ಚಾಮರಾಜನಗರ: ಗೌರಿ ಗಣೇಶ ಹಬ್ಬಕ್ಕೆ ಒಂದೇ ದಿನ ಬಾಕಿ ಇರುವಂತೆಯೇ ಜಿಲ್ಲೆಯಾದ್ಯಂತ ನಗರ, ಪಟ್ಟಣ ಪ್ರದೇಶಗಳಲ್ಲಿ ಗೌರಿ–ಗಣೇಶ ಮೂರ್ತಿಗಳ ಮಾರಾಟ ಬಿರುಸುಗೊಂಡಿದೆ.
ಗಣೇಶ ತಯಾರಕರು ಹಾಗೂ ಮಾರಾಟಗಾರರು ತಾತ್ಜಾಲಿಕ ಮಳಿಗೆಗಳನ್ನು ಕಟ್ಟಿಕೊಂಡು ವಿಗ್ರಹಗಳ ಮಾರಾಟದಲ್ಲಿ ತೊಡಗಿದ್ದಾರೆ. ಮನೆಗಳಲ್ಲಿ ಗೌರಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ, ಪೂಜಿಸುವವರು, ಸಾರ್ವಜನಿಕ ಗಣೇಶೋತ್ಸವ ಆಯೋಜಿಸುವ ಸಂಘಟಕರು ಮಳಿಗೆಗಳಿಗೆ ತೆರಳಿ ವ್ಯಾಪಾರ ಕುದುರಿಸುತ್ತಿದ್ದಾರೆ.
ಈ ಬಾರಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಒಂದೇ ದಿನ ಬಂದಿದೆ. ಸಾಮಾನ್ಯವಾಗಿ ಗಣೇಶನ ಹಬ್ಬದ ಮುನ್ನಾದಿನ ಗೌರಿ ಹಬ್ಬ ಇರುತ್ತದೆ. ಹಾಗಾಗಿ, ಗಣೇಶ ಚತುರ್ಥಿಗೆ ಎರಡು, ಮೂರು ದಿನಗಳು ಇರುವಾಗಲೇ ಗಣೇಶ, ಗೌರಿ ಮೂರ್ತಿಗಳ ವ್ಯಾಪಾರ ಜೋರಾಗುತ್ತದೆ. ಈ ಸಲ ಎರಡೂ ಹಬ್ಬ ಸೋಮವಾರವೇ ನಡೆಯಲಿರುವುದರಿಂದ ಶನಿವಾರ ಗಣೇಶನ ಅಂಗಡಿಗಳ ಮುಂದೆ ಹೆಚ್ಚು ಗ್ರಾಹಕರು ಕಂಡು ಬರಲಿಲ್ಲ. ಮಕ್ಕಳು, ಮಹಿಳೆಯರು ಮತ್ತು ದೊಡ್ಡವರು ಅಂಗಡಿಗಳಿಗೆ ಬಂದು, ಮೂರ್ತಿಗಳನ್ನು ನೋಡಿ, ಬೆಲೆಯನ್ನು ವಿಚಾರಿಸಿಕೊಂಡು ಹೋಗುತ್ತಿದ್ದರು.
ನಗರದಲ್ಲಿ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಬಳಿ ಎಂಟು ಮಾರಾಟ ಮಳಿಗೆಗಳು ಇವೆ. ಅಗ್ರಹಾರ ಬೀದಿಯಲ್ಲಿರುವ ಪಟ್ಟಾಭಿರಾಮಮಂದಿರದಲ್ಲೂ ಗಣೇಶ, ಗೌರಿ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಗಣೇಶ, ಗೌರಿ ಮೂರ್ತಿಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದರಿಂದ ಪಿಒಪಿ ಗೌರಿ–ಗಣೇಶ ಎದುರುಗಡೆ ಎಲ್ಲೂ ಕಾಣಿಸುತ್ತಿಲ್ಲ. ವ್ಯಾಪಾರಿಗಳನ್ನು ಪ್ರಶ್ನಿಸಿದರೆ, ‘ನಾವು ಮಣ್ಣಿನ ಗಣೇಶನವನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ’ ಎಂದು ಹೇಳುತ್ತಿದ್ದಾರೆ.
ನಗರಸಭೆಯ ಅಧಿಕಾರಿಗಳು ಈಗಾಗಲೇ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ಪಿಒಪಿ ಗೌರಿ–ಗಣೇಶನನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ ಎಂಬ ಸೂಚನೆ ಇದ್ದರೂ, ಮೇಲ್ನೋಟಕ್ಕೆ ಯಾವ ಬಣ್ಣ ಬಳಸಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ತಯಾರಕರು ಹಾಗೂ ವ್ಯಾಪಾರಿಗಳು, ಹಾನಿಕಾರಕ ಬಣ್ಣ ಬಳಸಿಲ್ಲ ಎಂದು ಹೇಳುತ್ತಿದ್ದಾರೆ.
ಬೆಲೆ ಎಷ್ಟಿದೆ?: ಅಂಗೈ ಅಗಲದ ಮೂರ್ತಿಯಿಂದ ಹಿಡಿದು ಆರೇಳು ಅಡಿ ಎತ್ತರದ ಗಣೇಶನ ವಿಗ್ರಹಗಳೂ ಮಾರಾಟಕ್ಕೆ ಲಭ್ಯವಿದೆ. ಬೆಲೆ ₹50ರಿಂದ ಶುರುವಾಗುತ್ತದೆ. ನಂತರ ಗಣೇಶನ ವಿಗ್ರಹದ ಎತ್ತರದ ಆಧಾರದಲ್ಲಿ ವ್ಯಾಪಾರಿಗಳು ಬೆಲೆ ನಿಗದಿ ಮಾಡುತ್ತಿದ್ದಾರೆ. ₹12 ಸಾವಿರ, ₹15 ಸಾವಿರ, ₹18 ಸಾವಿರದಷ್ಟು ಬೆಲೆಯ ವಿಗ್ರಹಗಳೂ ಇವೆ.
ಪಿಒಪಿ ಗೌರಿ ಗಣೇಶನಿಗೆ ನಿರ್ಬಂಧ ರಾಸಾಯನಿಕ ಬಣ್ಣ ಬಳಸುವಂತಿಲ್ಲ ಹಬ್ಬ ಆಚರಣೆಗೆ ಜನರ ಸಿದ್ಧತೆ
- ಇಂದು ಹೆಚ್ಚು ವ್ಯಾಪಾರದ ನಿರೀಕ್ಷೆ ಶನಿವಾರ ಅಂಗಡಿಗಳಲ್ಲಿ ಹೆಚ್ಚು ವ್ಯಾಪಾರ ಆಗಿಲ್ಲ. ಗಣೇಶೋತ್ಸವ ಆಯೋಜಕರು ಬಂದು ಕೆಲವು ವಿಗ್ರಹಗಳನ್ನು ಕಾಯ್ದಿರಿಸಿದ್ದಾರೆ. ಸೋಮವಾರ ಪ್ರತಿಷ್ಠಾಪನೆ ಮಾಡುವುದರಿಂದ ಭಾನುವಾರ ಕೊಂಡೊಯ್ಯಲಿದ್ದಾರೆ. ‘ಈ ಬಾರಿ ಗೌರಿ ಗಣೇಶ ಹಬ್ಬ ಒಂದೇ ದಿನ ಬಂದಿರುವುದರಿಂದ ಜನರು ಇನ್ನೂ ಅಂಗಡಿಗಳ ಹತ್ತಿರ ಬಂದಿಲ್ಲ. ಕೆಲವರು ಬಂದು ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಇವತ್ತು ಬೇಡಿಕೆ ಕಡಿಮೆ ಇತ್ತು. ಭಾನುವಾರ ಹೆಚ್ಚು ವ್ಯಾಪಾರ ಆಗಬಹುದು. ನಮ್ಮ ಬಳಿ ₹50ರಿಂದ ₹15 ಸಾವಿರದವರೆಗೂ ಬೆಲೆ ಬಾಳುವ ಗಣೇಶ ಮೂರ್ತಿಗಳಿವೆ. ಮಣ್ಣಿನಿಂದಲೇ ತಯಾರಿಸಿದ್ದೇವೆ’ ಎಂದು ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ತಿಳಿಸಿದರು. ‘ಶನಿವಾರ ಜನರು ಬಂದಿಲ್ಲ. ಭಾನುವಾರ ಖರೀದಿಗೆ ಬರಬಹುದು. ಹಬ್ಬದ ದಿನ ಬೆಳಿಗ್ಗೆ ಖರೀದಿಸುವವರೂ ಇದ್ದಾರೆ. ಪರಿಸರಕ್ಕೆ ಪೂರಕವಾದ ಗಣೇಶನ ವಿಗ್ರಹಗಳನ್ನೇ ಮಾರಾಟಕ್ಕೆ ಇಟ್ಟಿದ್ದೇವೆ’ ಎಂದು ಮತ್ತೊಬ್ಬ ವ್ಯಾಪಾರಿ ಸಿದ್ದರಾಜು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.