ್ಯವು ಅರಣ್ಯ, ಪ್ರಾಣಿ ಸಂಕುಲದಿಂದ ಸಮೃದ್ಧವಾಗಿದೆ ಎಂದು ಸಚಿವರು ತಿಳಿಸಿದರು.

ಶೀಘ್ರ ಹುಲಿ ಸಂರಕ್ಷಿತ ಪ್ರದೇಶ: ‘ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಅದು‌ ಮುಂದಕ್ಕೆ ಹೋಗಿದೆ. ಶೀಘ್ರದಲ್ಲಿ ಘೋಷಣೆಯಾಗಲಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆನೆ ಶಿಬಿರಕ್ಕೆ ಭೇಟಿ: ನಂತರ ಉಮೇಶ ಕತ್ತಿ ಅವರು ರಾಂಪುರ ಆನೆ ಶಿಬಿರಕ್ಕೆ ಭೇಟಿ ನೀಡಿ ಸಮಯ ಕಳೆದರು.

ಶಿಬಿರದಲ್ಲಿರುವ ಆನೆಗಳು, ಅವುಗಳಿಗೆ ನೀಡುವ ಆಹಾರ, ನೀಡಿರುವ ತರಬೇತಿ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಣ್ಣು ಆನೆಗಳಿಗೆ ಹೆಚ್ಚು ಬೇಡಿಕೆ ಇದೆ. ಸಾಕು ಆನೆಗಳು ಹೆಚ್ಚಾದಷ್ಟು ವೆಚ್ಚ ಅಧಿಕ. ಆದ್ದರಿಂದ ಬೇರೆ ರಾಜ್ಯಗಳಿಂದ ಬೇಡಿಕೆ ಬಂದರೆ ಕೊಡಿ.ಈ ಬಗ್ಗೆ ಕೇಂದ್ರ ಅರಣ್ಯ ಸಚಿವರ ಜೊತೆಯಲ್ಲೂ ಮಾತನಾಡಿದ್ದೇನೆ’ ಎಂದು ಬಂಡೀಪುರ ಯೋಜನಾ ನಿರ್ದೇಶಕ ಡಾ.ರಮೇಶ್ ಕುಮಾರ್ ಅವರಿಗೆ ಸೂಚಿಸಿದರು.

ಶಿಬಿರದಲ್ಲಿರುವ ಎಲ್ಲ 21 ಆನೆಗಳ ಪರಿಚಯ ಮಾಡಿಕೊಂಡು, ಕಾಯಿ ಹಾಗೂ ಬೆಲ್ಲ ತಿನ್ನಿಸಿದರು.

ಆನೆಗಳಿಗೆ ಆಜ್ಞೆ ಕೊಡುವಾಗ ಮಾವುತರು ಹಲಾಲ್, ಹಲಾಲ್ ಎಂದು ಹೇಳುವುದನ್ನು ಕೇಳಿ, ‘ಏನಪ್ಪ ಆನೆಗಳಿಗೂ ಹಲಾಲ್’ ಎಂದು ನಗುತ್ತಾ ಹೇಳಿದರು.

ಗಿರಿಜನ ಮಕ್ಕಳಿಗೆ ಬಿಸ್ಕತ್ತು ವಿತರಿಸಿ ಮಕ್ಕಳ ಕೈಯಲ್ಲಿ ಹಾಡು ಹಾಡಿಸಿ ಖುಷಿಪಟ್ಟರು. ಇದೇ ವೇಳೆ, ಆನೆಗಳು ತಮ್ಮ ವಿವಿಧ ಆಂಗಿಕ ಭಂಗಿಗಳನ್ನು ಪ್ರದರ್ಶಿಸಿದವು. ಸ್ಥಳದಲ್ಲಿದ್ದಟ್ರೈನಿ ಉಪ ವಲಯ ಅರಣ್ಯ ಅಧಿಕಾರಿಗಳಿಗೆ ಸಚಿವರು ಶುಭಕೋರಿದರು.

ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ, ಎಸಿಎಫ್‌ಗಳಾದ ರವಿಕುಮಾರ್, ಕೆ.ಪರಮೇಶ್, ವಲಯಾರಣ್ಯಾಧಿಕಾರಿ ನವೀನ್ ಕಮಾರ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT