ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ಕಳ್ಳದಾರಿ ಬಂದ್‌, ಗಸ್ತು ಹೆಚ್ಚಳ

ಮಲೆ ಮಹದೇಶ್ವರ, ಕಾವೇರಿ ವನ್ಯಧಾಮದ ಅಧಿಕಾರಿಗಳ ಕ್ರಮ, ಸಿಬ್ಬಂದಿ ಕಾವಲು
Last Updated 24 ಮೇ 2020, 15:41 IST
ಅಕ್ಷರ ಗಾತ್ರ

ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿರುವ ಕಳ್ಳದಾರಿಗಳನ್ನು ಮುಚ್ಚಲು ಎರಡೂ ವನ್ಯಧಾಮಗಳ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಆ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿದ್ದಾರೆ.

ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ತಮಿಳುನಾಡಿನಿಂದ ಜನರು ರಾಜ್ಯಕ್ಕೆ ಬರುವುದಕ್ಕೆ ನಿರ್ಬಂಧವಿದೆ. ಸಂಪಾದನೆಗಾಗಿ ತಮಿಳುನಾಡಿನಲ್ಲಿ ನೆಲೆಕಂಡುಕೊಂಡಿರುವ ಮಹದೇಶ್ವರ ಬೆಟ್ಟ, ಹನೂರಿನ ಸುತ್ತಮುತ್ತಲ ಗ್ರಾಮಗಳ ಜನರು, ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ತಡೆಯುತ್ತಾರೆ ಎಂಬ ಕಾರಣಕ್ಕೆ ಅರಣ್ಯದಲ್ಲಿರುವ ಕಾಲುದಾರಿಗಳ ಮೂಲಕ ತಮ್ಮ ಊರುಗಳಿಗೆ ವಾಪಸ್‌ ಆಗುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯು ಮೇ 23ರ ಸಂಚಿಕೆಯಲ್ಲಿ ‘ಬಂದ್‌ ಆಗದ ಕಳ್ಳದಾರಿ’ ಎಂಬ ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು.

ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಕಾಡಿನೊಳಗೆ ಇರುವ ಎಲ್ಲ ದಾರಿಗಳನ್ನು ಬಂದ್‌ ಮಾಡಿ, ಗಸ್ತು ಹೆಚ್ಚಿಸುವಂತೆ ಎರಡೂ ವನ್ಯಧಾಮಗಳ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಅವರಿಗೆ ಸೂಚಿಸಿದ್ದರು.

ಅದರಂತೆ ಕ್ರಮ ಕೈಗೊಂಡಿರುವ ಇಬ್ಬರೂ ಅಧಿಕಾರಿಗಳು ಕರ್ನಾಟಕ ತಮಿಳುನಾಡಿನ ಗಡಿ ವ್ಯಾಪ್ತಿಯಲ್ಲಿರುವ ಕಾಲು ದಾರಿಗಳು ಹಾಗೂ ಬಂಡಿಗಳು ಸಾಗಬಹುದಾದ ಮಾರ್ಗಗಳನ್ನು ಮುಚ್ಚಿದ್ದಾರೆ.

ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಕಾವೇರಿ ನದಿ ದಡದಲ್ಲಿ ಗಸ್ತನ್ನು ‌ಹೆಚ್ಚಿಸಲಾಗಿದೆ. ರಸ್ತೆಗಳನ್ನು ಮಣ್ಣು, ಕಲ್ಲುಗಳಿಂದ ಮುಚ್ಚಲಾಗಿದೆ. ಕಾವೇರಿ ಮತ್ತೊಂದು ದಡದಲ್ಲಿದ್ದ ತಮಿಳುನಾಡಿನ ಜನರನ್ನು ತಮಿಳುನಾಡಿನ ಹೊಸೂರು ಹಾಗೂ ಧರ್ಮಪುರಿ ಡಿಸಿಎಫ್‌ಗಳ ನೆರವಿನೊಂದಿಗೆ ತೆರವುಗೊಳಿಸಲಾಗಿದೆ ಎಂದು ಕಾವೇರಿ ವನ್ಯಧಾಮದ ಡಿಸಿಎಫ್‌ ಡಾ.ಎಸ್‌.ರಮೇಶ್‌ ಅವರು ಮಾಹಿತಿ ನೀಡಿದ್ದಾರೆ.

10 ಕಳ್ಳದಾರಿ ಬಂದ್‌

ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಪಾಲಾರ್‌–ತಮಿಳುನಾಡು ಗಡಿ ಭಾಗದ ಹೂಗ್ಯಂ, ಜೆಲ್ಲಿಪಾಳ್ಉಯ, ಗರಿಕೆಕಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ದಾರಿ, ರಸ್ತೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮುಚ್ಚಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ವಿ.ಏಡುಕುಂಡಲು ಅವರು, ‘ನಮ್ಮಲ್ಲಿ ಅಂದಾಜು 10 ಒಳದಾರಿಗಳಿವೆ. ಎಲ್ಲವನ್ನೂ ಮುಚ್ಚಿದ್ದೇವೆ. ಈ ಹಿಂದಿನಿಂದಲೇ ಗಡಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದೆವು. ಈಗ ಇನ್ನಷ್ಟು ಹೆಚ್ಚಿಸಿದ್ದೇವೆ. 30 ಸಿಬ್ಬಂದಿಯನ್ನು ಇದಕ್ಕಾಗಿ ನಿಯೋಜಿಸಲಾಗಿದೆ. ಅರಣ್ಯದ ಮೂಲಕ ಜಿಲ್ಲೆ ಪ್ರವೇಶಿಸುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT