ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಸೆರೆಗೆ ಅರಣ್ಯ ಸಚಿವರ ಸೂಚನೆ

ಹುಲಿಯ ಹಾವಳಿ: ಬಂಡೀಪುರಕ್ಕೆ ಆನಂದ್‌ ಸಿಂಗ್‌ ಭೇಟಿ, ಸ್ಥಳೀಯರಿಂದ ಅಹವಾಲು ಸ್ವೀಕಾರ
Last Updated 10 ಮೇ 2020, 15:42 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದಲ್ಲಿ 20ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿರುವ ಹುಲಿಯನ್ನು ಸೆರೆ ಹಿಡುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಭಾನುವಾರ ಹೇಳಿದರು.

ಹುಲಿಯ ಹಾವಳಿ ಹೆಚ್ಚಿರುವ ಕಡಬೂರು ಗ್ರಾಮದ ಕಾಡಂಚಿನ ಪ್ರದೇಶಕ್ಕೆ ಸ್ಥಳೀಯ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸ್ಥಳೀಯರ ಸಮಸ್ಯೆಗಳನ್ನು ಅವರು ಆಲಿಸಿದರು.

‘ತಕ್ಷಣವೇ ಹುಲಿ ಸೆರೆ ಹಿಡಿಯಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಈ ಪ್ರದೇಶದಲ್ಲಿ ಅಗತ್ಯವಿರುವ ಕಡೆ ರೈಲ್ವೆ ಕಂಬಿಯ ತಡೆ ಬೇಲಿ ನಿರ್ಮಾಣ ಮಾಡುವ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು ಆನಂದ್‌ ಸಿಂಗ್‌ ಅವರಿಗೆ ಕರೆ ಮಾಡಿ ಹುಲಿಯು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ ತಕ್ಷಣ, ಸ್ಥಳ ಪರಿಶೀಲನೆಗಾಗಿ ಅವರು ಭಾನುವಾರ ಬಂಡೀಪುರಕ್ಕೆ ಬಂದರು.

‘ಹುಲಿ ದಾಳಿ ಮಾಡುವ ಭಯದಿಂದಾಗಿ ಜಾನುವಾರುಗಳನ್ನು ಹೊರಗೆ ಬಿಡಲು ಆಗುತ್ತಿಲ್ಲ. ಮಳೆಯಾಗಿದ್ದರೂ ಕೃಷಿ ಚಟುವಟಿಕೆಗಳನ್ನು ಮಾಡಲು ಜಮೀನಿನ ಕಡೆಗೆ ಹೋಗಲು ಭಯವಾಗುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಹದಿನಾರು ಹಸುಗಳು ಮತ್ತು ಮೇಕೆಗಳನ್ನು ಹುಲಿ ಕೊಂದಿದೆ. ಇದರಿಂದಾಗಿ ಜೀವನ ಕಷ್ಟವಾಗುತ್ತಿದೆ. ಜಾನುವಾರುಗಳನ್ನು ನಂಬಿ ಜೀವನ ಸಾಗಿಸುತ್ತಿರುವವರಿಗೆ ತೊಂದರೆ ಆಗುತ್ತಿದೆ’ ಎಂದು ಕಡಬೂರು ಗ್ರಾಮಸ್ಥರು ಸಚಿವರ ಮುಂದೆ ಅಳಲು ತೋಡಿಕೊಂಡರು.

ಹುಲಿ ದಾಳಿಯಿಂದ ಆಗಿರುವ ಜಾನುವಾರು ನಷ್ಟಕ್ಕೆ ಸೂಕ್ತ ಪರಿಹಾರವನ್ನು ಆಯಾ ಕುಟುಂಬಗಳಿಗೆ ತಕ್ಷಣವೇ ವಿತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳ ಸಭೆ: ನಂತರ ಆನಂದ ಸಿಂಗ್‌ ಅವರು ಬಂಡೀಪುರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು.

ನಂತರ ಮಾತನಾಡಿದ ಅವರು, ‘ಕಾರ್ಯಾಚರಣೆ ನಡೆಸಿಹುಲಿಯನ್ನು ಕಾಡಿಗೆ ಓಡಿಸುವ ಬದಲು ಸೆರೆಗೆ ಇಲಾಖೆ ಮುಂದಾಗಲಿದೆ. ಹುಲಿಯು ತನ್ನ ಸರಹದ್ದನ್ನು ಬಿಟ್ಟು ಬಂದಿರುವುದರಿಂದ ಈ ಸಂಘರ್ಷ ಆಗುತ್ತಿದೆ’ ಎಂದರು.

‘ತಾಲ್ಲೂಕಿನ‌ ಬಹುತೇಕ ಕಡೆ ಆನೆಯಿಂದ ಫಸಲು ನಾಶವಾಗುತ್ತಿರುವುದರಿಂದ ರೈಲ್ವೆ ಕಂಬಿಗಳನ್ನು ಅಳವಡಿಸಲಾಗುವುದು, ಪ್ರಾಣಿಗಳ‌ ದಾಳಿಯಿಂದ‌‌ ಬೆಳೆ ನಾಶವಾದರೆ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ’ ಎಂದು ಹೇಳಿದರು.

ಹೊಸದಾಗಿ ಪ್ರಾರಂಭ ಮಾಡಿರುವ ಬಂಡೀಪುರ ಸಫಾರಿ ಕೌಂಟರ್‌ ಕೇಂದ್ರಕ್ಕೂ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು. ಹೊಸ ಕೇಂದ್ರದ ನಿರ್ಮಾಣದ ನೀಲನಕ್ಷೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ‘ಕೇಂದ್ರವನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಬಂಡೀಪುರವನ್ನು ದೇಶದಲ್ಲೇ ಸುಂದರ ಹಾಗೂ ಸುಸಜ್ಜಿತವಾದ ರಾಷ್ಟ್ರೀಯ ಉದ್ಯಾನವನವನ್ನಾಗಿ ಪರಿವರ್ತನೆ ಮಾಡಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಎಸಿಎಫ್‌ ಕೆ.ಪರಮೇಶ್, ಬಿಜೆಪಿ ಮಂಡಲಾಧ್ಯಕ್ಷ ಡಿ.ಪಿ.ಜಗದೀಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಪ್ರಣಾಯ್, ರೈತ ಮುಖಂಡರಾದ ಕಡಬೂರು ಮಂಜುನಾಥ್, ಕುಂದುಕೆರೆ ಸಂಪತ್ತು ಮತ್ತಿತರರು ಇದ್ದರು.

ಕ್ವಾರಂಟೈನ್‌ ಕೇಂದ್ರ ಸ್ಥಳಾಂತರಿಸಲು ಮನವಿ
ಅರಣ್ಯ ಸಚಿವ ಆನಂದ್ ಸಿಂಗ್ ಅವರು ಬಂಡೀಪುರಕ್ಕೆ ಭೇಟಿ ನೀಡುತ್ತಾರೆ ಎಂಬ ಸುದ್ದಿಯನ್ನು ತಿಳಿದು ಮೇಲು ಕಾಮನಹಳ್ಳಿ ಗ್ರಾಮದ ಬುಡಕಟ್ಟು ಜನಾಂಗದಕಾಲೊನಿಯ ಮಹಿಳೆಯರು ಸಚಿವರ ಭೇಟಿ ಮಾಡಿದರು.

‘ಮೇಲುಕಾಮನಹಳ್ಳಿ ಬಳಿ ಇರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್–19 ಕ್ವಾರಂಟೈನ್ ಕೇಂದ್ರ ಸ್ಥಾಪಿಸಿರುವುದರಿಂದ ನಮಗೆ ತೊಂದರೆಯಾಗುತ್ತದೆ. ಎಂದು ಅವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ’ ಎಂದು ಒತ್ತಾಯಿಸಿದರು.

ಅಲ್ಲಿದ್ದವರು ವೈರಸ್‌ ಅನ್ನು ಹರಡಿಸುತ್ತಿದ್ದಾರೆ ಎಂದು ದೂರು ನೀಡಿದಾಗ ಸಚಿವರು, ಕೋವಿಡ್‌ ಬಗ್ಗೆ ವಿವರಣೆ ನೀಡಿದರು. ‘ಕ್ವಾರಂಟೈನ್‌ ಕೇಂದ್ರ ಹಾಗೂ ಅಲ್ಲಿರುವವರ ಬಗ್ಗೆ ಯಾರೂ ಗಾಬರಿಯಾಗಬೇಕಿಲ್ಲ. ಇದರಿಂದ ಯಾರಿಗೂ ತೊಂದರೆ ಇಲ್ಲ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT